ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.!

ಮನಸಾರೆ ಬಿಗಿದಪ್ಪಿ ಅಭಿನಂದಿಸುವ ಸುಖ
ಕೈಹಿಸುಕುತ ಶಪಿಸುವ ಅಸೂಯೆಯಲಿಲ್ಲ
ಉತ್ಸಾಹದಿ ಬೆನ್ತಟ್ಟಿ ಪ್ರೋತ್ಸಾಹಿಸುವ ಸುಖ
ಕಾಲೆಳೆದು ಬೀಳಿಸುವ ಹೊಟ್ಟೆಕಿಚ್ಚಿನಲಿಲ್ಲ.!

ಒಪ್ಪುಗಳ ಒಪ್ಪುತಲಿ ವಂದಿಸುವ ಮುದ
ತಪ್ಪುಗಳ ಹುಡುಕುತ ನಿಂದಿಸುವುದರಲಿಲ್ಲ
ಸಾಧನೆಗಳ ಆದರಿಸುತ ಹೊಗಳುವ ಮುದ
ನ್ಯೂನ್ಯತೆಗಳ ಎಣಿಸುತ ತೆಗಳುವುದರಲಿಲ್ಲ.!

ಯಶಸ್ಸಿಗೆ ಕರಮುಗಿದು ಗೌರವಿಸುವ ಸೊಗ
ವೈಫಲ್ಯವ ಎತ್ತಾಡಿ ಅವಮಾನಿಸುವುದರಲಿಲ್ಲ
ಗೆಲುವಿಗೆ ಹಾರೈಸುತ ಪ್ರೇರೇಪಿಸುವ ಸೊಗ
ಸೋಲನು ಬಯಸುತ ಕರುಬುವುದರಲಿಲ್ಲ.!

ಬಂಧ ಅನುಬಂಧಗಳ ಬೆಸೆಯುವ ಮೋದ
ಬಿರುಕು ಮೂಡಿಸುತ ಬೇರ್ಪಡಿಸುವುದರಲಿಲ್ಲ
ಸೌಹಾರ್ದಸೇತುವೆ ಕಟ್ಟಿ ಕೂಡಿಸುವ ಮೋದ
ಗೋಡೆಯೆಬ್ಬಿಸಿ ಸಾಮರಸ್ಯ ಕೆಡವುವುದರಲಿಲ್ಲ.!

ಪ್ರೀತಿಯನು ಹರಿಸುತಲಿ ಬಾಳುವ ಸಂತಸ
ದ್ವೇಷವನು ಪಸರಿಸುತ ಬೇಯುವುದರಲಿಲ್ಲ
ಇತರರ ಒಳಿತಿಗಾಗಿ ಹಂಬಲಿಸುವ ಸಂತಸ
ಕೆಡುಕನೇ ಬಯಸುತಲಿ ಬದುಕುವುದರಲಿಲ್ಲ.!

ಸೌಂದರ್ಯ ಮಾಧುರ್ಯ ಔದಾರ್ಯಗಳ
ಆಸ್ವಾದಿಸಲೇ ಇಲ್ಲಿ ಸಾಲದು ಬಾಳ ಸಮಯ
ಮತ್ತೆ ಹಗೆ ಮತ್ಸರ ಮಾತ್ಸರ್ಯ ಕ್ರೌರ್ಯಗಳ
ಆವರಿಸಿಕೊಳ್ಳಲು ಆದೀತೆ ಯೋಚಿಸು ಗೆಳೆಯ.?

ಒಲವು ಸಂಪ್ರೀತಿಗಳ ಆರಾಧಿಸಿ ಸಂಭ್ರಮಿಸಲು
ಸಿಹಿ ತುಂಬಿಟ್ಟುಕೊಳ್ಳಲು ಸಾಲುತಿಲ್ಲ ಹೃದಯ
ಕೇಡು ಸಿಟ್ಟು ಸೇಡುಗಳನೆಲ್ಲ ಹಿಡಿದಿಟ್ಟುಕೊಳ್ಳಲು
ಹಿಡಿಗಾತ್ರದ ಹೃದಯಕೆ ಸಾಧ್ಯವಾದೀತೆ ಗೆಳೆಯ.!

ಇದು ಆತ್ಮಾವಲೋಕನದಿ ಬದಲಾಗುವ ಸಮಯ
ಬದಲಾಗದಿರೆ ಬೆಳಕಾಗದೆ ಬೆಂಕಿಯಾದೀತು ಹೃದಯ.!

Leave a Reply

Back To Top