ಒಂದ ಕಡಿ ಏರತಾಇರೋ ಬಿಸಲು , ಇನ್ನೊಂದು ಕಡಿ ಫಂಕ್ಷನ್ ಗಳು. ನಮ್ಮ ಕಡಿ ಬ್ಯಾಸಗಿ ಶುರು ಆದ್ರ ಫಂಕ್ಷನ್ ಗಳ ಸುಗ್ಗಿ ನೋಡ್ರೀ.ಈಗ ಯಾವ ಫಂಕ್ಷನ್ ಗಳು ಮಾಡಲಕನೂ ಬ್ಯಾಸಗೀನೆ ಬೇಕೆಂದೆನಿಲ್ಲ. ಆಗ ಫಂಕ್ಷನ್ ಗಳು ಮನಿ ಮುಂದ ಮಾಡತಿದ್ರೂ , ನೆಂಟರು ಬಳಗದವರು ಬಂದು ತಿಂಗಳ ತಿಂಗಳ ಉಳಿತಿದ್ರೂ , ಮನಿ ಮುಂದ ಪಡಸಾಲ್ಯಾಗ , ಮಾಳಗಿ ಮ್ಯಾಲ ಹಿಂಗ ಎಲ್ಲೆಂದ್ರಲ್ಲಿ ಕೂಡದು ಮಲಕ್ಕೊಳ್ಳೊದು ಮಾಡತಿದ್ರೂ , ಮಳಿ ಛಳಿ ಇಲ್ಲದ ಕಾಲದಾಗ ಮದಿ ಮುಂಜವಿಗಳು ಇಟ್ಟಗೋತಿದ್ರೂ.ಈಗ ಸಣ್ಣ ಸಣ್ಣ ಊರಾಗೂ ಫಂಕ್ಷನ್ ಹಾಲ್ ಗಳು ಆಗ್ಯಾವ್.ಮಳಿಗಾಲದಾಗ ಕಾರಣ ಮಾಡಲಕ್ಕ ಒಂದಿಟು ಅಡಚಣಿ ಆಗತದ , ಖರೆ , ಆದ್ರ ಛಳಿಗಾಲದಾಗ ಫಂಕ್ಷನ್ ಮಾಡಲಾಕ ಏನಾಗತದ.!.ನಮ್ಮ ಕಡಿ ಏನ್ ಮೈ ಕೋರೆಯುವಷ್ಟು ಛಳಿ ಇರೋದು ಅಷ್ಟರಾಗ ಅದ , ನವೆಂಬರ್ , ಡಿಸೆಂಬರ್ ದಾಗ ಕಾರಣಗಳು ಮಾಡದು ಛಂದ ನೋಡ್ರೀ. ಈಗ ಫಂಕ್ಷನ್ ಅದಾ ಅಂತ ನಾಲ್ಕ ದಿನ ಮುಂಚೆ ಬಂದಿರೋ ನೆಂಟರು ಬೀಗರು ಇಲ್ಲ.ಎಲ್ಲರೂ ಕಾರಣ ದಿನಾನೆ ಬಂದು ಒಂದೆರಟು ಗಂಟೆ ಇದ್ದು ಹೋಗೋ ನೆಂಟರೆ ಹರಾ.
ಬಂದು ಇರೋರಿಗಿ ಇಂತಿಜಾಮ್ ಮಾಡೋ ಅವಶ್ಯಕತಿನೂ ಇಲ್ಲ. ಸುಮ್ನ ಇಂತಾ ಊರಿ ಬಿಸಲಾಗ ಫಂಕ್ಷನ್ ಇಟಗಕೋತಾರಪ್ಪ ಅಂತ ಅಂದುಕೊಂತ ಕುಳಿತಿದ್ದ . ಯಾಕಂದ್ರ ಒಂದು ಮದುವಿಗಿ ಹೋಗಬೇಕಾಗಿತ್ತು. ಬಿಸಲು ಬಿಸಲು ಅನ್ನಕೊಂತಾನೆ ಕರೆದ ಎಲ್ಲರ ಫಂಕ್ಷನ್ ಕ್ಕೂ ಹೋಗೋರು ನಾವು. ನಾನೂ ರೆಡಿ ಆಗಿ ಎಲ್ಲರ ಜೋಡಿ ಬಿಸಲು ‌, ಧಗಿಗಿ ಬೈಕೋತ ಫಂಕ್ಷನ್ ಹಾಲ್ ಕಡಿ ಹೊರಟ್ವಿ.

ಅವತ್ತ ಎಲ್ಲರ ಬಾಯ್ದಾಗೂ ಒಬ್ಬ ಮುಸ್ಲಿಂ ಹುಡುಗ ಹಿಂದೂ ಹುಡಗಿಗಿ ಕೊಲ್ಲಿದ ಸುದ್ದಿನೇ . ಎಲ್ಲರಿಗೂ ತಮ್ಮ ತಮ್ಮ ಹೆಣ್ಣಮಕ್ಕಳ ಬಗ್ಗೆ ಕಾಳಜಿ , ಸಹಜನೆ ಬಿಡ್ರೀ , ತಾಯಾದವಳು ಸದಾ ತನ್ನ ಹೆಣ್ಣಮಕ್ಕಳ ಬಗ್ಗೆ ಭಯ ಮಿಶ್ರಿತ ಕಾಳಜಿ ಮಾಡತಿರತಾಳ.ಇಂತಹ ಸಂಧರ್ಬಗಳು ನೋಡ್ದಾಗ ಕೇಳ್ದಾಗ ಆತಂಕ ಆಗೋದು ಸಹಜ.

ಆದ್ರ ವಿಷಯ ಪ್ರೀತಿ ಬಗ್ಗೆ ಬಂದಾಗ ಹೆತ್ತವರಿಗಿ ಇನ್ನಷ್ಟು ಆತಂಕ ಶುರುವಾಗತದ. ಮಕ್ಕಳು ಕಾಲೇಜಿಗೆ ಹೋಗಿ ಲವ್ ಗಿವ್ ಮಾಡಿದ್ರೇ ಹ್ಯಾಂಗ್..ಬ್ಯಾರೆ  ಜಾತಿಯವರನ್ನ ಲವ್ ಮಾಡಿದ್ರ ಹ್ಯಾಂಗ..ಯಾರಿಗನ ಇಷ್ಟ ಪಟ್ಟು ನಮ್ಮ ಇಷ್ಟಕ್ಕ ವಿರೋಧವಾಗಿ ಮದುವಿ ಮಾಡಕೋತಿನಂದ್ರ ಹ್ಯಾಂಗ ಮಾಡಬೇಕು. ಈ ಹ್ಯಾಂಗ ಅಂಬೋ ಪ್ರಶ್ನೆಗಳು ಕಾಲೇಜಿಗಿ ಹೋಗೋ ಮಕ್ಕಳ ಹೆತ್ತವರಿಗಿ ಒಮ್ಮಿಲ್ಲ ಒಮ್ಮೆ ಕಾಡೋ ಪ್ರಶ್ನೆಗಳೆ.
ಇದಕ್ಕೆ ಮುಖ್ಯ ಕಾರಣ ಅಂದ್ರ ನಮ್ಮ ಸಮಾಜ.

 ಜಾತಿ ಧರ್ಮ ಗಳ ಬಗ್ಗೆ ಚಿಕ್ಕಂದಿನಿಂದಲೇ ಒಂದು ಸಂಪ್ರದಾಯ ಮತ್ತು ಆಚರಣೆಗಳ ಅಡಿಯಲ್ಲಿ ಮಕ್ಕಳನ್ನು ಬೆಳೆಸತಿವಿ .ಇದು ರೂಡಿ . ಈ ಒಂದು ರೂಢಿಯೊಳಗ ಬಂಧಿಯಾದ ನಾವು ನಮ್ಮ ಜಾತಿ ಧರ್ಮದ ಬಗ್ಗೆ ನಮಗರಿವಿಲ್ಲದೆ ಒಂದು ಅಭಿಮಾನ ಬೆಳಸಕೋತಿವಿ. ಅನ್ಯ ಜಾತಿ ಧರ್ಮದವರು ನಮ್ಮ ಸಂಬಂಧಗಳ ವಲಯದಲ್ಲಿ ಪ್ರವೇಶ ಮಾಡಿದ್ರೆ ಸಹಜವಾಗಿ ನಮಗ ಒಪ್ಪಕೊಳ್ಳಕ್ಕ ಆಗಲ್ಲ. ಆಗ ನಮ್ಮ ಮಾತು ಕೇಳದ ನಮ್ಮವರ  ಜತಿನೇ ಘರ್ಷಣೆ ಶುರು ಆಗತಾವ .ಇವು ಎಷ್ಟು ವಿಕೂಪಕ್ಕ ಹೋಗತಾವ ಅಂದ್ರ ಹೆತ್ತವರೇ ತಮ್ಮ ಮಕ್ಕಳಿಗಿ ಸಾಯುಸುವಷ್ಟು. .ಇಂತಹ ಸಂದರ್ಭಗಳು ಅರಗಿಸಿಕೊಳ್ಳಕ ಬಾಳ ಕಷ್ಟ ಆಗತದ.

ಪ್ರೀತಿಯ ವಿಷಯ ಬಂದಾಗ ಸರಿ ತಪ್ಪು ನಿರ್ಣಯಿಸೋದು ಬಾಳ ಕಷ್ಟ. ಮಕ್ಕಳು ಹರೆಯಕ್ಕ ಬಂದ ತಕ್ಷಣ ಆಕರ್ಷಣೆನೂ ಲವ್ ಅಂದಕೊಂಡು ಬಿಡತಾವ. ಇಪ್ಪತೈದು ವರ್ಷದ ಒಳಗೆ ಮಾಡಿದ ಪ್ರೀತಿ ಪ್ರೀತಿ ಅಲ್ಲಂತಾರ . ಅದು ಬರೀ ಆಕರ್ಷಣೆ ಮಾತ್ರ ಅಂತ  ಎಲ್ಲೋ ಓದಿದ್ಷ ನೆನಪು. ಲವ್ ಮಾಡೋದಲ್ಲ ಘಟಿಸಿ ಬಿಡತದ ಅಂತಾರ. ಲವ್ ಅಟ್ ಫಸ್ಟ ಸೈಟ್ ಎಂಬೋದು ಎಷ್ಟು ನಿಜಾನೋ , ಆದ್ರ ಹರೆದ ಮಕ್ಕಳು ಪ್ರೀತಿ ಪ್ರೇಮದಾಗ ಸಿಕ್ಕಬಿದ್ರ ಅವರೂ ಮತ್ತ ಹೆತ್ತವರು ಇಬ್ಬರೂ ದಃಖ ಅನುಭವಿಸಬೇಕಾಗತದ.   ಹಠ ಮಾಡಿ ಮದುವೆ ಮಾಡಕ್ಕೊಂಡು ಇಲ್ಲ ಓಡಿ ಎಲ್ಲಿಗೋ ಹೋಗಿ ತಾಪತ್ರಯ ಅನುಭವಿಸಿದೋರ ಉದಾರಣೆ ಬಾಳ ಅವ. ಹಾಗಂತ ಲವ್ ಮಾಡೋರಿಗೆಲ್ಲ ವಿರೋಧ ಮಾಡಬೇಕು ಅಂತೆನಿಲ್ಲ.  ಲವ್ ಮ್ಯಾರೇಜ್ ಮಾಡಕೊಂಡವರೆಲ್ಲ ದುಃಖನ್ನೆ ಅನುಭವಿಸತಾರ ಅಂತ ಹೇಳೊದು ತಪ್ಪಾಗತದ. ಪ್ರಬುದ್ಧ ವಯಸ್ಸಿನವರು ಇಬ್ಬರು ಇಷ್ಟಪಟ್ಟು ಒಂದಷ್ಟು ಕಾಲ ಒಬ್ಬರಿಗೊಬ್ಬರಿಗೊಬ್ಬರು ಅರ್ಥ ಮಾಡಕೊಂಡು ಮುಂದೆ ಜೊತೆಯಾಗಿ ಜೀವನ ಕಳೆಯಬಲ್ಲೆವು ಎಂಬ ಭರವಸೆ ಹೊಂದಿದವರ ಪ್ರೇಮ ವಿವಾಹ ಗಳು ಸಫಲವಾಗತಾವ. ಅದು ಬಿಟ್ಟು ಓದೋ ವಯಸ್ಸನಾಗ ತನ್ನ ಕಾಲಮ್ಯಾಲ್ ತಾನು ನಿಲ್ದೆ ಬರಿ ಲವ್ ಮಾಡಿದ್ರ.. ಅದು ಮೂರ್ಖತನಾನೆ .ಆದ್ರ ಆ ವಯಸ್ಸು ಬಾಳ ಸೂಕ್ಷ್ಮ ವಾದದ್ದು  , ಬ್ಯಾಡ ಅಂದಷ್ಟು ಬೇಕು ಅಂತ ಹಠ ಮಾಡೋ ವಯಸ್ಸು. ಅಂತಹ ಸಂದರ್ಭದಲ್ಲಿ ತಂದೆ ತಾಯಿ ವಿರೋಧಿಸದೆ , ಬೈಯದೆ , ಹೊಡೆಯದೆ ಅವರೊಂದಿಗೆ ನಯವಾಗಿ ವರ್ತಿಸಿ ತಿಳಿಸಿ ಹೇಳುವ ಪ್ರಯತ್ನ ಮಾಡಬೇಕಾಗತದ. ಅವರಿಗೆ ಒಂದಷ್ಟು ದಿನಗಳ ಅಥವಾ ವರ್ಷಗಳ ಸಮಯ ಕೊಟ್ಟು ಅವರೆ ತಮ್ಮ ಸಂಬಂಧ ಮುಂದುವರೆಯಬೇಕೋ ಅಥವಾ ಬಿಡಬೇಕೋ ಎಂದು ನಿರ್ಣಯಿಸಲು ಸಮಯ ಕೊಡಬೇಕು. ಇಲ್ಲಿ ಪೋಷಕರ ತಾಳ್ಮೆ ಬಹಳ ಮುಖ್ಯ. ಬಹಳ ಜನ ಮಕ್ಕಳು ಲವ್ ಮಾಡಿದ್ದಾರೆಂದರೆ ಅವರು ಎನೋ ಅಪರಾಧ ಮಾಡಿದ್ರೂ ಅಂಬೋ ರೀತಿ ವರ್ತಿಸತಾರೆ. ಅದರಲ್ಲೂ ಇಂಟರ್ ಕಾಸ್ಟ್ ಇದ್ರಂತೂ ತಾವು ಎಲ್ಲೂ ಮುಖ ತೋರಿಸ್ಲಿಕ್ಕೆ ಲಾಯಕ್ಕಿಲ್ಲ ಎಂಬಂತೆ ಕೊರಗತಾರೆ. ಒಟ್ಟಿನಲ್ಲಿ ಮಕ್ಕಳ ಪ್ರೇಮ ಒಪ್ಪಿಕೊಳ್ಳುವದು ಹೆತ್ತವರಿಗೆ ಒಂದು ಸವಾಲಿನ ಕೆಲಸ. ಬ್ಯಾಡ ಅಂದ್ರೂ ಅವರಿಷ್ಟದಂಗ ಮದಿವಿ ಮಾಡಕೊಂಡ್ರ ಸಿಟ್ಟಿನಾಗ ಅವರ ಜೊತಿ ಸಂಭಂಧ ಕಡಿದಕೊಂಡು ಬಿಡತಿವಿ , ಈ ಅತೀ ಸ್ವಾಭಿಮಾನದಿಂದ ನಾವು ಗಳಿಸೋದು ಎನದ..!
ಮಕ್ಕಳು ಲವ್ ಮಾಡಿದ್ದ ತಕ್ಷಣ ನಾವು ಒಪ್ಪಕೊಳ್ಲಕೆ ಬೇಕಂತಲ್ಲ .ಆದ್ರ ಅವರ ಹಠಕ್ಕ ನಾವು ಬಗ್ಗಲೇ ಬಾರದು ಅಂಬ ಹಠ ಹೆತ್ತವರಿಗೂ ಒಳ್ಳೆದಲ್ಲ.

ಪ್ರೇಮ ವಿವಾಹಗಳ ಮತ್ತು  ಅಂತರ್ಜಾತಿ ವಿವಾಹಗಳ ಪರ ಅಥವಾ ವಿರೋಧ ಗಳ ಬಗೆಗಿನ ನಿಲುವುಗಳು ಬಗ್ಗೆ ನಿರ್ಧಾರ ತಗೂಳ್ಲಕ  ನನಗೂ ಕಷ್ಟನೆ .ಎಲ್ಲಾ ಹೆತ್ತವರಂತೆ ನನಗೂ ಅದರ ಬಗ್ಗೆ ಕೆಲವು ಆತಂಕಗಳಿವೆ. ಆದ್ರ ಹೆತ್ತವರು ನೋಡಿ ಮಾಡಿದ  ಎಲ್ಲಾ ಆರೆಂಜ್ ಮ್ಯಾರೇಜ್ ಗಳು ಯಶಸ್ವಿ ಆಗೇ ಆಗತಾವ ಅಂತ ನಿಖರವಾಗಿ ಹೆಳೊದು ಹ್ಯಾಂಗ.  ಹಂಗೆ  ಎಲ್ಲ ಪ್ರೇಮ ಮತ್ತು ಅಂತರ್ಜಾತಿ ವಿವಾಹಗಳು ವಿಫಲ ಆಗತವ ಅಂತ ಹೇಳೋದು ತಪ್ಪು. ಆದ್ರ ಆರೆಂಜ್ ಮ್ಯಾರೇಜ್ ದೊಳಗ ಎರಡು ಕಡೆಯ ಹೆತ್ತವರ ಮತ್ತು ರಕ್ತ ಸಂಭಂಧಿಗಳ ಸಪೋರ್ಟ್ ಇರತದ.ಲವ್ ಮ್ಯಾರೇಜ್ ದಲ್ಲಿ ಇವರನ್ನೆಲ್ಲ ಎದುರು ಹಾಕ್ಕೋಬೇಕು.  ಆದ್ರೂ ಪ್ರಬುದ್ದ ಮನಸ್ಸು ಗಳ ತುಡಿತ ಅರ್ಥಮಾಡಕ್ಕೊಂಡು ಅವರಿಗಿ ಒಟ್ಟಾಗಿ ಬಾಳಲು ಅವಕಾಶ ಮಾಡಲಾಕ ಹೆತ್ತವರು ಮನಸ್ಸು ಮಾಡುವದು ಉತ್ತಮ.

ಇಷ್ಟೊತ್ತು ಈ ಲವ್ ವಿಷಯದ ಬಗ್ಗೆ ಒಬ್ಬಳೆ  ವಿಚಾರ ಮಾಡಕೊಂತ ಕುಂತಿರಬೇಕಾದ್ರ ಪಕ್ಕದಲ್ಲಿದ್ದವರ ಜೋರು ದನಿ ಎಚ್ಚರಿಸ್ತು. ಒಂದು ಕೋಮೀನ ಬಗೆಗಿನ ಅಸಹನೆ ಸಿಟ್ಟಿನೊಂದಿಗೆ ಜೋರಾದ ಮಾತುಗಳಲ್ಲಿ ವ್ಯಕ್ತವಾಗುತಿತ್ತು.ಯಾರೋ ಒಂದಿಬ್ಬರು ಮಾಡಿದ ತಪ್ಪಿಗೆ ಇಡೀ ಧರ್ಮವನ್ನೆ ನಿಂದಿಸೋದು ನಮ್ಮ ಹವ್ಯಾಸ. ತಪ್ಪು ಮಾಡಿದವರು ಶಿಕ್ಷೆಗೆ ಅರ್ಹರು. ಅಂತವರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಕೊಲೆಯಾದ ಹುಡುಗಿಯ ತಂದೆ ತಾಯಿಯ ದುಃಖ ಹ್ಯಾಂಗ್ ಕಡಿಮೆ ಮಾಡೋದು .ಅದು ಕಾಲನೇ  ಮಾಡತದ. ಆದ್ರ ಕೊಲೆ ಮಾಡ್ದವನಿಗಿ ಎನ್ ಕೌಂಟರ್ ಮಾಡಬೇಕು.ಅವ್ನ ಮನಿ ಒಡಸಬೇಕು , ಹಾಂಗ‌ಮಾಡಬೇಕು, ಹಿಂಗ್ ಮಾಡಬೇಕು ಅಂತ ಉಪದೇಶ ನಾವು ಮಾಡಬೇಕಾ..ಅದಕ್ಕೆ ಕಾನೂನ ಅದ. ಶಿಕ್ಷೆ ಕೊಟ್ಟೆ ಕೊಡತದ. ಆದ್ರ ಇಡೀ ಒಂದು ಕೋಮೀನ ಬಗ್ಗೆ ಅಸಹನೆ ಕಾರಿ ಇಡೀ ಧರ್ಮದ ಬಗ್ಗೆ ನಿಂದನೆ ಮಾಡುವದರಿಂದ ಪ್ರಯೋಜನ ಏನು..! ಇದರಿಂದ ಒಂದೇ ದೇಶದಲ್ಲಿರುವವ ನಮ್ಮ ನಮ್ಮ ನಡುವೆ ವೈ ಮನಸ್ಸು ಹೆಚ್ಚಾಗತದ ಹೊರತು ಮತ್ತೆನು ಇಲ್ಲ. ವಿಕೃತ ಮನಸ್ಸಿನವರು ಎಲ್ಲಾ ಧರ್ಮದೊಳಗೂ ಇದ್ದಾರೆ. ಅಂತಹ ಕೆಲವರಿಂದ ಅವರ ಇಡೀ ಧರ್ಮವನ್ನೆ ನಿಂದಿಸೋದು ಎಷ್ಟು ಸರಿ. ಹಿಂದಿನಿಂದಲೂ ನಮ್ಮದು ಬಹುತ್ವದ ದೇಶ. ನಮ್ಮಂಗ ಅವರೂ ಇಲ್ಲೆ ಹುಟ್ಟಿ ಬೆಳೆದವರು , ನಾವು ಬಹುಸಂಖ್ಯಯಲ್ಲಿ ಇದ್ದಿವಿ , ಈ ದೇಶ ಪೂರಾ ಬಹು ಸಂಖ್ಯೆ ದಾಗ ಇರೋ ನಮ್ದೆ ನಿಮ್ದಿಲ್ಲ ಅಂದ್ರ ಇದು ಒಪ್ಪೋ ಮಾತಲ್ಲ.. ಬುದ್ದಿ ಇರೋ ಯಾರೂ ಆಡೋ ಮಾತೆ ಅಲ್ಲ ಇದು. ಅವರೂ ಇಲ್ಲೆ ಇರಬೇಕು , ನಾವೂ ಇಲ್ಲೆ ಇರಬೇಕು , ಹೀಗೆ ಒಬ್ಬರ ತಪ್ಪು ಮತ್ತೊಬ್ಬರು ದೊಡ್ದು ಮಾಡಿ ನಿಂದಿಸೋದು ಹಿಯಾಳಿಸೋದು ಮಾಡೊದು ಅನಾಗರಿಕತೆ. ತಪ್ಪು ಯಾರೆ ಮಾಡಲಿ , ಕೊಲೆ ಯಾರೆ ಮಾಡಲಿ , ದೇಶದ್ರೋಹದ ಕೆಲಸ ಯಾರೆ ಮಾಡ್ಲಿ , ಆ ತಪ್ಪಿಗಿ ಶಿಕ್ಷೆ ಮಾತ್ರ ಆಗಲೇಬೇಕು . ಅದೂ ಕಠಿಣ ಶಿಕ್ಷೆ. ಅದಕ್ಕ ನಮ್ಮ ಕಾನೂನು ಇನ್ನೂ ಗಟ್ಟಿ ಆಗಬೇಕು , ತಪ್ಪು ಮಾಡವರೂ ತಪ್ಪು ಮಾಡಲಕ ಅಂಜಬೇಕು.ಆಗ ಅಪರಾಧದ ಳು
 ಕಮ್ಮಿ ಆಗತವ.ನಾವೇ ಒಬ್ಬರ ಮೇಲೋಬ್ಬರು ಕೆಸರು ಚಲ್ಲಕೋತ ಕೂತರ ಎಲ್ಲ ಕಡಿ ಬರೀ ರಾಡಿನೆ ಹಬ್ಬತದ.

ಆದ್ರ ಈ ಜಾತಿ ಧರ್ಮಕ್ಕಿಂತ ಈಗೀನ ಯುವ ಜನತೆಯ ಬಗ್ಗೆ ನಾವು ಹೆಚ್ವು ಆತಂಕ ಪಡಬೇಕಾಗ್ಯಾದ. ಇಂತಹ ವಿದ್ರೋಹದ ಕೆಲಸಗಳು ಯುವಜನರಿಂದ ಹೆಚ್ಚು ಘಟಿಸಲತವ. ತಮ್ಮ ಹಠ ಕೋಪ ಅಸಹನೆಗಳು ತಮ್ಮ ಹತೋಟಿಯಲ್ಲಿ ಇಡಲಿಕ್ಕಾಗದೆ ಅವರಿಂದ ಇಂತಹ ಕೆಲಸ ಮಾಡಸ್ತವ. ಮಕ್ಕಳು ಬೇಡಿದ್ದೆಲ್ಲ ಪೂರೈಸೋ ತಂದೆತಾಯಿಗಳ ಅತೀ ವ್ಯಾಮೋಹನು ಇದಕ್ಕ ಕಾರಣ. ಬೇಕಾದುದೆಲ್ಲ ಕೇಳಿದ ತಕ್ಷಣ ಸಿಕ್ಕ್ರ ಬ್ಯಾಡ ಅಂದದ್ಷು ಅವರಿಗೆ ತಡಕೊಳಿಕ್ಕ ಆಗಲ್ಲ.ಹಠ ಜಿದ್ದು ಮಾಡಿಯಾದ್ರೂ ಅದನ್ನು ಪಡಕೊಳ್ಳೋ ಕೆಟ್ಟ ಹಠಕ್ಕ ಒಳಪಡತಾರ.ತಾವೇನ ಮಾಡಲತಿವಿ ಅಂತ ಅವರಿಗೆ ಅರಿವಿಲ್ಲದ ಮಾನಸಿಕತೆಗೆ ಒಳಪಟ್ಟು ಕೊಲೆಯಂತ ವಿದ್ರೋಹ ಮಾಡತಾರ.

. ಸಿನಿಮಾ ಧಾರಾವಾಹಿಗಳ ಪ್ರಭಾವ.ಸಾಮಾಜಿಕ ಜಾಲತಾಣದ ದುರ್ಬಳಕೆ , ಸ್ನೇಹಿತರ ವಲಯದೊಳಗಿನ ನಶೆಕಾರಕ ನಡವಳಿಕೆಗಳು , ನಮ್ಮ ದೇಶದ ಹಗುರವಾದ ಕಾನೂನು ಕಟ್ಟಳೆಗಳು ಕೂಡ ಅಪರಾಧ ಎಸಗುವದಕ್ಕ ಕಾರಣ ಅನ್ನಬಹುದು. ನೂರು ಅಪರಾಧಿ ತಪ್ಪಿಸಿಕೊಂಡ್ರೂ ಒಬ್ಬ ನಿರಾಪರಾಧಿಗೆ ಶಿಕ್ಷೆ ಆಗಬಾರದು ಎಂಬ ಸಿದ್ದಾಂತಕ್ಕೆ ಒಳಪಟ್ಟ ನಮ್ಮ ಕಾನೂನು ಕೊಲೆಗಾರರು ಕೂಡ ಕೆಲ ದಿನಗಳ ಮೇಲೆ ಬೇಲ್ ಮೇಲೆ ಹೊರಬಂದು ರಾಜಾರೋಷವಾಗಿ ತಿರುಗಾಡುವದು ನೋಡಿ ಯಾರಿಗಿ ಕಾನೂನಿನ ಬಗ್ಗೆ ಭಯ ಇರತದ ಹೇಳ್ರೀ.

ಇಂತಹ ಘಟನೆಗಳು ನಡಿತಾನೆ ಅವ.ಕೆಲದಿನ ಸುದ್ದಿ ಯಾಗಿ ಮತ್ತ ತಣ್ಣಗಾಗತವ. ಆದ್ರ ನಾವು ಜನಸಾಮಾನ್ಯರು  ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ  ಪ್ರಭಾವಕ್ಕ ಒಳಪಟ್ಟು ಒಬ್ಬರ ಧರ್ಮದ ಬಗ್ಗೆ ಒಬ್ರೂ ಕೆಂಡಕಾರತಿವಿ.ಇದಕ್ಕ ಬಲಿಯಾಗೋದು ನಮ್ಮಂತ ಸಾಮಾನ್ಯರೆ ಹೊರತು ಯಾವ ರಾಜಕಾರಣಿಗಳು ಅಲ್ಲ. ನೇಹಾಳ ಸಾವಿನ ಬಗ್ಗೆ ದೇಶದ ಎಲ್ಲರೀಗೂ ಸಂತಾಪ ಇದೆ.ಇಂತಹ ದುರ್ಘಟನೆಗಳು ಘಟಿಸದೇ ಇರಲಿ ಅಂತ ನಾವೂ ಆಶಿಸೋಣ.

—————————————-

One thought on “

Leave a Reply

Back To Top