ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಬಡವಾಯಿತು ಲಿಂಗ”
ಬಸವಣ್ಣ ಇಂದು
ನಿನ್ನ ಹುಟ್ಟು ಹಬ್ಬ
ಬಾಗಿಲ ಮುಂದೆ ರಂಗೋಲಿ
ಕಳೆದ ವರ್ಷದ ಫೋಟೋ
ಒರೆಸಿ ಒಣಗಿದ ಮಾಲೆ
ಹೂವು ಕಿತ್ತೊಗೆದು
ಅದಕ್ಕೆ ವಿಭೂತಿ ಕುಂಕುಮ
ಹಚ್ಚಿ ದೀಪ ಧೂಪ ಬೆಳಗಿ
ಉದಿನಕಡ್ಡಿ ಕರ್ಪುರ ಆರತಿ
ಮುಂದೆ ಒಡೆದ ಕಾಯಿ
ಬಾಳೆಲೆಯಲ್ಲಿ ಹೋಳಿಗೆ
ಮಾವಿನರಸ ಎಡೆ ಹಿಡಿದು
ಅಯ್ಯನವರ ಕಾಲು ತೊಳೆದು
ನೀರು ನಾವೆಲ್ಲ ಕುಡಿದು
ಮನೆ ತುಂಬಾ ಸಿಂಪಡಿಸಿ
ಶುದ್ಧ ಪವಿತ್ರರಾಗುತ್ತೇವೆ
ಗುರುವಿಗೆ ಸಾವಿರ ದಕ್ಷಿಣೆ
ಹಾಕಿದೆವು ಫೋಟೊ ಪ್ರದಕ್ಷಿಣೆ
ಸಂಜೆ ಎತ್ತುಗಳ ಮೆರವಣಿಗೆ
ಡೊಳ್ಳು ವಾದ್ಯ ಜೋರು
ಕುಲಗೆಟ್ಟ ಮಂತ್ರಿ ಶಾಸಕರ
ಸ್ವಾಮಿಗಳ ಶ್ರೀಮಂತರ ನಾಯಕರ
ಬಹು ದೊಡ್ಡ ದಂಡು
ತೇರಿಗೆ ಕಬ್ಬು ಬಾಳೆ ಸಿಂಗಾರ
ಎಲ್ಲೆಡೆ ಹುಮ್ಮಸ ಉನ್ಮಾದ
ಮಂತ್ರ ಘೋಷಣೆ ಕೂಗು
ಕುಣಿತ ಲೆಜಿಮ ಹಲಗಿಮ್ಯಾಳ
ವೇದಿಕೆಯ ಮೇಲೆ ಅಬ್ಬರದ ಭಾಷಣ
ಕಾವಿಗಳ ಕವಿಗಳ ಭೂಷಣ
ಹಾರ ತುರಾಯಿ ಶಾಲು ಸಮ್ಮಾನ
ಭರ್ಜರಿ ಊಟ ಭೋಜನ
ಬಸವಣ್ಣನ ಜಾತ್ರೇಲಿ
ಬಡವಾಯಿತು ಲಿಂಗ
ಜಡವಾಯಿತು ಜಂಗಮ
ಶಬ್ದವಾಯಿತು ಮಂತ್ರ
ಮೂಲೆ ಸೇರಿತು ಪ್ರಸಾದ
ಒಣಗಿತು ವಿಭೂತಿ
ಭಾರವಾಯಿತು ರುದ್ರಾಕ್ಷಿ
ಭಕ್ತ ಶರಣ ಜಯ ಜೀಯ
ವಚನ ಪಚನವಾಗದೆ
ವ್ಯರ್ಥ ಗೋಡೆ ಬರಹ ಕಂಡು
ಮಮ್ಮಲ ಮರುಗಿದ ಸಂಗನ ಬಸವಣ್ಣ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ವಾಸ್ತವಿಕ ನೆಲೆಗಟ್ಟಿನಲ್ಲಿ ಮೂಡಿ ಬಂದ ಕವನ ಸರ್
ನಿಜ ಸರ್