ಡಾ.ಎಚ್ ಎಸ್ ಸತ್ಯನಾರಾಯಣ ಕೃತಿ “ಬಿದಿರ ತಡಿಕೆ” ಒಂದು ಅವಲೋಕನ ನಾಗೊಂಡಹಳ್ಳಿ ಸುನಿಲ್

ಕೃತಿ – ಬಿದಿರ ತಡಿಕೆ
ಪ್ರಕಾರ – ಲಲಿತ ಪ್ರಬಂಧಗಳು
ಪ್ರಕಟಣೆ – 2023
ಬೆಲೆ – 150
ಮಿಂಚುಳ್ಳಿ ಪ್ರಕಾಶನ
#184, 6ನೇ ತಿರುವು, ಇಂದಿರಾ ಬಡಾವಣೆ,
ಶಿವಮೊಗ್ಗ.
ಮೊ- 9591367320

ನೋಡಿದ್ದನ್ನು ನೋಡಿದ ಹಾಗೆಯೇ ಹೇಳುವುದು,
ನೋಡಿದ್ದನ್ನು, ಅನುಭವಿಸಿದ್ದನ್ನು ಕಾಡುವ ಹಾಗೆಯೇ ರಸವಾತ್ತಾಗಿ ವಿವರಿಸುವುದು ಸಾಮಾನ್ಯದ ಸಂಗತಿಯಲ್ಲ ಅದು ಎಲ್ಲರಿಗೂ ದಕ್ಕುವುದು ಇಲ್ಲ, ದಕ್ಕಿದರೂ ಎಲ್ಲರಿಗೂ ಅದು ರುಚಿಸುವುದಿಲ್ಲ.
ನೆನಪಿನ ದಿನಗಳ ಆರಂಭದಿಂದ ಇಲ್ಲಿಯ ತನಕ ಸುಪ್ತವಾಗಿ ಅಸ್ತವ್ಯಸ್ತವಾಗಿ ಕುಳಿತ ಲೋಕಾನುಭವಗಳ ಸಂಗತಿಗಳಿಗೆ ಮೂರ್ತರೂಪ ಕೊಟ್ಟು ಅದಕ್ಕೊಂದು ನವಿರಾದ ಭಾಷೆಯನ್ನಿತ್ತು ಓದುಗರಿಗೆ ರಸವತ್ತಾಗಿ, ಹಿತವಾಗಿ ರುಚಿಸುವಂತೆ ಹದಗೊಳಿಸಿ ಅಣಿಗೊಳಿಸುವ ಶಕ್ತಿ
 ಡಾ. ಎಚ್ ಎಸ್ ಸತ್ಯನಾರಾಯಣ ಸರ್ ಅವರ ಬರಹಕ್ಕಿದೆ.
ಇತ್ತೀಚಿಗಷ್ಟೇ ಬಿಡುಗಡೆಗೊಂಡ ‘ಬಿದಿರ ತಡಿಕೆ’ ಲಲಿತ ಪ್ರಬಂಧಗಳು ನಾಡಿನಾದ್ಯಂತ ಸಂಚಲನ ಮೂಡಿಸುತ್ತಿದೆ.
ತಿಳಿ ಹಾಸ್ಯದೊಂದಿಗೆ ಹದವರಿತು ಸರಳ ನಿರೂಪಣಾ ಶೈಲಿಯೊಂದಿಗೆ ಒಮ್ಮೆಲೆಗೆ ನಿರಂತರವಾಗಿ ಓದುಗನೊಂದಿಗೆ ಸಾಗುವ ಈ  ಲಲಿತ ಪ್ರಬಂಧಗಳು ಮತ್ತೆ ಮತ್ತೆ ನಮ್ಮನ್ನು ಮಾತಾಡಿಸುತ್ತವೆ.
ವೇಗವೆನ್ನುವುದೇ ಕಾಲದ ಜೀವವಾಗಿರುವ  ಘಳಿಗೆಗಳಲ್ಲಿ ಸಾಗುತ್ತಿರಬೇಕಾದರೆ ಒಮ್ಮೆ ಸಿಂಹಾವಲೋಕನ ಹಾದಿಯನ್ನ ನೋಡಿದಾಗ ಕಾಲ ಗರ್ಭದ ಅಡಿಯಲ್ಲಿ ಬೆಚ್ಚನೆ ಅಡಗಿ ಕುಳಿತ ನೆನಪುಗಳನ್ನು ಹಾಗೂ ಬದುಕಿನಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳ ನೆನಪನ್ನು ತಾವು ಅನುಭವಿಸಿದ ಲೋಕಾನುಭವಗಳ ದೃಶ್ಯಗಳನ್ನು ಈ ಕೃತಿಯಲ್ಲಿ ಅತ್ಯದ್ಭುತವಾಗಿ ಸಾರ್ವತ್ರೀಕಗೊಳಿಸಿದ್ದಾರೆ.

“ಹಿಂಡಬಾರದು ದುಂಡು ಮಲ್ಲಿಗೆಯ ದಂಡೆಯನ್ನು”
ಕೆ.ಎಸ್ ನ ಅವರ ಕವಿತೆಯ ಸಾಲು ಈ ಕ್ಷಣಕ್ಕೆ ನೆನಪಾಗುತ್ತದೆ
ಮಲ್ಲಿಗೆಯ ದಂಡೆಯನ್ನು  ಹಿಂಡಿದರೆ ಅದರ ಪರಿಮಳ ತಿಳಿಯುವುದಿಲ್ಲ ಎನ್ನುವಂತೆ
ನಾನೊಬ್ಬ ಓದುಗನಾಗಿ ನನ್ನ ಗ್ರಹಿಕೆಯ ಮಿತಿಗಳಲ್ಲಿ ಈ ಕೃತಿಯ ಲಲಿತ ಪ್ರಬಂಧಗಳನ್ನು ಬಿಡಿಬಿಡಿಯಾಗಿ ಹಿಂಡುವುದಕ್ಕಿಂತ ಹಿಡಿಯಾಗಿ ಹಿಡಿದಿಡಲು ಪ್ರಯತ್ನಿಸುತ್ತೇನೆ.
ಇನ್ನುಳಿದ ನಿಮ್ಮ ಕುತೂಹಲ ಕೃತಿಯನ್ನು ಓದಿಸಲಿ.
ಈ ಕೃತಿ ಒಟ್ಟಾರೆ 9 ಲಲಿತ ಪ್ರಬಂಧಗಳನ್ನು ಒಳಗೊಂಡಿದ್ದು ಒಂದೊಂದು ಲಲಿತ ಪ್ರಬಂಧವು ನಮ್ಮ ಭಾವ ಪ್ರಪಂಚವನ್ನು ಬಂಧಿಸುತ್ತವೆ ಮತ್ತು ಸೂಕ್ಷ್ಮ ಸಂವೇದನೆಗಳನ್ನು ಎಚ್ಚರಿಸುತ್ತವೆ.
“ಪ್ರಾತಃಕಾಲದ ದನಿಗಳು” ಎಂಬ ಮೊದಲನೇ ಪ್ರಬಂಧ ನಮ್ಮನ್ನು ಬಾಲ್ಯದ ದಿನಗಳೆಡೆಗೆ ಕರೆದೊಯ್ಯುತ್ತವೆ ಪ್ರತಿ ದಿನ ಬೆಳಿಗ್ಗೆ,ಹಾಲು, ಮೊಸರು, ಹೂವು,ಸೊಪ್ಪು, ಕಡಲೆಕಾಯಿ, ಕೋಳಿ ಮುಂತಾದವುಗಳನ್ನು ಮಾರಲು ಬರುವ ಶ್ರಮ ಜೀವಿಗಳ ಬದುಕು ನಮ್ಮೆಲ್ಲರಲ್ಲಿಯೂ ಗಾಢವಾಗಿ ಅಚ್ಚೊತ್ತಿವೆ ಹಾಗೂ ಬಾಲ್ಯದಿಂದ ವೃದ್ಯಾಪ್ಯದವರೆಗೂ ಬೆನ್ನತ್ತಿರುವ ಬಡತನವೆಂಬ ರೋಗಕ್ಕೆ ಸಾಯುವ ತನಕ ಹೆಣಗಾಡುವ ವೃದ್ಯಾಪ್ಯರ ಬದುಕಿನ ರೀತಿ ನೀತಿಗಳನ್ನ, ಪ್ರಾಮಣಿಕತೆಯ ಪಾಠಗಳನ್ನು ಲೇಖಕರು ಇಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.
ಈ ಪ್ರಬಂಧದಲ್ಲಿ ಕಾಣಿಸಿಕೊಳ್ಳುವ ಕೋಳಿ ವ್ಯಾಪಾರಿಯೊಬ್ಬ ಸೈಕಲ್ಲಿಗೆ ನಾಟಿ ಕೋಳಿಗಳನ್ನು ನೇತು ಹಾಕಿಕೊಂಡು “ಕೋ……….ಳೀ” ಅಂತ ಕೂಗುವಾಗ ‘ಕೋ’ ಮತ್ತು ‘ಳೀ’ ಗಳ ನಡುವೆ ಅರ್ಧ ನಿಮಿಷದಷ್ಟು ಸಮಯ ಸ್ವರಾಲಾಪ ಮಾಡುವುದನ್ನು ಓದಿದಾಗ ನಮ್ಮೂರಿಗೆ ಪಾತ್ರೆಗಳನ್ನು ಮಾರಾಟ ಮಾಡಲು ಬರುತ್ತಿದ್ದ ಸಾಬಿಯೊಬ್ಬ ‘ಸ್ಟೀಲ್ ಪಾತ್ರೆ ಸಾ……ಮಾನೇ… ಎಂದು ಆಲಾಪನೆ ಮಾಡುತ್ತಿದ್ದ ಧ್ವನಿ ಗುಯಿಗುಡುತ್ತಿತ್ತು ಮತ್ತೊಮ್ಮೆ ಪುನರುಚ್ಚರಿಸುತ್ತಿತ್ತು.
ನಾವೆಲ್ಲಾ ಜಾಗತೀಕರಣದ ಸುಳಿವಿಗೆ ಬಿದ್ದ ಈ ಸಂದರ್ಭದಲ್ಲಿ ಇಂತವರನ್ನ ಜನಗಳು ಮಾತಾಡಿಸುವುದೇ ಕಡಿಮೆಯಾಗಿದೆ ಅವರ ಶ್ರಮಕ್ಕೆ ಸ್ಪಂದಿಸದೆ ಚೌಕಾಸಿ ಮಾಡುವುದೇ ಅಭ್ಯಾಸವಾಗಿಬಿಟ್ಟಿದೆ.
ಈ ಶ್ರಮಜೀವಿಗಳು ‘ಬದುಕುವುದಕ್ಕಾಗಿ ವ್ಯಾಪಾರ ಮಾಡುತ್ತಿದ್ದಾರೆಯೇ ವಿನಃ ಲಾಭಕ್ಕಲ್ಲ’ ಎಂಬ ನೀತಿ ಪಾಠವನ್ನು  ಈ ಪ್ರಬಂಧ ಪರಿಚಯಿಸುತ್ತದೆ.
*”ಕಾಲವೆಂಬ ರೈಲು ಗಾಡಿ”ಎಂಬ ಪ್ರಬಂಧ ಮಾನವನ ಅವಸರದ ಬದುಕಿನ ಜೊತೆಗೆ ದುಡಿಯುವ ವರ್ಗಕ್ಕೆ ಆಪತ್ತಿನ ನೆಂಟನಂತೆ ನಂಟಾಗಿರುವ ರೈಲುಬಂಡಿಯ ಸ್ವಾರಸ್ಯಗಳನ್ನು ಹಿಡಿದಿಡುತ್ತದೆ. ಎಚ್ ಎಸ್ ಸತ್ಯನಾರಾಯಣ ಸರ್ ಅವರು ಲೋಕ ಸಂಚಾರಿಗಳು ನಾಡಿನ ಉದ್ದಗಲಕ್ಕೂ ಸಾವಿರಗಟ್ಟಲೆ ಸಾಹಿತ್ಯ ಉಪನ್ಯಾಸಗಳನ್ನು ನೀಡುತ್ತಾ ಬದುಕಿನ ಬಹುಭಾಗ ಅವರು ಪ್ರಯಾಣದಲ್ಲೇ ತೊಡಗಿಸಿಕೊಂಡವರಾದರೂ ದಣಿವರಿಯದ ಸೇವೆ ಅವರದು.
ರೈಲು ಪ್ರಯಾಣದ ಅನುಭವಗಳನ್ನು ವಿವರಿಸುವಾಗ  ನಾಡಿನ ಪ್ರಸಿದ್ಧ ಕವಿಗಳಾದ ಕೈಲಾಸಂ ಅವರು ನಿಯೋಜಿತ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕೆ ತಲುಪಬೇಕಿದ್ದ ಸಂದರ್ಭದಲ್ಲಿ ರೈಲೊಂದು ಬಟಾ ಬಯಲಲ್ಲಿ ಗಂಟೆಗಟ್ಟಲೆ ನಿಂತಾಗ ಕಾದು ಕಾದು ಸುಸ್ತಾದ ಕೈಲಾಸಂ ಅವರು ರೈಲಿನಿಂದ ಇಳಿದು ಎಷ್ಟೊತ್ತಿಗೆ ಹೊರಡಬಹುದು ಎಂದು ಚಾಲಕನಲ್ಲಿ ವಿಚಾರಿಸಿದಾಗ ಅವರು ತಮಗೂ ತಿಳಿಯದೆಂದು ತಲೆಯಾಡಿಸಿದರಂತೆ ಆಗ ಕೈಲಾಸಂ ಅವರು ‘ನಾನು ಇಲ್ಲೇ ಸ್ವಲ್ಪ ಹೂಗಳನ್ನ ಕಿತ್ತು ತರುವವರೆಗೂ ಸಮಯವಿದೆಯೇ?’ ಎಂದಾಗ ಆತ ‘ ಈ ಬಯಲಿನಲ್ಲಿ ನಿಮಗೆ ಹೂವೆಲ್ಲಿ ಸಿಗುತ್ತದೆ?’ ಎಂದು ಅಚ್ಚರಿಯಿಂದ ಕೇಳಿದರಂತೆ ಆಗ ಕೈಲಾಸಂ ಅವರು ‘ನನ್ನ ಬಳಿ ಹೂವಿನ ಬೀಜಗಳಿವೆ ಅವನ್ನು ಅಲ್ಲಿ ನೆಟ್ಟು ನೀರು ಹೊಯ್ದು ಗಿಡ ಬೆಳೆಸಿ ಹೂವುಗಳನ್ನು ಕಿತ್ತು ತರುವೆ’ ಎಂದಾಗ ಚಾಲಕನ ಪೆಕರುತನ, ಕೈಲಾಸಂ ಅವರ ಹಾಸ್ಯತನ  ನಗೆ ಮೂಡಿಸಿದರೆ
 “ಬಿಸಿ ನೀರಿದೆಯಾ ಮೀನಾ ಮಗುವಿನ ಹಾಲಿನ ಪುಡಿಗೆ?”ಎಂದು ತಾಯಿ ಕೇಳಿದರೆ
“ಬೇಕಾದಷ್ಟಿದೆಯಮ್ಮ ಜೊತೆಗೆ ಕಣ್ಣಲ್ಲೂ”
ಕಿಟಕಿಯ ಜೊತೆಗೆ ಬರುವುದು ಬೇಡಮ್ಮ ಇಲ್ಲಿಂದಲೇ ಕೈ ಮುಗಿವೆನು ಅಲ್ಲಿಂದಲೇ ಹರಸು ನನ್ನನ್ನು ಎಂಬ ‘ಕೆ ಎಸ್ ನ ಅವರ ರೈಲ್ವೆ ನಿಲ್ದಾಣ’ ದ ಕವಿತೆಯಲ್ಲಿ ತಾಯಿ ಮಗಳಿಬ್ಬರ ಅಂತಃಕರಣಗಳು ಒಟ್ಟಿಗೆ ಕರಗಿಹನಿಗಣ್ಣಾಗುವ
ಭಾವುಕತೆಯ ಸಾಲುಗಳನ್ನ ಸತ್ಯನಾರಾಯಣ ರವರು ಇಲ್ಲಿ ನೆನಪಿಸಿ ಓದುಗರನ್ನ ಭಾವಕತೆಗೆ ಒಳಗು ಮಾಡುತ್ತಾರೆ.
ಪರೀಕ್ಷೆಗಳು ಸಾರ್ ಪರೀಕ್ಷೆಗಳು*’ ಪ್ರಬಂಧ ಅಧ್ಯಾಪಕ ಬಂಧುಗಳ ಮನಸ್ಥಿತಿ ಹಾಗೂ ವಿದ್ಯಾರ್ಥಿಗಳ ಅಕ್ಷರ ದೋಷಗಳಿಂದ ಆಗುವ ಅನರ್ಥಗಳು, ನಾನಾರ್ಥಗಳು ಇಲ್ಲಿ ನಗೆಗಡಲಲ್ಲಿ ತೇಲಿಸುತ್ತಾ ಅನಾವರಣಗೊಳಿಸುತ್ತವೆ.
ಕನ್ನಡವನ್ನು ಸಾಧ್ಯವಾದೆಡೆಯಲೆಲ್ಲಾ ಎತ್ತಿ ಎತ್ತಿ ಹಿಡಿಯಬೇಕು ಎಂದು ಬರೆಯುವ ಬದಲಾಗಿ ವಿದ್ಯಾರ್ಥಿಯೊಬ್ಬರು ಉತ್ತರಪತ್ರಿಕೆಯಲ್ಲಿ  “ಸಾಧ್ಯವಾದಡೆಯಲ್ಲೆಲ್ಲ ಹೇತ್ ಹೇತ್ ಹಿಂಡಬೇಕು”.
ಪಿನಾಕಪಾಣಿ ಗೆ ಬದಲಾಗಿ “ಪೀನೇಕಾ ಪಾನಿ”.
ರಜೆ ಪತ್ರ ಬರೆಯುವಾಗ ಒಂದು ವಾರದಿಂದ ತುಂಬಾ ತಲೆನೋವು ಬರುತ್ತಿದ್ದು ತುರ್ತಾಗಿ ನನಗೆ ಸ್ಪೆಕ್ಸ್ ಬೇಕಾಗಿದೆ ಎಂದು ಬರೆಯುವುದರ ಬದಲಿಗೆ “ತುರ್ತಾಗಿ ನನಗೆ ಸೆಕ್ಸ್ ಬೇಕಾಗಿದೆ” ಎನ್ನುವಂತಹ ವಿದ್ಯಾರ್ಥಿಗಳ ಅಕ್ಷರದೋಷಗಳು ಉಂಟು ಮಾಡುವ ಅವಾಂತರಗಳು ಮುಂತಾದ ಸನ್ನಿವೇಶಗಳನ್ನು ಓದುವಾಗ ನಾನೊಬ್ಬ ಉಪನ್ಯಾಸಕನಾಗಿದ್ದು ಪ್ರತಿ ಮೌಲ್ಯಮಾಪನ ಕಾರ್ಯದ ಸಂದರ್ಭಗಳಲ್ಲಿ ಈ ರೀತಿಯ ದೋಷಗಳನ್ನು ಗಮನಿಸುತ್ತಿರುತ್ತೇನೆ  ಈ ರೀತಿಯ ಅನುಭವಗಳು ಎಲ್ಲಾ ಅಧ್ಯಾಪಕರ ವೃತ್ತಿ ಜೀವನದಲ್ಲೂ ಸಾಕಷ್ಟಾಗಿರುತ್ತವೆ. ಮೌಲ್ಯಮಾಪನದ ಸಂದರ್ಭದಲ್ಲಿ ನನ್ನ  ವಿದ್ಯಾರ್ಥಿಯೊಬ್ಬಳ ಉತ್ತರ ನೆನಪಿಗೆ ಬಂತು. ದ್ರೌಪದಿ ಭೀಮನನ್ನು ಹೇಗೆ ಎಬ್ಬಿಸಿದಳು? ಎಂಬ ಪ್ರಶ್ನೆಗೆ ದ್ರೌಪದಿ ಮೆಲ್ಲಮೆಲ್ಲನೆ ಭೀಮನ ಮುಸುಕನ್ನು ಸಡಲಿಸಿ ಗಲ್ಲವನ್ನು ಹಿಡಿದು ಅಲುಗಾಡಿಸುತ್ತ ಎಬ್ಬಿಸಿದಳು ಎಂದು ಉತ್ತರ ಬರೆಯಬೇಕಿತ್ತು ಆದರೆ ವಿದ್ಯಾರ್ಥಿನಿ “ದ್ರೌಪದಿ ಮೆಲ್ಲಮೆಲ್ಲನೆ ಭೀಮನ ಮಸುಕನ್ನು ಸಡಲಿಸಿ ಅವನ ಗಳ ಹಿಡಿದು ಅಲ್ಲಾಡಿಸುತ್ತಾ ಎಬ್ಬಿಸಿದಳು” ಎಂಬ ಉತ್ತರ ನೆನಪಾಯಿತು.
 ಲೇಖಕರು ಇಲ್ಲಿ ಹಾಸ್ಯದೊಂದಿಗೆ ವಿದ್ಯಾರ್ಥಿಗಳ ಬರವಣಿಗೆಯ ಕ್ರಮಗಳನ್ನು ಹಾಸ್ಯದೊಂದಿಗೆ ಹಾಗೂ ಅಧ್ಯಾಪಕನೊಬ್ಬನ ಅಗತ್ಯ ಕರ್ತವ್ಯಗಳನ್ನು ಜಾಗೃತಗೊಳಿಸಿದ್ದಾರೆ ಎಂಬುದು ಮನಗಣಬಹುದಾಗಿದೆ.
‘ಭೀಮಸೇನ ನಳ ಮಹರಾಜರು ಗಂಡಸರಲ್ಲವೇ’ ಪ್ರಬಂಧದಲ್ಲಿ ‘ಗಂಡಸರಿಗೆ ಅಡುಗೆ ಮಾಡುವ ಕಲೆ ಒಲಿದರೆ ಎಷ್ಟೋ ಒತ್ತಡಗಳಿಂದ ಪಾರಾಗಬಹುದು’
 ಈ ಸಾಲು ನಿಜಕ್ಕೂ ನನ್ನ ಅನುಭವವೂ ಆಗಿದೆ. ಕೆಲಸಗಳನ್ನು ಮುಗಿಸಿ ಒತ್ತಡಗಳ ಮೂಟೆಯನ್ನು ಹೆಗಲಿಗೆ ಏರಿಸಿಕೊಂಡು ಮಣ ಭಾರದ ಆಯಾಸಗಳನ್ನು ಹೊತ್ತು  ಮನೆಗೆ ಬಂದಾಗ ಏಕಾಂಗಿತನ ಕಾಡುವ ಸಮಯಕ್ಕೆ ಅಡುಗೆ ಮಾಡಲು ಮುಂದಾಗುತ್ತೇನೆ ಬಂದದ್ದು ಬರದಿದ್ದು ಎಲ್ಲವನ್ನೂ ಸೇರಿಸಿ ಅಡುಗೆ ಮಾಡುತ್ತಿದ್ದರೆ ಕೆಲ ಸಮಯ ಅದೊಂದು ಮಾನಸಿಕ ವಿಶ್ರಾಂತಿ ದೊರಕಿಸಿಕೊಡುತ್ತದೆ.
ಅಬ್ಬಯ್ಯಾ ಈ ಅಡುಗೆಗೆ ಇಂತಹ ಪದಾರ್ಥಗಳು ಸೇರಿಸು ಚೆನ್ನಾಗಿರುತ್ತದೆ ಅಂತ ಹೇಳಿ ಅನೇಕ ಅಡುಗೆಗಳನ್ನು ಮಾಡಲು ಸ್ಪೂರ್ತಿ ತುಂಬಿದವರೇ ಈ ನಮ್ಮ ಪ್ರೀತಿಯ ಮೇಷ್ಟ್ರು.
ನಿಜಕ್ಕೂ ಅವರೊಬ್ಬ ಪಾಕಪ್ರವೀಣರು ‘ಬಲ್ಲವನೇ ಬಲ್ಲ ಅವರ ಅಡುಗೆ ರುಚಿಯ ಸವಿಯ’.
ಕವಿತೆ ಬರೆಯುವಾಗಲಿ ಅಡುಗೆ ಮಾಡುವಾಗಲಿ ಆತುರ ಪಟ್ಟರೆ ರುಚಿ ಕೆಡುತ್ತದೆ. ನಮ್ಮೊಳಗೆ ಕುದಿಯುವ, ಕೆನೆಗಟ್ಟುವ, ಭಟ್ಟಿ ಇಳಿಸುವ ಹದಗೊಳ್ಳುವ ಪ್ರಕ್ರಿಯೆಗಳನ್ನು ಸಾಹಿತ್ಯಕ್ಕೆ ಹಾಗೂ ಅಡುಗೆ ತಯಾರಿಗೆ ತಳುಕು ಹಾಕಿರುವ ಪರಿ ವಿಶಿಷ್ಟವಾಗಿದೆ.
‘ಬಿದಿರ ತಡಿಕೆ ಬಿಚ್ಚಲಾಗದ ಕಣ್ಣು’
ಪ್ರಬಂಧ ನಾವು ಪದ್ಯಗಳನ್ನು ಓದುವ ಪರಿಯನ್ನು ಕಲಿಸಿಕೊಡುವುದರ ಜೊತೆಗೆ ಬಾಲ್ಯದ ಪದ್ಯಗಳನ್ನು ನೆನಪಿಸುತ್ತದೆ. “ಮಕ್ಕಳ ಮನೆಯೆಂಬ ಮಾಯಾಲೋಕ” ಪ್ರಬಂಧದಲ್ಲಿ ಮಕ್ಕಳ ಮನಸ್ಥಿಯನ್ನು ಗ್ರಹಿಸುವ, ಅರ್ಥೈಸುವ ಸೂಕ್ಷ್ಮ ಮನಸ್ಥಿತಿಯನ್ನು ಹಾಗೂ ಮಕ್ಕಳ ಬ್ಲಾಕ್ ಮೇಲ್ ತಂತ್ರಗಳು ಹೇಗೆಲ್ಲಾ ಹೈರಾಣ ಮಾಡುತ್ತವೆ ಎಂಬುದನ್ನು ಸುಂದರವಾಗಿ ನಿರೂಪಿತವಾಗಿದೆ.
ಉಳಿದ ಪ್ರಬಂಧಗಳು ಇನ್ನಷ್ಟು ಕುತೂಹಲವನ್ನು ಕೆರಳಿಸುವ ಪ್ರಬಂಧಗಳಾಗಿವೆ.
ಈ ಕೃತಿಯನ್ನು ಓದುತ್ತಿದ್ದಂತೆ ಆತ್ಮಕಥೆಯನ್ನು ಓದುತ್ತಿದ್ದೇನೆಂದು ಭಾಸವಾಗುತ್ತಿತ್ತು.
ಡಾ.ಎಚ್ ಎಸ್ ಸತ್ಯನಾರಾಯಣ ಸರ್ ಅವರ ಇಲ್ಲಿನ ಬರಹದ ಭೂಮಿಕೆಗೆ ಅವರ ಸಶಕ್ತ ಬಾಲ್ಯದ ನೆನಪುಗಳು, ವರ್ತಮಾನದ ತಲ್ಲಣಗಳು ಮುಖಾಮುಖಿಯಾಗಿಸುತ್ತವೆ.
ಅವರ ಕಾವ್ಯ-ಲೋಕಾನುಭವದ ನಿತ್ಯ ಸಂಶೋಧನೆಯ ಬಿತ್ತವನ್ನು ಈ ಕೃತಿಯಲ್ಲಿ ಶ್ರದ್ಧೆಯಿಂದ ಬಿತ್ತಿದ್ದಾರೆ.
ಯುವ ಬರಹಗಾರರಿಗೆ ಈ ಕೃತಿಯ ಓದು ಅಗತ್ಯವಿದೆ ಎಂದು ಹೇಳುತ್ತಾ ಇಂತಹ ಅಮೂಲ್ಯ ಕೃತಿ ಸಾರವನ್ನು ನಮಗೆ ಉಣಬಡಿಸಿದ್ದಕ್ಕೆ ಧನ್ಯವಾದಗಳು.


Leave a Reply

Back To Top