“ಅಮ್ಮಾ….” ಭಾರತಿ ಅಶೋಕ್ ಅವರ ಬರಹ

ಅವಳು ಅವಳನ್ನೇ ಮರೆತು
ಮಗುವನ್ನು ಮೆರೆಸುವವಳು
ಅರ್ಥಪೂರ್ಣ ಮಾಂತ್ರಿಕಳು
ಅಮ್ಮಾ,ಮಾ, ಮಾತೃ, ತಾಯಿ  ತಾಳ್ಮೆಯೇ ಮೈವೆತ್ತವಳು.

“ದೇವರೇ  ಧನ್ಯವಾದಗಳು ನಮ್ಮನ್ನು ಮಾತ್ರ ನಿನ್ನ ಅನುವಾದಕರಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ” ಎನ್ನುವ ಕವಿಯ ಕೃತಜ್ಞತೆಗೆ ಅರ್ಥವಿದೆ. ಒಡಲುರಿಯ ಕತ್ತರಿಸಿ ಬೊಗಸೆಯಲ್ಲಿಟ್ಟು ಸದಾ ಕಣ್ಗಾವಲಿರಿಸಿ, ಕಾಯುವ ಜೀವ ಅಮ್ಮಾ.

ಗರ್ಭದಲಿ ಮೂಡಿದ ಕ್ಷಣವೇ ಶುರುವಾಗುವುದು ಅಮ್ಮನ ಮಮಕಾರದ ತುಡಿತ.ಒಂದಿನಿತು ಕದಲದ ಚಿತ್ತ. ಮೂಡಿದ ಮಾಂಸ ಮುದ್ದೆಯೊಂದಿಗಿನ ಸಂವಾದ ಸದಾ. ಹೃದಯದ ಜೋಡಿ ಮಿಡಿತ ನವಮಾಸವೂ. ಪ್ರಸವದಲಿ  ಅವಳು  ಮರು ಹುಟ್ಟುವಳು ಮಗುವೊಂದಿಗೆ.

 ಇಲ್ಲಿಂದ ಎಲ್ಲ ಮಗುವಿಗೆ. ಪ್ರಸವದ ನೋವ ನುಂಗಿದವಳು ಈಗ ಹಸಿವ ನುಂಗುವಳು.ಜಗದ ನೋವೆನಗಿರಲೆಂದು ಅದರ ನಲಿವೆಲ್ಲ ಮಗುವಿಗಿಟ್ಟು ತಣ್ಣನೆ ನಗುವಳು – ಮಗುವ ಚಲನೆ ಕಂಡು. ಮಗು ಅತ್ತರೆ ತಾನು ಅತ್ತು, ನಕ್ಕರೆ ಸುಖಿಸಿ ನೋವ ಮರೆವಳು.

ಬೆಳೆದ ಮಗು ಸಮಾಜಮುಖಿಯಾದರೆ ಕಿರೀಟ ಅಪ್ಪನಿಗೆ, ಇಲ್ಲದಿರೆ ನಿಂದೆಗೆ ಸದಾ ಸಖಿ. ಅನವರತ ತನ್ನವರ ಒಳಿತಿಗೆ ಮಿಡಿವ ಅಮ್ಮನ  ಒಳಿತು ಕೇಳುವ ಕಿವಿಗಳಿಗೆ ಬರ.ಅದ್ಯಾವುದ ಲೆಕ್ಕಿಸದ ಅವಳು  ಸದಾ ಹಸನ್ಮುಖಿ. ಜಗದ ಜನನಿ ತಾಯಿ.ನಿತ್ಯದ ಬದುಕು ಅವಳ ಛಾಯೆ, ಇಲ್ಲದಿಹ ಬದುಕಿಗೆಲ್ಲಿ ಠಾವು.ಅವಳು ಸದಾ ವಂದಿತಳು ಜಗದಿ ಪೂಜಿಪಳು.


Leave a Reply

Back To Top