ಕಾವ್ಯ ಸಂಗಾತಿ
ಡಾ. ಸುಮಂಗಲಾ ಅತ್ತಿಗೇರಿ
ಅವಳೀಗ ನೆನೆಪು ಮಾತ್ರ!
ಮತ್ತೆ ಮತ್ತೆ
ಕಾಡುವ ಅವಳ ನೆನಪು
ಕಣ್ಣು ತುಂಬಿಸಿ ಬಿಡುತ್ತೆ
ಆಗಾಗ,
ಯಾರಿಗೆ ಏನು ಹೇಳಲಿ
ಏನನ್ನೂ ಹೇಳದೆ ಹೋದ
ಅವಳೀಗ ನೆನಪು ಮಾತ್ರ
ಬರೀ ನೆನಪಷ್ಟೆ !
ನನ್ನ ಬಳಿ.. ನನ್ನ ಜೊತೆ..
ನನ್ನ ಅಕ್ಕಪಕ್ಕವೇ ಇದ್ದವಳು
ನನ್ನೆಲ್ಲ ಇಷ್ಟಾರ್ಥಗಳಿಗೆ
ಸದಾ ಅಸ್ತು ಎನ್ನುತ್ತ
ಬೆಂಗಾವಲಾಗಿದ್ದವಳು
ಅದೇಗೆ ಇಷ್ಟು ಬೇಗ
ಪೋಟೊ ಕಟ್ಟಿನೊಳಗೆ ಸೇರಿಬಿಟ್ಟಳು
ಗೊತ್ತಾಗಲೇ ಇಲ್ಲ!
ತೀರದ ಸಾಲದ ಸಾಲಿನ ಮುಂದೆ
ನಾಳೆಗಾಗಿ ಕಾದ ಕನಸುಗಳೆಲ್ಲ
ಕರಗಿ ಹೋದವು!
ಅವಳೊಟ್ಟಿಗೆ ಇನ್ನೂ ಹೇಗೆಗೋ
ಬದುಕಬೇಕೆಂದು ಹೆಣೆದುಕೊಂಡಿದ್ದ
ನನ್ನೊಳಗಿನ ಆಸೆಗಳ ನೀಲನಕ್ಷೆ
ಅವಳೊಂದಿಗೆ ಮಣ್ಣಾಯಿತೆಂಬ
ವಿಷಾದ!
ಇದ್ದಾಗ ಅವಳೆಂದೂ
ಏನನ್ನೂ ಕಾಡದ ಮುಗ್ಧ ಜೀವ
ಕಾಡುತ್ತಿದೆ ಅವಳ ನೆನಪೀಗ
ಅವಳಿಲ್ಲವೆಂದು!
ಅಪ್ಪ ಹೋದ ದಿನದಿಂದ
ಖಾಲಿಯಾಗಿದ್ದ ಅವಳ ಹಣೆಮುಡಿಗಳೀಗ
ಜೀವವಿರದ ಭಾವಚಿತ್ರದಲ್ಲಿ
ಕುಂಕುಮ ಹೂವುಗಳಿಂದ ಅಲಂಕರಿಸಲ್ಪಟ್ಟಿದೆ!
ಉಸಿರು ನೀಡಿದ ಆ ಜೀವ
ಕೊನೆಯುಸಿರೆಳೆದು ದೂರವಾಗಿದೆ!
ನನ್ನವ್ವ ಈಗ
ನನ್ನೊಳಗಿನ ನೆನಪು ಮಾತ್ರ!
ಡಾ. ಸುಮಂಗಲಾ ಅತ್ತಿಗೇರಿ.
Super
I Miss you mom
ಕವಿತೆ ತುಂಬಾ ಚನ್ನಾಗಿದೆ.
Very super
ತುಂಬಾ ಚೆನ್ನಾಗಿದೆ