ಅನಸೂಯ ಜಹಗೀರದಾರ ಅವರ ಗಜಲ್

ನನ್ನ ಮೌನದಲಿ ಅನಂತಾನಂತ
ಮಾತುಗಳಿದ್ದವು ನಿನಗೆ ತಿಳಿಯಲಿಲ್ಲ
ನನ್ನ ಅಶ್ರುವಿನಲಿ ಸಾವಿರಾರು
ಬಯಕೆಗಳಿದ್ದವು ನಿನಗೆ ತಿಳಿಯಲಿಲ್ಲ

ನಾನು ಮೂಕಿಯಲ್ಲ ನೀನು ಕಿವುಡನಲ್ಲ
ಇಬ್ಬರಿಗೂ ಗೊತ್ತಿದ್ದ ಸತ್ಯವೆ
ಭಿಕ್ಷೆಯಲಿ ಬಯಸದ ನೈಜ
ಕಾಮನೆಗಳಿದ್ದವು ನಿನಗೆ ತಿಳಿಯಲಿಲ್ಲ

ಕೇಳಿ ಹೇಳಿ ತರ್ಕಿಸಿ ವಿವರಣೆ ಕೊಡಲು
ಪ್ರೀತಿಯೇನು ಬೈಠಕ್ಕಿನ ಚರ್ಚೆಯೆ
ಗುಪ್ತಗಾಮಿನಿಯಾಗಿ ಮನದ
ತೊರೆಗಳಿದ್ದವು ನಿನಗೆ ತಿಳಿಯಲಿಲ್ಲ

ಅಂಟದ ಎಲೆಯ ಮೇಲಿನ‌ ಜಲ ಹನಿಯ
ನಂಟೇ ನಿಜವದು ಕೊನೆತನಕ
ಅನುಭವಕೆ ಅನ್ವಯಿಸುವ ನುಡಿಗಳಿದ್ದವು
ನಿನಗೆ ತಿಳಿಯಲಿಲ್ಲ

ಗೋಪುರ ಕಂಡು ಗುಡಿಯ ತಲುಪಿದೆವೆಂಬ ವಿಜಯ
ಸಹಜವೆ ಅಲ್ಪತೃಪ್ತಿಯಲ್ಲವೆ
ದೂರದ ಮರೀಚಿಕೆ ಆವರಿಸಿದ
ಪರದೆಗಳಿದ್ದವು ನಿನಗೆ ತಿಳಿಯಲಿಲ್ಲ

ದೂರ ಹಾರಿದ ಹಕ್ಕಿ ಮರಳಿ ಬರುವ ದಾರಿ
ಮರೆತು ಕಂಗಾಲಾಗಿದೆ ಕಾನನದಲಿ
ಸವೆಸಿದ ಬಟ್ಟೆಯಲಿ ಸವಾಲಿನ
ನೋಟಗಳಿದ್ದವು ನಿನಗೆ ತಿಳಿಯಲಿಲ್ಲ

ಅಲಿಬಾಬಾನ ಗುಹೆಯಲಿ ನಿಂತು ಮಂತ್ರ
ಮರೆತ‌ ಸ್ಥಿತಿಯಿದು ನನಗೆ ಅನು
ಕಾಲನೊಡನೆ ಹೊಂದಿ ನಡೆದ ಭಾರದ
ಹೆಜ್ಜೆಗಳಿದ್ದವು ನಿನಗೆ ತಿಳಿಯಲಿಲ್ಲ

2 thoughts on “ಅನಸೂಯ ಜಹಗೀರದಾರ ಅವರ ಗಜಲ್

Leave a Reply

Back To Top