“ಗಂಡ ಹೆಂಡಿರ ಜಗಳ… ಗಂಧ ತೀಡಿದಂಗ”ಲೇಖನ ವೀಣಾ ಹೇಮಂತಗೌಡ ಪಾಟೀಲ್

ಪ್ರವೀಣ್ ಮತ್ತು ಪ್ರಿಯಾ  ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು. ಪರಸ್ಪರ ಸ್ನೇಹ ಪ್ರೇಮವಾಗಿ, ಪ್ರೇಮಕ್ಕೆ ಹಿರಿಯರ ಒಪ್ಪಿಗೆ ದೊರೆತು ಮದುವೆ ಎಂಬ ಮುದ್ರೆ ಬಿದ್ದು ಈಗಾಗಲೇ ಆರು ತಿಂಗಳಾಗಿತ್ತು. ಇಬ್ಬರೂ ಸಿಟಿ ಬಸ್ಸಿನಲ್ಲಿ ಒಟ್ಟಿಗೆ ಆಫೀಸಿಗೆ ಹೋಗಿ ಬರುತ್ತಿದ್ದರು.

 ಅದೊಂದು ದಿನ ದಂಪತಿಗಳಿಬ್ಬರೂ ಯಾವುದೋ ಕಾರಣಕ್ಕೆ ಜಗಳವಾಡಿ ಮುನಿಸಿಕೊಂಡಿದ್ದರು. ಇಬ್ಬರಲ್ಲಿ ಯಾರೊಬ್ಬರೂ ಸೋತು ಮಾತನಾಡಲಿಲ್ಲ. ಪ್ರಿಯಾ ತನ್ನ ಪಾಡಿಗೆ ತಾನು ಎದ್ದು ಮನೆ ಕೆಲಸ ಪೂರೈಸಿ ತಿಂಡಿ ಮಾಡಿದರೆ, ಪ್ರವೀಣ್ ನಿತ್ಯ ವಿಧಿಗಳನ್ನು ಪೂರೈಸಿ ತಿಂಡಿ ತಿಂದು ಮನೆಯ ಹೊರಗೆ ನಿಂತನು. ಈಗಾಗಲೇ ತಿಂಡಿ ತಿಂದು ರೆಡಿಯಾಗುತ್ತಿದ್ದ ಆಕೆ ಕೂಡ ತನ್ನ ಅಲಂಕಾರವನ್ನು ಪೂರೈಸಿ ಇಬ್ಬರಿಗೂ ಊಟದ ಡಬ್ಬಿ ಮತ್ತು ನೀರನ್ನು ತೆಗೆದುಕೊಂಡು ಮನೆಯ ಹೊರಬಂದು ನಿಲ್ಲಲು, ಆತ ಮನೆಯ ಬಾಗಿಲನ್ನು ಚಿಲಕ ಹಾಕಿ ಕೀಲಿ ಜಡಿದನು. ಪರಸ್ಪರ ಮಾತನಾಡದೆ ಇದ್ದರೂ ಜೊತೆಯಾಗಿಯೇ ಬಸ್ ಸ್ಟಾಪ್ ಗೆ ಬಂದು ನಿಂತ ಆ ದಂಪತಿಗಳಲ್ಲಿ ಪತ್ನಿ ಯಾವಾಗಲೂ ಕೂಡುತ್ತಿದ್ದ ಹಾಗೆ ಪತಿಯ ಪಕ್ಕ ಕುಳಿತುಕೊಳ್ಳದೆ  ಮುಂದಿನ ಸೀಟಿಗೆ ಹೋಗಿ ಕುಳಿತಳು. ಇದನ್ನು ನೋಡಿ ತುಸು ಅಸಮಾಧಾನಗೊಂಡರೂ ಏನೂ ಮಾಡಲಾಗದೆ ಕೈ ಕೈ ಹಿಸುಕಿಕೊಂಡು
ಸುಮ್ಮನೆ ಕುಳಿತ ಪತಿರಾಯ.

  ಪಕ್ಕಕ್ಕೆ ತಿರುಗಿ ನೋಡಿದ ಪ್ರಿಯಾಗೆ ಕಂಡದ್ದು ಒಬ್ಬ ಆಕರ್ಷಕ ವ್ಯಕ್ತಿತ್ವದ 30ರ ಹರೆಯದ ಸುಂದರ ತರುಣ. ಅದೇ ಸಮಯಕ್ಕೆ ಆತನು ಕೂಡ ಈಕೆಯತ್ತ ತಿರುಗಿ ನೋಡಿದಾಗ ಪರಸ್ಪರ ಮುಗುಳ್ನಗೆ ವಿನಿಮಯವಾಯಿತು. ಕೆಲ ಕ್ಷಣಗಳ ನಂತರ ಆಕೆಯೊಂದಿಗೆ ಕುಶಲೋಪರಿಯನ್ನು ಆರಂಭಿಸಿದ ಆ ವ್ಯಕ್ತಿ. ಆಕೆಯೂ ಕೂಡ ಆತನ ಮಾತಿಗೆ ಸ್ಪಂದಿಸಿದಳು. ಕೆಲವು ನಿಮಿಷಗಳ ಮಾತುಕತೆಯ ನಂತರ ಆತ ತಾನು ಕಾರನ್ನು ಸರ್ವಿಸಿಗೆ ಬಿಟ್ಟಿರುವುದರಿಂದ ಇಂದು ಬಸ್ಸಿನಲ್ಲಿ ಬಂದಿರುವುದಾಗಿ ಹೇಳಿದನು… ಜೊತೆಗೆ ತನ್ನ ಮನೆಯಲ್ಲಿ ಮದುವೆಗೆ ಒತ್ತಾಯ ಮಾಡುತ್ತಿರುವುದರಿಂದ ಸೂಕ್ತವಾದ ಕನ್ಯೆಯ ಹುಡುಕಾಟದಲ್ಲಿರುವೆ ಎಂದು ಆಕೆಯನ್ನು ಆಪಾದಮಸ್ತಕ ನೋಡುತ್ತಾ ಹೇಳಿದನು.

 ಈಗಾಗಲೇ ಹಿಂದೆ ಕುಳಿತು ಇವರ ಮಾತುಗಳನ್ನು ಕೇಳುತ್ತಾ ಚಡಪಡಿಸುತ್ತಿದ್ದ ಪತಿರಾಯನಿಗೆ ಇನ್ನು ಸುಮ್ಮನೆ ಕೂರಲಾಗಲಿಲ್ಲ. ಕೂಡಲೇ ಪತ್ನಿಯನ್ನು ಉದ್ದೇಶಿಸಿ ಪ್ರಿಯಾ, ಸಾನ್ವಿ ಪುಟ್ಟಿಯ ಬರ್ತಡೇ ಬಟ್ಟೆ ಖರೀದಿಸಲು ಹೋಗಬೇಕು ಎಂಬುದು ನೆನಪಿದೆಯಲ್ಲವೇ? ಎಂದು ಜೋರಾಗಿ ಆಕೆಯ ಭುಜವನ್ನು ತಟ್ಟಿ ಕೇಳಿದನು. ಗಂಡನ ಮಾತಿಗೆ ಸ್ವಲ್ಪ ಗಲಿಬಿಲಿಗೊಂಡರೂ ಪ್ರಿಯಾ ಸಂಭಾಳಿಸಿಕೊಂಡು ಇಂದು ಸಂಜೆಯೇ ತಂದು ಬಿಡೋಣ ಎಂದು ಉತ್ತರಿಸಿದಳು ಕೂಡಲೇ  ಪ್ರಿಯಾಳ ಪಕ್ಕ ಕುಳಿತಿದ್ದ ವ್ಯಕ್ತಿ ಹಿಂತಿರುಗಿ ಪ್ರವೀಣನನ್ನು ನೋಡಿ ಯಾರಿವರು? ಎಂಬಂತೆ ಪ್ರಿಯಾಳಿಗೆ ಸನ್ನೆ ಮಾಡಿ ಕೇಳಿದನು. ಕೂಡಲೇ ಪ್ರಿಯ ಆತ ತನ್ನ ಪತಿ ಎಂದು ಪರಿಚಯಿಸಿದಳು. ಕೊಂಚ ಸಲುಗೆಯಿಂದಲೇ ಪ್ರಿಯಾಳೊಂದಿಗೆ ವ್ಯವಹರಿಸುತ್ತಿದ್ದ ಆಕೆಯ  ಪಕ್ಕ ಕುಳಿತ ವ್ಯಕ್ತಿ ಇದರಿಂದ ತುಸು ಕಕ್ಕಾವಿಕ್ಕಿಯಾದನು. ಮುಂದೆ ಕೆಲವೇ ನಿಮಿಷಗಳಲ್ಲಿ  ಬಸ್ಸು ಸ್ಟಾಪಿಗೆ ಬಂದು ನಿಲ್ಲುತ್ತಲೇ ಎದ್ದು ನಿಂತ ಪ್ರವೀಣ್ ಪ್ರಿಯಾಳ ಕೈ ಹಿಡಿದು ಬಸ್ಸಿನಿಂದ ಕೆಳಗಿಳಿಯುತ್ತಲೇ  ಆ ಪಕ್ಕದ ವ್ಯಕ್ತಿಗೆ ಬಾಯ್ ಹೇಳಿದನು.

 ಬಸ್ಸು ಮುಂದೆ ಹೋದ ಕೂಡಲೇ ಬಸ್ ಸ್ಟಾಪಿನ ಒಂದು ಮೂಲೆಯಲ್ಲಿ ನಿಂತು  ಒಂದೇ ಸಮನೆ ಜೋರಾಗಿ ನಕ್ಕಳು ಪ್ರಿಯಾ. ಆಕೆಯ ನಗುವಿನಲ್ಲಿ ಕಳೆದುಹೋದ ಪ್ರವೀಣ. ನಕ್ಕು ಸಾಕಾದ ಮೇಲೆ “ಪ್ರವೀಣ್, ಈ ಸಾನ್ವಿ ಯಾರು? ಎಂದು ಕೇಳಿದಳು ಪ್ರಿಯಾ!. ಕೂಡಲೇ  ನಸುನಗುತ್ತಾ ಪ್ರವೀಣ ನಮಗೆ ಮುಂದೆ ಹುಟ್ಟುವ ಮಗುವಿನ ಹೆಸರು ಸಾನ್ವಿ ಎಂದು ಹೇಳಿದನು. ಮತ್ತೊಮ್ಮೆ ಜೋರಾಗಿ ಇಬ್ಬರು ನಕ್ಕು ಕೈ ಕೈ ಹಿಡಿದುಕೊಂಡು ಬೇರೊಂದು ಬಸ್ಸನ್ನು ಹತ್ತಿ ತಮ್ಮ ಗಮ್ಯದತ್ತ ತೆರಳಿದರು.


Leave a Reply

Back To Top