‘ದುಡ್ಡು ಮತ್ತು ಅವಕಾಶ’ ಲೇಖನ ಸಾಕ್ಷಿ ಶ್ರೀಕಾಂತ ತಿಕೋಟಿಕರ.

“ಅವರೇನು ಡುಡ್ಡು ಇರುವವರು, ಏನು ಬೇಕಾದರೂ ಮಾಡಿಯಾರು!! ” ಈ ಮಾತು ಪದೇ ಪದೇ ಕೇಳುತ್ತಲೇ ಇರುತ್ತೇವೆ, ನಮಗೆ ಬಾಲ್ಯದಿಂದಲೇ ಕಿವಿಯಲ್ಲಿ ಒಂದು ಮಂತ್ರ ಊದಲಾಗುತ್ತದೆ,.. ” ನೋಡು ಓದಿ ಒಳ್ಳೆಯ ನೌಕರಿ ಹಿಡಿದರೆ, ಜೀವನ  ಚಂದ!! ಇಲ್ಲಾ ಹೀಗೆ ಹಾಳಾಗಿ ಹೋಗುತ್ತಿ!!, ನಾಕು ದುಡ್ಡು ಮಾಡಿದರೆ ಬಂಧು, ಬಳಗ, ಹೆಂಡತಿ, ಮದುವೆ, ಇಲ್ಲದಿದ್ದರೆ ಯಾರೂ ನಿನ್ನ ಹತ್ತಿರ ಸುಳಿಯುವದಿಲ್ಲ!! “… ಏನಿದರ ಅರ್ಥ, ಒಳ್ಳೆಯ ನೌಕರಿ ಎಂದರೆ ಉತ್ತಮ ಸಂಬಳ… ಅಲ್ಲವೇ…. ದುಡ್ಡು ಇರುವನು ದೊಡ್ಡ ವನು… ಹಾಗಾದರೆ, ಕರೋನ ಬಂದಾಗ ದುಡ್ಡಿರುವವರು ಬದುಕಿದರಾ ಅಥವಾ ಆರೋಗ್ಯವಂತರು ಬದುಕಿದರೋ.. ಹೌದಲ್ವೇ!?
ನಿಮ್ಮ ಕಪಾಟು ತೆರೆಯಿರಿ, ಬೀರುವಿನ ತುಂಬ ಬಟ್ಟೆಗಳು. ಎಷ್ಟೊಂದು ಅಂದವಾದ, ಬಣ್ಣ ಬಣ್ಣದ ಬ್ರ್ಯಾಂಡೆಡ ಬಟ್ಟೆಗಳು. ನೀವು ಒಂದು ನಾಲ್ಕು  ಬಟ್ಟೆ ಒಟ್ಟಿಗೆ ಒಂದರ ಮೇಲೊಂದು ಹಾಕಿಕೊಳ್ಳಿ, ಸಾಧ್ಯವೇ!? ಬೇಡ ಒಂದು ಉತ್ತಮ ಹೋಟೆಲ್ ಗೆ ಹೋಗಿ, ರುಚಿರುಚಿಯಾದ ಖಾದ್ಯಗಳ ಮೆನು ನಿಮ್ಮ ಕೈಗೆ ಕೊಡುವರು. ಐದಾರು ಪದಾರ್ಥಗಳನ್ನು ಆರ್ಡರ್ ಮಾಡಿ ಎಲ್ಲವನ್ನೂ ಒಬ್ಬರೇ ತಿನ್ನಿ, ಸಾಧ್ಯವೇ!? ಅದೂ ಬೇಡ, ನಿಮ್ಮ ಹತ್ತಿರ ಇರುವ, ಲ್ಯಾಪಟಾಪ,ಮೋಬೈಲ್, ಟಿವಿ ಎಲ್ಲವನ್ನೂ ಆನ್ ಮಾಡಿ!! ಪ್ರತಿಯೊಂದರಲ್ಲಿ ಬೇರೆ, ಬೇರೆ, ಸಿನಿಮಾ, ಹಾಡು, ದೃಷ್ಯ ಓಡಿಸಿ,…. ಎಲ್ಲವನ್ನೂ ಏಕಕಾಲದಲ್ಲಿ ನೋಡಿ ಅರ್ಥೈಸಿಕೊಳ್ಳಲು ಪ್ರಯತ್ನಿಸಿ… ಎಷ್ಟು ಅರ್ಥವಾದೀತು.

ಇನ್ನೂಂದು ಪ್ರಯತ್ನ!! ನಿಮ್ಮ ದೊಡ್ಡ ಮನೆಯಲ್ಲಿ ನಿಮ್ಮ ಕೋಣೆಯಲ್ಲಿ ಮತ್ತು ಪಕ್ಕದ ಕೋಣೆಯಲ್ಲಿರುವ ಮಂಚ!! ಎರಡೂ ಮೇಲೆ ನೀವು ಏಕಕಾಲದಲ್ಲಿ ಮಲಗಲು ಸಾಧ್ಯವೇ!? ಈ ಪ್ರಶ್ನೆ ಕೇಳಿದರೆ ಯೇ… ನಗು ಬರುವುದು ತಾನೆ!! ಹೌದು ನಮ್ಮ ದೇಹ ಇದ್ದಷ್ಟು ಜಾಗವನ್ನು ಮಾತ್ರ ನಾವು ಆವರಿಸ್ಕೊಳ್ಳಲು ಸಾಧ್ಯ!! ಅದಕ್ಕಿಂತ ಹೆಚ್ಚು ಜಾಗ ನಮ್ಮದಲ್ಲ!! ಬೀರು ತುಂಬ ಬಟ್ಟೆ ಇದ್ದರೂ ಒಂದು ಬಾರಿಗೆ ಒಂದೇ ದಿರಿಸು ಧರಿಸಲು ಸಾಧ್ಯ, ಎಷ್ಟೋ ತರಾವರಿ ಖಾದ್ಯ ಗಳಿದ್ದರೂ ಹಸಿವು ಇರುವಷ್ಟು ಮಾತ್ರ ಉಣ್ಣಲು ಸಾಧ್ಯ ಅಲ್ಲವೇ!? ಮನೆ ದೊಡ್ಡದು ಎಂದು ನಮ್ಮ ಗಾತ್ರವನ್ನು ಹೆಚ್ಚಿಸಿ ಕೊಳ್ಳಲು ಆಗುತ್ತದೆಯೇ!!!ಹಾಗಾದರೆ ಏನಿದರ ಅರ್ಥ… ನಮ್ಮ ಬೇಡಿಕೆಗಳಿಗೆ, ಅವಶ್ಯಕತೆಗಳಿಗೆ ಮಿತಿ ಇದೆ!! ಆ ಮಿತಿಯನ್ನು ದಾಟಿ ನಾವು ಏನೇ ಪಡೆದರು ಅದು ವ್ಯರ್ಥ ಸಂಗ್ರಹಣೆ!! ಇಂದು ದುಡ್ಡು ನಮ್ಮ ಬಳಿ ಇದೆ, ಅದರ ಅರ್ಥ ಅದು ನಮ್ಮದು ಎಂದು ಅಲ್ಲ ಅದನ್ನು ಇವಾಗಿನ ಮಟ್ಟಿಗೆ, ಬಳಸುವ ಸರದಿ, ಅವಕಾಶ ಮಾತ್ರ ನಮ್ಮದು.
ಇವತ್ತು ನಮ್ಮದು ಎನ್ನುವ ದುಡ್ಡು, ನಾಳೆ ಇನ್ನ್ಯಾರದೋ ಕೈ ಸೇರಲಿದೆ, ಅದನ್ನು ಗಳಿಸುವ ಸಂತೋಷ, ಕಳೆದುಕೊಳ್ಳುವ ಭಯವಿದೆ,ಹಾಗಾದರೆ ಅದರಿಂದ ಕೊಂಡ ವಸ್ತುಗಳೆಲ್ಲವೂ ನಮ್ಮವೇ!?…. ಅದು ಎಷ್ಟು ನಮ್ಮದು, ನೀವೇ ಕೊಂಡ ದಿರಿಸು ಮಾರಲು ಹೋದರೆ ನಿಮಗೆ ಎಷ್ಟು ದುಡ್ಡು ತಂದು ಕೊಟ್ಟೀತು… ಹಾಗಾದರೇ ಅವಶ್ಯಕತೆ ಮೀರಿದ ನಮ್ಮ ವಸ್ತುಗಳು ಕೇವಲ ಸಂಗ್ರಹಣೆ!?
ನಮ್ಮ ಅಗತ್ಯ ಮೀರಿ ನಾವು ಏನೂ ಬಳಸಲಾಗುವುದಿಲ್ಲ ಅದಕ್ಕೆ, ಬಟ್ಟೆ, ಬರೆ, ಷೋಕಿ ಸಾಮಾನುಗಳ ಮೇಲೆ ವೃಥಾ ಖರ್ಚು ನಿಲ್ಲಿಸಿ!! ಆದರೆ ಕೆಲವು ಬೇರೆಯ ವಸ್ತುಗಳನ್ನು ನಾವು ಸಂಗ್ರಹಿಸಬಹುದು!! ಅದು ಜ್ಞಾನ!! ನೀವು ಓದಿದ ಹಲವಾರು, ಪುಸ್ತಕ, ತಿಳಿದು ಕೊಂಡ ಹಲವು ವಿಷಯಗಳು ನಿಮ್ಮ ಮೆದುಳು ಕೊನೆಯ ವರೆಗೂ ಸಂಗ್ರಹಿಸಿ ಇಡುವುದಲ್ಲ ದೇ.. ಪ್ರಸಂಗ ಬಂದಂತೆ ಅದನ್ನು ನಿಮಗೆ ಅವಕಾಶ ವನ್ನಾಗಿ ಮಾಡುವುದು. ಮತ್ತೆ ಸಂಗ್ರಹಹಿಸ ಬೇಕಾದ ಕೆಲವು ವಸ್ತುಗಳು ಎಂದರೆ ಉತ್ತಮ ನೆನಪುಗಳು, ಮಾಡಿದ ಪ್ರವಾಸ, ಕಳೆದ ಕ್ಷಣಗಳು, ಮಾಡಿದ ಸಹಾಯ ಇವನ್ನು ನಾವು ಸಂಗ್ರಹಿಸಿ ಇಡಬಹುದು. ನಾವು ಸುಂದರವಾದ ಬಟ್ಟೆ ಧರಿಸಿದಾಗ ಬೇರೆಯವರಿಗೆ ಚಂದವಾಗಿ ಕಾಣುತ್ತೇವೆ, ಅದೇ ಸುಂದರವಾದ ಮನಸ್ಥಿತಿ ಹೊಂದಿದಾಗ ಆತ್ಮ ಸೌಂದರ್ಯ ನಮ್ಮನ್ನು ಖುಷಿಯಾಗಿ ಇಡುತ್ತದೆ.

ಎಲ್ಲವನ್ನೂ ದುಡ್ಡಿಗಾಗಿ ಮಾಡಬೇಕೆಂದಿಲ್ಲ ಕೆಲವೊಮ್ಮೆ ಏನು ಬಯಸದೆ ಕೆಲವು ಸತ್ಕಾರ್ಯ, ಸಹಾಯ ಮಾಡಿ,  ಆಗ ಸಿಗುವ ಆನಂದವೇ ಬೇರೆ!! ಹಾಗಂತ ದುಡ್ಡನ್ನು ಕಡೆಗಣಿಸಲು ಆಗುವದಿಲ್ಲ,” ನಿಮ್ಮ ಹತ್ತಿರ ದುಡ್ಡು ಇದೆ ನೀವು ಆರೋಗ್ಯ ಕೊಂಡು ಕೊಳ್ಳಲು ಆಗುವದಿಲ್ಲ, ನಿಮ್ಮ ಹತ್ತಿರ ದುಡ್ಡು ಇಲ್ಲ ನೀವು ನಿಮ್ಮ ಅನಾರೋಗ್ಯ ಗುಣಪಡಿಸಲೂ ಆಗುವದಿಲ್ಲ”, ದುಡ್ಡು ಜೀವನಕ್ಕೆ ತುಂಬಾ ಅವಶ್ಯಕ!! ಆದರೆ ದುಡ್ಡಿನಿಂದ ಎಲ್ಲವೂ ಸಾಧ್ಯವಿಲ್ಲ.
ಕೆಲವು ಬಾರಿ ದುಡ್ಡು ಪಡೆಯದೇ ಮಾಡುವ ಕೆಲಸಗಳಿಗೆ ಬೆಲೆ ಕಡಿಮೆ ಎನಿಸಬಹುದು, ಆದರೆ ಕೆಲಸದ ಗುಣಮಟ್ಟ ಉತ್ತಮವಾಗಿದ್ದರೆ.. ಅದು ನೀಡುವ ಆತ್ಮ ತೃಪ್ತಿ ಯೇ ಬೇರೆ.
ಹೀಗೆ ನಾವು ಸತ್ತನಂತರ ನಮ್ಮ ಎಲ್ಲಾ ವಸ್ತುಗಳು ಬೇರೆಯವರಿಗೆ ಗುಜರಿಯಾಗಿ ಕಾಣುವವು, ನಿಮ್ಮ ಬೆಲೆ ಬಾಳುವ ಸೀರೆ, ವಾಚು, ಪಾತ್ರೆ, ಪಗಡೆ ಎಲ್ಲವೂ …. ಗುಜರಿ. ಹೀಗಾಗಿ ಆಸೆಯನು ಮಿತಿ ಮೀರಿ ದಣಿಸಬೇಡಿ, ಅನುಕೂಲಕ್ಕೆ ಬೇಕಾಗುವಷ್ಟು ಖರ್ಚು ಮಾಡಿ , ಸಾಯುವ ಮುನ್ನ ಕೆಲವು ಸಹಾಯಮಾಡಿ, ನಿಮ್ಮ ನೆನಪನ್ನು ಕೆಲವರ ಮನದಲ್ಲಿ ಉಳಿಸಿ ಹೋಗಿ, ಅವುಗಳನ್ನು ಗುಜರಿ ಹಾಕುವ ಗೋಜಿಗೆ ಹೋಗುವದಿಲ್ಲ!! ಮೆಲಕು ಹಾಕುತ್ತಾರೆ.ಆಸ್ತಿ, ಅಂತಸ್ತು, ಅಧಿಕಾರ ಯಾವದೂ ಶಾಶ್ವತ ಅಲ್ಲ ಎಂಬ ಜ್ಞಾನ ನಮಗಿರಬೇಕು. ಆದರೆ ಸಿಕ್ಕ ಕ್ಷಣ ಹೊತ್ತು ಸಂತಸದಿಂದ ಕಳಿಯಬೇಕು.

ಸಮಯದ ಸದ್ವಿನಿಯೋಗ ಆಗಲಿ.


Leave a Reply

Back To Top