ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ತುಸುವೇ ತುಸು ನಕ್ಕು ಬಿಡು
ಬದುಕುಳಿದಿರುವ ಪುರಾವೆಗಾಗಿ
ಇಷ್ಟೇ ಇಷ್ಟು ಭರವಸೆ ಇಡು
ಬದುಕುಳಿದಿರುವ ಪುರಾವೆಗಾಗಿ
ಬದುಕಿದು ನೋವು ನಲಿವುಗಳ
ಗೋಣಿ ಚೀಲ ಗೆಳತಿ
ಚೂರು ತಾಳ್ಮೆಯಿಂದ ಹೊತ್ತು ಹೊರಡು
ಬದುಕುಳಿದಿರುವ ಪುರಾವೆಗಾಗಿ
ನಿನ್ನವರೇ ತಿವಿದು, ನಿನ್ನವರೇ ಅಳಿಸಿ
ಸಂತೈಸುವಂತೆ ನಟಿಸುವರು
ಎದೆಗುಂದದೆ ಮುನ್ನುಗ್ಗಿ ಹೆಜ್ಜೆಯೊಂದಿಡು
ಬದುಕುಳಿದಿರುವ ಪುರಾವೆಗಾಗಿ
ಕಂಬನಿಯೆಡೆಗೆ ಕಣ್ಣ ಹಾಯಿಸಿ
ಒಳಗೊಳಗೇ ನಲಿವ ಜಗವಿದು
ಕಂಬನಿ ಮರೆಮಾಚುವ ಮುಖವಾಡ ತೊಡು
ಬದುಕುಳಿದಿರುವ ಪುರಾವೆಗಾಗಿ
ಒಡಲು ಉಸಿರಾಡುವವರೆಗೂ
ನಡೆಯುವ ಪಯಣವಿದು ‘ವಾಣಿ ‘
ಒಲ್ಲೆನದೇ, ಅವರಿವರ ಜರಿಯದೆ ಸಾಗಿಬಿಡು
ಬದುಕುಳಿದಿರುವ ಪುರಾವೆಗಾಗಿ
——————————
ವಾಣಿ ಯಡಹಳ್ಳಿಮಠ
Beautiful
Thank you