ಪುಸ್ತಕ ಸಂಗಾತಿ
ಶಕುಂತಲಾ. ಎಫ್. ಕೆ.
ಕವನ ಸಂಕಲನ
“ಚಿತ್ತದೊಳಗಿನ ಚಿತ್ತಾರ”
ಅವಲೋಕನ-
ದೇವರಾಜ ಹುಣಸಿಕಟ್ಟಿ
ಕವನ ಸಂಕಲನ – ಚಿತ್ತದೊಳಗಿನ ಚಿತ್ತಾರ
ಕವಿ- ಶಕುಂತಲಾ. ಎಫ್. ಕೆ
ಪ್ರಕಾಶನ – ಅನುಪಮ ಪ್ರಕಾಶನ
ಬಸವೇಶ್ವರ ನಗರ
ಶಿಗ್ಗಾoವ
ಜಿ // ಹಾವೇರಿ
ಪಿನ್ ಕೋಡ್ – 581205
ಫೋನ್ ನಂ – 7353902220
ಆತ್ಮ ನಿವೇದಕಿ ಕವಯತ್ರಿ ಶಕುಂತಲಾ ಎಫ್. ಕೆ ಅವರ “ಚಿತ್ತದೊಳಗಿನ ಚಿತ್ತಾರ “….
” ಒತ್ತಡದ ನೋವಿಗೆ ಕಣ್ಣೆ ಹೊರ ಹರಿವು”
ಬೆಂಕಿಯಾರಿಸಿ ನೀಗುವುದು ಸಾವಿರ ನೋವು “
ಪನ್ನೀರು ಕವಿತೆಯ ಈ ಸಾಲುಗಳು ಅವರ ಜೀವನ ದೃಷ್ಟಿ, ಕಾವ್ಯ ಸೃಷ್ಟಿಯ ಗತಿಯನ್ನು ವ್ಯಾಖ್ಯಾನಿಸುತ್ತವೆ ಅಂದ್ರ್ ಸುಳ್ಳಲ್ಲ.
ನೋವು ಮಾಗಿ ಬಾಗಿ ಸ್ಫೋಟಗೊಂಡು ಕಂಬನಿ ಹೊರ ಬಂದಾಗಲೇ ಎದೆಯ ಬೆಂಕಿ ಆರುವುದು ಎನ್ನುವಲ್ಲಿ ಕಣ್ಣೀರು ಪನ್ನಿರಾಗಿ ಕಾಣುವ ಅವರ ಕಾವ್ಯ ಪ್ರೀತಿ ಜೀವನ ಪ್ರೀತಿಯಾಗಿ ಕಾಣುತ್ತದೆ. ಹೀಗೆ ಸಾಮಾನ್ಯ ಕ್ರಿಯೆಯೊಂದು ಸಂಸ್ಕಾರ ಮಾತ್ರದಿಂದ
“ನೂಲು ಜನಿವಾರವಾದಂತೆ
ನೀರು ತೀರ್ಥವಾದಂತೆ
ಸೆಗಣಿ ವಿಭೂತಿಯಾದಂತೆ ”
ಕಂಬನಿ ಕೂಡ ಪನ್ನೀರಾಗುವ ಕಾವ್ಯ ದೃಷ್ಟಿ ದಕ್ಕಲು ಸಾಧ್ಯ.
ಅವರ ಕಾವ್ಯಾಭಿವ್ಯಕ್ತಿ ಅತ್ಯಂತ ಮೃದು ಶಬ್ದಗಳಲ್ಲಿ ಅರಳಿ ಸಹಜ ಸೊಗವನ್ನು ಓದುಗರಿಗೆ ದಕ್ಕಿಸುತ್ತೆ. ಎಲ್ಲೂ ಕಾವ್ಯ ಗದ್ಯ ವೆನ್ನಿಸಿಕೊಳ್ಳದೆ ಸಾಗುವುದು. ಇದು ಅವರ ಕಾವ್ಯದ ಹೆಗ್ಗಳಿಕೆ ಕೂಡ.
ಅವರ ಇನ್ನೊಂದು ಕವಿತೆ ” ತಪಸ್ವಿ ನಿ ” ಯನ್ನು ಗಮನಿಸಿ
“ಅಕ್ಷರ ಕಲಿಯದ ಸುಶಿಕ್ಷಿತೆ “
ಬಡತನ ಹಾಸಿ ಹೊದ್ದ ಶ್ರೀ ಮಂತೆ “
ನೆರಳು ನೀಡುವ ಮರಕೆ
ನೆರಳಾಗಿ ನಿಂದ ಮಹಿಮಳು “
ಎನ್ನುವ ಸಾಲುಗಳು ಸಾಲುಮರದ ತಿಮ್ಮಕ್ಕನ ಇಡೀ ಜೀವನವನ್ನು ಇಷ್ಟ ಸರಳ ಮತ್ತು ಅಷ್ಟೇ ಸಶಕ್ತ ರೂಪಕ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಕುವೆಂಪು ರೈತನಲ್ಲಿ ಯೋಗಿಯ ಕಂಡ ಬಗೆಯ ನೆನಪಿಸದೆ ಇರದು.
ಅವರ ಇಡೀ ಕಾವ್ಯ ಮನೆ, ಸಂಬಂಧ, ಕುಟುಂಬ ಹೀಗೆ ಗಿರಿಕಿ ಹೊಡೆದಿದೆ ಎಂದು ಎನ್ನಿಸುವಾಗಲೇ ಲೋಕದೃಷ್ಟಿಯ ಕೆಲವು ಕವಿತೆಗಳು ಕೂಡ ನಮ್ಮನ್ನು ಗಮನ ಸೆಳೆಯುತ್ತವೆ. ಇದು ಅವರ ಬಿಡಿಗಣ್ಣಿಗೆ ಸಾಕ್ಷಿ…
ಉದಾಹರಣೆಗೆ ” ಕಲಿಗಾಲ” ಕವಿತೆಯ ಸಾಲುಗಳ ಗಮನಿಸಿ
“ಹೆತ್ತವರ ಶವವ ಪೆಟ್ಟಿಗೆಯೊಳಗಿಟ್ಟು
ಹಣಕಾಗಿ ಒತ್ತುವರು ನಿರ್ಜಿವ ಹೆಬ್ಬಟ್ಟು “
ಇಲ್ಲಿ ಕವಯತ್ರಿ ಸಮಾಜದಲ್ಲಿ ಮೌಲ್ಯಗಳ ಅಧಪತನವನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ದಾಖಲೆ ಮಾಡಿದ್ದಾರೆ. ಸಂಪತ್ತು ಮಾಡಿಸುವ ಅತ್ಯಂತ ನೀಚ ಕೆಲಸಗಳ ಹೇಳುವ ಮೂಲಕ ಎಚ್ಚರದ ದನಿಯಾಗ ಬಯಸಿದ್ದಾರೆ.
ಅದೇ ದಾಟಿಗೆ ಇನ್ನೊಂದು ಉದಾಹರಣೆ ಅಂದ್ರ್ ಅದು ” ಹಗರಣ ” ಕವಿತೆಯ ಸಾಲುಗಳು
” ಬೀದಿಗಿಳಿದ ರಾಜಕಾರಣಿ
ಮತಗಳ ಭಿಕ್ಷೆ ಬೇಡಲು
ಸರಿಯಾದ ಮೂಹೂರ್ತವಿದು
ಹಿಂದೆ ತಿಂದ ಕೊಬ್ಬು ಕರಗಲು “
ಅದೆಷ್ಟು ವ್ಯಂಗ್ಯ ತುಂಬಿದ ದೃಷ್ಟಿ ಓದುಗನಿಗೆ ನೇರವಾಗಿ ಪ್ರಿಯವಾಗದೆ ಇರದು.
ಅವರ ಕಾವ್ಯ ಭಾಷೆ ಅತ್ಯಂತ ಆಪ್ತ, ರೂಪಕದ ದೃಷ್ಟಿ ಕಾವ್ಯವನ್ನು ಮಾಗಿಸಿದೆ ಅನ್ನಿಸದೆ ಇರದು. ಅವರ ಕವಿತೆ ” ದಿವ್ಯ – ಭಾವ ” ದ ಈ ಸಾಲುಗಳ ಗಮನಿಸಿ…
ಪ್ರೀತಿ ಪ್ರೇಮವೆಂಬ
ದಿವ್ಯ ಭಾವವ
ಬಾಯಿ ಮಾತಿನಲ್ಲಿ ನುಡಿಯಲುಂಟೆ..
ಪೌರ್ಣಿಮೆ ಇರುಳಲಿ ಕಡಲುಕ್ಕುವಂತೆ “
“ಅರಳಿ ನಿಂತ ಹೂವ ಮೇಲೆ ಗಾಳಿಯ ದೆಂತ ನವೀರು ಪ್ರೀತಿ”
ಸುಳಿದು ಬಂತು ಗಂಧ ತಂತು
ಸಾರಿತೊಂದು ಸೊಗದ ನೀತಿ “
ಹೀಗೆ ಕಾವ್ಯ ಸುಧೆಯ ಸರಾಗ ಹರಡಿ ಓದುಗರಿಗೆ ಇತ್ತಿದ್ದಾರೆ. ಕವಯತ್ರಿ ಮೇಲೆ ಕನ್ನಡದ ಮಹಾಮನೆ ಕೂಡಲ ಸಂಗಮದ ವಚನ ಸಾಹಿತ್ಯದ ಪ್ರಭಾವ ಇರುವಂತೆಯೇ ಕನ್ನಡದ ಕವಿಮನೆ ಕುವೆಂಪು ಅವರ ಪ್ರಭಾವ ಕೂಡ ಅವರ ಕವಿತೆಗಳ ಮೇಲೆ ಇರುವುದು ಕಾಣ ಸಿಗುತ್ತೆ. ಅವರ ಒಟ್ಟು ಜೀವನ ದೃಷ್ಟಿಯನ್ನು ಸಾರುವ ಕವಿತೆಯ ಬಿಡಿ ಸಾಲುಗಳು ಅಲ್ಲಲ್ಲಿ ಕಾಣಸಿಗುತ್ತವೆ. ಉದಾಹರಣೆಗೆ ” ಒಲವಗಾನ ” ಕವಿತೆಯನ್ನೇ ತಗೆದುಕೊಳ್ಳಿ..
” ಬಾಳ ಪಗಡೆಯಾಟದಲ್ಲಿ
ಬರಲಿ ನೂರು ನೋವು..!
ಭಾವನೆಗಳ ತೋಟದಲ್ಲಿ
ಮಧುರ ಮಾತೇ ಹೂವು..!
ಹೀಗೆ ಬರೆಯುವ, ಬರೆದಂತೆಯೇ ಬೆರೆಯುವ ಕವಯತ್ರಿಯವರ ಇಡೀ ಕಾವ್ಯ ಒಂದೇ ಅಚ್ಚಿಗೆ ಹಾಕಿದಂತೆ ಅನ್ನಿಸದೆ ಇರದು. ಪ್ರಾಸಬದ್ದ ಕವಿತೆಗಳು ಒಮ್ಮೊಮ್ಮೆ ಕಾವ್ಯದ ಹರಿವಿಗೆ ಅಡ್ಡಿ ಪಡಿಸಿದಂತೆ ಕೂಡ ಕಾಣ ಸಿಗುತ್ತವೆ.ಇದು ಅವರ ಕಾವ್ಯದ ಮಿತಿ ಕೂಡ. ಇಂತಹ ಮಿತಿಗಳ ಅವರು ಮೀರುವಂತೆ ಆಗಲಿ. ಭಿನ್ನ ಪ್ರಯೋಗಗಳ ಅವರು ಅಳವಡಿಸಿಕೊಳ್ಳಲಿ ಅಂತಾ ಆಶಿಸುತ್ತೇನೆ.
ಅನುಪಮ ಪ್ರಕಾಶನ ಪ್ರಕಟಿಸಿರುವ ” ಚಿತ್ತದೊಳಗಿನ ಚಿತ್ತಾರ ” ಎಲ್ಲರೂ ಕೊಂಡು ಓದುವಂತಾಗಲಿ. ಒಟ್ಟು 71 ಕವಿತೆಗಳು ಇರುವ ಈ ಕೃತಿಯ ಮುಖಪುಟ ಗಮನಸೆಳೆಯುವಂತೆ ಇದೆ.
ಶ್ರೀ ಮತಿ ಶಕುಂತಲಾ ಎಫ್. ಕೆ ಅವರ ಕವನ ಸಂಕಲನಕ್ಕೆ ಹಿರಿಯ ಕವಿ ಶ್ರೀಯುತ ಸತೀಶ್ ಕುಲಕರ್ಣಿ ಅವರು ಮುನ್ನುಡಿ ಬರೆದು ಶುಭ ಕೋರಿದ್ದಾರೆ. ಅವರು ಇವರ ಇಡೀ ಕಾವ್ಯದ ಹರಿವು ಅರಿವು ಎರಡಕ್ಕೂ ಕನ್ನಡಿ ಹಿಡಿದಂತೆ ಬರೆದಿದ್ದಾರೆ. ಬೆನ್ನುಡಿ ಕನ್ನಡದ ಹಿರಿಯ ಲೇಖಕಿ ಅನಸೂಯಾ ಸಿದ್ಧರಾಮ ಬರೆದಿದ್ದಾರೆ. ಹೀಗೆ ಒಬ್ಬ ಆತ್ಮ ನಿವೇದಕಿ ನಿಮ್ಮೆದುರಿಗೆ ತಮ್ಮ ಕವನ ಸಂಕಲನ ಓದಿಗೆ ಇತ್ತಿದ್ದಾರೆ. ಅವರಿಗೆ ಮತ್ತೊಮ್ಮೆ ಶುಭಾಶಯಗಳ ಕೋರುತ್ತಾ…
ಅವರ ಒಂದು ಬರಹ ಪ್ರೀತಿಯಿಂದ ಓದಿಗೆ…
ಹೀಗೊಂದು ಸವಿಗಳಿಗೆ…
ಸಕ್ಕರೆ ಇರದ ಚಹಾದಲ್ಲಿ ಸವಿ ಬೆರೆತಿದ್ದು ಮೊದಲು…
ಅಕ್ಕರೆ ತುಂಬಿದ ಮಾತಲ್ಲಿ ಮೌನ ಸಂಭ್ರಮಿಸಿದ್ದು ಮೊದಲು…..
ಎಳಸು ಕುಡಿಯ ಎದುರಿಗಿಟ್ಟು ಪ್ರೀತಿ ಸುರಿದಿದ್ದು ಮೊದಲು….
ಕಾಣದ ಎಳೆಯು ಹೂ ಮನಗಳ ಹೆಣೆದಿದ್ದು ಮೊದಲು…
ಸುತ್ತಲಿನ ಸಂಬಂಧ ಕ್ಷಣ ಗೌಣವಾದದ್ದು ಮೊದಲು…
ರಿಕ್ತ ಹಸ್ತದಿ ಸರಸತಿ ಮುದದಿ ಕುಳಿತಿದ್ದು ಮೊದಲು…
ಸಾಗುವ ದಾರಿಯಲಿ ಸೆಳೆತ ಮೊರೆದಿದ್ದು ಮೊದಲು..
ಪುಟ್ಟ ಅಕ್ಷರ ಲೋಕವೊಂದು ಸೃಷ್ಟಿಯಾದದ್ದು ಮೊದಲು….
ಯಾವುದೋ ಜೀವ ಒಂದೇ ಕರುಳಿನದು ಎನಿಸಿದ್ದು ಮೊದಲು…
ಎದೆಯಗೂಡಲಿ ಹೊಸತು ದೀಪ ಬೆಳಗಿದ್ದು ಮೊದಲು….
————————————————-
– ದೇವರಾಜ ಹುಣಸಿಕಟ್ಟಿ
ತುಂಬು ಹೃದಯದ ಧನ್ಯವಾದಗಳು ಸರ್.