ಹನಮಂತ ಸೋಮನಕಟ್ಟಿ ಕವಿತೆ-ಇರುವೆಯಾಗಿ ಹುಟ್ಟಿದ್ದರೆ

ಇರುವೆಯಾಗಿ ಹುಟ್ಟಿದ್ದರೆ
ಎಷ್ಟೋ ಚೆನ್ನಾಗಿರುತ್ತಿತ್ತು
ಲಿಂಗಬೇಧವಿಲ್ಲದೆ ಬದುಕಬಹುದಿತ್ತು

ಬಗೆದು ತಿಂದು
ಬೆತ್ತಲುಗೊಳಿಸಿ ಅತ್ಯಾಚಾರಮಾಡಿ
ರುಂಡ ಕತ್ತರಿಸಿ ಒಗೆಯದಂತೆ
ಬದುಕಬಹುದಿತ್ತು

ಪ್ರೀತಿ ಪ್ರೇಮಕ್ಕೆ ಸೋಲದೆ
ಹೃದವಿಲ್ಲದೆ ಬದುಕಬಹುದಿತ್ತು

ಹೆಣ್ಣೆಂದು ಹೀಯಾಳಿಸಿ ನೋಡುತ್ತಿರಲಿಲ್ಲ
ಗಂಡೆಂದು ಗರ್ವದಿಂದ ತಿರುಗುತ್ತಿರಲಿಲ್ಲ

ನಿರ್ಭಯವಾಗಿ ಓಡಾಡಬಹುದಿತ್ತು
ಆಸ್ತಿ ಮನೆ ಅಧಿಕಾರ ಇಲ್ಲದೆ
ವಂಶ ಪಾರಂಪರ್ಯವಾಗಿ ಕುಳಿತು ತಿನ್ನುವಂತೆ ಗಳಿಸದೆ
ಎಲ್ಲೆಂದರಲ್ಲಿ ಇದ್ದು ಜೀವನ ಮಾಡಬಹುದಿತ್ತು

ಚಿನ್ನ ಬೆಳ್ಳಿ ವಜ್ರದ ಮೋಹಕ್ಕೆ ಸಿಲುಕದೆ
ನಿರಾಭರಣವಾಗಿ ದಿನ ಕಳೆಯಬಹುದಿತ್ತು

ದ್ವೇಷ ಅಸೂಯೆ
ಮದ ಮತ್ಸರ ಇಲ್ಲದೆ
ಬಂಧುಗಳೊಂದಿಗೆ ಚೆನ್ನಾಗಿ
ಜೊತೆಯಲ್ಲಿದ್ದು ಬದುಕಬಹುದಿತ್ತು

ಕೊಲೆ ಸುಲಿಗೆ ದರೋಡೆ ಮಾಡದೆ
ಇದ್ದದ್ದರಲ್ಲಿ ತಿಂದು
ನಿಯತ್ತಿಗೆ ಬದುಕು ಸಾಗಿಸಬಹುದಿತ್ತು

ಕಾಣುವ ಪ್ರಪಂಚದ ತುಂಬಾ
ಕಾಲಿಟ್ಟು ಸಂಚರಿಸಬಹುದಿತ್ತು

ಗಾಳಿ ಮಳೆ ಬಿಸಿಲಿಗೆ
ಅಂಜಿ ಅಳುಕದೆ
ಭೂಮಿಯ ಮೇಲಿರುವ ಮಾನವರಿಗೂ ಬಗ್ಗದೆ
ಹಿಗ್ಗಿನಿಂದ ಬದುಕ ಬಹುದಿತ್ತು

ನಡೆದಾಡುವಾಗ ತಲೆಯ ಮೇಲೆ ಕಾಲಿಟ್ಟರು
ಪುಟಿದೆದ್ದು ನಿಲ್ಲುವ ಮೂಲಕ
ಮತ್ತೆ ಜೀವನ ನಡೆಸುವ ಭರವಸೆ ಹೊಂದಬಹುದಿತ್ತು

ಘನಘೋರ ಯುದ್ದ ಮಾಡಿ
ಸಕಲ ಜೀವಿಗಳ ಸಾವಿಗೆ ಕಾರಣವಾಗದೆ
ಬೂಟುಗಾಲಿನ ಭಯಕ್ಕೆ
ಹುಲ್ಲಿನ ಆಸರೆಯಲ್ಲಿ ಜೀವಿಸಬಹುದಿತ್ತು

ಪ್ರಕೃತಿ ವಿಕೋಪಗಳ ಶಪಿಸದೆ
ಮುಂಜಾಗೃತೆಯಿಂದ ಮರವೇರಿ
ಬೆಟ್ಟದ ತುದಿಗೆ ಸಾಗಿ
ಕಲ್ಲುಬಂಡೆಯ ಬುಡದ ಸುರಕ್ಷಿತ ಜಾಗದಲ್ಲಿ
ಅಡಗಿ ಜೀವ ಉಳಿಸಿಕೊಳ್ಳಬಹುದಿತ್ತು


2 thoughts on “ಹನಮಂತ ಸೋಮನಕಟ್ಟಿ ಕವಿತೆ-ಇರುವೆಯಾಗಿ ಹುಟ್ಟಿದ್ದರೆ

Leave a Reply

Back To Top