ಡಾ.ಡೋ.ನಾ.ವೆಂಕಟೇಶ ಕವಿತೆ-ಹಿತೈಷಿಯ ಕರೆ

ಈಗೀಗ ಉಸಿರಾಡಲು
ಕಲಿತಿದ್ದೇನೆ-
ಯುದ್ಧ ಕಾಲೇ ಶಸ್ತ್ರಾಭ್ಯಾಸ!

ಕಣ್ತೆರೆದಾಗ ಬೆರಗುಗಣ್ಣು,
ಕಲಿಯಲಾರಂಭಿಸಿದಾಗ ಆಸೆಗಣ್ಣು
ಕಾಲಿಟ್ಟಾಗ ಮುಂದೆ

ಕುರಿ ಮಂದೆಯಲ್ಲಿ ಕಣ್ಮುಚ್ಚಿ ಕೊಂಡು ಹಿಂದೆ ಮುಂದೆ,
ಮಂದೆಯಲಿ ಒಂದಾಗಿ
‘ನಿಸಾರ’ ರು ಹೇಳಿದಂತೆ
ಸ್ವಂತತೆಯೆ ಬಂದ್ ಆಗಿ
ಉಸಿರಾಡಲೂ ಮರೆತು ಹೋಗಿ
ಕೃತಕ ನೆಗೆದಾಟ ಮುಗಿಲು ಮುಟ್ಟಿತ್ತು!

ಈಗೀಗ
ಉಸಿರಾಡಲಾರಂಭಿಸಿದ್ದೇನೆ
ಹಾರಾಡಲಾರಂಭಿಸಿದ್ದೇನೆ
ಹಾಡಲೂ ಕಲಿತಿದ್ದೇನೆ !

ಧ್ವನಿ ಕೂತಿದೆ ಗವಿಯಲ್ಲಿ ಆದರೀಗ
ಕೈಕಾಲುಗಳೂ ಸೋತಿವೆ ಆಳದಲ್ಲಿ.
ಬಾಗಿದ ದೇಹವಿದ್ದರೂ
ಮಾಗಿದ ಮನಸ್ಸಿದೆ
ಮುಗಿಲು ಮುಟ್ಟಿದೆ ಸಂಭ್ರಮಗಳ
ಆಸೆ ಆಕಾಂಕ್ಷೆಗಳ ಮೇಳದಲ್ಲಿ!

ಉಸಿರಾಟದ ತಾಳ ತಪ್ಪಿದರೂ
ಮೇಳಗಳ ದಾಟು ಏಕಾಂಗಿ ಈಗ
ಬಲಿತ ದೇಹದಲ್ಲಿ
ಸಾಕಾಗದ ರಕ್ಷಕ ಮೇಟಿಯಲ್ಲಿ

ಎಂದೇ ಮತ್ತೆ
ಉಸಿರಾಡಲು ಪ್ರಾರಂಭಿಸುವ ಮುನ್ನವೇ
ಹತೋಟಿ ತಪ್ಪಿದೆ ಈಗೀ
ವಯಸ್ಸು,

ಮೇಲಿರುವ
ಹಿತೈಷಿಯ ಕರೆಗೆ ಓಗೊಟ್ಟು
ಇಲ್ಲಿಂದ ಹೋಗೇ ಬಿಡುವ ಈ
ವಯಸ್ಸು ಹಾಗೂ ಮನಸ್ಸು!!

4 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ಹಿತೈಷಿಯ ಕರೆ

  1. ಕವನ ತುಂಬಾ ಚೆನ್ನಾಗಿದೆ ಮತ್ತು ಅರ್ಥಪೂರ್ಣವಾಗಿದೆ. ಅದನ್ನು ಓದಿ ಆನಂದವಾಯಿತು.

Leave a Reply

Back To Top