ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್
ಬಣ್ಣದ ಸುಮಗಳ ರಾಶಿಯ ನಡುವೆ
ಮಾಲೆಯ ಮಾಡುವ ಲಲಿತೆ
ನುಣ್ಣನೆ ಬೆರಳಲಿ ಅಂತರವ ಸರಿಸಿ
ಕೈಗಳ ನೋಡುವ ಲಲಿತೆ
ಹೂವಿಗೂ ದಾರಕೂ ಎಲ್ಲಿಯ ನಂಟು
ಬೆಸೆದ ಬಂಧದ ಹಾಗೆ
ಭಾವನೆ ಅಳಿಸುತ ನಿರ್ಲಿಪ್ತ ಮನದಲಿ
ನೋವನು ದೂಡುವ ಲಲಿತೆ
ಬದುಕು ಸಾಗಬೇಕು ಎಂಬ ಕರ್ತವ್ಯ
ಕಾಯಕದತ್ತ ಚಿತ್ತವಿರಲಿ
ಮಧುರ ಬೇಡಿಕೆಯ ಜೊತೆಗೆ ಹಾರವನು
ದೇವಗೆ ನೀಡುವ ಲಲಿತೆ
ಸಮಯ ಕಳೆಯಲು ಹವ್ಯಾಸ ಬೇಕೆಂಬ
ಚಿಂತನೆ ಎದೆಯೊಳಗೆ ಬೇಕು
ಸೌಮ್ಯ ರಾಗದಲಿ ತುಟಿಯ ಅಂಚಿನಲಿ
ಸಂಗೀತ ಹಾಡುವ ಲಲಿತೆ
ಹಸಿರು ಸೀರೆಗೆ ಕೆಂಪು ರವಿಕೆಯು
ರಾಧೆಗೆ ಒಪ್ಪುವುದು ಚೆನ್ನಾಗಿ
ಹೊಸೆದು ದುಗುಡವ ಹೊಸತನ ತುಂಬಲು
ಮೌನದಿ ಬೇಡುವ ಲಲಿತೆ
ಅನುರಾಧಾ ರಾಜೀವ್ ಸುರತ್ಕಲ್