ಕಾವ್ಯ ಸಂಗಾತಿ
ಗೀತಾಮಂಜು ಬೆಣ್ಣೆಹಳ್ಳಿ
ಅಪಾರ್ಟ್ಮೆಂಟ್ ಗೋಡೆ ಗಿಳಿ
ತಾರಸಿಯ ಪೀಠವೇರಿ
ಮುಂಜಾನೆಯ ಎಳೆಬಿಸಿಲು
ಹೀರಬೇಕೆಂದು ಕೂತ
ಏಸಿ ರೂಮಿನ
ಧಡೂತಿ ದೇಹ
ಫ್ರಿಡ್ಜ್ ನಿಂದ ಹೊರತೆಗೆದು
ಬಿಸಿಲಿಗಿಟ್ಟ ಸೌತೆಕಾಯಿ
ವಾಸ್ತವತೆ ಅರಿಯದ
ಕೂಲಿಂಗ್ ಗ್ಲಾಸ್ ನ ಕಣ್ಣು
ಭಾವವಿಲ್ಲದೆ ಬೆಂದಿದೆ
ಕನಸಿಲ್ಲದೆ ಕುಸಿದಿದೆ
ಸ್ಪಂದನೆ ಅದೆಲ್ಲಿಂದ
ಬರಬೇಕು
ಇರುಳುಗಣ್ಣ ನೋಟ
ಧೂಳು ಹಿಡಿದ ದರ್ಪಣ
ಮಣ್ಣು ಮೈತಾಕಿದರೆ
ಮಾಸಲೆಂದು
ಅಡಿಯಿಂದ ಮುಡಿವರೆಗೆ
ಸುತ್ತುವರಿದ ಕಾಂಕ್ರೀಟ್ ಕಾಡು
ತಂಪು, ತೊಟ್ಟಿಯ ಪಾಚಿ
ಜಾರಿ ಬೀಳಬಹುದು
ಇಕ್ಕಟ್ಟು, ತಿಕ್ಕಟ್ಟು, ಬಿಕ್ಕಟ್ಟಿನ
ಅಪಾರ್ಟ್ಮೆಂಟ್ ಲ್ಲಿ
ಗೋಡೆಗಿಳಿಯೊಂದು
ಸದಾ ಹಣ್ಣು ತಿನ್ನುತ್ತಲೇ ಇದೆ
ಬೇಕೆಂಬುದು ಗೊತ್ತಿಲ್ಲ
ಸಾಕೆಂಬುದೂ ತಿಳಿದಿಲ್ಲ
ಪ್ಲಾಸ್ಟಿಕ್ ಬಾವಿಯ ಬೇರು
ಪಾತಾಳ ಗಂಗೆಯ ಮುಟ್ಟಿ
ಮುಕ್ತಿ ಪಡೆದು ಬಂದಂತೆ
ಸಿಕ್ಕ ಸಿಕ್ಕವರಿಗೆಲ್ಲ
ಮಸಣಮುಕ್ತಿ
ಪೀಜಾ, ಬರ್ಗರ್, ಕೂಲ್ಡ್ರಿಂಕ್ಸ್
ಬೇಲ್ ಪುರಿ, ಸಮೋಸ,ನೂಡಲ್
ನಳರಾಜನ ಎದುರು
ತಳಮಳ
ಒಗ್ಗರಣೆಗಿಟ್ಟ ಸಾಸಿವೆ
ಕಳವಳ
ಹಸಿದ ಹೊಟ್ಟೆಗೆ
ಇಷ್ಟಿಷ್ಟೇ ವಿಷ
ವಾಹನ ಊದುವ ಹೊಗೆ
ಉಸಿರುಗಟ್ಟಿಸಿ
ಬೆಂಕಿ ಪಟ್ಟಣದ ಮನೆ
ಕರುಳ ಕುಗ್ಗಿಸಿ
ಕೃತಕ ನಗು
ಆವರಿಸಿಕೊಂಡಂತೆ
ಮನೆ ಮನಗಳ
ಮೇಕಪ್ ಸಹಿತ
ಆದರೂ,ಗೋಡೆ ಗಿಳಿ
ಹಣ್ಣು ತಿನ್ನುತ್ತಲೆ ಇದೆ
ತಾರಸಿ ಮನೆ
ಬೆವರುತ್ತಲೇ ಇದೆ
ಮುಕ್ತಿವಾಹನ ತುಂಬಾ ಹತ್ತಿರ
ಗೀತಾಮಂಜು ಬೆಣ್ಣೆಹಳ್ಳಿ
ಗೀತಾ ಮಂಜು ರವರು ಬರದ ನೆಲವೆಂದೇ ಹೆಸರಾದ ಜಗಳೂರಿನ ಬರಡು ನೆಲದಲ್ಲಿ ಸಾಹಿತ್ಯದ ಸಹಜ ಕೃಷಿ ಮಾಡಬಲ್ಲವರು.
ಗಿಳಿಯನ್ನು ಸಾಂಕೇತಿಕವಾಗಿ ಇರಿಸಿಕೊಂಡು ನಗರವಾಸಿಗಳ ಬದುಕನ್ನು ಕಟ್ಟಿಕೊಡುವ ಈ ಕವನ ಬಹಳ ಅರ್ಥಗರ್ಭಿತ.
ಗೀತಾ ರವರಿಗೆ ಅಭಿನಂದನೆಗಳು
ಎನ್ ಟಿ. ಎರ್ರಿ ಸ್ವಾಮಿ
ಕೆನರಾ ಬ್ಯಾಂಕ್ ವಿಶ್ರಾಂತ
ವಿಭಾಗೀಯ ವ್ಯವಸ್ಥಾಪಕ
ಜಗಳೂರು
ಗೀತಾ ಮಂಜು ರವರ ಕವಿತೆ ಮಂಜಿನಂತೆ ತಣ್ಣಗೆ
ಬೆಣ್ಣೆಯಂತೆ ನುಣ್ಣಗೆ ಎದೆಗಿಳಿದು ಬದುಕಿನ ಬಿಸಿ ಬಸಿಯಿತು.ಶರಣು ಗೀತಾ ಮಂಜುರವರಿಗೆ.ನಮ್ಮ ನೆಲದ ಚಿಗುರು.
ಗೀತಾ ಮಂಜು ರವರು ಬರೆದಿರುವ ಚುಟುಕು ಕವಿತೆಗಳು ವಾಸ್ತವ ಚಿತ್ರಣವನ್ನು ಅತ್ಯಂತ ಮನೋಭಾವನೆ ಕಟ್ಟಿಕೊಡುತ್ತಿವೆ. ಶ್ರೀಮತಿ ಗೀತಾ ಮಂಜು ರವರಿಗೆ ಹೃತ್ಪೂರ್ವಕ ಅಭಿನಂದನೆಗಳು