ಕಾವ್ಯ ಸಂಗಾತಿ
ಭಾರತಿ ಅಶೋಕ್
ಕಳೆದು ಹೋಗಿದ್ದೇನೆ ನಾನು…..
ಅಡವಿ ದಾರಿಯ ನಡುವೆ
ಇಳಿಹೊತ್ತು
ಹೊಲಬುದಪ್ಪಿದ
ಪುಣ್ಯಕೋಟಿಯಂತೆ
ಕಳೆದು ಹೋಗಿದ್ದೇನೆ ನಾನು
ಕಾರಣ ಹುಡುಕುತ್ತಾ…
ಹಸಿದ ಹೊಟ್ಟೆ ಬೆನ್ನಿಗಂಟಿದವರ
ಮೂಕ ರೋಧನೆಯ
ಕಣ್ಣೀರ ಪ್ರವಾಹದಲ್ಲಿ
ಕೊಚ್ಚಿ ಹೋಗಿದ್ದೇನೆ ನಾನು
ಪ್ರಾಣವಾಯುವಿಗೆ ಪರಿತಪಿಸಿ
ಉಸಿರು ಕಟ್ಟಿ
ತೊಗಲು ಎಲುವಿನ ದೇಹವ ಹಿಡಿದು!
ಕಳೆದು ಹೋಗಿದ್ದೇನೆ ನಾನು
ನನ್ನವರೇ ನನ್ನಿಂದ ದೂರ ಸರಿದು
ಮುಖ ಮರೆಸಿಕೊಳ್ಳುವ ಅಸಹಾಯಕತೆಯ ಅತಂತ್ರದಲಿ
ಕಳೆದು ಹೋಗಿದ್ದೇನೆ ನಾನು
ಪಕ್ಕದಲ್ಲಿ ನಿಸೂರಾಗಿ ಕುಳಿತಿದ್ದವರು
ಕಾರಣವ ಹೇಳದೇ
ತಣ್ಣಗೆ ಹೊರಟು
ಹೋದ ತಬ್ಬಲಿಗಳ ಆಕ್ರಂದನದಲಿ
ಕಳೆದು ಹೋಗಿದ್ದೇನೆ ನಾನು
ಇನ್ನು ಬದುಕೇ ಅರಿಯದ ಅನಾಥ ಹಸುಳೆಯ ಮಗ್ದ ನಗುವಿನಲಿ
ಕಳೆದು ಹೋಗಿದ್ದೇನೆ ನಾನು
ನನ್ನದೆಲ್ಲವ ಕಳೆದುಕೊಂಡ
ಭಾವದಲಿ, ಭವಿಷ್ಯದ ನಿಸ್ಸಾರದಲಿ
(ಕೊರೋನಾ ಕವಿತೆ)
ಭಾರತಿ ಅಶೋಕ್
Very nice