“ಒತ್ತಡ” ಎಂಬ ಪದವು ನಮ್ಮೆಲ್ಲ ಕನಸುಗಳ ಮೇಲೆ ತಣ್ಣಿರನ್ನೆರಚುವದು ಒಂದೆಡೆಯಾದರೆ ಮುಂದಿನ ಕೆಲಸದ ಕುರಿತು ಮೊದಲೇ ಮೀನಮೇಷ ಎಣಿಕೆಯ ಮೂಲಕ ಅತೀಯಾಗಿ ವಿಚಾರಿಸುವದು ಒಂದೆಡೆಯಾಗುತ್ತದೆ.

ಬಾಲ್ಯದ ಗೆಳತಿಯರಾದ ಸವಿತಾ ಮತ್ತು ವಾಣಿ ಇಬ್ಬರು ಉದ್ಯೋಗಸ್ಥರು.ಅದು ಅಂಗನವಾಡಿಯಿಂದ ಶಿಕ್ಷಕತರಬೇತಿ ಪಡೆದು ಶಿಕ್ಷಕರರಾಗುವವರೆಗೆ ತುಂಬಾ ಆತ್ಮಿಯತೆ. ಇಬ್ಬರಿಗೂ ಮದುವೆಯಾಗಿ ಎರಡು ಮಕ್ಕಳು ಒಂದು ಹೆಣ್ಣು ಒಂದು ಗಂಡು.ಕಾಲಚಕ್ರದ ಪಯಣದಲ್ಲಿ ತಮ್ಮ ಹಣೆಬರಹದಲ್ಲಿ ಬರೆದದ್ದು ತಪ್ಪುವದಿಲ್ಲ ಎಂಬ ಮಾತಿನಂತೆ. ಕರಾಳತೆಯ ಕುರುಹು ಜನ್ಮ ಜಾಲಾಡಿದಂತೆ ಆರದ ಗಾಯವಾದ ಘಟನೆ.ಸವಿತಳ ಸುಖ ಸಂಸಾರದಲ್ಲಿ ಬಿರುಗಾಳಿ ಬೀಸಿದಂತೆ ಮಿತಿಯಲ್ಲಿ ಕುಡಿಯುತ್ತಿದ್ದ ಪತಿಯ,ಅತಿಯಾದ ಕುಡಿತ ಅವನ ಜೀವನವನ್ನೇ ಆಪೋಷಣ ತೆಗೆದುಕೊಂಡಿತು.ಇನ್ನೂ ವಾಣಿಯ ಆನಂದ ಸಾಗರದಂತ ಸಂಸಾರದಲ್ಲಿ ಕೂಡ ಕಲ್ಪಿಸದ ಮಗಳ ಆಘಾತಕಾರಿ ಸಾವು. ಹೀಗೆ ಇವರಿಬ್ಬರ ಜೀವನದ ದುರಂತಗಳನ್ನು ಮರೆಯಲಾಗದೇ ಹಪಹಪಿಸಿ ಖಿನ್ನತೆಗೆ ಹೋಗುವ ಸಾಧ್ಯತೆ ಇದ್ದಾಗ ಸವಿತಳ ಅಜ್ಜಿ “ಸತ್ತವರ ಬಾಯಿಯಲ್ಲಿ ಮಣ್ಣು, ಇದ್ದವರಿಗೇನು?ದಾಡಿ”ಎನ್ನುತ್ತ ಮುಂದುವರೆದು ನಿನ್ನ ಪತಿಯ ಆಯುಷ್ಯ ಅಷ್ಟೇ ಇತ್ತು ನಿನ್ನ ಮಕ್ಕಳ ಮುಖ ನೋಡಿ ಬದುಕು ಸವಿ”ಎಂದೆಚ್ಚರಿಸಲು ಮರೆಯಲಿಲ್ಲ.ಇತ್ತ ವಾಣಿಯ ಮತ್ತೊಬ್ಬ ಆತ್ಮೀಯ ಗೆಳತಿ ಉಮಾ”ಅಲ್ಲ ವಾಣಿ, ನಿನ್ನ ಮಗಳು ಅಲ್ಪಾಯುಷಿ ಕಣೆ, ಏಕೆ ಬೇಸರ ಮಾಡ್ಕೊಂಡು ನಿನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ತಿ? ನಿನಗಾದರೂ ಇನ್ನೂ ಒಬ್ಬ ಮಗನಿದ್ದಾನೆ.ಆದರೇ ಎಷ್ಟೋ ಜನರಿಗೆ ಮಕ್ಕಳ ಭಾಗ್ಯವೇ ಇರುವದಿಲ್ಲ, ನಿನಗಿಂತ ಮೇಲಿನವರ ಸುಖ ನೋಡದೇ ನಿನಗಿಂತ ಅತೀ ದುಃಖದಲ್ಲಿರುವವರನ್ನು ನೋಡು ಮಗನ ಭವಿಷ್ಯ, ನಿನ್ನ ಆರೋಗ್ಯ, ಸಂಸಾರದ ಕ್ಷೇಮ ಎಲ್ಲಾ ನಿನ್ನ ಕೈಯಲ್ಲಿದೆ”ಎಂದು ಸಾಂತ್ವನ ನೀಡಿದಾಗ ತುಸು ನಿರಾಳತೆಯಿಂದ ಮನ ಮುದವಾಯಿತು.

ಹೀಗೆ ವೈಯಕ್ತಿಕ ಹಾಗೂ ವೃತ್ತಿಬದುಕಿನಲ್ಲಿ ಸಮತೋಲನ ಕಾಪಾಡುವಲ್ಲಿ ಇರುವ ಒಂದು ಮಾರ್ಗವೆಂದರೆ ಒತ್ತಡಗಳನ್ನು ಮೆಟ್ಟಿ ನಿಂತು ಬದುಕಬಲ್ಲೆ!ಎಂಬ ಆಶಾವಾದವನ್ನು ಸಕಾರಾತ್ಮಕ ವಿಚಾರಗಳಿಂದ ದೃಢಪಡಿಸಬೇಕು.

ನಮ್ಮಲ್ಲಿ ನಾವು ಮಾಡಬಲ್ಲೆವು, ಮಾಡಿ ತೀರೇ ಬಿಡುವೆವು ಎಂಬ ಆತ್ಮವಿಶ್ವಾಸ ಸ್ಥಿರವಾಗಿರಬೇಕು. ಜಗತ್ತಿನಲ್ಲಿ ಯಾರೂ ಅನುಭವಿಸಲಾಗದ ನೋವು ತನಗಿಲ್ಲ, ಗೌತಮ ಬುದ್ಧನ ಮಾತಿನಂತೆಮರಣ ಹೊಂದಿದ ತನ್ನ ಮಗನನ್ನು ಬದುಕಿಸಲು ಸಾವು ಇಲ್ಲದ ಮನೆಯ ಸಾಸಿವೆ ತರಲಾಗದ ಕಿಸಾಗೌತಮಿಯ ಪಾಡು ಮರಣ ನಿಶ್ಚಿತ ಎಂಬುದನ್ನು ತಿಳಿದಾಗ ನಿರಾಳತೆ ಮನವನ್ನು ಪ್ರಸನ್ನಗೊಳಿಸುವ ಸುಧೆಯಾಗುತ್ತದೆ. ತೊಂದರೆ ಅಥವಾ ಕಷ್ಟ ಮನುಷ್ಯರಾಗಿ ಹುಟ್ಟಿದ ಮೇಲೆ ಸಹಜ,”ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತವೆ”ಎಂಬ ಮಾತಿನಂತೆ ಕಷ್ಟ,ತೊಂದರೆಗಳಿಂದ ವಿಚಲಿತರಾಗದೇ ಅವುಗಳ ಪರಿಹಾರಕ್ಕಾಗಿ ತಾಳ್ಮೆಯಿಂದ ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಬೇಕು.ನಮ್ಮ ಮನೆಯ ಕೆಲಸವನ್ನುನಾವು ಮಾಡಲು, ಕೆಲಸ ಮುಗಿಸಿ ಉದ್ಯೋಗಕ್ಕೆ ತೆರಳುವದು, ಈ ಮಧ್ಯೆ ಮನೆಗೆ ಬಂದ ಅತಿಥಿ ಅಭ್ಯಾಗತರ ಕುಶಲೋಪರಿ,ಮಕ್ಕಳ ಹೋಂ ವರ್ಕ ಹೀಗೆ ಈ ಜವಾಬ್ದಾರಿಗಳನ್ನು ನೆನೆದು ಒತ್ತಡ ಮಾಡಿಕೊಳ್ಳುವ ಬದಲು ಕೂಲಂಕುಷವಾಗಿ ಸಮಯ ನಿಗದಿ ಮಾಡಿ ಕೆಲಸ ಮಾಡಿದ್ದೇ ಆದರೆ ನಿರಾಳಭಾವ ಮಾಡಃವ ಕೆಲಸದಲ್ಲಿ ಶ್ರದ್ಧೆ, ಸಂತಸವನ್ನು ಮೂಡಿಸಿ ಕಷ್ಟ ಪಡದೇ ಇಷ್ಟ ಪಟ್ಟು ಕೆಲಸ ಮಾಡುವಂತೆ ಮಾಡುತ್ತದೆ. ಇದರ ಜೊತೆಗೆ ನಗುನಗುತ ಮಕ್ಕಳ ಜೊತೆ ಅವರ ಬಾಲ್ಯವನ್ನು ಅನುಭವಿಸುವಂತೆ ಮಾಡುತ ಹಬ್ಬ, ಹರಿದಿನಗಳಲ್ಲಿ ಪೂಜೆ ಪುನಸ್ಕಾರದಂತಹ ಸಂಸ್ಕಾರ, ಬಿಡುವಿನ ವೇಳೆಯಲ್ಲಿ ಕುಟುಂಬದೊಂದಿಗೆ ಪುಣ್ಯ ಕ್ಷೇತ್ರಗಳ ದರ್ಶನ,ತೋಟ,ಗ್ರಂಥಾಲಯ, ಆಟದ ಮೈದಾನದಂತ ಸ್ಥಳಗಳಿಗೆಭೇಟಿ ನೀಡುವುದರಿಂದ ಎಲ್ಲರಿಗೂ ಸಮಾಧಾನ,ಶಾಂತಿ ಮುಖ್ಯವಾಗಿ ನಿರಾಳಮನ ಬದುಕಿಗೆ ಸಂಜೀವಿನಿಯಾಗುತ್ತದೆ.

ಕೆಲವೊಮ್ಮೆ ನಿರಾಳತೆ ಕಾಯ್ದುಕೊಳ್ಳುವ ಅವಕಾಶ ನಮ್ಮಲ್ಲೆ ಇದ್ದರೂ ಮತ್ತೊಬ್ಬರ ಮುಂದೆ ಕಷ್ಟವನ್ನು ತೋಡಿಕೊಂಡು ನಗೆಪಾಟಲಾಗುವ ಸಾಧ್ಯತೆ ಇಲ್ಲವೆಂದಿಲ್ಲ.ಅನುಭವ ಇದ್ದವರಿಗೆ ಮಾತ್ರ ಕಷ್ಟವನ್ನು ಎದುರಿಸುವ ಛಾತಿ, ಭೀತಿಯಿಂದ ಮುಕ್ತಿ ಇರುತ್ತದೆ.

ಒತ್ತಡವನು ಮೆಟ್ಟಿ
ಆತ್ಮವಿಶ್ವಾಸದಿ ಗಟ್ಟಿ
ಸಾರ್ಥಕ ಪಡಿಸಿಕೊಳ್ಳೋಣ ಈ ಲೋಕದಲಿ ಹುಟ್ಟಿ
ಕೂರದೇ ಒಂದೆಡೆ ಕೈ ಕಟ್ಟಿ
ಎನ್ನುತ ಕ್ಷಣಗಳ ವ್ಯಯ ಮಾಡದೇಸಮಯಕ್ಕೆ ತಕ್ಕಂತೆ ಪೂರ್ವ ತಯಾರಿಯೊಂದಿಗೆ ನಾಳೆಯ ಸ್ವಾಗತಿಸೋಣ ಅಲ್ಲವೇ?


Leave a Reply

Back To Top