ಕುಸುಮಾ.ಜಿ.ಭಟ್ ಕವಿತೆ- ಸಖಿ ಹೇಳೇ..

ಎಲ್ಲವನು…. ಎಲ್ಲವನು?
ಸಖಿ ಹೇಳೇ…. ಎಲ್ಲಿಹ
ಆ….ನನ್ನವನು?!

ಹೊತ್ತಲ್ಲದ ಹೊತ್ತಿನಲಿ
ದುತ್ತೆಂದು ಬಂದವನು
ಕಡು ಕತ್ತಲಲೂ ಮೂಗು
ನತ್ತಾದವನು……
ಎಲ್ಲವನು?

ಈ ನೀಳ ಕೊರಳ ಬಳಸುವ
ಮುತ್ತಿನ ಮಣಿಗಳಾದವನು
ಮತ್ತೆ ನೇರಳೆ ಕಂಗಳ
ಕಾಡಿಗೆಯಾದವನು..
ಎಲ್ಲವನು?

ನನ್ನ ಗುಂಗುರು ಹೆರಳಲಿ
ಹಣಿಗೆಯಾದವನು
ನಡು ಬೆರಳ ಉಂಗುರದ
ಹರಳೆ ತಾನೆಂದವನು…
ಎಲ್ಲವನು?

ಅಂದದ ಮುಡಿಗೆ ಅತ್ತರದ
ಮಲ್ಲಿಗೆಯಾದವನು
ಕಾಲ್ಗೆಜ್ಜೆಯ ಹೆಜ್ಜೆಗೆ
ಘಲಿರೆಂದು ದನಿಯಾದವನು…
ಎಲ್ಲವನು?

ಎದೆಯೊಳಗೆ ಅವಿತು ಕುಳಿತು
ಮೃದಂಗವಾದವನು
ಮೆತ್ತನೆಯ ಮುತ್ತಲೇ
ಮತ್ತನು ತರಿಸುವವನು…
ಎಲ್ಯವನು?

ಸುತ್ತೆಲ್ಲ ಅರಸಿ ಕಾಣದೆ
ಅವಗೊಪ್ಪುವ ತೆರದಿ ಸಿಂಗರಿಸಿ
ಹಂಬಲದಿ ಬಾಗಿಲಲೆ
ಎದುರು ಗೊಳ್ಳಲು ನಿಂತಿಹೆನು!
ಎಲ್ಲವನು??!!

———————

Leave a Reply

Back To Top