ಶಂಕರಾನಂದ ಹೆಬ್ಬಾಳ ಅವರ ಗಜಲ್

ಒಲವ ಅಭಿಯಾನಕೆ‌ ಮುನ್ನುಡಿ ಬರೆಯಲು
ಬಂದುಬಿಡು
ಚೆಲುವಿನ ಮಹಲಿನ ಬಾಗಿಲು ತೆರೆಯಲು
ಬಂದುಬಿಡು

ಪ್ರತಿ ಪುಟದಲ್ಲೂ ಅಚ್ಚಳಿಯದ ಕುರುಹು
ಮೂಡಿಸಿದೆಯೇಕೆ
ಮತಿಗೆ ಪ್ರೇಮದ ತೈಲವನು ಎರೆಯಲು
ಬಂದುಬಿಡು

ಭೋಗದಿ ಮುಳುಗಿಸಿ ತನುವನು ವಿಲಾಸದಲಿ
ತೇಲಿಸಿದೆ
ತೂಗು ಉಯ್ಯಾಲೆಯಲಿ ಕೂತು ಮೆರೆಯಲು
ಬಂದುಬಿಡು

ಕಾಲ್ಗೆಜ್ಜೆಯ ನಾದದಲಿ ಪರವಶತೆ ತರಿಸಲು
ವರಿಸುವೆನು
ಹಾಲ್ಜೇನಿನ ಬಾಳಿನಲಿ‌ ಕಷ್ಟಗಳನು ಮರೆಯಲು
ಬಂದುಬಿಡು

ಮನಗಳು ಒಂದಾಗಲು ಪ್ರಣಯದ ತಲ್ಪವಿದು
ಕರೆಯಿತಲ್ಲ
ಮೀನಮೇಷ ಎಣಿಸದೆ ಅಭಿನವನ ಬೆರೆಯಲು
ಬಂದುಬಿಡು


2 thoughts on “ಶಂಕರಾನಂದ ಹೆಬ್ಬಾಳ ಅವರ ಗಜಲ್

Leave a Reply

Back To Top