ಸವಿತಾ ದೇಶಮುಖ್ ಅವರ ಕವಿತೆ-ಸ್ವರ್ಗದ ತಾಣ

ತಾಯಿ ನಿನ್ನ ಒಡಲ
ಸ್ಫುರಿಸು ನಾನು
ನಿನ್ನ ಮಮತೆಯ
ಭಾವ ಸಾರದಿ ಬೆಳೆದು ನಿಂದೆ

ನಿನ್ನ ದಿವ್ಯ ಮಡಿಲಿನಲ್ಲಿ ಆಡಿದ
ಆಟ ಕಲಿತ ಪಾಠ
ನೆನೆ ನೆನೆದು ಹನಿಗಣ್ಣಾಗುವೆ

ಸೆರಗ ಸರಿಸಿ ನಿನ್ನ ಹೊಟ್ಟೆಯ ಮೇಲೆ
ಮೊಗವಿಟ್ಟು ಮಲಗಿ ನಿನ್ನ ಬೆಚ್ಚುಗೆಯಲ್ಲಿ ವಿಹರಿಸಿದೆ
ದೇವಾನಂದದಲಿ

ಎನ್ನ ಮುನಿಸು,ಖತಿಗಳ ಮರೆಮಾಚಿ
ಎನ್ನ ಉತ್ತಮ ಕೆಲಸದಿ ಪ್ರಮೋದಿಸಿದೆ
ನಾನು ಎಡವಿದರೆ ನೋವುಂಡವಳು
ಪೆಟ್ಟಾದರೆ ಗಾಯ ನಿನಗಾದಂತೆ
ಎಡರುತೊಡರು ಬಂದರೆ
ಸ್ಥಿರವಾಗಿ ನಿಂದೆ
ನನ ಹಿಂದೆ

ಬಾಳ ಪಥದಿ ನಂಬಿಕೆಯ ಕುದುರೆ
ಏರಿ ಧೈರ್ಯದ ಅಸ್ತ್ರದಿ
ಸತ್ಯದ ಪಥದಿ ನಡಿ ಎಂದೆ
ನಿನ್ನ ನಡೆ ಎನ್ನ ರಕ್ಷಾ ಕವಚ

ಅಂದು ಗಾಢ ನಿದ್ರೆಯಲ್ಲಿ ಮಲಗಿದ ನಿನ್ನ ನೋಡಿ ರೋಧಿಸಿದೆ….
ಮರಳಿ ಎಚ್ಚೆತ್ತು ನಸುನಕ್ಕು ನನ್ನ
ಅಪ್ಪಿಕೊಂಡು ಎಲ್ಲ ಒಂದು ದಿನ
ಈ ಲೋಕವ ಬಿಡಬೇಕು
ಮತ್ತೆ ಮುಂದಿನ ಪೀಳಿಗೆಗೆ
ದಾರಿ ಮಾಡಬೇಕು ಹೇಳಿದ ನೆನಪು
ಆದರೂ ಸಹಿಸದಾಗಿತ್ತು
ಆ ನಿನ್ನ ನಿದ್ರೆಯಲ್ಲಿ ಮೌನ…..

ಈಗ ಚಿರ ನಿದ್ರೆಯಲಿ ನೀನು
ಬಾರದ ಲೋಕಕ್ಕೆ ಶರಣಾದೆ
ನನ್ನ ಬಿಟ್ಟು ದೂರ ಬಲು ದೂರ
ತುಂಬಿ ತುಳುಕುತಿದೆ
ಎದೆಯ ಬಿಂದಿಗೆ
ನಿನ್ನ ಮಾತು ನೆನಪುಗಳು
ಹೊತ್ತಿಗೆ ನನ್ನ ಸೊತ್ತು
ನೀ ಕೊಟ್ಟ ಈ ಜೀವದ ಉಪಕೃತ
ಎನಿತು ಸಲ್ಲಿಸಲಿ ತಾಯಿ
ನೀ ಮತ್ತೆ ಬಾರೆಯಾ?
ನಿನ್ನ ಸೆರಗು
ನನ್ನ ಸ್ವರ್ಗದ ತಾಣ…..


3 thoughts on “ಸವಿತಾ ದೇಶಮುಖ್ ಅವರ ಕವಿತೆ-ಸ್ವರ್ಗದ ತಾಣ

  1. ಹೌದು .. ಸೆರಗಲ್ಲಿ ಸ್ವರ್ಗ
    ಜಗತ್ತನ್ನೇ ಮರೆಸುವ ಮಮತೆಯ ಗರ್ಭ
    ಅದ್ಭುತವಾಗಿ ಮೂಡಿ ಬಂದಿದೆ ಕವಿತೆ .. ಮತ್ತಷ್ಟು ಬರಲಿ

Leave a Reply

Back To Top