ಹಂಬಲದ ಕಣ್ಣು ಬೇಡುತಿದೆ ಬೊಗಸೆ ಪ್ರೀತಿ
ಹಸುವಿನ ಒಡಲು ಕೇಳುತಿದೆ ತುಸು ಒಲವ//

ಬತ್ತದ ಪ್ರೀತಿಯ ವರತೆ ಜಿನುಗುತಿದೆ
ಬಚ್ಚಿಟ್ಟ ಒಲವು ಧಾರೆಯಾಗಿ ಹರಿಯುತಿದೆ
ನಂದದಾ ಪ್ರೇಮ ಜ್ಯೋತಿ ನಿತ್ಯ ಉರಿಯುತಿದೆ
ತಂಬೆಲರಿನಾ ತಂಪು ಸೋಕಿ ಹಂಬಲಿಸುತಿದೆ
ಒಲವ ಗಮಲು ಹಿತವಾಗಿ ಬೀರಿ ಸವರಿ ಪರಿಮಳಿಸಬಾರದೇ//

ಚಿತ್ತದೊಳಗೆ ಹೊಳೆ ಹೊಳೆದು
ಬಣ್ಣಬೆಡಗು ಒಡಗೂಡಿ ಹೊಸೆದು
ಬಾನಿನಾ ಅಂದ ಸೆಳೆ ಸೆಳೆದು
ಗೂಡ ಹಕ್ಕಿಗೆ ರೆಕ್ಕೆ ಬಂದಂತೆ ಆಗಿಹುದು
ಹಾರುವ ತವಕದಿ ಹೊರ ಬಂದಾಗ ಜೊತೆಯಾಗಬಾರದೇ//

ಜೀವನಾಡಿ ಮಿಡಿದು ತುಡಿದು ತವಕಿಸಿ
ಸ್ವರ ರಾಗಗಳು ಒಂದಾಗಿ ಮೇಳೈಸಿ
ಪ್ರೇಮಾಲಾಪದಿ ತಾಳಮೇಳ ಬೆರೆಸಿ
ಭಾವದೊಲವಲಿ ಸೆಳೆದು ಬಂಧಿಯಾಗಿಸಿ
ಇನಿಧ್ವನಿಯೊಂದಿಗೆ ಬೆರೆತು ಪ್ರೇಮಗೀತೆ ಹಾಡಬೇಕೆನಿಸುತಿದೆ//

ಹೃದಯ ತಂತಿಗೆ ಬೆರಳ ನೀಡಿ
ತನುವಿನೊಳು ಹಿತ ಸ್ಪರ್ಶ ಸುಖವಾ ದೂಡಿ
ಮನ್ಮಂತರದ ವಸಂತನ ಜೊತೆಗೂಡಿ
ಇಂದ್ರನ ರಥವೇರಿ ಧಾವಿಸಿ ಅವಸರದೆ
ತೋಳ ಸೆರೆಯಲೆನ್ನ ಬಂಧಿಸಿ ಸ್ವರ್ಗ ತೋರಿಸಬಾರದೇ//


Leave a Reply

Back To Top