ಕಾವ್ಯ ಸಂಗಾತಿ
ಗೀತಾಮಂಜು ಬೆಣ್ಣೆಹಳ್ಳಿ
ಅವ್ವ ಮತ್ತು ಒಲೆ
ಅವ್ವ ಮತ್ತು ಒಲೆ
ಎಂದಿಗೂ ಬೇರೆ ಬೇರೆ ಆಗಿರಲಿಲ್ಲ
ಹಬ್ಬ ಹರಿದಿನ, ವಾರ ಹುಣ್ಣಿಮೆ
ಅಮಾವಾಸ್ಯೆಯಂದು
ಸೌದೆ ಒಲೆಯನ್ನು ಸಾರಿಸಿ
ಸಿಂಗರಿಸುತ್ತಿದ್ದ ಅವಳಿಗೆ
ಎದೆಗೆ
ಪದಕವಿಟ್ಟುಕೊಂಡ ಸಂಭ್ರಮ
ಅಡಿಗೆ ಮಾಡಿ ದಣಿದಿದ್ದರೂ
ತುಂಬಿದ ಪಾತ್ರೆಯ ಹಿಡಿ ಅನ್ನ
ಒಲೆಗಡ್ಡೆ ಮೇಲಿರುವ
ದೇವರಿಗೆ ಅರ್ಪಣೆ,
ಉಣ್ಣುವ ಪ್ರತಿ ಅಗುಳು
ಪ್ರಸಾದ
ಒಲೆ ಉರಿಸುವುದು
ಸುಲಭವಾಗಿರಲಿಲ್ಲ ಈಗಿನಷ್ಟು
ಒಣಗಿದ ಸೌದೆಗಳ ಜೋಡಿಸಿ
ಪುರುಳೇ.. ಪುಕ್ಕ.ತೆಂಗಿನ ನಾರು
ನಡು ಒಲೆಗೆ ಸರಿಸಿ
ಬೆಂಕಿ ಹೊತ್ತಿಸುವುದು
ಮಹಾ ತಾದಾತ್ಮ್ಯದ ಧ್ಯಾನ
ಬೇಯಿಸುವ ಕಾಯಕ
ಜೊತೆಗೆ
ಹದವರಿತ ರುಚಿ
ಅವ್ವನ ನಿತ್ಯ ತಪಸ್ಸು
ಅದರೊಟ್ಟಿಗೆ ಒಪ್ಪತ್ತು
ಅವಳ ಕೈರುಚಿಯ
ತಟ್ಟೆಯಲ್ಲಿ ಎಲ್ಲವೂ ಪರಮಾನ್ನ
ಅವ್ವ ಮತ್ತು ಒಲೆ ಎಂದಿಗೂ
ಬೇರೆ ಆಗಿರಲಿಲ್ಲ…
ಗೀತಾಮಂಜು ಬೆಣ್ಣೆಹಳ್ಳಿ
Super old is gold