ಪ್ರಮೋದ ಜೋಷಿ ಅವರ ಕವಿತೆ-ಬಿಸಿ ರೊಟ್ಟಿ

ಬಿಸಿ ರೊಟ್ಟಿ ತಿನ್ನುವ ಬಯಕೆ
ತಿನ್ನಲಾಗಲಿಲ್ಲ ಆವತ್ತು
ಆಸೆಯನ್ನೂ ಚೂರು ಮಾಡಿ
ತೋರಿತು ಸಮಯದ ಗಮ್ಮತ್ತು

ಸುಟ್ಟ ರೊಟ್ಟಿ ಕೈಯಲ್ಲಿದ್ದರೂ
ತುತ್ತು ಬಾಯಿಗೆ ಬರಲಿಲ್ಲ
ತಿನ್ನುವ ಹೊತ್ತಿಗೆ ಬಂದರಿಷ್ಟು ಜನ
ಎದ್ದೆ ರೊಟ್ಟಿ ಅಲ್ಲೆ ಬಿಟ್ಟು

ಬಂದರೊಂದಿಗೆ ಮಾತಿಗೆ ಕುಳಿತೆ
ಅವರೊಂದಿಗೆ ಚಹಾ ನಾನೂ ಕುಡಿದೆ
ಜೊತೆಗೆ ಎಲೆ ಅಡಿಕೆ ತಂಬಾಕು ಜಗಿದೆ
ರೊಟ್ಟಿ ಅಲ್ಲೇ ಕೂತಿತ್ತು ಹಸಿವೆ ಆಗ ಸತ್ತಿತ್ತು

ಅವರೊಂದಿಗೆ ನಾನೂ ಹೊರಟೆ
ನನ್ನ ಕೆಲಸಕೆ ನಾನು
ತಿನ್ನುವುದು ಎಲ್ಲಿಂದ ಬಂತು
ವೇಳೆ ಹಸಿವು ತೀರಿದ ಮೇಲೆ

ಅವರಿವರೊಂದಿಗೆ ಅಲ್ಪೊಪಹಾರ
ಅಷ್ಟಕ್ಕೆ ಹೊಟ್ಟೆ ತುಸು ಭಾರ
ಊಟವನ್ನೂ ಮರೆತುಬಿಟ್ಟೆ
ನನ್ನ ಕೆಲಸದಲಿ ಇದ್ದು ಬಿಟ್ಟೆ

ಕೆಲಸ ಮುಗಿಸಿ ಮನೆಗೆ ಬಂದರೆ
ಮನೆಯ ತುಂಬ ಜನವೋ ಜನ
ಹಬ್ಬದಡಿಗೆ ತಯಾರಿತ್ತು
ರೊಟ್ಟಿ ಮಾತ್ರ ಕೆರಸಿಯಲ್ಲಿತ್ತು

ತಿನ್ನಲಾಗಲಿಲ್ಲ ಆವತ್ತು
ರೊಟ್ಟಿ ಒಳಗೊಳಗೇ ನಗುತ್ತಿತ್ತು
ಇದ್ದರೂ ತಿನ್ನದ ಬಡಪಾಯಿ
ಬಯಸಿದರೂ ತಿನ್ನದಾಯ್ತು ಬಾಯಿ

ಮರುದಿನ ಮತ್ತೆ ಶುರುವಾಯ್ತು
ತಟ್ಟೆ ನೀರು ಅಣಿಯಾಯ್ತು
ತಟ್ಟೆಯಲಿ ಬಂತು ರೊಟ್ಟಿ
ಆದರೆ ಅದು ಮುರುಟಿತ್ತು

ನನ್ನ ನೋಡಿ ನಕ್ಕಿತು ರೊಟ್ಟಿ
ನನ್ನ ಕೈಯ ಮುಟ್ಟಿ ಮುಟ್ಟಿ
ನಾನು ನಿನ್ನೇಯ ಬಿಸಿ ರೊಟ್ಟಿ
ಇಂದು ಸೇರುವೆ ನಿನ್ನ ಹೊಟ್ಟಿ.


2 thoughts on “ಪ್ರಮೋದ ಜೋಷಿ ಅವರ ಕವಿತೆ-ಬಿಸಿ ರೊಟ್ಟಿ

Leave a Reply

Back To Top