ರೋಹಿಣಿ ಯಾದವಾಡ ಅವರ ಕವಿತೆ-ಅವನದೇ ದರ್ಬಾರು

ಹೆಣ್ಣು ಎಂಬ ಕಾರಣಕ್ಕೆ
ಎಷ್ಟು ಶೋಷಣೆ ಸಹಿಸಲಿ
ನನ್ನತನವ ತೊರೆದು
ಹೇಗೆ ನಾನು ಬದುಕಲಿ

ಹಾಲುಣಿಸುವ ಮೊಲೆ ನನ್ನವು
ಹೆರುವ ಗರ್ಭ ನನ್ನದು
ಸೀಳಿ ಬರುವ ಯೋನಿ ನನ್ನದು
ಎಲ್ಲವೂ ನನ್ನವೇ ಆದರೂ
ವೀರ್ಯದ್ದೇ ದರ್ಬಾರು

ಎಲ್ಲ ಪಾತ್ರ ನಿಭಾಯಿಸಿದರೂ
ಸಂಬಂಧಗಳ ಮೌಲ್ಯ ಹೊಸಕಿ
ಮೃಗತ್ವವೇ ಸಾಧಿಸಿ ಮೇಲುಗೈ
ಗೆಲ್ಲುವದದು ಕಡೆಗೆ

ಹೆಣ್ಣು ಚರ್ಮ ಅಂದರೆ ಸಾಕು
ಉಬ್ಬು ತಗ್ಗುಗಳ ಮೇಲೆ
ಮನುಷ್ಯತ್ವ ಮೀರಿದ ದೌರ್ಜನ್ಯ
ಮತ್ತೆ ಮತ್ತೆ

ಹೆಣ್ಣೆಂದರೆ ಇಳೆ ಎನ್ನುವರು
ಭೂಮಿ ಅಗೆದಂತೆ ಅಗೆವರು
ಕೋಮಲ ಶರೀರ ಜರ್ಜರಿಸಿ
ವಿಕೃತ ಸಂತಸ ಅನುಭವಿಸುವರು

ನನ್ನೊಳಗೂ ಜೀವವಿದೆ
ಎಂಬ ಅರಿವು ಬರುವದು ಯಾವಾಗ
ಕೇಳಿಯೇ ಕೇಳುತ್ತಿದ್ದೇನೆ ಯುಗಾಂತರ ಜನ್ಮಾಂತರ…


Leave a Reply

Back To Top