ಕಾವ್ಯ ಸಂಗಾತಿ
ಭೋವಿ ರಾಮಚಂದ್ರ
ಮುಟ್ಟಾದವನು!
ಕೆಂಪು ರಕ್ತವ ಚೆಲ್ಲಿದವಳಲ್ಲ ಮುಟ್ಟಾದವಳು
ಕೆಂಪು ರಕ್ತವ ಕಾಣದೆ ಮುಟ್ಟುನ್ನು ಹೀಯಾಳಿಸಿದವನು
ಮುಟ್ಟಾದವನು,
ತನ್ನ ದೇಹವೇ ಮಿಂದು ಹೊರಬಂದಾಗ
ಶುದ್ಧವಾದವಳನ್ನು ಅಶುದ್ಧಿಯಂತೆ ಕಂಡಾಗ,
ಕೆಂಡವಾದ ಹೋಮದ ಕುಂಡವೆ ಕಪ್ಪಾಗಿ ಸೂತಕವಾಯಿತು.
ಪಟ್ಟ ಕಾಯಕದ ರುಚಿಗೆ
ಕೆಟ್ಟವಳೆಂದು ಮುಟ್ಟಿನೆಡೆಗೆ
ಹೊರ ತಳ್ಳಿ,
ಕಗ್ಗತ್ತಲ ಬೆಳಕಿನಲ್ಲಿ ಹರಿದು ತಿಂದ ನಾಲಿಗೆ ಅಲ್ವೇ ಮುಟ್ಟಗಿದ್ದು,
ಉಮ್ಮಸಿನ ಕಾಮದ ಉಸಿರ ತೇಗಿ
ಹೊರ ಚೆಲ್ಲಿದ ನೆತ್ತರೊಳಗಲ್ಲವೇ
ನೀನು ಮಿಂದಿದ್ದು.
ಮುಟ್ಟು ಬಲ್ಲದವಳನ್ನು
ಮುಟ್ಟಿ ಮುಟ್ಟಾದವನು
ಊರ ಮುಂದಿನ ತಿಪ್ಪಿಗೆ
ಹೆಸರಾದವನು ನೀ ಅಲ್ವೇ
ಮಾಸಿಕವಾಗಿ ಮುಟ್ಟಾದವನು,
ತೊಟ್ಟ ಬಟ್ಟೆಯಲ್ಲಿ ನೀ ಸೂಚಿಸಿದ ಮುಟ್ಟು,
ಇಳೆಯ ತಾಕಿದಾಗ
ಇಟ್ಟ ಮುದ್ದೆ ಗಂಟಲಲ್ಲಿ ಇಳಿಯದೆ ಮುಟ್ಟಿನೆಡೆಗೆ ಸಾಗಿತೆ ?
ಮಡಿವಂತಿಕೆಯ ಮುಟ್ಟು
ಜನ್ಮದ ಗುಟ್ಟು
ಹುಟ್ಟಿನಲ್ಲಿ ಮುಟ್ಟನ್ನು ಕಂಡವನು
ಸೂತಕದ ನೆಟ್ಟಿಗನು,
ನೆತ್ತರ ಚೆಲ್ಲಿದವಳು
ಶುದ್ಧಳಾದಳು
ನೆತ್ತರ ಕಂಡವನು
ಮುಟ್ಟಾದವನು.
ಭೋವಿ ರಾಮಚಂದ್ರ
Super sir