ಧಾರಾವಾಹಿ-ಅಧ್ಯಾಯ –36
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಪತ್ನಿಯ ಈ ಮಾತುಗಳನ್ನು ಕೇಳಿ ವೇಲಾಯುಧನ್ನರಿಗೆ ಮಡದಿ ಎಷ್ಟು ಮುಗ್ದಳು ಎನಿಸಿತು. ನಿಜವನ್ನು ತಿಳಿಯದೇ ನನ್ನ ಆರೋಗ್ಯ ಸರಿ ಇಲ್ಲವೆಂದು, ಎಲ್ಲಿ ನಾನು ಕೆಳಗೆ ಬೀಳುವೇನೋ ಎನ್ನುವ ಭಯದಲ್ಲಿ ನಾನು ಕುಳಿತ ಕುರ್ಚಿಗೆ ಆಧಾರವಾಗಿ ಕುಳಿತಿರುವಳಲ್ಲ ಎನ್ನುವ ವಿಚಾರ ಅವರ ಮನವನ್ನು ಬಹಳ ಮೃದುವಾಗಿಸಿತು. ಪತ್ನಿಯ ಮೇಲಿನ ಪ್ರೀತಿ ಇಮ್ಮಡಿಸಿ….”ಅಯ್ಯೋ ಸುಮತಿ ನೀನೆಷ್ಟು ಮುಗ್ಧೆ…. ಇಂದು ಸಂಜೆ ಕೆಲಸ ಮುಗಿದ ಮೇಲೆ ನನಗೆ ಕೆಲಸ ಕೊಟ್ಟ ಅಧಿಕಾರಿಯೊಬ್ಬರ ಜೊತೆ ಸ್ವಲ್ಪ ಮಾತುಕತೆ ಇತ್ತು….ಹಾಗೇ ಮಿತವಾದ ಆಹಾರದ ಜೊತೆಗೆ ಸ್ವಲ್ಪ ಹೆಚ್ಚೇ ಮದ್ಯ ಸೇವಿಸಿದ್ದೆ….ನಮ್ಮ ಮದುವೆಯ ಬಳಿಕ ಇದೇ ಮೊದಲ ಬಾರಿಗೆ ನಾನು ಮದ್ಯ ಸೇವಿಸಿರುವುದು…. ಮಿಲಿಟರಿಯಲ್ಲಿ ಕೆಲವೊಮ್ಮೆ ಔತಣ ಕೂಟದಲ್ಲಿ ಸ್ವಲ್ಪ ಮದ್ಯ ಸೇವಿಸುವ ಅಭ್ಯಾಸ ನನಗೆ ಇತ್ತು….ನಂತರವೂ ಅಪರೂಪಕ್ಕೊಮ್ಮೆ ಸೇವಿಸುತ್ತಿದ್ದೆ….ಮದುವೆಯ ನಂತರ ಸೇವಿಸಿರಲಿಲ್ಲ…. ನಿನಗೆ ನಾನು ಮದ್ಯ ಸೇವಿಸುವ ಬಗ್ಗೆ ತಿಳಿದಿಲ್ಲ….ಹಾಗಾಗಿ ನೀನು ಹೀಗೆ ಹೆದರಿದೆ…. ನೀನಿಷ್ಟು ಹೆದರಿದ ಮೇಲೆ ನಾನು ಖಂಡಿತಾ ಇನ್ನೊಮ್ಮೆ ಮದ್ಯವನ್ನು ಮುಟ್ಟಲಾರೆ”…. ಎಂದು ಅವಳ ಮೇಲೆ ಆಣೆ ಮಾಡಿ ನುಡಿದರು. ಪತಿಯ ಮಾತನ್ನು ಅಚ್ಚರಿಯಿಂದ ಗಮನವಿಟ್ಟು ಕೇಳುತ್ತಿದ್ದ ಸುಮತಿಗೆ ಪತಿಯನ್ನು ಅನಾರೋಗ್ಯ ಕಾಡಿಲ್ಲ ಎಂಬುದು ಖಾತ್ರಿಯಾದಾಗ ಮನಸ್ಸಿಗೆ ಎಲ್ಲಿಲ್ಲದ ಸಮಾಧಾನ ಎನಿಸಿತು. ಮಧ್ಯದ ಬಗ್ಗೆ ಕೇಳಿದ್ದಳು ಆದರೆ ಅದನ್ನು ಮನೆಯಲ್ಲಿ ಯಾರೂ ಸೇವಿಸುವುದನ್ನು ಕಂಡಿರಲಿಲ್ಲ. ಅಪ್ಪ ಸೇವಿಸುವರೋ ಎಂದು ಕೂಡಾ ಅವಳಿಗೆ ತಿಳಿದಿರಲಿಲ್ಲ. ಮದ್ಯಪಾನ ಹಾನಿಕಾರಕವೆಂದು ಶಾಲೆಯ ಪಠ್ಯದಲ್ಲಿ ಓದಿದ್ದಳು. ಸಧ್ಯ ಇನ್ನು ಮೇಲೆ ಮದ್ಯಪಾನ ಮಾಡುವುದಿಲ್ಲ ಎಂದು ಪತಿ ಹೇಳಿದರಲ್ಲ ಎನ್ನುವುದು ಅವಳಿಗೆ ಬಹಳ ಸಂತೋಷ ಕೊಡುವ ವಿಚಾರವಾಗಿತ್ತು.
ಇಬ್ಬರೂ ಇನ್ನೂ ಊಟವನ್ನು ಮಾಡಿರಲಿಲ್ಲ ಹಾಗಾಗಿ ಕುಳಿತಲ್ಲಿಂದ ಬೇಗನೇ ಎದ್ದು ಅಡುಗೆ ಮನೆಯ ಕಡೆ ನಡೆದಳು. ಅಡುಗೆಯನ್ನು ಬಿಸಿ ಮಾಡಿ ಪತಿಗಾಗಿ ಕಾಯುತ್ತಾ ಕುಳಿತಳು. ಪತಿಯ ಊಟದ ನಂತರ ತಾನೂ ಊಟ ಮಾಡಿ ಉಳಿದ ಕೆಲಸವನ್ನು ಮುಗಿಸಿ ಬಂದು ಪತಿ ಮಲಗಿದ್ದನ್ನು ಗಮನಿಸಿ ತಾನೂ ಮಲಗಿದಳು. ಬೆಳಗ್ಗೆ ಕೋಳಿ ಕೂಗುವ ಹೊತ್ತಿಗೆ ಎದ್ದಳು. ಎದ್ದು ಸ್ನಾನದ ಕೋಣೆಗೆ ಹೋಗಬೇಕು ಎಂದು ಹೆಜ್ಜೆ ಇಟ್ಟ ಅವಳಿಗೆ ಕಣ್ಣು ಕತ್ತಲಾದಂತೆ ಅನಿಸಿತು. ಸಾವರಿಸಿ ಗೋಡೆಯನ್ನು ಒರಗಿ ನಿಂತಳು. ಆದರೂ ಏಕೋ ಆಯಾಸ ಎನಿಸಿತು. ಹಾಗೂ ಹೀಗೂ ತಡವರಿಸುತ್ತಾ ಸ್ನಾನದ ಕೋಣೆ ತಲುಪಿದಳು. ಹಲ್ಲು ಉಜ್ಜುತ್ತಾ ಇದ್ದವಳಿಗೆ ಇದ್ದಕ್ಕಿದ್ದ ಹಾಗೆ ವಾಕರಿಕೆ ಬಂದಿತು.
ಹುಳಿ ಒಗರಿನ ವಾಂತಿಯಾದ ನಂತರ ಸ್ವಲ್ಪ ನಿರಾಳ ಎನಿಸಿತು. ಪಿತ್ತ ಆಗಿರಬೇಕು ಕಾಫಿ ಕುಡಿದಿದ್ದೆ ಅಲ್ಲವೇ? ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಾ ಹೇಗೋ ಸ್ನಾನ ಮುಗಿಸಿ ಉದ್ದ ಕೂದಲಿಗೆ ಟವೆಲ್ ಸುತ್ತಿಕೊಂಡು ಬಂದು ಕೃಷ್ಣನ ವಿಗ್ರಹದ ಮುಂದೆ ನಿಂತಳು….” ಕೃಷ್ಣಾ ನಮ್ಮ ಕುಟುಂಬವನ್ನು ಕಾಪಾಡು….ನನ್ನ ಪತಿ ನನಗೆ ಕೊಟ್ಟ ಭಾಷೆಯಂತೆಯೇ ಅವರು ನಡೆದುಕೊಳ್ಳುವ ಹಾಗೆ ನೋಡಿಕೋ….ಎಲ್ಲರನ್ನೂ ಕಾಪಾಡು ಕೃಷ್ಣ” ….ಎಂದು ಬೇಡಿಕೊಳ್ಳುತ್ತಾ ದೇವರ ಕೀರ್ತನೆಯನ್ನು ಸಣ್ಣಗೆ ಹಾಡುತ್ತಾ ಬೆಳಗ್ಗಿನ ತಿಂಡಿಯನ್ನು ಹಾಗೂ ಪತಿಯ ಊಟದ ಡಬ್ಬಿಗೆ ಮಧ್ಯಾಹ್ನಕ್ಕೆ ಅಡುಗೆಯನ್ನು ಮಾಡಿದಳು. ಆದರೆ ಸಾರಿನ ಘಮ್ ಎನ್ನುವ ಪರಿಮಳಕ್ಕೆ ವಾಕರಿಕೆ ಬಂದಂತಾಗಿ ಮತ್ತೆ ಸ್ನಾನದ ಕೋಣೆಗೆ ಓಡಿದಳು. ಅಷ್ಟು ಹೊತ್ತಿಗೆಲ್ಲಾ ಸ್ನಾನ ಮುಗಿಸಿ ಕೆಲಸಕ್ಕೆ ಹೊರಡಲು ತಯಾರಾಗಿ ಮಲಗುವ ಕೋಣೆಯಿಂದ ಹೊರಗೆ ಬಂದ ವೇಲಾಯುಧನ್ ಪತ್ನಿಯು ಆತುರಾತುರವಾಗಿ ಸ್ನಾನದ ಕೋಣೆಯೆಡೆಗೆ ಹೋಗುತ್ತಾ ಇರುವುದನ್ನು ಕಂಡರು. ಬೆಳಗ್ಗೆ ಎದ್ದ ಕೂಡಲೇ ಇವಳು ಸ್ನಾನ ಮಾಡಿ ಮಡಿ ಉಟ್ಟಿದ್ದಳಲ್ಲಾ? ಮತ್ತೆ ಈಗೇಕೆ ಇಷ್ಟು ಆತುರದಲ್ಲಿ ಹೋಗುತ್ತಿರುವಳು? ಎಂದು ಯೋಚಿಸುತ್ತಾ ತಾವೂ ಹಿಂದೆ ಹೋದರು.
ಅವರು ಇನ್ನೂ ಬಾಗಿಲು ತಲುಪಿರಲಿಲ್ಲ. ಒಳಗಿನಿಂದ ಪತ್ನಿಯ ವಾಕರಿಕೆಯ ಸದ್ದು ಕೇಳಿಸಿತು. ಹುಬ್ಬು ಮೇಲಕ್ಕೇರಿಸಿ,….”ಏನಾಯ್ತು ಇವಳಿಗೆ?” ….ಎಂದು ಹೇಳುತ್ತಾ ಬಾಗಿಲಲ್ಲೇ ನಿಂತ ವೇಲಾಯುಧನ್ ಮನದಲ್ಲಿ ಏನೋ ಹೊಳೆದಂತಾಗಿ ಕಿರುನಗೆಯೊಂದು ಅವರ ಮುಖದಲ್ಲಿ ಮೂಡಿತು. ಮುಖ ಬಾಯಿ ತೊಳೆದುಕೊಂಡು ಸುಮತಿ ಹಿಂತಿರುಗಿ ನೋಡಿದಾಗ ಪತಿಯು ಸ್ನಾನದ ಕೋಣೆಯ ಬಾಗಿಲಲ್ಲಿ ನಸು ನಗುತ್ತಾ ನಿಂತಿರುವುದನ್ನು ಕಂಡ ಅವಳು ಗಾಬರಿಯಿಂದ ….”ಅಯ್ಯೋ ತಿಂಡಿ ಕೊಡುವುದು ತಡವಾಯಿತು”….ಎಂದು ಹೇಳಿಕೊಳ್ಳುತ್ತಾ, ಅದಕ್ಕೆ ಇಲ್ಲಿಗೇ ಹುಡುಕಿಕೊಂಡು ಬಂದಿರುವರು ಎಂದುಕೊಂಡಳು. ಆದರೆ ಅವರ ಆ ನಗುವಿನ ಹಿಂದಿನ ಅರ್ಥವೇನು ಎಂದು ಅವಳಿಗೆ ತಿಳಿಯಲಿಲ್ಲ. ತಿಂಡಿ ಕೊಡುವುದು ತಡವಾಯಿತು ಎಂದು ಕೋಪಗೊಳ್ಳದೇ ಏಕೆ ನಗುತ್ತಾ ನಿಂತಿರುವರು? ಎಂಬ ಪ್ರಶ್ನೆ ಮನದಲ್ಲಿ ಮೂಡಿದರೂ ತೋರಿಸಿಕೊಳ್ಳದೇ ಸ್ವಲ್ಪ ಭಯದಲ್ಲೇ ಅಡುಗೆ ಮನೆಯ ಕಡೆಗೆ ನಡೆದಳು. ಪತಿಗೆ ಊಟದ ಡಬ್ಬಿ ತುಂಬಿ ಇಟ್ಟು ತಟ್ಟೆಗೆ ಪುಟ್ಟು ಮತ್ತು ಕಡಲೆ ಸಾರನ್ನು ಹಾಕಿ ತಂದು ಟೇಬಲ್ ಮೇಲೆ ಇಟ್ಟಳು. ಟೇಬಲ್ ಬಳಿ ಬಂದ ವೇಲಾಯುಧನ್ ಪತ್ನಿಯನ್ನು ಅಡಿಯಿಂದ ಮುಡಿಯವರೆಗೆ ನೋಡಿ ಮತ್ತೆ ಮುಗುಳ್ನಕ್ಕರು. ಅವರ ಆ ನಗೆ ಕಂಡು ಬೇರೆಯದೇ ಅರ್ಥ ಊಹಿಸಿಕೊಂಡು ಅವಳು ಸಣ್ಣಗೆ ಕಂಪಿಸಿದಳು. ಪತಿಗೆ ತಾನು ಬೇಕೆಂದಾಗ ಯಾವ ಹೊತ್ತೆಂದು ನೋಡುತ್ತಿರಲಿಲ್ಲ. ಹೀಗೆಯೇ ಯೋಚಿಸುತ್ತಾ ಕಣ್ಣು ಮುಚ್ಚಿ…. ಕೃಷ್ಣಾ ಈ ಅವೇಳೆಯಲ್ಲಿ ಅವರಲ್ಲಿ ಯಾವ ಭಾವನೆಯೂ ಮೂಡದಿರಲಿ….ಎಂದು ಮನಸ್ಸಿನಲ್ಲಿಯೇ ಕೃಷ್ಣನನ್ನು ಧ್ಯಾನಿಸುತ್ತಾ ನೀರಿನ ಸಣ್ಣ ಚೊಂಬನ್ನು ತಂದು ಟೇಬಲ್ ಮೇಲೆ ಇಟ್ಟು ಪತಿ ತಿಂಡಿಯನ್ನು ತಿನ್ನುತ್ತಾ ಇರುವುದನ್ನು ಕಂಡು ಅಲ್ಲಿಯೇ ಪಕ್ಕದಲ್ಲಿ ನಿಂತಳು.
ಪತ್ನಿಯ ಸೌಂದರ್ಯ ಇಂದು ಇನ್ನೂ ಇಮ್ಮಡಿಸಿದಂತೆ ಅವರಿಗೆ ಅನಿಸಿತು. ತಿಂಡಿ ತಿಂದ ವೇಲಾಯುಧನ್ ಏನೂ ಹೇಳದೆ ಪತ್ನಿಯನ್ನೊಮ್ಮೆ ನೋಡಿ ಅರ್ಥಗರ್ಭಿತವಾಗಿ ನಕ್ಕು ಕೆಲಸಕ್ಕೆ ಹೊರಟು ಹೋದರು. ಇಂದು ಪತಿಯು ಎಂದಿನಂತೆ ಇಲ್ಲದಿರುವುದನ್ನು ಕಂಡು ಸುಮತಿಗೆ ಆಶ್ಚರ್ಯವಾಯಿತು.
ಹೆಚ್ಚು ನಗದೇ ಸದಾ ಗಂಭೀರವಾಗಿ ಇರುತ್ತಿದ್ದ ಇವರಿಗೆ ಏನಾಗಿದೆ? ನಾನು ಬೇರೆ ಏನೋ ಅಂದುಕೊಂಡು ಬೆಳೆಗ್ಗೆಯೂ….ಎಂದು ಹೆದರಿದ್ದೆ ಆದರೆ ಕೆಲಸಕ್ಕೆ ಹೋದರಲ್ಲ ಏನಿರಬಹುದು ಈ ಬದಲಾವಣೆಯ ಹಿಂದೆ? ಅಬ್ಬಾ ಸಧ್ಯ ಬೇರೆ ಯಾವುದೇ ಇತರ ಆಲೋಚನೆ ಅವರ ಮನದಲ್ಲಿ ಬರದಿದ್ದುದು ಒಳ್ಳೆಯದೇ ಆಯ್ತು….ಏಕೋ ಆಯಾಸ ಅನಿಸುತ್ತಿದೆ…. ಹೀಗಿರುವಾಗ ನನ್ನಿಂದ ಆಗದು… ಬಚಾವಾದೆ…. ಹೀಗೆ ಅಂದುಕೊಂಡು ತನ್ನ ಇಷ್ಟದ ಪುಟ್ಟು ಮತ್ತು ಕಡಲೆ ಸಾರನ್ನು ತಿನ್ನಲು ಕುಳಿತಳು. ಏಕೋ ಅವಳಿಂದ ತಿನ್ನಲು ಆಗಲಿಲ್ಲ. ಮುಖ ಕಿವುಚಿ ಕುಳಿತಳು ಮತ್ತದೇ ಬೆಳಗ್ಗೆ ಆದ ಹಾಗೆಯೇ ಆಗುತ್ತಿದೆ…. ತನಗೀನಾಗಿದೆ? ಈ ರೀತಿ ಎಂದೂ ಆದದ್ದೇ ಇಲ್ಲ….ಏಕೆ ಹೀಗೆ ತಿಂಡಿ ತಿನ್ನಲು ಆಗುತ್ತಿಲ್ಲ…. ಬೇರೆ ಖಾಯಿಲೆಯ ಲಕ್ಷಣ ಕಾಣುತ್ತಿಲ್ಲ…ಮೊದಲ ಬಾರಿ ಹೀಗೆ ಆಗುತ್ತಿದೆ…. ಇರಲಿ…ಇವರು ಕೆಲಸದಿಂದ ಬಂದ ನಂತರ ಜೊತೆಗೆ ಅಕ್ಕನ ಮನೆಗೆ ಒಮ್ಮೆ ಹೋಗಿ ಬರಬೇಕು…ತನಗಾಗುತ್ತಾ ಇರುವ ಅನುಭವ ಹೇಳಬೇಕು….ಎಂದುಕೊಳ್ಳುತ್ತಾ ಏನೂ ತಿನ್ನದೇ ಒಂದು ಲೋಟ ನೀರನ್ನು ಕುಡಿದು ಮಲಗಲು ಕೋಣೆಗೆ ಹೋದಳು. ಕೋಣೆಗೆ ಹೋಗಿ ಮಂಚದ ಮೇಲೆ ಮಲಗಿದಳು. ಏಕೋ ಅಮ್ಮನ ನೆನಪು ಬಹಳವಾಗಿ ಕಾಡಿತು. ಏನೋ ಹೇಳಲಾರದ ಅವ್ಯಕ್ತ ತಳಮಳ ಮನದಲ್ಲಿ. ಕಣ್ಣು ಮುಚ್ಚಿದಾಗ ಸಣ್ಣ ಕೂಸೊಂದು ಕಣ್ಣ ಮುಂದೆ ಕಂಡ ಹಾಗೆ ಆಯ್ತು. ಹಾಗೇ ಕಣ್ಣನ್ನು ಬಿಗಿಯಾಗಿ ಮುಚ್ಚಿ ಮಲಗಿದಳು.
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು