ಶಂಕರಾನಂದ ಹೆಬ್ಬಾಳ ಕವಿತೆ-ಬಿಸಿಲಿನ ಉಗ್ರನರ್ತನ

ಸುಟ್ಟುಬಿಡು ಇನ್ನಾವುದನ್ನು
ಉಳಿಸದಂತೆ,
ನಡೆಯಲಿ ನಿನ್ನದೆ ಅಟ್ಟಹಾಸ
ಕೊನೆಯಿರದಂತೆ…!

ಧಗಧಗಿಸುವ ಬಿಸಿಲ ಬೇಗೆ
ಪ್ರಾಣಿ ಪಕ್ಷಿಗಳ ಮಾರಣಹೋಮ
ದಾಹದಿಂದ ಸತ್ತವರೆಷ್ಟೋ…
ಝಳದಿಂದ ಸತ್ತವರೆಷ್ಟೋ…
ನಿನ್ನದೆ ಉಗ್ರನರ್ತನ
ಹೇಳಿಲಾರದ ಜಾಯಮಾನ…!

ನೀನೊಬ್ಬ ಆಗಂತುಕ
ಹೇಳುವವರಿಲ್ಲ
ಕೇಳುವವರಿಲ್ಲ,
ಉರಿಯುವುದೊಂದೆ ಗುರಿ
ನಿನಗನ್ನಿಸಿದ್ದೆ ಸರಿ..!

ಬಾ ನಮ್ಮೆಲ್ಲರ ಮಸಣದ
ಗೋರಿಯ ಮೇಲೆ ಸಾಮ್ರಾಜ್ಯಕಟ್ಟು
ರಾಜ್ಯದಾಡಳಿತ ನಡೆಸು,
ನಮ್ಮ ಸುಟ್ಟಬೂದಿಯನ್ನು
ಹೊಳೆಗಾದರೂ ಎಸೆದುಬಿಡು
ಅಲ್ಲಿಯಾದರೂ
ತಣ್ಣಗಿರುವೆವು ಬಿಡು..!

ಆಗಲಾದರೂ ತಂಪಿನನುಭವ
ಸಿಗುತ್ತದೆಂಬ ಭರವಸೆ
ಎದೆಯಲಿ ತುಂಬಿಹುದು
ಕೇಳಿ ಕನಿಕರ ಪಡಲು ನೀ ಮನುಷ್ಯನೆ..
ಎಂದು ಕಿವಿಗಡಚಿಕ್ಕುವ ದನಿ
ಕೊರೆಯುತ್ತಲೆ ಕಿವಿಯ ಆಳವನು..!


One thought on “ಶಂಕರಾನಂದ ಹೆಬ್ಬಾಳ ಕವಿತೆ-ಬಿಸಿಲಿನ ಉಗ್ರನರ್ತನ

Leave a Reply

Back To Top