ಪರಿಮಳ ಮಹೇಶ್ ಅವರ ಕವಿತೆ-ಕೊಳಗಾಹಿ…

ಪತ್ತಾಸು ಹಿಡಿದು ನಡೆದೆನನತಿ ದೂರ
ಸಾಗಿದ ದಾರಿಯಲಿ ನೆರಳಿಲ್ಲ ಗುರುತಿಲ್ಲ
ಜೀವಾತ್ಮವದು ತನ್ನದೇನಿಲ್ಲವೆನುತಿರಲು
ಚೈತನ್ಯವೇ ಇರದ ದೇಹ ಹಾರಾಡುತಿತ್ತು

ನನ್ನೊಳಗಿನ ಬೆಳಕು ತಪ್ಪೆಲ್ಲ ತೋರಿರಲು
ಕತ್ತಲಲೇ ಹಾಕಿದೆ ಹೆಜ್ಜೆ ಇಲ್ಲದೇ ಲಜ್ಜೆ
ಮಾಡಿದೆಲ್ಲ ಕಾರ್ಯಗಳಿಗೆ ನಿರಯವೆ ಅಂತಿಮ
ಕನಸು ಕಾಣ್ವುದೆಯಾಯ್ತು ಸ್ವರ್ಗಕೇರ್ವ ಹುಚ್ಚಲಿ

ಜೀವಜೀವಾತ್ಮ “ನನ್ನ” ತೋರಲು ಸಹಾಯಿಯಲ್ಲ
ತಿಳಿದಿದೆಯದಕೆ ಅವನಿಲ್ಲದೇ ಇವನಿಲ್ಲ
ಭಾವನೆಯ ಕಲಕಿ ಕುದಿದಿದೆ ದೇಹ
ಕೆಸರೆಲ್ಲವನು ಮೆತ್ತಿ ಮಡಿಯೆಂದು ಬೊಗಳಿದೆ

ಬಲುಗಡಿ ಇಲ್ಲದ ದೇಹ ಬಲಾಬಲಕೆ ಹೆಣಗಾಡಿ
ಎದುರು ಕಂಡವನ ತುಚ್ಛಗೊಳಿಸುತಿದೆ
ಸಾಗರವೇ ತನದೆಂದು ಕಿರೀಟದ ಭಾರ ಹೊತ್ತು
ಅರಿವಿರದೆ ತಾನೇ ತಿಮಿರ ಕೂಪಕಿಳಿಯುತಿದೆ

ಅವನೇನು ಇವನೇನು ಯೋಚನೆ ಪ್ರತಿ ನಿಮಿಷ
ತನ್ನ ಅರಿಯಲೆ ಇಲ್ಲ ಪ್ರಾಣ ಬಿಡುವ ತನಕ
ಜೀವ ಎತ್ತಲೋ ಹಾರಿ ಆತ್ಮ ತ್ರಿಶಂಕುವಲಿ ತೇಲಿ
ಜೀವಾತ್ಮದ ಹುರುಪು ಬರಿದೇ ಪೋಲಾಗಿಸಿದೆ

ಕೊಳಗಾಹಿ ತಾನಹುದು ಎನ್ನುವುದ ಒಪ್ಪಿದೆಯಂದೆ
ಆದರೂ ವಾರಿಯ ಸ್ವಚ್ಛತೆಯೆ ಮರೆತಿಹುದು
ಕೊಳಗಾಹಿಯೀಗ ಹೆಣಗಾಹಿಯಾಗುವ ಸಮಯ
ಅತ್ತು ಕರೆದರು ಮತ್ತೆ ಈ ಜನ್ಮ ಮರಳೀತೇ?!!!….


ಕೊಳಗಾಹಿ= ಸರೋವರ ಕಾವಲುಗಾರ
ನಿರಯ= ನರಕ
ಪತ್ತಾಸು= ಪೆಟ್ಟಿಗೆ
ಬಲುಗಡಿ= ಸಾಮರ್ಥ್ಯ

Leave a Reply

Back To Top