“ಅಸ್ತಿತ್ವ” ಸಣ್ಣಕಥೆ ನಾಗರಾಜ ಬಿ.ನಾಯ್ಕ

ಎತ್ತರದ ಗುಡ್ಡದ ಮೇಲೆ ಸುತ್ತಲೂ ಕಾಣುವ ಸುಂದರ ನೋಟದ ಮಧ್ಯೆ ನಿಂತಿತ್ತು ಒಂದು ಮರ. ಅದರ ನೆರಳಿನಲ್ಲಿ ಪುಟ್ಟ ಪೆಟ್ಟಿಗೆ ಅಂಗಡಿ. ಸಣ್ಣಪುಟ್ಟ ಸಾಮಾನುಗಳನ್ನು  ಪ್ರೀತಿಯಿಂದ ನೀಡುವ ಒಂದು ಊರಿನ ಎಲ್ಲ ಮನೆಗಳ ಸಂಬಂಧವಾಗಿ ನಂಟನ್ನು ಬೆಳಸಿಕೊಂಡಿತ್ತು.  ಊರಿಗೆ ಯಾರೇ ಬಂದರೂ ಇಳಿಯುವುದು ಅದರ ಹತ್ತಿರವೇ .ಆ ಊರಿಗೆ ಆ ಅಂಗಡಿಯ ಕಾರಣದಿಂದಲೇ ಕೊನೆಯಂಗಡಿ ಎಂಬ ಹೆಸರು ಸೇರಿಕೊಂಡಿತ್ತು.  ಸಣ್ಣಜ್ಜ ಇದರ ನಡೆಸುವವ. ಅವನ ಹೆಸರು ಬೇರೆ ಇದ್ದರೂ ಅವನ ಆಕಾರದ ಕಾರಣದಿಂದಲೇ ಎಲ್ಲಾ ಕರೆಯುವುದು ಸಣ್ಣಜ್ಜನೆಂದು. ಸಣ್ಣಜ್ಜನ ಎಲ್ಲರೊಂದಿಗೆ ಸಣ್ಣವನಾಗಿ ಪ್ರೀತಿಯಲ್ಲಿ ಭರವಸೆಯಲ್ಲಿ ಬೇಕಾದವನಾಗಿ ಗುಣದಲ್ಲಿ ದೊಡ್ಡವನಾಗಿದ್ದ. ಮಾತ್ರವಲ್ಲ ಊರಿನ ಎಲ್ಲರ ಪ್ರತಿಬಿಂಬಿಸುವ ಕನ್ನಡಿಯಂತಿದ್ದ. ಆ ಊರಿಗೆ ಮೊದಲು ಬಸ್ ಬಂದಾಗ ಸಣ್ಣಜ್ಜನ ಹತ್ತಿರ ಕೇಳಿದರಂತೆ.” ಇಲ್ಲೆಲ್ಲಾದರೂ ಅಂಗಡಿ ಉಂಟೇ?” ಎಂದು ಸಣ್ಣಜ್ಜ ಇಲ್ಲ ಎಂದಾಗ ಅವರಿಗೆ ತುಂಬಾ ನೋವಾಗಿ ‘ಇಂದು ಊಟ ತಿಂಡಿ ಇಲ್ಲದೇ ಮಲಗಬೇಕಾಯಿತಲ್ಲ’ ಎಂದರಂತೆ. ಈ ಮಾತು ಕೇಳಿದಾಗ ಸಣ್ಣಜ್ಜನ ಕಣ್ಣಲ್ಲಿ ನೀರು ತುಂಬಿ ಬಂತಂತೆ. ನಮ್ಮ ಊರಿಗೆ ಮೊದಲು ಬಸ್ ತಂದವರು ನೀವು ಉಪವಾಸ ಇರುವುದೇ…. ತಡೆಯಿರಿ ಬಂದೆ ಎಂದು ಹೇಳಿ ಹೊರಟ ಸಣ್ಣಜ್ಜ. ಮನೆಗೆ ಬಂದು ತನಗೆ ಹಾಗೂ ತನ್ನ ಹೆಂಡತಿಗೆ ಮಾಡಿಟ್ಟ ಅನ್ನ ಸಾರು ಜೊತೆಗೆ ಉಪ್ಪಿನಕಾಯಿ ಸೇರಿಸಿ  ಒಂದಿಷ್ಟು ಮಡಿಕೆಯಲ್ಲಿ ಕಟ್ಟಿಕೊಂಡು ಬಂದು ಡ್ರೈವರ್ ಕಂಡಕ್ಟರ್ ಗೆ ನೀಡಿದಾಗ ಹಸಿದ ಜೀವಗಳೆರಡು ಹೊಟ್ಟೆ ತುಂಬಾ ಉಂಡವಂತೆ. ಆ ದಿನ ಸಣ್ಣಜ್ಜ ಮತ್ತು ಅವನ ಹೆಂಡತಿಗೂ ಉಪವಾಸವಂತೆ. ಆದರೂ ಇದ್ದ ಏನನ್ನೋ ತಿಂದು ಮಲಗಿದರಂತೆ ಅವರಿಬ್ಬರೂ. ಇದ್ದ ಕಟ್ಟೆಯಲ್ಲಿನ ದೇವರಿಗೆ ಕೈಮುಗಿದು ನಮ್ಮೂರಿಗೆ ಬಂದ ಬಸ್ಸನ್ನು ಹೇಗಾದರೂ ಮಾಡಿ ನೋಡುವ ಎನ್ನುವ ಧಾವಂತದಲ್ಲಿ ಓಡಿ ಬಂದವರೆಲ್ಲಾ ಬಸ್ಸನ್ನು ಮುಟ್ಟಿ ನೋಡಿ ಖುಷಿಪಟ್ಟರಂತೆ.  ಅದೊಂದು ಸ್ಮರಣೀಯ ದಿನವಾಗಿ ಊರಿನ ಎಲ್ಲರ ಮನದಲ್ಲಿ ಉಳಿಯಿತು. ಆದರೆ ಸಣ್ಣಜ್ಜನ ತಲೆಯಲ್ಲಿ ಮಾತ್ರ ಊರಿಗೆ ಅಂಗಡಿ ಇಲ್ಲವಲ್ಲ ಎನ್ನುವ ಚಿಂತೆ ಕಾಡುತ್ತಿತ್ತು. ಒಂದು ಊರಿಗೆ ಅಂಗಡಿ ಅಷ್ಟು ಮುಖ್ಯವೇ…. ಅವಶ್ಯಕವೇ….ನಾಳೆಯೇ ಒಂದು ಅಂಗಡಿ ತೆರೆದರೆ ಹೇಗೆ? ಮೂರು ಹೊತ್ತಿಗೆ ಬರುವ ಸಾಮಾನುಗಳನ್ನು ತಂದರೆ ಹೇಗೆ? ತನ್ನ ಊರಿಗೆ ಉಪಕಾರಿಯಾದರೆ ಹೇಗೆ? ಲಾಭದಾಸೆ ಎಳ್ಳಷ್ಟೂ ಇಲ್ಲವಾದರೂ ತನ್ನ ಊರಿನ ಜನರಿಗೆ ಸೇವೆಯಾಗಿ ಮಾಡುವ ಆಸೆ ಇತ್ತು ಸಣ್ಣಜ್ಜನಿಗೆ. ಹಲವರಿಗೆ ಹೇಳಿದರೂ ಯಾರು ಮನಸ್ಸು ಮಾಡಲಿಲ್ಲ. ತಾನೇ ಈ ಕೆಲಸ ಮಾಡಿದರೆ ಹೇಗೆ ?ಎಂದು ಯೋಚಿಸಿದ. ಮಲಗಿದ ಮೇಲೆ ಮಧ್ಯ ರಾತ್ರಿ ಕನಸಿನಲ್ಲಿ ಮನೆ ದೇವರ ಪಲ್ಲಕ್ಕಿ ಒಂದು ಬಂದು ಬಸ್ಸು ನಿಲ್ಲುವ ಜಾಗದಲ್ಲಿನ ಹತ್ತಿರದ ಒಂದು ಮರದಲ್ಲಿ ಒಂದು ಸುತ್ತು ಹಾಕಿ ಹೋದಂತೆ ಕನಸು ಬಿತ್ತು ಸಣ್ಣಜ್ಜನಿಗೆ . ಆಗ ಸರಿಯಾಗಿ ಬೆಳಗಿನ ಜಾವ. ದೇವರೇ ಕನಸಿನಲ್ಲಿ ಬಂದು ತಾರ್ಕಣಿ ಕೊಟ್ಟಿದ್ದು ಸಣ್ಣಜ್ಜನಿಗೆ ಖುಷಿಕೊಟ್ಟಿತ್ತು. ಮನೆಯಲ್ಲಿ ಸಾಕಿದ್ದ ಹುಂಜ ಯಂಕ ಕೂಗಲು ಶುರು ಮಾಡಿದ್ದ. ಹಳ್ಳಿಯ ಗಡಿಯಾರದಂತಿದ್ದ ಸಣ್ಣಜ್ಜನ ಕೋಳಿ ಎಲ್ಲರನ್ನೂ ಬೇಗನೇ ಎಬ್ಬಿಸಿ ಉದಯದರಿವ ಎಚ್ಚರಿಸುತ್ತಿತ್ತು. ಕೋಳಿ ಕೂಗಿ ಎದ್ದು ಹೆಂಡತಿಗೆ ಚಾ ಮಾಡಲು ಹೇಳಿ ಮನೆಯ ಆಕಳಾದ ಗಂಗೆಗೆ ಹುಲ್ಲು ಹಾಕಿ ಹಾಲು ಕರೆದು ಹೆಂಡತಿ ಮಾಡಿಟ್ಟ ಎರಡು ಪೇಲಿ ಚಾ  ಸ್ವಲ್ಪ ರೊಟ್ಟಿಯನ್ನು ಬಸ್ಸಿನ ಕಂಡಕ್ಟರ್ ಡ್ರೈವರಗೆ ಪ್ರೀತಿಯಿಂದ ನೀಡಿದಾಗಲೇ ಸಣ್ಣಜ್ಜನಿಗೆ ಸಮಾಧಾನ ಆಯಿತಂತೆ. ಬೆಳಗಿನ ಜಾವ ಹೊರಡುವ ಬಸ್ಸು ತಯಾರಾಗಿ ನಿಂತಿತ್ತು. ಕೆಲವರು ಬಸ್ಸಿಗೆ ನೀರು ಹಾಕಿ ತೊಳೆದರು. ಇನ್ನು ಕೆಲವರು ಕೈ ಮುಗಿದರು. ಬೆಳಿಗ್ಗೆ ಬೇಗನೆ ಹೊರಡಬೇಕಿದ್ದ ಬಸ್ಸಿಗೆ ತಯಾರಾಗಿ ಕುಳಿತಿದ್ದ ಡ್ರೈವರ್ ಕಂಡಕ್ಟರ್ರಿಗೆ ಕುಡಿಯಲು ಚಾ ಕೊಟ್ಟು ಬಸ್ಸಿಗೆ ನಮಸ್ಕಾರ ಮಾಡಿ ಊರಿಗೆ ಮೊದಲು ಬಾರಿ ಬಂದ ಬಸ್ಸಿಗೆ ಕೈ ತೋರಿಸಿ ಕಳಿಸಿಕೊಟ್ಟನಂತೆ ಸಣ್ಣಜ್ಜ. ಸಣ್ಣಜ್ಜನೊಟ್ಟಿಗೆ ಆ ಊರಿನ ಹಿರಿಯರು ಕಿರಿಯರು ಎಲ್ಲರೂ ಸೇರಿ ಕೈಬೀಸಿ ತಮ್ಮ ಊರಿಗೆ ಬಂದ ಮೊದಲ ಬಸ್ಸನ್ನ ಸಂತೋಷದಿಂದ ಕಳಿಸಿಕೊಟ್ಟರಂತೆ. ಅಂದಿನಿಂದ ಸಣ್ಣಜ್ಜನಿಗೆ ಊರಿಗೆ ಬಸ್ಸು ಬರುವ ಹೋಗುವ  ಅದರ ಸಮಯ ಎಲ್ಲವೂ ತಿಳಿದಿತ್ತು. ಅದೇ ದಿನ ನಾಲ್ಕು ಕಂಬಗಳ ತಂದು ಮೇಲೆ ಹಾಕಲು ತೆಂಗಿನ ಗರಿಗಳ ತಂದು ಹಾಕಿ ಮಣ್ಣು ಕಲ್ಲು ಹಾಕಿ ನೆರಳು ಮಾಡಿಕೊಂಡನಂತೆ ಸಣ್ಣಜ್ಜ. ಊರಿನ ಹಿರಿಯವನಾಗಿ ಎಲ್ಲರಿಗೂ ಬೇಕಾದ ಚಿಕ್ಕ ಅಂಗಡಿಯ ಕಟ್ಟಿಸಿದನಂತೆ. ಅವನಿಗೆ ಎಲ್ಲರೂ ಸೇರಿ ಸಹಾಯ ಮಾಡಿದರಂತೆ. ಅಲ್ಲಿಯೇ ಚಿಕ್ಕ ದೇವರ ಗುಡಿ ಮಾಡಿ ಮಣ್ಣು ಕಲ್ಲುಗಳ ಒಂದರ ಮೇಲೆ ಒಂದರಂತೆ ಜೋಡಿಸಿ ಇಟ್ಟರಂತೆ. “ನಂಬಿಕೆ ಭರವಸೆ ಇವು ಎಲ್ಲಿದ್ದರೂ ಅಲ್ಲಿ ಒಂದು ಹೊಸ ಸೃಷ್ಟಿಯಾಗುತ್ತದೆಯಂತೆ” ಬೋಳುಗುಡ್ಡವಾಗಿದ್ದ ಜಾಗವೀಗ ದೇವರ ಗುಡಿಯಾಗಿ ಬಸ್ಸು ನಿಲ್ಲುವ ಜಾಗವಾಗಿ ಅವತರಿಸಿದ್ದು ಊರಿನ ಎಲ್ಲರಿಗೂ ಹೆಮ್ಮೆ ಮೂಡಿಸಿತು. ಊರಿಗೆ ದಿನ ಉಳಿಯಲು ಬರುವ ಬಸ್ಸನ್ನು ಒಮ್ಮೆ ನೋಡಿ ಹೋಗುವ ರೂಢಿ ಆ ಊರಿನ ಚಿಕ್ಕ ಮಕ್ಕಳಿಂದ ಮುದುಕರವರೆಗೆ ಒಂದು ಸಮಾಧಾನದ ಕೆಲಸವಾಗಿತ್ತು. ಅದರ ಡ್ರೈವರ್ ಕಂಡಕ್ಟರ್ರನ್ನು ಕಂಡು ತಮ್ಮ ಮನೆಯವರಂತೆ  ಮಾತನಾಡದೇ ಹೋದರೆ ಅಲ್ಲಿಯ ಜನರಿಗೆ ನಿದ್ದೆ ಬರುತ್ತಿರಲಿಲ್ಲ. ಆ ಊರಿಗೆ ದಿನವೂ ಬರುವ ಬಸ್ಸೊಂದು ಊರಿನ ಪ್ರತಿಷ್ಠೆಯಾಗಿ ದಿನವೂ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಬಾಂಧವ್ಯವಾಗಿ ಒಂದು ಸಂಭ್ರಮವಾಗಿ ದಿನವೂ ಬಂದು ನಿಲ್ಲುತ್ತಿತ್ತು. ಸಣ್ಣಜ್ಜನಿಗೂ ಹಾಗೆ ದಿನವೂ ಬರುವ ಹೋಗುವ ಜನರನ್ನ ಕಂಡು ಮನೆ ಮಂದಿಯೆಲ್ಲಾ ಒಟ್ಟಿಗೆ ಇದ್ದಾರೆಂಬ ಖುಷಿಯೊಟ್ಟಿಗೆ  ನೂರು ಮಾತುಗಳು ಅವನಿಗೆ ಉಪಕರಿಸಿ ಊಟ ಉಪಚಾರದ ಚಾ ತಿಂಡಿಯೊಟ್ಟಿಗೆ ಹೊಟ್ಟೆಯ ತಣ್ಣಗಿರಿಸಿ ಮಡಿಕೆಯಲ್ಲಿನ ತಣ್ಣೀರ ಕುಡಿದು ಮನೆಗೆ ಬಂದರೆ ಕಣ್ಣಿಗೆ ಸುಖ ನಿದ್ದೆ ಬೀಳುತ್ತಿತ್ತು .

       ಸಣ್ಣಜ್ಜನ ಅಂಗಡಿಯೊಂದು ಅಂಗಡಿಯಂತೆ ತೋರದೆ ಊರಿನವರಿಗೆಲ್ಲ ಒಂದು ದೇಗುಲದಂತೆ, ಮನೆಯಂತೆ ಕಂಡಿದ್ದು ಉಂಟು, ಊರಿನ ಎಲ್ಲರಿಗೂ ನಿಲ್ಲುವ, ಕುಳ್ಳುವ ಜಾಗವಾಗಿ ಸಣ್ಣಜ್ಜನ ಪುಟ್ಟ ಅಂಗಡಿ ಇತ್ತು. ಊರಿನ ಮಕ್ಕಳಿಗೆ ಕಲಿಯಲು ಬೇಕಾದ ಶಾಲೆಯ ವಿಚಾರವೂ ಅಲ್ಲಿಂದಲೇ ಹುಟ್ಟಿ ಸುಂದರ ಶಾಲೆಯು ಮನೆಯಂತೆ ತಲೆಯೆತ್ತಿ ನಿಂತಿತ್ತು. ಊರಿನ ಎಲ್ಲಾ ಮನೆ ಮನಸ್ಸುಗಳ ನೋವು, ನಲಿವು, ಮದುವೆ, ನಾಮಕರಣ, ಗದ್ದೆಯ ನೆಟ್ಟಿ, ಊರ ದೇವರ ಪೂಜೆ ಹೀಗೆ ಊರಿನ ಎಲ್ಲವೂ ತಿಳಿಸುವ ಶಕ್ತಿಯಾಗಿ ಸಣ್ಣಜ್ಜನ ಅಂಗಡಿ ಕಾಣಿಸುತ್ತಿತ್ತು. ಎಲ್ಲರೂ ಅಲ್ಲಿ ಬೆಲ್ಲದವಲಕ್ಕಿ ತಿಂದು ಚಾ ಕುಡಿದು ದೋಣಿಗೋ ಗದ್ದೆಗೋ  ಹೋಗುವುದು ರೂಢಿ. ಇದ್ದರೆ ಕಾಸು ಕೊಡುವರು ಇಲ್ಲದಿದ್ದರೆ ನಾಳೆ ಕೊಡುವೆ ಎಂದು ಹೇಳಿ ಹೋಗುವರು. ಯಾರಿಗೂ ಇಲ್ಲವೆನ್ನಲಾರ ಸಣ್ಣಜ್ಜ. ಯಾರು ಕೊಡದಿದ್ದರೂ ಚಿಕ್ಕದಾಗಿ ಕೇಳುವವನಲ್ಲ. ಅದೇ ಗುಣಕ್ಕೆ ಯಾರು ಕೊಡದೇ ಇರುತ್ತಿರಲಿಲ್ಲ. ಇಲ್ಲದಿದ್ದರೆ ತಮ್ಮಲ್ಲಿರುವ ಯಾವುದೋ ಒಂದು ವಸ್ತು ನೀಡಿ ಅವನ ಋಣ ತೀರಿಸುತ್ತಿದ್ದರು. ಅಷ್ಟೇ ಅಲ್ಲ ಅಂಗಡಿಯಲ್ಲಿ ಏನೇ ಇಟ್ಟರೂ ಅದು ಜೋಪಾನವಾಗಿದ್ದು ಸೇರಬೇಕಾದವರಿಗೆ ಸೇರುತ್ತಿತ್ತು. ಅದೊಂದು ನಂಬಿಕೆ ಶಾಶ್ವತವಾಗಿತ್ತು. ಊರಿನ ಹಿರಿ ಕಿರಿಯಾದಿಯಾಗಿ ಎಲ್ಲರೂ ಸೇರಿ ಸಣ್ಣಜ್ಜನ ಅಂಗಡಿಯಲ್ಲಿ ಸಾಮಾನು ಖರೀದಿಸಿ ಬೇಕಾದ ಸಾಮಾನುಗಳ ಕೊಂಡೊಯ್ಯುತ್ತಿದ್ದರು. ಮನೆಗೆ ಹಬ್ಬ ಹುಣ್ಣಿಮೆ ಬಂತೆಂದರೆ ಬಸ್ಸಿಗೆ ಬರುವವರು ಹೋಗುವವರು ಜಾಸ್ತಿ ಇರುತ್ತಿತ್ತು. ನಂಬಿಕೆ, ಪ್ರೀತಿ ,ಭರವಸೆ ತನ್ನವರೆಂಬ ಕಾಳಜಿ ಎಲ್ಲವೂ ಸಣ್ಣಜ್ಜನಲ್ಲಿ ಮನೆ ಮಾಡಿದ್ದರಿಂದ ಸಣ್ಣಜ್ಜ ಊರಿನ ಆಸ್ತಿಯಾಗಿದ್ದ. ಎಲ್ಲರ ಮಾತಿನ ದನಿಯಾಗಿದ್ದ. ಎಲ್ಲರ ನೋವಾಗಿದ್ದ. ಎಲ್ಲರ ಮನೆಯ ಮನುಷ್ಯನಾಗಿದ್ದ. ಊರಿನ ಶಾಲೆ ,ಆಸ್ಪತ್ರೆ ,ಬ್ಯಾಂಕ್, ಕಚೇರಿ, ಗ್ರಂಥಾಲಯ ಹೀಗೆ ಊರಿನ ಎಲ್ಲವಕ್ಕೂ ಈ ಅಂಗಡಿ ಒಂದು ಆಧಾರವಾಗಿ ಸಾಕ್ಷಿಯಾಗಿ ಉಳಿದು ಊರು ಬೆಳೆಯಿತು. ಕಾಲ ಕಳೆಯಿತು. ಮಕ್ಕಳು ವಿದ್ಯಾವಂತರಾದರು. ಮನೆಗಳು ಅರಮನೆಗಳಾದವು. ಸಣ್ಣಜ್ಜ ಮಾತ್ರ ಊರಿಗಾಗಿ ಊರಿನ ಜನರಿಗಾಗಿ ಎಲ್ಲವನ್ನು ದಾನ ಮಾಡಿದ ತ್ಯಾಗಿಯಾದ. ಊರ ಜೊತೆಗೆ ಸ್ವಾರ್ಥವಿಲ್ಲದೇ ನಿಂತ ಒಳಿತಿಗಾಗಿ ಎಲ್ಲರ ಒಳಿತಿಗಾಗಿ.  ಮಕ್ಕಳಿಲ್ಲದ ಸಣ್ಣಜ್ಜ ಊರು ಸ್ವರ್ಗವಾಗಿದೆ ಎಂದು ಸಂಭ್ರಮಿಸಿದ.
            ಹಿರಿಯರೆಲ್ಲ ತಮ್ಮ ಕಾಲ ಕಳೆದು ಹೊಸ ತಲೆಮಾರಿನ ಹೊಸಬರು ಉತ್ಸಾಹಿಗಳು ತಲೆಯೆತ್ತಿದರು. ಲಾಭದ ಆಸೆಯು ತಾನಾಗೆ ಹೆಚ್ಚಿತು. ದುಡಿಯದೇ ಬದುಕುವ, ಹಣ ಮಾಡುವ ಲಾಭದ ಆಸೆಗೆ ಇದ್ದ ಭೂಮಿ ಮಾರುವ, ದೂರದೂರಿನ ಸಾಹುಕಾರನಿಗೆ ಸಹಾಯ ಮಾಡುವ ಜನರ ಒಂದು ಗುಂಪು ಸೃಷ್ಟಿಯಾಯಿತು. ಎಷ್ಟೇ ತಿಳಿ ಹೇಳಿದರು ಬುದ್ಧಿ ಮಾತುಗಳು ಗಾಳಿಯಲ್ಲಿ ಮಾತ್ರ ಪ್ರತಿಧ್ವನಿಸಿ ಜನರ ಕಿವಿಗೆ ತಲುಪದೇ ಸಣ್ಣಜ್ಜ ಸುಮ್ಮನಾಗುವ ಮಟ್ಟಕ್ಕೆ ಸಾಗಿತು. ತಾನಾಯಿತು ತನ್ನ ಅಂಗಡಿ ಆಯಿತು ಎಂದು ಸುಮ್ಮನೇ ಉಳಿದ ಸಣ್ಣಜ್ಜ. ಕೃಷಿ ಭೂಮಿಗಳು ಪಾಳು ಬಿದ್ದವು. ಯಾರೋ ಬಂದು ಮಾತನಾಡಿಸುವರು, ಏನೇನೋ ಕೇಳುವರು, ಅದೇನೋ  ಊರು ಬೆಳೆಯುವುದು ಎಂದರು. ಊರನ್ನು ಬೆಳೆಸಿದವ ನೀನೇ ಎಂದರು. ಇದೆಲ್ಲದರ ನಡುವೆ ಸಣ್ಣಜ್ಜ ಸದ್ದಿಲ್ಲದೇ ಮಾಡಿದ ದೊಡ್ಡ ಕೆಲಸವೊಂದು ಊರಿಗೆ ಅವನಿಗೆ ಖುಷಿ ಕೊಟ್ಟಿತ್ತು . ತನ್ನ ಅಂಗಡಿಯ ಸುತ್ತಲೂ ಇರುವ ಖಾಲಿ ಜಾಗದಲ್ಲಿ ಅವನು ಬೆಳೆಸಿದ ಆಲ, ಅರಳಿ, ನೇರಳೆ, ಹಲಸು ಮರದ ತೋಪೊಂದು ತಲೆಯೆತ್ತಿ ನಿಂತಿತ್ತು. ಸಾವಿರ ಮರಗಳ ನೆರಳು ಚಂದದಿ ನಿಂತು ನೋಡುವ ನೋಟವನ್ನು ತೆರೆದಿಟ್ಟು ಸಂತೃಪ್ತವಾಗುತ್ತಿತ್ತು. ಹಕ್ಕಿಗಳ ಚಿಲಿಪಿಲಿ, ತಂಪಾದ ಗಾಳಿ, ಹಚ್ಚನೆಯ ಹಸಿರು ಎಲ್ಲವೂ ಅಲ್ಲಿ ಸಿಗುತ್ತಿತ್ತು.  ದಿನಗಳಂತೆ ಸಣ್ಣಜ್ಜನ ಅಂಗಡಿ ಈಗ ಮಂಕಾಗಿ ಕ್ರಶವಾಗಿತ್ತು. ಆಚೆ ಈಚೆ ದೊಡ್ಡ ದೊಡ್ಡ ಅಂಗಡಿಗಳು ದೊಡ್ಡ ದೊಡ್ಡ ಹೋಟೆಲ್ಗಳು ತಲೆ ಎತ್ತಿದವು. ಹಳೆಯ ರೂಪಿನ ಅಂಗಡಿಗೆ ಬರಲು ಜನ ಹಿಂದೇಟು ಹಾಕಿದರು. ಕಾಲ ಬದಲಾದಂತೆ ಜನರೂ ಬದಲಾದರು. ಯೋಜಿಸುವವರು ಹೆಚ್ಚಾದರು. ಊರಿನ ಸಮಸ್ಯೆಗಳು ಜಾಸ್ತಿ ಆದವು. ಬಡತನದ ಗಂಜಿಗೆ ತೃಪ್ತಿ ಇತ್ತು. ತಾಳ್ಮೆ ಇತ್ತು. ನೆಮ್ಮದಿ ಇತ್ತು. ಹೊಂದಿಕೊಂಡು ಹೋಗುವ ಕಾಳಜಿಯಿತ್ತು. ಇಂದು ಎಲ್ಲಾ ಇದೆ ಆದರೆ ಏನು ಇಲ್ಲದಂತೆ ಎಂಬ ಮಾತು ಸಣ್ಣಜ್ಜನ ಗಂಟಲಿನಿಂದ ಹೊರಬರಲಾರದೇ ಹಾಗೆ ಉಳಿಯಿತು. ಅದರಲ್ಲಿ ಊರಿನ ಅಭಿವೃದ್ಧಿ ಎಂದು ಕೆಲವರು ಸಣ್ಣಜ್ಜನ ಅಂಗಡಿ  ತೆಗೆಯಲು ಮುಂದಾದರೆ ಇನ್ನು ಕೆಲವರು ಸಣ್ಣಜ್ಜನ ಅಂಗಡಿ ತೆಗೆಯದಂತೆ ಪರವಾಗಿ ನಿಂತರು. ತನ್ನ ನೆಲೆಯೊಂದು ಊರಿನ ಹಲವಾರು ಪ್ರತಿಷ್ಠೆಯ ವಿಷಯವಾಗಿದ್ದು ಕಂಡು  ಊರು ಒಡೆಯಬಾರದು ಎಂದು ಸುಮ್ಮನಾಗಿಬಿಟ್ಟ ಸಣ್ಣಜ್ಜ. ಹೇಗೋ ಒಂದು ಗುಂಪು ಸಣ್ಣಜ್ಜನ ಅಂಗಡಿಯನ್ನ  ತೆಗೆಯಲೇಬೇಕು ಎಂದು ಹಠ ಕೊಟ್ಟಂತೆ ಪ್ರಯತ್ನ ಮಾಡಿ ಅಂಗಡಿಯನ್ನು ತಾನಾಗೆ ಬೀಳುವಂತೆ ಮಾಡಲಾಯಿತು. ಅಂಗಡಿ ನೆಲಕ್ಕೆ ಉರುಳಿತು. ಅದರೊಂದಿಗೆ ಸಣ್ಣಜ್ಜನ ಬದುಕು. ಅದೇ ನೋವಿನಲ್ಲಿ ಸಣ್ಣಜ್ಜನ ಹೆಂಡತಿ ಮರುಗಿ ಆಸ್ಪತ್ರೆ ಸೇರಿದಳು. ರೋಗಕ್ಕೆ ಔಷಧಿ ಉಪಚಾರ ಮಾಡಿ ಗುಣಮುಖಳಾದಳು. ಆದರೂ ಮನಸ್ಸಿಗೆ ಆದ ಗಾಯಕ್ಕೆ ಔಷಧಿ ಇರಲಿಲ್ಲ. ಅದೇ ನೋವಿನಲ್ಲಿ ಅವಳು ಕಣ್ಣು ಮುಚ್ಚಿದಳು. ಹೆಂಡತಿ ಸತ್ತ ಮೇಲೆ ಸಣ್ಣಜ್ಜ ಒಂಟಿಯಾದ. ಅನೇಕ ಹಿರಿಯರು ಇದ್ದರೂ ಅವರವರ ಸಮಸ್ಯೆಗಳು ಅವರಿಗೆ ಇದ್ದವು. ಆದರೂ ಬಂದು ಕುಳಿತು ನಾಲ್ಕು ಸಮಾಧಾನದ ಮಾತು ಆಡಿ ಹೋಗುತ್ತಿದ್ದರು.  ಎಷ್ಟೇ ಅಂದರೂ ಸಣ್ಣಜ್ಜನ ಊರು ಈಗ ಊರಾಗಿ ಇರಲಿಲ್ಲ. ಸಂಜೆಯಾದರೆ ಸಾಕು ಜಗ ಮಗಿಸುವ ದೀಪಗಳು, ಬಣ್ಣ ಬಣ್ಣದ ಕಾರುಗಳು ಅದರಲ್ಲಿ ಬರುವ ಜನರು ನೆಮ್ಮದಿ ಇಲ್ಲದ ಮುಖಗಳು ಇವುಗಳು ಎಲ್ಲೆಡೆಯೂ ಕಾಣಿಸುತ್ತಿತ್ತು. ಯಾರು ಆಗದವರೆಂದರು ಸಣ್ಣಜ್ಜನ ತಲೆ ಸರಿ ಇಲ್ಲವೆಂದರು. ಈ ನಡುವೆ ಸಣ್ಣಜ್ಜ ನೆಟ್ಟು ಬೆಳಿಸಿದ ಗಿಡಮರಗಳ ನೆರಳಿಗಾಗಿ ಹೀಗೆ ಬಂದವರು ಇವರ ಬಗ್ಗೆ ಕೇಳಿದರಂತೆ. ಊರಿನವರು ಯಾರು ಸಣ್ಣಜ್ಜನ ಬಗ್ಗೆ ಹೇಳಿದರಂತೆ. ಅವನ ಮಹತ್ಕಾರ್ಯದ ಬಗ್ಗೆ ತಿಳಿಸಿಕೊಟ್ಟರಂತೆ. ವಿಷಯ ಎಲ್ಲಿಂದಲೋ ಎಲ್ಲಿಗೂ ತಲುಪಿ ನೋಡಿದವರ ಆಡಿದವರ ಹಾರೈಕೆಯಂತೆ ಒಂದು ಪ್ರಶಸ್ತಿ ಸಣ್ಣಜ್ಜನನ್ನು ಅರಸಿಕೊಂಡು ಬಂತಂತೆ. ಅವನ ಅಪ್ತರೆಲ್ಲ ಸೇರಿ ಪ್ರಶಸ್ತಿಯನ್ನು ಸ್ವೀಕರಿಸಲು ಅವನ ಕರೆದುಕೊಂಡು ಹೋದರಂತೆ. ಪಟ್ಟ ಶ್ರಮಕ್ಕೆ ಬಂದ ಗೌರವ ಕಂಡು ಸಣ್ಣಜ್ಜನ ಮನಸ್ಸು ಸಂತೃಪ್ತವಾಯಿತಂತೆ. ಊರಿನಲ್ಲಿ ಮತ್ತೊಮ್ಮೆ ಮನೆ ಮಾತಾಗಿ ಎಲ್ಲರ ಬಾಯಲ್ಲಿ ಉಳಿದ ಸಣ್ಣಜ್ಜ. ಮಾಡುವ ಕಾರ್ಯಗಳು ಒಳ್ಳೆಯದಾದಾಗ ಅನೇಕ ದಿನಗಳವರೆಗೆ ಅದರ ಉಪಯೋಗಗಳು ಜೀವಂತವಾಗಿರುತ್ತದೆ ಎನ್ನುವ ಮಾತುಗಳು ಸಣ್ಣಜ್ಜನಿಂದ ಇತರರಿಗೆ ಒಂದು ಸ್ಪೂರ್ತಿಯಾಗಿ ಸಂಚಲಿಸಿತು. ಸನ್ಮಾನ, ಅಭಿನಂದನೆಗಳು ಸಾಕಷ್ಟು ಬಂದು ಹೋದವು. ಸಣ್ಣಜ್ಜನ ಸ್ಥಿತಿ ಮಾತ್ರ ಸಣ್ಣದಾಗುತ್ತಾ ಬಂತು. ಊಟ  ಮಾಡಲು ಆಗುತ್ತಿರಲಿಲ್ಲ. ದೇಹದ ಎಲ್ಲೋ ಒಂದು ಕಡೆ ತೀವ್ರ ನೋವು ಕಾಡುತ್ತಿತ್ತು. ಆಗಾಗ ಕಣ್ಣು ಮಂಜಾಗುತ್ತಿತ್ತು. ಬಂದ ಪ್ರಶಸ್ತಿಯ ಮೊತ್ತದ ಮೇಲೆ ಎಲ್ಲರ ಕಣ್ಣಿತ್ತು. ಇದರ ಸದುಪಯೋಗದ ಬಗ್ಗೆ ಸಣ್ಣಜ್ಜ ಯೋಚಿಸಿ ಊರಿನ ಬೇರಾಗಿರುವ ಶಾಲೆಗೆ, ಆಸ್ಪತ್ರೆಗೆ ದಾನ ಮಾಡಲು ಯೋಚಿಸಿದ. ಇನ್ನೇನು ತಾನು ಬದುಕಿ ಉಳಿಯಲಾರೆ ಎಂದುಕೊಂಡ. ಹೆಚ್ಚಿನ ಸಮಯ  ತಾನು ಬೆಳೆಸಿದ ಮರದ ನೆರಳಿನಲ್ಲಿ ಕಾಲ ಕಳೆದ. ಹೆತ್ತು ಹೊತ್ತು ಸಾಕಿದ  ಮಕ್ಕಳಿಗಿಂತ ಹೆಚ್ಚು ಖುಷಿಯನ್ನು ಈ ಮರಗಳು ಕೊಟ್ಟವು. ಎತ್ತರಕ್ಕೆ ತಲೆಯೆತ್ತಿ ನಿಂತ ಮರಗಳು ಸಗ್ಗದ ಖುಷಿಯ ಅನುಭವವನ್ನು ಕೊಟ್ಟವು. ಯಾರೋ ಊಟ ತಿಂಡಿ ಕೊಟ್ಟರು. ಯಾರೋ ಕುಡಿಯಲು ನೀರು ಕೊಟ್ಟರು. ಕೊನೆಗೊಮ್ಮೆ ತಾನು ಬೆಳೆಸಿದ ಹೆಮ್ಮರದ ನೆರಳಿನಲ್ಲಿ ಮಲಗಿರುವಾಗ ಬೀಸಿದ ತಂಗಾಳಿಯಲ್ಲಿ ಸಣ್ಣಜ್ಜನ ಉಪಕಾರಿ ಉಸಿರು ಲೀನವಾಯಿತು. ಸಣ್ಣಜ್ಜ ಎಂಬ ವ್ಯಕ್ತಿಯ ಶಾಂತ ಸಮಚಿತ್ತದ ಸಮಭಾವದ ವ್ಯಕ್ತಿತ್ವ ಪೂರ್ಣ ಸಾರ್ಥಕತೆಯೊಂದಿಗೆ ಒಂದು ಉಸಿರಿಲ್ಲದ ಜೀವವಾಗಿ ಮಲಗಿತ್ತು. ಊರಿನವರೆಲ್ಲರ ಅಕ್ಕರೆ ಪ್ರೀತಿ ಸಹಕಾರದಿಂದ ಸಣ್ಣಜ್ಜನ ದೇಹ ಪಂಚಭೂತಗಳಲ್ಲಿ ಸೇರಿ ಲೀನವಾಯಿತು. ಬರಿ ಕೈಲಿ ಬಂದು ಬರಿಗೈಲಿ ಹೋಗುವ ಜೀವನದ ನಡುವೆ ಇರುವ ಅಲ್ಪಸಮಯದಲ್ಲಿ ಎಲ್ಲರ ಬದುಕಿನಲ್ಲಿ ಉಳಿದು ಹೋಗುವ ಸಣ್ಣಜ್ಜನ ನೆನಪು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಿತು. ಬೆಳೆಸಿದ ಗಿಡ ಮರದಲ್ಲಿ ಸಣ್ಣಜ್ಜನೆಂಬ ವ್ಯಕ್ತಿತ್ವದ ಅಸ್ತಿತ್ವ ತಂಗಾಳಿಯಾಗಿ ಬೀಸುತ್ತಲೇ ಇತ್ತು ಮತ್ತೆ ಮತ್ತೆ…….


9 thoughts on ““ಅಸ್ತಿತ್ವ” ಸಣ್ಣಕಥೆ ನಾಗರಾಜ ಬಿ.ನಾಯ್ಕ

  1. ದಶಕಗಳ ಹಿಂದೆ ಹಳ್ಳಿಯ ಜೀವನ ಹೇಗೆ ಇರುತಿತ್ತು ,ಎನ್ನುವ ನೈಜ ಚಿತ್ರಣ , ಕಥೆಯೊಂದಿಗೆ ತೆರೆದು ಕೊಳ್ಳುತ್ತಾ ಹೋಗುತ್ತದೆ. ಸಣ್ಣಜ್ಜನೆಂಬ ಕಥಾ ನಾಯಕನ ಪಾತ್ರ ಅತ್ಯುತ್ತಮವಾಗಿ ನೈಜವಾಗಿ ಮೂಡಿ ಬಂದಿದೆ. ಆಧುನಿಕ ಭರಾಟೆಯಲ್ಲಿ ಹಳ್ಳಿಯ ಜೀವನ ಹೇಗೆ ಚಿದ್ರ ಚಿದ್ರವಾಗುತ್ತಿದೆ ಎನ್ನುವುದು ಅತ್ಯಂತ ಸುಂದರವಾಗಿ ಮೂಡಿ ಬಂದಿದೆ ಹಣದ ವ್ಯಾಮೋಹ ಏನರನ್ನ ಹೇಗೆ ಬಲಿ ಹಾಕುತ್ತಿದೆ ಎನ್ನುವುದು ಅರ್ಥ ಮಾಡಿಕೊಳ್ಳಬೇಕಿದೆ ಹಸಿರು ಗಿಡಮರಗಳೊಂದಿಗೆ ಬದುಕುವ ಶಿವನ ಶೈಲಿ ಮರೆಯಾಗುತ್ತಿರುವುದು ವಿಷಾಧಕರವಾಗಿದೆ ಆಧುನಿಕರಣದ ಹೆಸರಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಹಳ್ಳಿಯ ಅಸ್ತಿತ್ವ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತದೆ

    ನಾಗರಾಜ ಜಿ. ಎನ್. ಬಾಡ
    ಕುಮಟ.

    1. ನಿಜ್ವಾಗ್ಲು…… ತುಂಬಾ ಚೆನ್ನಾಗಿ ಮೂಡಿ ಬಂದಿದೆ

  2. ಕಥೆ ಓದುಗರ ಕಣ್ಣು ಕಟ್ಟುವಂತೆ ಮೂಡಿದೆ. ನಾನೂ ಒಮ್ಮೆ sannajjana ಊರಿಗೆ ಹೋಗಿ ಬಂದೆ. ತುಂಬಾ ಚೆನ್ನಾಗಿ ಮೂಡಿ bandide.

  3. ತಮ್ಮೆಲ್ಲರ ಆತ್ಮೀಯ ಓದಿಗೆ ತುಂಬಾ ತುಂಬಾ ಧನ್ಯವಾದಗಳು. ಅವಕಾಶಕ್ಕಾಗಿ ಸಂಗಾತಿ ಬಳಗಕ್ಕೆ ತುಂಬಾ ತುಂಬಾ ಧನ್ಯವಾದಗಳು………

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ
    ಕುಮಟಾ.

Leave a Reply

Back To Top