ಲೇಖನ ಸಂಗಾತಿ
ಹನಿಬಿಂದು
ಕರ್ತವ್ಯದ ನೆಲೆಯಲ್ಲಿ…
ಚುನಾವಣಾ ಕಾರ್ಯ ಒಂಥರಾ ಹೊಸ ಅನುಭವ ಪ್ರತಿ ಭಾರಿಯೂ ನಮಗೆ. ಕೇವಲ ಗೆಲ್ಲಿಸುವ, ಸೋಲಿಸುವ , ಕಾಯಕದ ಆಟವಲ್ಲ, ಮತದಾನದ ಕೆಲಸ! ದೇಶದ ನಾಯಕರನ್ನು ಆರಿಸಲು ನಡೆಯುವ ಚುನಾವಣೆಯ ಕರ್ತವ್ಯ ಎಂದರೆ ಅದೊಂದು ಹಬ್ಬ. ಅಷ್ಟೇ ಅಲ್ಲ,ಅದೊಂದು ಜವಾಬ್ದಾರಿ, ಅದೊಂದು ಚೇತೋಹಾರಿ ಘನಂದಾರಿ ಕೆಲಸ ಕೂಡಾ..
ಅಂತೂ ಎಲೆಕ್ಷನ್ ಡ್ಯೂಟಿ ಮುಗಿಯಿತು!!! ಬಹಳ ಜವಾಬ್ದಾರಿ, ತೂಕದ ಕೆಲಸ ಇದು. ಸ್ವಲ್ಪ ತಪ್ಪಿದರೂ ಟಿವಿಯಲ್ಲಿ ಲೈವ್ ಆಗಿ ಬಿತ್ತರಗೊಳ್ಳುತ್ತೇವೆ. ಸ್ವಲ್ಪ ಏಮಾರಿದರೂ ಕೆಲಸಕ್ಕೆ ಆಪತ್ತು, ಡಿಸ್ಮಿಸ್. ಅಬ್ಬಾ. ಜವಾಬ್ದಾರಿ! ಎಲ್ಲರನ್ನೂ , ಎಲ್ಲವನ್ನೂ, ನಿಭಾಯಿಸಿ ಡಿ ಮಸ್ಟರಿಂಗ್ ಮಾಡಿ ಮನೆಗೆ ತಲುಪುವ ಕಾರ್ಯ ಹರ ಸಾಹಸದ್ದು. ಎಷ್ಟು ಕಲಿತರೂ ಅದು ಮುಗಿಯದ ಕಲಿಕಾ ಕಾರ್ಯ. ಎಷ್ಟು ಪರ್ಫೆಕ್ಟ್ ಇದ್ದರೂ ಎಲ್ಲಾದರೂ ಒಂದು ಸಣ್ಣ ತಪ್ಪು ನಮ್ಮಿಂದ ಆಗಲೂ ಬಾರದು. ಅದನ್ನು ಸರಿ ಪಡಿಸಿಕೊಳ್ಳ ಬೇಕಾಗುತ್ತದೆ. ಇವತ್ತು ಇದ್ದ ಕಾನೂನುಗಳು ನಾಳೆಗೆ ಬದಲಾಗುತ್ತದೆ. ಅಬ್ಭಾ… ಎಲ್ಲಾ ಎದುರಿಸಿ, ಧೈಯದಿಂದ ಮನೆ ತಲುಪಿದರೆ ನಾವು ಗೆದ್ದಷ್ಟು ಖುಷಿ. ರಾಜ್ಯ ಮಟ್ಟವೋ, ರಾಷ್ಟ್ರ ಮಟ್ಟದ ಆಟವಾಡಿ ದೊಡ್ಡ ಕಪ್ ಗೆದ್ದ ಖುಷಿ. ಸಿಗುವ ಹಣ ಅಷ್ಟೋ ಇಷ್ಟೋ ಅಲ್ಲೆಲ್ಲೋ ಖರ್ಚಾಗಿ ಹೋಗಿರುತ್ತದೆ. ಆದರೆ ಅಲ್ಲಿ ಸಿಗುವ ಹೊಸಬರ ಜೊತೆ, ಹೊಸ ಜಾಗದಲ್ಲಿ ಹೊಂದಾಣಿಕೆಯ ಪಾಠ ಇದೆಯಲ್ಲ,ಅದು ಬದುಕಲ್ಲಿ ಮರೆಯಲು ಆಗದ್ದು!!!
ಕಲಿತಷ್ಟು ಕಲಿಕೆ. ಮನೆಯ ನೆಲಕ್ಕೆ ಹಾಸಿದ ಮಾರ್ಬಲ್ ಉಜ್ಜಿದಷ್ಟು ನೈಸ್ ಬರುತ್ತದೆ. ಹಾಗೆಯೇ ಕಲಿತಷ್ಟು ಚಂದ ಬದುಕಿನ ಸಾರ. ನಮ್ಮ ಬದುಕಲ್ಲಿ ಕಲಿಕೆಗೆ ಇದೊಂದು ದೊಡ್ಡ ಅವಕಾಶ. ಶಾಲೆಗಳಲ್ಲಿ ಯಾವುದೇ ಮನೆಯ ವಾತಾವರಣ ಇಲ್ಲದೆ , ಅಲ್ಲಿ ಸಿಕ್ಕಿದ ಊಟ ತಿಂಡಿ ತಿಂದು, ಸಿಕ್ಕಿದ ಬಾತ್ ರೂಮ್, ಟಾಯ್ಲೆಟ್ ರೂಮ್ ಗಳಲ್ಲಿ ಸ್ನಾನ ಮಾಡಿ, ಸಿಕ್ಕಿದ ಹೊಸ ಟೀಮ್ ಜೊತೆ ಒಬ್ಬರಿಗೊಬ್ಬರು ಸಹಕಾರ ಮನೋಭಾವನೆ ಇಟ್ಟುಕೊಂಡು ನಂಬಿಕೆಯಿಂದ , ಯಾವತ್ತೂ ನೋಡಿರದ ಹೊಸಬರ ಜೊತೆ , ಹೊಸ ಜಾಗದಲ್ಲಿ , ಪರಿಚಯ ಇಲ್ಲದ ಜನರ ನಡುವೆ ಮಾಡುವ ಕಚೇರಿ ಜವಾಬ್ದಾರಿಯ ಕೆಲಸ ಇದು. ಅಲ್ಲಿ ನಮ್ಮ ಬದುಕಿನ ಜ್ಞಾನ, ಕಲಿಕೆ, ಧೈರ್ಯ,ಸಮಯದ ಹೊಂದಾಣಿಕೆ, ಗೆಳೆತನ, ಕಾಮಿಡಿ, ಜವಾಬ್ದಾರಿ, ಕೆಲಸ ನಿರ್ವಹಣಾ ತಂತ್ರ, ಸಾಮರ್ಥ್ಯ, ಗುರಿ ಮುಟ್ಟುವ ತವಕ, ಹಟ ಎಲ್ಲವೂ ವರ್ಕ್ ಔಟ್ ಆಗುತ್ತವೆ. ನಮ್ಮ ಸಾಮರ್ಥ್ಯದ ಪ್ರಯೋಗವೂ ಆಗುತ್ತದೆ, ಕೆಲವೊಮ್ಮೆ ನಾವು ವಿದ್ಯಾರ್ಥಿಗಳೂ ಆಗುತ್ತೇವೆ. ಎಲ್ಲಾ ಮರೆತು, ನಾವು ನಮ್ಮ ಪ್ರಾಯ, ಕೂಡಾ ಮರೆತು, ಬೇರೆಯೇ ಕಾರ್ಯದ ಹಿಂದೆ ಜೋತು ಬಿದ್ದು, ಕನ್ನಡ ಶಿಕ್ಷಕ, ಹಿಂದಿ ಶಿಕ್ಷಕ ಕೂಡಾ ಲೆಕ್ಕಾಚಾರ ಟ್ಯಾಲಿ ಮಾಡುವ ಗಣಿತಜ್ಞ, ಮಶೀನ್ ಜೋಡಿಸುವ ತಾಂತ್ರಿಕ, ಸಮಯದ ಲೆಕ್ಕಾಚಾರದವ, ಎಲ್ಲರನ್ನೂ ಒಗ್ಗೂಡಿಸುವ ನಾಯಕ, ಸರ್ವರ ಹಿತ ಬಯಸುವ ಸಮಾಜ ಸೇವಕ, ಸಹಕರಿಸುವ ಅಣ್ಣ ತಮ್ಮ ಅಕ್ಕ ತಂಗಿ ಆಗಿರುತ್ತಾರೆ.
ಇನ್ನು ಓಟು ಹಾಕಲು ಬರುವ ಸಮಾಜದ ವಿವಿಧ ಮುಖಗಳ ತುಡಿತ, ಧಾವಂತ , ಅವಸರ, ಎಷ್ಟೇ ಕಲಿತಿದ್ದರೂ ಪಡುವ ಆತುರ, ಹೊಸಬರ ಕಾತರ, ಹಿರಿಯರ ಖುಷಿ, ಆಸಕ್ತಿ, ವಿಕಲ ಚೇತನರ ಉತ್ಸಾಹ, ಮಾನಸಿಕ ಅಸ್ವಸ್ಥರ ಮುಗ್ಧತೆ, ಹಿರಿಯರ ಪುಟಿಯುವ ಆಸಕ್ತಿ, ಜವಾಬ್ದಾರಿಯುತ ನಡೆ, ಜನರ ಬಟ್ಟೆ ಬರೆ, ಉಡುಗೆ ತೊಡುಗೆ, ಮನೆಯ ವಾತಾವರಣದ ಪ್ರಭಾವ, ತಾಳ್ಮೆ, ಸಹನೆ, ನಗು ಮೊಗ, ಎಲ್ಲರನ್ನೂ ನಮ್ಮವರು ಎಂದು ಪ್ರೀತಿಸುವ ಮಾನವತೆಯ ಗುಣ, ಸಿಡುಕು, ದುಡುಕುತನ, ಸಿಟ್ಟು, ರೋಷ ಎಲ್ಲವೂ ಕಾಣ ಸಿಗುತ್ತವೆ. ನಿಭಾಯಿಸುವ ಗುಣ ನಮ್ಮಲ್ಲಿ ಇರಬೇಕು. ಸರಕಾರಿ ಕೆಲಸ ಬಹಳ ಪಾಠಗಳನ್ನು ಕಲಿಸುತ್ತದೆ. ನಾವು ಎಷ್ಟು ಕಲಿತರೂ ಕಡಿಮೆಯೇ ಎಂದು ಇಲ್ಲಿ ಅರಿಯುತ್ತೇವೆ.
ಒಟ್ಟಿನಲ್ಲಿ ನಮ್ಮ ಗುರಿ ಉದ್ದೇಶ ಈಡೇರಿಸಬೇಕು ಅಷ್ಟೇ. ರಾಜಕೀಯ ಅಂದರೇನೆ, ದೊಂಬಿ, ಗಲಾಟೆ, ಜಾತಿ ಮತ ಕೋಮು ಗಲಭೆ ಕೆಲವೆಡೆ. ಅಂತಹ ಎಲ್ಲಾ ಹಾಹಾಕಾರಗಳ ನಡುವೆ ಅದರ ಮೇಲೆಯೇ ಕೆಲಸ ಮಾಡಿ ಗೆದ್ದ ತೃಪ್ತಿ ನಮ್ಮದು ಅಲ್ಲವೇ? ನೀವೇನಂತೀರಿ?
————————-
ಹನಿಬಿಂದು