ಎ.ಎನ್.ರಮೇಶ್.ಗುಬ್ಬಿ ಕವಿತೆ-ಶರಣಾಗತಿ..!

ನೀ ನುಡಿಸಿದ ಮುರಳಿಯ ಮಧುರಸ್ವರಗಳಿಗಲ್ಲ
ನಾ ಮೋದದಲಿ ಮುದಗೊಂಡು ಮಣಿದದ್ದು
ಆ ಮಧು ಮಧುರ ಸ್ವರಗಳೊಳಗಿನ ನಿನ್ನಯಾ
ಉಸಿರ ಮಾಧುರ್ಯಕೆ ನಾ ಶರಣಾದದ್ದು ಮುರುಳಿ.!

ನೀ ಬೀರಿದ ಕಂಗಳ ಆ ತುಂಟ ನೋಟಗಳಿಗಲ್ಲ
ನಾ ನಾಚಿಕೆಯಲಿ ಕರಗುತ ನೀರಾಗಿ ಹೋದದ್ದು
ಆ ತುಂಟ ನೋಟದೊಳಗಿನ ಮಿಂಚಿದ ನಿನ್ನಯ
ಒಲವ ಸೌಂದರ್ಯಕೆ ನಾ ಶರಣಾದದ್ದು ಮುರಾರಿ.!

ನೀ ಮಾಡಿದ ನರ್ತನದ ಮೋಹಕ ಹೆಜ್ಜೆಗಳಿಗಲ್ಲ
ನಾ ದಿಗ್ಭ್ರಾಂತಳಾಗಿ ಮೈಮರೆತು ಕುಣಿದು ತಣಿದಿದ್ದು
ಆ ಮನ ಮೋಹಕ ಹೆಜ್ಜೆಗಳೊಳಗಿನ ನಿನ್ನಯಾ
ಪ್ರೇಮದ ಆಂತರ್ಯಕೆ ನಾ ಶರಣಾದದ್ದು ಮುಕುಂದ.!

ನೀ ಪಸರಿಸಿದ ಚುಂಬಕನಗೆ ಹುಣ್ಣಿಮೆಕಿರಣಗಳಿಗಲ್ಲ
ನಾ ಸೋತುಹೋಗಿ ಜಗಮರೆತು ಕಲ್ಲಾಗಿ ನಿಂದಿದ್ದು
ಆ ಸೆಳೆವ ಬೆಳದಿಂಗಳ ಕಿರಣಗಳೊಳಗಿನ ನಿನ್ನಯ
ಅನನ್ಯ ಗಾಂಭೀರ್ಯಕೆ ನಾ ಶರಣಾದದ್ದು ಮಾಧವ.!

ನೀ ಹರಿಸಿದ ಒಲವ ಮೋಡಿ ಭಾವದಾಂಗುಡಿಗಲ್ಲ
ನಾ ಕಣ ಕಣದಿ ಬೆರೆತು ನಿನ್ನೊಳು ಬಂಧಿಯಾದದ್ದು
ಆ ಅಪೂರ್ವ ಭಾವÀ ಗಾರುಡಿಯೊಳಗಿನ ನಿನ್ನಯಾ
ಅನುರಾಗ ಔದಾರ್ಯಕೆ ನಾ ಶರಣಾದದ್ದು ಮೋಹನ.!

ನೀ ಆವರಿಸಿದಾ ಈ ತನುಮನದಿ ನನ್ನದುಗಳೇನಿಲ್ಲ
ನಾನಳಿದು ಈಗ ನೀನು ನೀನೆಂಬುದಷ್ಟೆ ಉಳಿದಿಹುದು
ನಿನ್ನೊಳಗೆ ಐಕ್ಯವಾಗಿಸಿ ಏಕವಾಗಿಸು ಮಧುಸೂದನ.!
ಯುಗಯುಗಕು ನಿನಗರ್ಪಿತವಾದದ್ದು ನನ್ನೀ ಹೃನ್ಮನ.!


Leave a Reply

Back To Top