ಗಣರಾಜ್ಯೋತ್ಸವ, ಒಂದು ಅವಲೋಕನ-ವೀಣಾ ಹೇಮಂತ್ ಗೌಡ ಪಾಟೀಲ್

1947ರಲ್ಲಿ ನಮ್ಮ ಭಾರತ ದೇಶವು ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾಯಿತಷ್ಟೇ, ಆದರೆ ನಮಗೆ ನಮ್ಮದೇ ಆದ ಸಂವಿಧಾನ ಇಲ್ಲದೆ ಇರುವುದರಿಂದ ಸ್ವತಂತ್ರದ ನಂತರವೂ ಕೂಡ ಭಾರತ ದೇಶವು ತನ್ನದೇ ಆದ ಸಂವಿಧಾನವನ್ನು ಹೊಂದುವವರೆಗೆ ಕಿಂಗ್ ಜಾರ್ಜ್ ರ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು.

1929 ರಲ್ಲಿ ಲಾಹೋರ್ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸಭೆಯಲ್ಲಿ ಸಂಪೂರ್ಣ ಸ್ವತಂತ್ರ ಭಾರತ ದೇಶವನ್ನು ಪಡೆಯುವ ಒಕ್ಕೊರಲಿನ ಧ್ವನಿ ಹೊಮ್ಮಿತು. ಇದರ ಪರಿಣಾಮವಾಗಿ 1930ರ ಜನವರಿ 26ರಂದು ಭಾರತ ದೇಶವನ್ನು ಪೂರ್ಣ ಸ್ವರಾಜ್ ದೇಶ ಎಂದು ಘೋಷಿಸಲಾಯಿತು. ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ಜನವರಿ 26ರ ಈ ದಿನ ಅತ್ಯಂತ ಮಹತ್ವಪೂರ್ಣ ಎನಿಸಿತ್ತು.

1945ರಲ್ಲಿ ದ್ವಿತೀಯ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಕೂಗು ಮತ್ತಷ್ಟು ಜೋರಾಯಿತು. ಇನ್ನು ತಮಗೆ ಭಾರತದಲ್ಲಿ ಉಳಿಗಾಲವಿಲ್ಲ ಎಂದು ಅರಿತ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವ ಮುನ್ನ ಮೂರು ಜನ ಬ್ರಿಟನ್ ಸದಸ್ಯರ ಒಂದು ನಿಯೋಗವನ್ನು ಭಾರತಕ್ಕೆ ಕಳುಹಿಸಿ ಇಲ್ಲಿನ ವಿಷಯಗಳನ್ನು ಅಧ್ಯಯನ ಮಾಡಿ ಸುಗಮ ಆಡಳಿತವನ್ನು ನಡೆಸಲು ಭಾರತ ತನ್ನದೇ ಆದ ಸಂವಿಧಾನವನ್ನು ಹೊಂದಬೇಕು ಅದಕ್ಕಾಗಿ ತನ್ನದೇ ರಾಜ್ಯಾಂಗದ ಸದಸ್ಯರ ಒಂದು ಸಮಿತಿಯನ್ನು ನಿರ್ಮಿಸಿ ಆ ಸಮಿತಿಯ ಎಲ್ಲಾ ಸದಸ್ಯರ ಅನುಮತಿಯ ಮೇರೆಗೆ ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಲಿ ಎಂದು 1946ರ ಮಾರ್ಚ್ 16ರಂದು ವರದಿ ಸಲ್ಲಿಸಿತು.

ಮುಂದೆ 1946ರ ಡಿಸೆಂಬರ್ ನಲ್ಲಿ ರಾಜ್ಯಾಂಗ ರಚನಾ ಸಭೆಗೆ ಚುನಾವಣೆಗಳು ನಡೆದು 297 ಜನ ಸದಸ್ಯರು ಆಯ್ಕೆಯಾದರು. ಡಿಸೆಂಬರ್ ಒಂಬತ್ತರಂದು ನಡೆದ ರಾಜ್ಯಾಂಗ ರಚನಾ ಸಭೆಗೆ ಸುಮಾರು 207 ಜನರು ಹಾಜರಿದ್ದರು. ಮುಂದಿನ ಎರಡು ದಿನಗಳಲ್ಲಿ ಬಾಬು ರಾಜೇಂದ್ರ ಸಿಂಗ್ ಪ್ರಸಾದ್ ಅವರನ್ನು ರಾಜ್ಯಾಂಗ ರಚನಾ ಸಭೆಯ ಖಾಯಂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈಗಾಗಲೇ ಬೆಂಗಾಲ ಪ್ರಾಂತ್ಯದಿಂದ ಆಯ್ಕೆಯಾಗಿ ಬಂದ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ರಾಜ್ಯಾಂಗ ಸಭೆಯ ಧ್ಯೇಯೋದ್ದೇಶಗಳನ್ನು ಕುರಿತು ಮಾತನಾಡಲು ಆಹ್ವಾನಿಸಿದಾಗ ಅತ್ಯಂತ ಸ್ಪಷ್ಟವಾಗಿ ಮಾತನಾಡಿದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮಹತ್ವದ ಕುರಿತು ಬೆಳಕು ಚೆಲ್ಲಿದರು. ಇದಕ್ಕೂ ಮುನ್ನ ಜವಾಹರ ಲಾಲ್  ನೆಹರು ಅವರು ರಾಜ್ಯಾಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರೂ ಕೂಡ ಅಂಬೇಡ್ಕರ್ ಅವರ ಮಂಡನೆಯಲ್ಲಿ ಹೆಚ್ಚಿನ ತೂಕ ಇರುವುದನ್ನು ಕಂಡು ಅವರಿಲ್ಲದೆ ಸಂವಿಧಾನದ ಕರಡು ರಚನೆ ಅಸಾಧ್ಯ ಎಂದು ಭಾವಿಸಿದ ರಾಜ್ಯಾಂಗ ಸಮಿತಿ 1947ರ ಜನವರಿ 24ರಂದು ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಅಧ್ಯಕ್ಷರನ್ನಾಗಿಸಿ ಸುಮಾರು 50 ಜನ ಸದಸ್ಯರ ಸಲಹಾ ಸಮಿತಿಯನ್ನು ರಚಿಸಿತು.

ಈ ಸಲಹಾ ಸಮಿತಿಯಲ್ಲಿ ಮತ್ತೆ ನಾಲ್ಕು ಉಪ ಸಮಿತಿಗಳನ್ನು ರಚಿಸಿದರು.ಅವುಗಳು

1 ಮೂಲಭೂತ ಹಕ್ಕುಗಳ ಉಪಸಮಿತಿ
2 ಅಲ್ಪಸಂಖ್ಯಾತರ ಉಪ ಸಮಿತಿ
3 ಈಶಾನ್ಯ ಗಡಿ ನಿವಾಸಿಗಳ ಉಪಸಮಿತಿ
4 ಪ್ರತ್ಯೇಕ ಮತ್ತು ಭಾಗಶಃ ಪ್ರತ್ಯೇಕವಾದ ರಾಜ್ಯಗಳ ಉಪಸಮಿತಿ

 ಈ ಉಪಸಮಿತಿಗಳಲ್ಲಿ ಮೊದಲೆರಡು ಉಪಸಮಿತಿಗಳ ಸದಸ್ಯರಾದ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರು ಮೂಲಭೂತ ಹಕ್ಕುಗಳ ಉಪಸಮಿತಿಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿ ವಸ್ತುನಿಷ್ಠವಾದ ಟಿಪ್ಪಣಿಗಳನ್ನು ಮಾಡಿಕೊಟ್ಟರು. ಸುಮಾರು 60 ದೇಶಗಳ ಸಂವಿಧಾನವನ್ನು ಅಭ್ಯಸಿಸಿದ ಫಲವಾಗಿ ಹುಟ್ಟಿದ ವಿಚಾರಧಾರೆಗಳ ಗಟ್ಟಿ ಪಾಕವೇ ಅವರ ಸಂವಿಧಾನದ ಕರಡು ಪ್ರತಿಯ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿತು.

ಮುಂದೆ 1947 ರ ಏಪ್ರಿಲ್ ನಲ್ಲಿ ಸಂವಿಧಾನ ರಚನಾ ಸಮಿತಿ ಮತ್ತೆ ಮೂರು ಸಮಿತಿಗಳನ್ನು ರಚಿಸುತ್ತದೆ.

1 ಕೇಂದ್ರ ಅಧಿಕಾರ ಸಮಿತಿ
2 ಕೇಂದ್ರ ಸಂವಿಧಾನ ಸಮಿತಿ ಮತ್ತು
3 ತಾತ್ಕಾಲಿಕ ಸಂವಿಧಾನ ಸಮಿತಿ

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೇಂದ್ರ ಸಂವಿಧಾನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗುತ್ತಾರೆ. ಮುಂದೆ ಸ್ವತಂತ್ರ ಭಾರತದ ಘೋಷಣೆ 1947 ಆಗಸ್ಟ್ 15ರಂದು ಆದಾಗ, ಭಾರತದಿಂದ ವಿಭಜನೆಗೊಂಡ ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾಗಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವತಂತ್ರ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಆಹ್ವಾನದ ಮೇರೆಗೆ ಭಾರತ ದೇಶದ ಮೊದಲ ಕಾನೂನು ಮಂತ್ರಿಯಾಗಿ ಆಯ್ಕೆಯಾಗುತ್ತಾರೆ. ಮುಂದಿನ ಕೆಲವೇ ದಿನಗಳಲ್ಲಿ ಭಾರತೀಯ ಸಂವಿಧಾನದ ಕರಡು ಪ್ರತಿ ರಚನೆಯ ಅಧ್ಯಕ್ಷರಾಗಿ ಆಯ್ಕೆಯಾದ ಅಂಬೇಡ್ಕರ್ ಅವರ ಜೊತೆಗೆ ಏ ಕೃಷ್ಣಸ್ವಾಮಿ ಅಯ್ಯರ್, ಎನ್ ಗೋಪಾಲಸ್ವಾಮಿ ಅಯ್ಯಂಗಾರ್, ಕೆಎಂ ಮುನ್ಶಿ, ಮಹಮ್ಮದ್ ಸಾದುಲ್ಲ,  ಬೀ ಎಲ್ ಮಿಟ್ಟರ್ ಮತ್ತು ಡಿ ಪಿ ಖೈತಾನ್ ಕರಡು ರಚನಾ ಸಮಿತಿಯ ಇನ್ನಿತರರು ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.

ಇವರೆಲ್ಲರ ಸತತ ಪ್ರಯತ್ನದ ಫಲವಾಗಿ ಹಲವರು ಸಭೆಗಳ ಮೂಲಕ ಮುಖ್ಯವಾಗಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನದ ಮೂಲ ಪ್ರತಿ ಸಿದ್ಧವಾಯಿತು. ಮತ್ತೆ ಅದರ ಕುರಿತ ಪರಿಶೀಲನಾ ಸಭೆ ಪರ ವಿರೋಧ ಚರ್ಚೆ, ಹಲವಾರು ಸುತ್ತಿನ ಸಭೆ ಮಾತು ಕತೆಗಳ ನಂತರ ಅಂತಿಮವಾಗಿ 1949 ನವಂಬರ್ 19 ರಂದು ಡಾಕ್ಟರ್ ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನದ ಅಂತಿಮ ಪ್ರತಿ ಸುಮಾರು ಎರಡು ವರ್ಷ 17 ತಿಂಗಳುಗಳ ಅವಧಿಯಲ್ಲಿ ಸಿದ್ಧವಾಗಿ ಎಲ್ಲ ರೀತಿಯ ಪರಾಮರ್ಶೆಗೆ ಒಳಗಾಗಿ ತನ್ನ ಅಂತಿಮ ರೂಪರೇಶೆಗಳನ್ನು ಹೊಂದಿತು.

ಈ ಸಭೆಯಲ್ಲಿ ಮಾತನಾಡಿದ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಭಾರತದಂತಹ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮೌಲ್ಯಗಳನ್ನು ಹೊಂದಿದ ದೇಶದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಘೋಷಿಸಲಾಗಿದ್ದು, ಎಲ್ಲರೂ ಕಾನೂನಿನ ಅಡಿಯಲ್ಲಿ ಸರ್ವ ಸಮಾನರು ಎಂದು ಸಾರಿದರು, ತಪ್ಪು ಮಾಡಿದವರಿಗೆ ಶಿಕ್ಷೆ ಕಡ್ಡಾಯ ಎಂಬ ಮಾತು ಅವರದಾಗಿತ್ತು. ಆರ್ಥಿಕ ಮತ್ತು ಔದ್ಯೋಗಿಕ ಮೌಲ್ಯವರ್ಧನೆಗೆ ಕಾನೂನು ಬದ್ಧ ಕಾರ್ಯನಿರ್ವಹಣೆ ಅತ್ಯಗತ್ಯ ಎಂಬುದನ್ನು ಮನದಟ್ಟು ಮಾಡಿಕೊಟ್ಟರು. ಅತ್ಯಂತ ಕೆಳ ಹಂತದಲ್ಲಿರುವ, ದಲಿತ ದುರ್ಬಲರಿಗೆ ಸಂವಿಧಾನದ ಅಡಿಯಲ್ಲಿ ಕೆಲವು ಪ್ರತ್ಯೇಕ ಕಾನೂನುಗಳ ಮೂಲಕ ಮೇಲೆ ತರುವ ಸುಧಾ ಅವರ ಜೀವನ ಮಟ್ಟವನ್ನು ಸುಧಾರಿಸುವ ಕ್ರಮದ ಅವಶ್ಯಕತೆಯನ್ನು ಸದಸ್ಯರಿಗೆ ಮನದಟ್ಟು ಮಾಡಿಕೊಟ್ಟರು.ಸರ್ವರಿಗೂ ಸಮಪಾಲು ಸಮ ಬಾಳು ಎಂಬ ಘೋಷದ ಮೂಲಕ ಸಂವಿಧಾನದ ಮೂಲ ಉದ್ದೇಶವನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ಭಾರತದಂತಹ ಹಲವಾರು ಜಾತಿ, ಧರ್ಮ, ಭಾಷೆಗಳನ್ನು ಮಾತನಾಡುವ ದೇಶಕ್ಕೆ ಅತ್ಯಗತ್ಯವಾದ ಸಾಂವಿಧಾನಿಕ ಮಾನ್ಯತೆಗಳನ್ನು ದೊರಕಿಸಿಕೊಡಲು ಹಗಲಿರುಳು ಶ್ರಮಿಸಿದ ಸಂವಿಧಾನ ಕರಡು ರಚನಾ ಸಮಿತಿಯ ಶ್ರಮದ ಫಲವೇ ಒಟ್ಟು 395 ವಿಧಿಗಳು ಮತ್ತು ಎಂಟು ಅನುಸೂಚಿಗಳನ್ನು ಹೊಂದಿರುವ ಸಾವಿರಾರು ಬಾರಿ ತಿದ್ದುಪಡಿ ಮಾಡಲ್ಪಟ್ಟು ತಯಾರಾದ ಸಂವಿಧಾನದ ಕರಡು ಪ್ರತಿಯನ್ನು ಆ ದಿನ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಅವರು ಅಂದಿನ ರಾಷ್ಟ್ರಪತಿ ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಹಸ್ತಾಂತರಿಸಿದರು. ಇಂದಿಗೂ ಜಗತ್ತಿನ ಅತಿ ದೊಡ್ಡ ಜನತಂತ್ರ ವ್ಯವಸ್ಥೆಯ ದೇಶವಾಗಿರುವ ಭಾರತದ ಸಂವಿಧಾನದ ಮಹತ್ವದ ಕುರಿತು ಎರಡು ಮಾತಿಲ್ಲ ಎಂಬುದು ಅತಿಶಯೋಕ್ತಿಯೇನಲ್ಲ.

ಈ ಸಂವಿಧಾನವನ್ನು 1950 ಜನವರಿ 26ರಂದು ಜಾರಿಗೆ ತರಲಾಯಿತು. ಅಂದಿನಿಂದಲೇ ಸ್ವತಂತ್ರ ಭಾರತದ ಗಣರಾಜ್ಯೋತ್ಸವವನ್ನು ಘೋಷಿಸಲಾಯಿತು. 1930ರ ಜನವರಿ 26ರ ಪೂರ್ಣ ಸ್ವರಾಜ್ ದಿವಸವನ್ನು ನೆನಪಿನಲ್ಲಿಟ್ಟುಕೊಂಡು ಆ ದಿನವನ್ನೇ ಸ್ವತಂತ್ರ ಗಣರಾಜ್ಯದ ಸಂವಿಧಾನ ದಿನವನ್ನಾಗಿ ಆಚರಿಸಲಾರಂಭಿಸಿದರು.

ಪ್ರತಿ ವರ್ಷವೂ ಗಣರಾಜ್ಯೋತ್ಸವದ ಈ ದಿವಸವನ್ನು ಪ್ರತಿಯೊಂದು ಶಾಲೆ, ಕಾಲೇಜುಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ, ಸಾರ್ವಜನಿಕ ಸಂಸ್ಥೆಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ವಿವಿಧತೆಯಲ್ಲಿ ಏಕತೆಯನ್ನು ತೋರುವ ಭಾರತೀಯ ಸಂಸ್ಕೃತಿ ಪರಂಪರೆಯ ಕುರಿತಾದ ದೇಶಭಕ್ತಿ ಗೀತೆಗಳು ಮನೆ ಮನೆಗಳಲ್ಲಿ ಹೊಮ್ಮುತ್ತವೆ.

ದೇಶದ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ದಿನ ಧ್ವಜಾರೋಹಣ ಮಾಡುತ್ತಾರೆ. ಸ್ವಾತಂತ್ರ್ಯೋತ್ಸವದ ದಿನ ದೇಶದ ಪ್ರಧಾನ ಮಂತ್ರಿಗಳು ಕೆಂಪುಕೋಟೆಯ ಮೇಲೆ  ನಮಗೆ ಸ್ವಾತಂತ್ರ್ಯ ಸಿಕ್ಕ ಐತಿಹಾಸಿಕ ಘಳಿಗೆಯ ದ್ಯೋತಕವಾಗಿ ಕೆಳಗಿನಿಂದ ಮೇಲಕ್ಕೆ ಎಳೆಯುತ್ತಾ ಧ್ವಜವನ್ನು ಹಾರಿಸಿದರೆ, ಜನವರಿ 26ರ ದಿನ  ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿಯವರು ರಾಜಧಾನಿ ದೆಹಲಿಯ ಜನಪಥ ದಲ್ಲಿ ಧ್ವಜಸ್ತಂಭದ ಮೇಲೆ ಕಟ್ಟಿದ ಧ್ವಜವನ್ನು ಎಳೆಯದೆ ಹಾರಿಸುತ್ತಾರೆ. ಇದು ಗಣರಾಜ್ಯೋತ್ಸವದ ವೈಶಿಷ್ಟತೆಯಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರನ್ನು ಕೂಡ ಆಹ್ವಾನಿಸಲಾಗಿರುತ್ತದೆ.

ಧ್ವಜಾರೋಹಣದ ನಂತರ ರಾಷ್ಟ್ರಪತಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ. ನಂತರ ನಮ್ಮ ದೇಶದ ಸರ್ವೋಚ್ಛ ನಾಯಕರಾದ ರಾಷ್ಟ್ರಪತಿಯವರಿಗೆ ಭಾರತ ದೇಶದ ಮಿಲಿಟರಿಯ ಮೂರು ಪಡೆಗಳಾದ ಭೂ ಸೇನೆ, ನೌಕಾ ಸೇನೆ ಮತ್ತು ವಾಯು ಸೇನೆಗಳ ಮುಖ್ಯ ಅಧಿಕಾರಿಗಳು ತಂತಮ್ಮ ತಂಡಗಳೊಂದಿಗೆ ಪೆರೇಡ್ ನಲ್ಲಿ ಭಾಗವಹಿಸಿ ಗೌರವ ಸಲ್ಲಿಸುತ್ತಾರೆ. ಇದರ ಜೊತೆ ಜೊತೆಗೆ ಯುದ್ಧ ವಾಹನಗಳು, ನೌಕೆಗಳು ಮತ್ತು ಮಿಗ್ ವಿಮಾನಗಳನ್ನು, ನಮ್ಮ ದೇಶದ ಮಿಲಿಟರಿ ಪಡೆಯ ಸಾಮರ್ಥ್ಯವನ್ನು ಸಾರುವ ಈ ಗಣರಾಜ್ಯೋತ್ಸವದ ಪಥಸಂಚಲನದ ಪೆರೇಡ್ ವಿಶ್ವ ಪ್ರಸಿದ್ಧವಾಗಿದೆ. ಮಿಲಿಟರಿ ಪಡೆಗಳ ಜೊತೆಗೆ ಗಡಿ ಭದ್ರತಾ ಪಡೆ, ಅರೆ ಸೈನಿಕ ಪಡೆ, ಗೃಹರಕ್ಷಕ ದಳ,ಎನ್ ಸಿ ಸಿ, ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ವಿದ್ಯಾರ್ಥಿಗಳ ತಂಡಗಳು ಕೂಡ ಪಥಸಂಚಲದಲ್ಲಿ ಭಾಗವಹಿಸುತ್ತವೆ. ಈ ಪಥ ಸಂಚಲನಕ್ಕೆ ತಿಂಗಳುಗಟ್ಟಲೆ ಮುಂಚೆಯೇ ತರಬೇತಿ ನೀಡಲಾಗುತ್ತದೆ. ಸುಮಾರು ಎರಡು ಕಿಲೋಮೀಟರ್ ಗಿಂತಲು ಹೆಚ್ಚು ದೂರ ಸಾಗುವ ಈ ಆಕರ್ಷಕ ಪಥಸಂಚಲನದಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಇಲಾಖೆಗಳು ತಂತಮ್ಮ ರಾಜ್ಯಗಳ ವಿಶಿಷ್ಟತೆಗಳನ್ನು ಕಟ್ಟಿಕೊಡುವ ಸ್ತಬ್ಧ ಚಿತ್ರಗಳ ಸಮೇತ ಭಾಗವಹಿಸಿ ಬಹುಮಾನ ಗಳಿಸುತ್ತಾರೆ. ವಿವಿಧ ರಂಗಗಳಲ್ಲಿ ಪ್ರಶಸ್ತಿ ಪಡೆದ ಮಕ್ಕಳನ್ನು, ಯುವಕರನ್ನು, ಸೈನಿಕರನ್ನು ಮತ್ತು ನಾಗರಿಕರನ್ನು ಇಂದು ಆಯಾ ಸ್ಥಳಗಳಲ್ಲಿ ಗೌರವಿಸಲಾಗುತ್ತದೆ.

ಒಟ್ಟಿನಲ್ಲಿ ಭಾರತ ದೇಶದ ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಈ ದಿನ ಪ್ರತಿ ಭಾರತೀಯನ  ಮನೆ ಮನಗಳ ಹಬ್ಬವಾಗಿ ಪರಿಣಮಿಸಿದ್ದು ದೇಶ, ಭಾಷೆ, ಭೌಗೋಳಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವ್ಯತ್ಯಾಸಗಳ ನಡುವೆಯೂ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಾರೆ ಜಹಾಸೆ ಅಚ್ಚಾ ಹಿಂದೂಸ್ತಾನ್ ಹಮಾರ ಎಂಬ ಘೋಷಣೆ ಎಲ್ಲೆಡೆ ಅನುರಣಿಸುತ್ತದೆ.

——————————–

Leave a Reply

Back To Top