ಲಲಿತಾ ಪ್ರಭು ಅಂಗಡಿ ಕವಿತೆ-ಅವ್ವಾ ಅಂತರಗಂಗೆ

ಅವ್ವನೆಂಬ ಅರಹು ಮುಗಿಲಗಲ
ಹ್ರೃದಯವಂತೂ ಮೋಡದಂತೆ ವಿಶಾಲ
ಚುಕ್ಕಿಯಂಗ ವಾತ್ಸಲ್ಯದ ಚಿದ್ಬೆಳಕು
ನದಿಯಂಗ ಸದಾ ಹರಿವ ಪ್ರೀತಿಯ ಥಳಕು

ಚಂದ್ರನಂಗ ಶಾಂತಿ ಸಹನೆಯ ಮಂದಾರ ಬೆಳಕು
ಸೂರ್ಯನ ಸುಡು ಬಿಸಿಲಿಗೂ ನೆರಳಾಗಿ
ಮರವಾಗಿ ತಂಪೆರೆಯುವ ಒರತೆ
ಮನದ ಕೊಳೆಯ ತೊಳೆದು ತಿದ್ದಿ ತೀಡುವ ಸಹನಾ ಮೂರ್ತಿ

ಭೂಮಿಯಂಗ ಎಲ್ಲವನು ಸಹಿಸಿ
ಬೆಳೆಸೊ ಕಾರುಣ್ಯಕೀರ್ತಿ
ಬೆಟ್ಟದಷ್ಟು ಕಷ್ಟ ಒಡಲಾಗ ಬಚ್ಚಿಟ್ಟು
ಕರುಳು ಬಳ್ಳಿಗೆ ಮುದ್ದಿಟ್ಟು
ಮಮತೆಯ ಮಡಿಲಲ್ಲಿ ಕಾಪಿಟ್ಟು

ಮುಗುಳು ನಗೆಯ ಮಂದಾರ ಮಲ್ಲಿಗೆಯ ಹಾಸಿ
ಜೋಗುಳದ ಪದಗಳಿಂದ ಕೈಬೀಸಿ
ಜೀವನ ಗಾಥೆ ಹಾಡಿ ಬೆಳೆಸಿ
ಜಗತೋರಿದ ನನ್ನವ್ವ ಬಣ್ಣಿಸಲಾರದ
ಭಾವೈಕ್ಯತೆಯ ಬಂಧು ಅಂತರಂಗದ ಸಿಂಧು
ಅವ್ವಾ ಎಂಬ ಅಕ್ಷರವೆ ಅಂತಃಕರಣದ ಅಂತರಗಂಗೆ.

Leave a Reply

Back To Top