ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
ಪೂರ್ವ ಮುಂಗಾರು
ಮುಂಗಾರು ಪೂರ್ವ ಮಳೆ
ಸಹರ್ಷದ ಹೊಳೆ
ಆಗಮನ ಪೂರ್ವ ಮಿಂಚು
ಗುಡುಗು ತೊಳೆದು ಕೊಳೆ
ಕಸಕಡ್ಡಿ ಮನಸ್ಸಿನ ರಾಡಿ ಕಳೆದು ಆಹ್ಲಾದ!
ಕಾದ ಕಾವಲಿಗೆ
ನೊಂದ ಮನಸ್ಸಿಗೆ ಹಿತ!
ಪೂರ್ವ ಮುಂಗಾರು
ಸುರಿವ ಓಘ ವೇಗ ಗೊತ್ತಿಲ್ಲ
ಯಾವ ಮುಹೂರ್ತಕ್ಕೆ ಎಲ್ಲಿ
ಎಷ್ಟು ಭಾರಿಯಾಗಿ ಸೊಗಸು
ಸುರಿಸುತ್ತೊ ಗೊತ್ತಿಲ್ಲ
ಎಷ್ಟು ಭಾರಿಯಾಗಿ ಮನಸು
ತಣಿಸುತ್ತೊ ಗೊತ್ತಿಲ್ಲ
ಅಥವಾ
ಬರೆ ಗುಡುಗುಡು ಎಂದು
ದೂರದಾಕಾಶದಲ್ಲಷ್ಟೆ ಮಿಂಚಿ
ಆನೆಕಲ್ಲಿನ
ಮತ್ತಷ್ಟು ಹೊಡೆತಕ್ಕೆ ಸಾಕ್ಷಿಯೋ ಗೊತ್ತಿಲ್ಲ!
ಪೂರ್ವ ಮುಂಗಾರು
ಒಮ್ಮೊಮ್ಮೆ
ಬರುತ್ತೇನೆಂದು ಆರ್ಭಟಿಸಿ
ಬಾರದೇ
ಪಕ್ಕದೂರಿನಲ್ಲೆ ಮಳೆ
ಸುರಿಸಿ ನಮ್ಮಲ್ಲಿ ಬರೆ ಕೊಳೆ !
ಕಸ ಕಡ್ಡಿ
ಆಹ್ಲಾದವಿಲ್ಲ,
ಸಂಜೆಯ ನೆಮ್ಮದಿಯೂ ಇಲ್ಲ
ಓಹ್! ಮುಂಗಾರು ಮಳೆಯ ಸ್ವಾದ
ತನುವ ತಣಿಸ ಬಹುದು
ಮನವ ಮೆಚ್ಚಿಸಲೂ ಬಹುದು!
ಮರೀಚಿಕೆಯಾಗಲೂ ಬಹುದು!
ಅಷ್ಟೇ-
ಬಂದಾಗ ಸಾಂತ್ವನ
ಬಾರದಾಗ ಕಂಪನ
ವರ್ಣನಾತೀತ ಬಂಧನ!
ಈ
ಮುಂಗಾರು ಪೂರ್ವದ ಮಳೆ
ಅನಿಶ್ಚಿತ ಹೊಳೆ
ಚಾತಕ ಪಕ್ಷಿಯ ನೋಟದ ನಡೆ!
ಡಾ.ಡೋ.ನಾ.ವೆಂಕಟೇಶ
ಮುಂಗಾರು ಪೂರ್ವ ಮಳೆಯ ಬಂದೋಡನೆ ಅದನ್ನು ನೋಡಿ ಬರುವ
ಆ ಸುಂದರವಾದ ಭಾವನೆಗಳನ್ನು ಅತಿ
ಚೆನ್ನಾಗಿ ನಿಮ್ಮ ಕವನದಲ್ಲಿ ವ್ಯಕ್ತಪಡಿಸಿದ್ದೀರಿ.
ಧನ್ಯವಾದಗಳು ಮಂಜುನಾಥ. @
Very nice and meaningful.
Thanks