ನಾ ಒಂದು ಕಥೆಯಾಗಲೇ……ನಾಗರಾಜ ಬಿ.ನಾಯ್ಕ ಅವರ ಕಥೆ

‘ನಾ ಒಂದು ಕಥೆಯಾಗಲೇ ‘ಎಂದು ಅನಿ ಕೇಳಿದಾಗ ಅವರು ಸುಮ್ಮನಾದರು. ಕಡಲ ಮರಳು ರಾಶಿಯ ಮೇಲೆ ದಡದಿ ಕುಳಿತು ಬರುವ ತೆರೆಗಳ ನೋಡುತ್ತಾ ಅನಿ ಮತ್ತೆ ‘ ನಾ ಕಥೆಯಾಗಲೇ’ ಎಂದಳು. ‘ಇಲ್ಲಿ ಕೇಳಿ ಸರ್, ನಿಮ್ಮ ಮುಂದಿನ ಕಥೆಗೆ ನಾನೇ ಕಥಾ ಪಾತ್ರವಾದರೆ ಆಗಬಹುದೇ?’ ಎಂದಳು  ಮತ್ತೆ. ಅವರೊಮ್ಮೆ ಮೌನಕ್ಕೆ ಜಾರಿದರು ಈಗಲೇ ಕೈ ತುಂಬಾ ಸಂಬಳ, ಬಂಗಲೆ ,ಕಾರು ,ಮನೆ ಎಲ್ಲಾ ಇದೆ ಈ ಹುಡುಗಿಗೆ. ಮದುವೆಯಾಗಿಲ್ಲ ಎನ್ನುವುದನ್ನು ಬಿಟ್ಟರೆ ಬೇರೆಲ್ಲ ಆಸೆಗಳು ಅವಳ ಇಚ್ಛೆಯಂತೆ ಸಾಗಿದೆ. ಹೀಗೆ ಸರಳವಾದ ಜೀವನದ ಬಗ್ಗೆ ಕಥೆ ಬರೆಯಬಹುದೇ? ಏನಿದೆ ಇವಳ ಬದುಕಿನಲ್ಲಿ ಕಥೆಗೆ ವಿಷಯ? ಎಂದು ಹುಡುಕಿದರೂ ಅವರಿಗೆ ಅವಳ ಬಗ್ಗೆ ಏನು ಸಿಗಲಿಲ್ಲ ಬರೆಯಲು. ಚಂದದ ಹುಡುಗಿ ನೀನು. ಹೇಗೆ ಕಥೆಯಾಗುವೆ? ಕಥೆಯಾಗಲು ಘಟನೆಗಳು ಬೇಕು. ವಿಷಯಗಳು ಬೇಕು. ಸಾಕ್ಷಿಗಳು ಬೇಕು. ಮಾತುಗಳು ಬೇಕು. ಗಟ್ಟಿಯಾದ ನಿಲುವುಗಳು ಬೇಕು. ನಿನ್ನ ಬಗ್ಗೆ ಹೇಗೆ ಒಂದು ಕಥೆ ಬರೆಯಲಿ?  ಮನುಷ್ಯನ ಜೀವನದ ಘಟನೆಗಳೇ ಕಥೆಗಳಾಗುತ್ತವೆ. ಪಾತ್ರಗಳಾಗಿ ಮಾತನಾಡುತ್ತವೆ. ಜೀವಂತವಾಗಿ ಉಳಿಯುವ ಜೀವಂತಿಕೆ ತೋರಿಸಿ ವ್ಯಕ್ತವಾಗುತ್ತದೆ. ನಿನ್ನ ಬಗ್ಗೆ ಏನಿದೆ? ಅಂತಹದ್ದು. ನನಗೆ ತಿಳಿದಿರುವಂತೆ ನೀನೊಂದು ಸುಖಿ ಜೀವಿ ಅಲ್ಲವೇ ?ಎಂದರು ಅವರು. ಅನಿ ನಗುತ್ತಾ ‘ಅಲ್ಲ’ ಎಂದಳು. ಅವಕ್ಕಾದರು ಅವರು. ತುಂಬಾ ಓದಿರುತ್ತೀರಿ. ಮನಸ್ಸನ್ನು ಅರಿತಿರುವಿರಿ ಎಂದುಕೊಂಡಿದ್ದೆ. ಆದರೆ ನೀವು ನೋಡಿದ ಎಲ್ಲರನ್ನೂ ಸುಖಿಗಳು ಎನ್ನುವ ಸಾಲಿನಲ್ಲಿ ಕುಳ್ಳಿರಿಸಿಬಿಡುತ್ತೀರಿ ನೀವು ಎಂದಳು. ಅವಳ ಈ ಮಾತಿನಿಂದ ವಿಷಯ ಇನ್ನೇನೋ ಇದೆ ಎಂದು ಅಂದುಕೊಂಡು ಅವರು ಸುಮ್ಮನಾದರು.ಕಡಲ ತೆರೆಗಳು ಮತ್ತೆ ಮತ್ತೆ ದಡಕ್ಕೆ ಮರಳುತ್ತಿತ್ತು. ಬಣ್ಣಗಳ ಯಾರೋ ಬಳಿದಂತೆ ಆಗಸ ಕಾಣುತ್ತಿತ್ತು. ಏನು ನಿನ್ನ ಕಥೆ ? ಎಂದರವರು. ಅನಿ ತನ್ನ ಕಥೆ ಶುರು ಮಾಡಿದಳು. ನನಗೆ ಈಗ ಇಪ್ಪತ್ತಾರು ವರ್ಷ. ಅಮ್ಮನಿಗೆ ಒಬ್ಬಳೇ ಮಗಳು. ಬಿಟ್ಟು ಹೋದ ಅಪ್ಪನನ್ನು ಕೇಳಬೇಡಿ. ಅಮ್ಮನೂ ಕೂಡ ಅವರ ಅಮ್ಮನಿಗೆ ಒಬ್ಬಳೇ ಮಗಳು. ಹಾಗಾಗಿ ಅಮ್ಮನ ಆಸ್ತಿಯೆಲ್ಲಾ ನನಗೇ.  ಮೂರು ನಾಲ್ಕು ಎಕರೆ ಗದ್ದೆ, ತೋಟ ಎಲ್ಲ ಸೇರಿದರೆ ಕೋಟಿಗಳ ದಾಟಿ ನಿಲ್ಲುತ್ತೆ ಮೌಲ್ಯಗಳು. ಅಲ್ಲಿಗೆ ಅಮ್ಮನಿಗೆ ಉದ್ಯೋಗ ಮತ್ತಿತರ ಮೂಲಗಳಿಂದ ಬಂದ ಹಣ ಒಂದಿಷ್ಟು ಕೋಟಿಯಾಗುತ್ತೆ. ಈಗ ನಾನು ಅಮ್ಮ ಇಬ್ಬರೇ ಅದರ ಮೂಲ ವ್ಯವಹಾರಸ್ಥರು, ವಾರಸುದಾರರು. ಆದರೆ ಅಮ್ಮ ಈಗ ಹೊಸ ಮಾತಾಡುತ್ತಿದ್ದಾರೆ. ಹತ್ತಿರದ ಸಂಬಂಧಿಗಳಿಗೆ ಸ್ವಲ್ಪ ಸ್ವಲ್ಪ ಆಸ್ತಿಯನ್ನು ಕೊಡಬೇಕು ಎನ್ನುತ್ತಿದ್ದಾರೆ. ಅಲ್ಲದೆ ಅವರಿಗೆ ಹಣಕಾಸಿನ ನೆರವನ್ನು ನೀಡುತ್ತಿದ್ದಾರೆ. ಅಲ್ಲದೇ ಬಿಟ್ಟು ಹೋದ ಅಪ್ಪನನ್ನು ಒಮ್ಮೆ ನೋಡಬೇಕು. ಮಾತನಾಡಬೇಕು. ಅವರ ಕುಟುಂಬವನ್ನು ಒಮ್ಮೆ ನೋಡಬೇಕು ಎನ್ನುತ್ತಿದ್ದಾರೆ. ನನಗೆ ಇದಾವುದೋ ಸಹ್ಯವಾಗುವುದಿಲ್ಲ. ಅಮ್ಮ ಉದ್ಯೋಗ ಮಾಡುತ್ತ ನನ್ನನ್ನು ಓದಿಸಿದಳು. ನಾನು ಚೆನ್ನಾಗಿ ಕಲಿತೆ ಉದ್ಯೋಗವು ಸಿಕ್ಕಿತು. ಸಂತೋಷವಾಗಿದ್ದೆ. ಅಮ್ಮ ಯಾವಾಗ ಆಸ್ತಿ ಹಣಕಾಸು ಇತರಿಗೆ ಹಂಚಬೇಕು ಎಂದು ಹೇಳಿದಳೋ ಅಂದಿನಿಂದ ನನಗೆ ಮನಸ್ಸು ಸರಿ ಇಲ್ಲ ಎಂದು ಸುಮ್ಮನಾದಳು. ಕಥೆಗಾರರು ಅರಿತರು ಇವಳ ಮಾತಿನ ಮನಸ್ಸಿನ, ಒಳ ತರಂಗಗಳ. ಅದಾಗಲೇ ಒಬ್ಬ ದೋಣಿಯವ ಸಮುದ್ರದಿಂದ ಕೆಳಗೆ ಇಳಿದು ಬರುತ್ತಿದ್ದ. ಅವನಿಗಾಗಿ ಕಾಯುತ್ತಿದ್ದ ಅವನೆರಡು ಮಕ್ಕಳು ಮನೆಯಿಂದ ಓಡಿ ಬಂದು ದೋಣಿ ಸುತ್ತ ನಿಂತರು. ದೋಣಿಯಲ್ಲಿನ ಬಲೆಗಳಲ್ಲಿನ ಮೀನುಗಳ ಬಿಡಿಸಿದರು. ಇಡೀ ಬಲೆಯ ತುಂಬೆಲ್ಲ ಹತ್ತು ಹನ್ನೆರಡು ಮೀನಷ್ಟೇ ಸಿಕ್ಕಿದ್ದು. ಅವನೆಂದ ಇಂದೂ ಮೀನು ಏನು ಸಿಗಲಿಲ್ಲ. ಇನ್ನೂ ಹೋಗಲಾರೆ. ಕತ್ತಲಾಗುತ್ತಿದೆ. ನಾಳೆ ಹೋದರಾದೀತು ಎಂದ. ಮಕ್ಕಳು ಹೌದಪ್ಪ ಸಾಕು ಈಗ ತುಂಬಾ ದಣಿದಿರುವೆ. ಮನೆಗೆ ಹೋಗೋಣ ಬಾ ಎಂದು ಕರೆದುಕೊಂಡು ಹೋದರು. ಇಲ್ಲಿ ಇಲ್ಲ ಎನ್ನುವುದು ಪ್ರಶ್ನೆಯಾಗಲಿಲ್ಲ ಮಕ್ಕಳಿಗೆ. ಅಪ್ಪನೇ ಶಕ್ತಿಯಾಗಿದ್ದ. ಭರವಸೆಯಾಗಿದ್ದ.ಅವನ ಮುಂದೆ ಆಸೆ ಸಣ್ಣದು ಎನಿಸಿತಿರಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡರು ಕಥೆಗಾರರು. ಅವರನ್ನು ತೋರಿಸಿ ಬದುಕು ಎಂದರೆ ಎಷ್ಟು ಚೆಂದ ಅಲ್ವಾ….. ನೋಡು ಅವರನ್ನ. ಅವರಿಗೆ ಸಿಗಲಿಲ್ಲ ಎನ್ನುವುದು ಪ್ರಶ್ನೆ ಅಲ್ಲ. ನಾಳೆ ಸಿಗಬಹುದು ಎನ್ನುವ ನಂಬಿಕೆ ಬದುಕಿನ ದೊಡ್ಡ ಭರವಸೆ ಅಲ್ಲವೇ? ಅವರಿಗೆ. ಎಂತಹ ದೊಡ್ಡ ಮನಸ್ಸು ಅವರದು ಎಂದು ನಗುತ್ತಾ ಹೇಳಿದರು ಕಥೆಗಾರರು. ಅವರವರ ಬದುಕು ಅವರವರಿಗೆ ಅಲ್ಲವೇ ಎಂದು ತಾನು ನಕ್ಕಳು ಅನಿ.

       ಮುಂದೆ ಹೇಳು ನಿನ್ನ ಕಥೆಯ ಎಂದರು. ಮುಂದುವರಿಸುತ್ತಾ ಎಲ್ಲಾ ಆಸ್ತಿಗಳ ಮಾರಿ ಬೇರೆ ದೇಶಕ್ಕೆ ಹೋಗಬೇಕು ಎಂದುಕೊಂಡಿರುವೆ. ಅಮ್ಮನನ್ನು ಕರೆದುಕೊಂಡು ಇಲ್ಲವೇ ಅಮ್ಮನಿಗೆ ಉಳಿಯಲು ಒಂದು ವ್ಯವಸ್ಥೆಯನ್ನು ಮಾಡಿ ಹೋಗಬೇಕು ಅಂದುಕೊಂಡಿದ್ದೇನೆ ಎಂದಳು. ಕಥೆಗಾರರಿಗೆ ಇದು ಸಾಮಾನ್ಯ ಕಥೆಯಲ್ಲ ಅನ್ನಿಸಿತು. ಅಂದರೆ ಹುಡುಗಿ ಇರುವ ಆಸ್ತಿಯ ಬಗ್ಗೆ ಹೇಳಿದೆಯಾ ?ಎಂದರು. ಇರುವ ಆಸ್ತಿಯೆಲ್ಲಾ ಮಾರಿದರೆ ಒಂದಿಷ್ಟು ಹಣ ಕೈ ಸೇರುತ್ತದೆ. ಕಂಪನಿಯ ಕೆಲಸವಿದೆ. ಕೈ ತುಂಬಾ ಸಂಬಳ ಎಲ್ಲಾ ಸೇರಿ ಚೆಂದದ ಜೀವನ ಮಾಡಬಹುದು. ಇನ್ನು ಈ ಕಡೆ ವಿಚಾರವೂ ಇರಲ್ಲ. ನೆಮ್ಮದಿಯೂ ಹಾಳಾಗಲ್ಲ. ಹಾಯಾಗಿ ಆರಾಮಾಗಿರಬಹುದು. ಅಮ್ಮನಿಗೆ ಏನು ವ್ಯವಸ್ಥೆ ಮಾಡುವುದು ಎಂದು ವಿಚಾರ ಮಾಡುತ್ತಿರುವೆ‌. ತುಂಬಾ ಸಮಯ ಅಮ್ಮನಿಗೆ ಹೇಳಿದೆ. ನೀನು ಬಂದು ಬಿಡು ನನ್ನ ಜೊತೆ‌. ನಾವಿಬ್ಬರೂ ಹೋಗಿ ಆರಾಮಾಗಿ ರೋಣ ಎಂದು. ಆದರೆ ಅಮ್ಮನಿಗೆ ನಂಬಿಕೆ ಜಾಸ್ತಿ. ತನ್ನ ಸಂಬಂಧಿಕರು ,ತವರಿನವರು ಊರಿನವರು, ಪರಿಚಯದವರು ಯಾರು ಇರಲ್ಲ ನಾನು ಬರಲ್ಲ ಅಲ್ಲಿಗೆ ಅನ್ನುತ್ತಿದ್ದಾರೆ. ಹೇಗೂ ಅಮ್ಮ ಗಟ್ಟಿಯಾಗಿದ್ದಾರೆ. ಅವರಿಲ್ಲೇ ಇರಲಿ ಕೈಲಾಗದಿದ್ದಾಗ ವ್ಯವಸ್ಥೆ ಮಾಡಿದರಾಯ್ತು ಎಂದು ಸುಮ್ಮನಾದಳು.

      ಕಥೆಗಾರರು ಯೋಚಿಸಿ ಸುಮ್ಮನಾದರು. ಅವರಿಗೆ ತಡೆಯಲಾಗಲಿಲ್ಲ. ಕೇಳಿದರು ವ್ಯವಸ್ಥೆ ಅಂದರೆ ಏನು? ಎಂದು. ತಟ್ಟನೆ ಅಂದಳು ಅಮ್ಮನನ್ನು ನೋಡಿಕೊಳ್ಳಲು ಒಬ್ಬರನ್ನ ವ್ಯವಸ್ಥೆ ಮಾಡಿದರೆ ಅಮ್ಮ ಸುಖವಾಗಿ ಇರುತ್ತಾಳೆ. ನಾನು ಸುಖವಾಗಿ ಇರಬಹುದು ಎಂದು. ಇಲ್ಲವೇ ಒಂದು ಆಶ್ರಮದಲ್ಲಿ ವ್ಯವಸ್ಥೆ ಮಾಡಿದರೆ ಆಯಿತು ಚೆನ್ನಾಗಿರುವಲ್ಲಿ ಎಂದಳು. ಕಥೆಗಾರರು ಅವಳ ಮಾತಿಗೆ  ಬೆವರಿದ್ದರು. ಸೂರ್ಯ ಮುಳುಗುತ್ತಾ ಇದ್ದ. ತಂಗಾಳಿ ಬೀಸುತಲಿತ್ತು. ಕಥೆಗಾರರು ಚೇತರಿಸಿಕೊಳ್ಳಲು ಸುಮಾರು ಹೊತ್ತು ಬೇಕಾಯಿತು. ಸುಮ್ಮನಾದರು ಅವರು.  ಎಷ್ಟೆಲ್ಲಾ ನಂಬಿಕೆ ಇತ್ತು ಈ ಹುಡುಗಿಯ ಮೇಲೆ. ಆದರೆ ಇವಳು  ಗುಣದಲ್ಲಿ ಇಷ್ಟು ಸಣ್ಣವಳಾದಳಲ್ಲಾ ಅನ್ನಿಸಿತು. ಅವಳೇ ಅಂದಳು. ಈಗ ಬರೆಯಬಹುದಲ್ಲ ಕಥೆಯ. ಸಿಕ್ಕಿತಲ್ಲ ನಿಮಗೆ ವಿಷಯ ಎಂದು ತನ್ನಷ್ಟಕ್ಕೆ ಹೆಮ್ಮೆಯಿಂದ ನಕ್ಕಳು ಅನಿ. ಬೇಸರವಾಯಿತು ಅವರಿಗೆ. ತಂಗಿ ನೀನು ಓದಿರುವುದು ಏನು?ಎಂದರು.  ನಾನು ಓದಿರುವುದು ತಂತ್ರಜ್ಞಾನ ಎಂದಳು. ಅಂದರೆ ನೀನು ಒಂದನೇ ತರಗತಿಯಿಂದ ಎರಡನೇ ತರಗತಿ, ಮೂರನೇ ತರಗತಿ ಹೀಗೆ ಓದಿಲ್ಲವಾ? ಹಾಗೆ ಓದಿರುವುದು .ಕೊನೆಗೆ ಬಂದು ನಿಂತಿರುವುದು ಅಲ್ಲಿಗೆ ಎಂದಳವಳು. ಅಕ್ಷರಗಳಿಂದ ಓದಲು ಕಲಿತೆಯಾ? ಅಥವಾ ಎಲ್ಲವನ್ನ ಮೊದಲು ಅರಗಿಸಿಕೊಂಡ ಓದು ನಿನ್ನದಾ ?ಎಂದರು. ಅಕ್ಷರಗಳ ಕಲಿತೇ ಶಬ್ದ ವಾಕ್ಯಗಳ ಓದಿನ ಕಡೆಗೆ ಸಾಗಿದ್ದು …ಎಂದಳು. ಏಕೆ ಹಾಗೆ ಕೇಳುವಿರಿ? ಎಂದಳು‌. ಹಾಗೆ ಓದುವಾಗ ಎಂದಾದರೂ ಒಮ್ಮೆ ಪುಣ್ಯಕೋಟಿಯ ಜನಪದ ಹಾಡನ್ನು ಕೇಳಿರುವೆಯಾ? ಎಂದರು. ಕೇಳಿರುವೆ ಎಂದಳು. ಬದುಕು ಪುಣ್ಯಕೋಟಿ ಕಥೆ ಅಲ್ಲ ಎಂದಳು. ವಿಜ್ಞಾನ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ನೀವಿನ್ನೂ ಅಲ್ಲೇ ಇದ್ದೀರಾ ?  ಎಂದಳು.ಎಷ್ಟೇ ಕಾಲ ಮುಂದುವರೆದಿರಬಹುದು. ಆದರೆ ಮಾನವನ ಅಂತಃಕರಣ ,ಪ್ರೀತಿ ತಾಳ್ಮೆ ,ಆತ್ಮೀಯತೆ, ಮಮತೆ, ಬಾಂಧವ್ಯ, ಆದರ ಇವು ತಮ್ಮ ಮೂಲ ರೂಪವನ್ನು ಬದಲಿಸುವುದಿಲ್ಲ ಅಲ್ಲವೇ…. ಹಾಗೆ ಬದಲಿಸಿದರೆ ಅದು ಬದುಕಲ್ಲ. ಅದೊಂದು ಕೃತಕ ವ್ಯವಸ್ಥೆ ಅಷ್ಟೇ ಅಂದು ಕಥೆಗಾರರು ಸುಮ್ಮನಾದರು. ಮಾನವ ತಾನು ಕಲಿತ ವಿದ್ಯೆಯೊಂದಿಗೆ ಮಾತನಾಡುತ್ತಾನೆ. ಸಿರಿವಂತಿಕೆಯೊಂದಿಗೆ ಮಾತನಾಡುತ್ತಾನೆ. ಆದರೆ ಅಂತಃಕರಣದಿಂದ ಮಾತನಾಡುವುದಿಲ್ಲ ಅಲ್ಲವೇ….. ಅಂತಃಕರಣದಿಂದ ವಿಚಾರ ಮಾಡುವುದಿಲ್ಲ ಅಲ್ಲವೇ ಎಂದರು. ಎದ್ದು ಹೊರಡಲು ಅಣಿಯಾದರು. ಅನಿಗೆ ಈಗ ದಿಗಲಾಯಿತು. ಅವಳಿಗೆ ಪರಿಹಾರ ಸಿಕ್ಕಿರಲಿಲ್ಲ. ನಾನು ಏನು ಮಾಡಿದರೆ ಸರಿ ಎಂದು ನಿಮಗನಿಸುತ್ತದೆ?  ಈ ಸಮಸ್ಯೆಗೆ ಪರಿಹಾರ ಏನು? ನನ್ನ ಕಥೆಗೆ  ಅಂತ್ಯ ಏನು ಎಂದಳು?

       ಅವರವರ ಕಥೆ ಅವರೇ ಬರೆಯಬೇಕು. ನಿನ್ನಮ್ಮ ನೀನಂದುಕೊಂಡಂತೆ ಯೋಚಿಸಿದ್ದರೆ ನೀನಿನ್ನೂ ಆಶ್ರಮದಲ್ಲಿ ಇರಬೇಕಿತ್ತು. ಯಾರು ಇಲ್ಲದೇ. ಅವಳು ತಾಯಿ. ಮಕ್ಕಳಾಗದ ತನ್ನನ್ನು ಗಂಡ ಬಿಟ್ಟು ಹೋದಾಗಲೂ ಅನಾಥ ಆಗಿದ್ದ ನಿನ್ನನ್ನು ಪ್ರೀತಿಯಿಂದ ಕರೆದುತಂದು ಸಾಕಿ ನಿನ್ನಲ್ಲಿ ಸ್ವರ್ಗ ಕಂಡವಳು. ಅವಳ ಬಗ್ಗೆ ಬರೆಯಬೇಕು ಕಥೆಯಾ,ತಲ್ಲಣವಾ, ನೋವುಗಳ, ನಿನ್ನಂಥ ಸ್ವಾರ್ಥಿಯ ಬಗ್ಗೆ ಅಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿ ಕಥೆಗಾರರು ಹೊರಟು ಹೋದರು.

        ಸೂರ್ಯ ಮುಳುಗುತ್ತಲಿದ್ದ. ಅನಿ ಇಪ್ಪತ್ತಾರು ವರ್ಷಗಳ ಹಿಂದಕ್ಕೆ ಸಾಗಿದ್ದಳು. ತಾನು ಈ ವರೆಗೆ ಸಾಗಿದ ಬದುಕು ತನ್ನದೇ ಅಥವಾ ಬೇರೆಯವರದ್ದೇ ಎಂದು ಅಂದುಕೊಳ್ಳಲು ಅವಳಿಗೆ ಸಮಯ ಬೇಕಾಯಿತು. ಬದುಕಿದರೆ ನನಗಾಗಿ ತ್ಯಾಗ ಮಾಡಿದ ಇಂತಹ ಅಮ್ಮನ ಜೊತೆ ಬದುಕಬೇಕು. ಕಥೆಗಾರರು ಹೇಳಿದ್ದು ಸರಿ ಇದೆ. ನಾನು ಕಲಿತ ವಿದ್ಯೆ ನನಗೆ ವಿವೇಕವನ್ನು ಕೊಡಲಿಲ್ಲ. ಅಮ್ಮನ ಪ್ರೀತಿಯನ್ನ ಅಂತಃಕರಣವನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲವಾ? ಅಪ್ಪ ಏಕೆ ಬಿಟ್ಟು ಹೋದರು ಎಂಬ ಪ್ರಶ್ನೆಗೆ ನಗುವಲ್ಲೇ ಉತ್ತರ ಕೊಟ್ಟ ಅಮ್ಮನ ಮುಖ ನೆನಪಾಯಿತು. ಜನರೆಲ್ಲ ಪ್ರೀತಿಯಿಂದ ಮಾತನಾಡಿಸುವ ಅಮ್ಮನ ಮುಖ ಮತ್ತೆ ನೆನಪಿಗೆ ಬಂತು. ಓಡಿ ಹೋಗಿ ಅಮ್ಮನ ಮಡಿಲಲ್ಲಿ ಮಗುವಾಗಿ ಕೇಳಬೇಕೆನಿಸಿತು. ನಾನೇ ಒಂದು ಕಥೆಯೇ ಎಂದು. ಇಂಥ ಅಮ್ಮನನ್ನ ಸ್ವಾರ್ಥಕ್ಕಾಗಿ ನಾನು ಬಿಟ್ಟುಬಿಡು ಯೋಚನೆ ಮಾಡಿದ್ದೆನಲ್ಲಾ…. ನಾನು ಅನಾಥಳಾಗಿದ್ದಳು. ನಾನು ಅನಾಥಳು ಎಂಬ ಭಾವ ತೋರಿಸದೇ ಬದುಕಿದವಳು ಅಮ್ಮ. ಅವಳನ್ನು ನಾನು ಅನಾಥಳನ್ನಾಗಿ ಮಾಡಬಾರದು. ಉಸಿರು ಇರುವವರೆಗೂ ಅಮ್ಮನನ್ನು ಪ್ರೀತಿಸಬೇಕು. ಇನ್ನೆಂದೂ ಆಸೆ,ಅಂತಸ್ತುಗಳ ಮೇಲೆ ಬದುಕು ನಿಲ್ಲಸಬಾರದು. ಬದುಕು ಬದುಕಿಸಬೇಕು ಉಸಿರು ಇರುವವರೆಗೆ ಭಾವಗಳ ಜೀವಿಗಳ ಎನ್ನುವ ಸಾಲುಗಳು ಮನಸಿನ ಮಾತಾಗಿ ಅನಿಯಲ್ಲಿ ಉಳಿಯಿತು ಒಂದು ನೆನಪಾಗಿ, ಕಥೆಯಾಗಿ…….


12 thoughts on “ನಾ ಒಂದು ಕಥೆಯಾಗಲೇ……ನಾಗರಾಜ ಬಿ.ನಾಯ್ಕ ಅವರ ಕಥೆ

    1. ಕಥೆ ಚೆನ್ನಾಗಿದೆ. ಸೂಕ್ಷ್ಮ ಗ್ರಾಹಿತನದ ಅಭಿವ್ಯಕ್ತಿ ಎದ್ದು ಕಾಣುತ್ತಿದೆ ಧನ್ಯವಾದಗಳು

  1. ಇಲ್ಲದವರಿಗೆ ಇಲ್ಲ ಎನ್ನುವುದು ಪ್ರಶ್ನೆ ಆಗುವುದಿಲ್ಲ..
    ಇಲ್ಲ ಎನ್ನುವುದು ಅಷ್ಟಾಗಿ ಕಾಡುವುದಿಲ್ಲ. ನಿಜ ಅಲ್ವಾ..!? ಇರುವುದರಲ್ಲೇ ತೃಪ್ತಿ ಪಡೆಯುವ, ಖುಷಿ ಪಡುವ ಸುಖೀ ಜೀವಿಗಳು. ಇದ್ದವರಿಗೆ ಕೋಟಿ ಕೋಟಿ ಇದ್ದರೂ ಸಾಕು ಎನ್ನುವುದಿಲ್ಲ.. ಅತೃಪ್ತಿ ಅವರನ್ನ ಸದಾ ಕಾಡುತ್ತದೆ. ನೆಮ್ಮದಿ ಎನ್ನುವುದು ಅವರಿಗೆ ಕನ್ನಡಿಯ ಗಂಟೆ ಸರಿ. ಹುಡುಕ ಹೊರಟರೆ ಇಲ್ಲಿ, ಅತೃಪ್ತ ಆತ್ಮಗಳಾಗಿ ಬಿಡುತ್ತೇವೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ತನ್ನ ನೈತಿಕ ಮೌಲ್ಯಗಳನ್ನು ಕಳೆದು ಕೊಂಡು ಬಿಟ್ಟಿದೆ. ಹಣದ ಹಿಂದೆ ಓಡುವುದನ್ನ ಕಲಿಸುತ್ತದೆಯೆ ಹೊರತು, ಜೀವನ ಪ್ರೀತಿಯನ್ನ ಬಾಂಧವ್ಯ ಬೆಳೆಸುವ ಕಾರ್ಯವನ್ನು ಮಾಡುವುದಿಲ್ಲ. ತನ್ನ ಸ್ವಂತ ಸುಖ ಮರೆತು ಹಗಲು ರಾತ್ರಿ ಗಂಧದಂತೆ ತಮ್ಮ ಜೀವ ತೇದಿ
    ಮಕ್ಕಳ ಸುಖಕ್ಕಾಗಿ ಪರಿಶ್ರಮಿಸುವ, ತಾಯಿ, ತನ್ನ ಸ್ವಂತ ಸುಖಕ್ಕಾಗಿ ದೇಶ ತೊರೆಯಲು ಸಿದ್ದವಾಗುವ ಮಗಳು ಅನಿ.. ಇಬ್ಬರದ್ದು ವೈರುದ್ಯ ಗುಣಗಳು… ಕೊನೆಗೆ ಸುಖಾಂತ್ಯ.. ಆರಂಭದಲ್ಲಿ ತುಂಬ ರೋಚಕತೆ ಹುಟ್ಟಿಸುತ್ತದೆ ಒಂದೇ ಸಮನೆ ಓದಿಸಿಕೊಂಡು ಹೋಗುತ್ತದೆ. ಚೆನ್ನಾಗಿ ಮೂಡಿ ಬಂದಿದೆ
    ನಾನೂ ಒಂದು ಕಥೆಯಾಗಲೇ…

    ನಾಗರಾಜ್ ಜಿ. ಎನ್. ಬಾಡ

  2. ಅದ್ಭುತ ಪದ ಜೋಡಣೆ…. ಹೆತ್ತವರ ಕುರಿತು ಮಕ್ಕಳಿಗಿರಬೇಕಾದ ಜವಾಬ್ದಾರಿಯನ್ನು ತುಂಬಾ ಸೂಕ್ಷ್ಮವಾಗಿ ನಿರೂಪಿಸಿದ್ದೀರಿ…

  3. ಎಲ್ಲರ ಅಭಿಮಾನದ ಓದಿಗೆ ತುಂಬಾ ತುಂಬಾ ಧನ್ಯವಾದಗಳು. ಸಂಗಾತಿ ಬಳಗಕ್ಕೆ, ಹಾಗೂ ತಮ್ಮೆಲ್ಲರ ಪ್ರೋತ್ಸಾಹದ ಮಾತುಗಳಿಗೆ ತುಂಬಾ ಧನ್ಯವಾದಗಳು………

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ.
    ಕುಮಟಾ.

  4. ಆನಿಗೆ ತಪ್ಪನ್ನು ಅರ್ಥ ಮಾಡಿಸಿದ ಕವಿಗೆ ವಂದನೆಗಳು. ಪ್ರತಿಯೊಬ್ಬರಿಗೂ ಹಾಗೆ. ತಾನು ಮಾಡಿದ್ದು ಸರಿಯೇ ತಪ್ಪೆ endu ತಿಳಿಸುವ ಗುರು ಜೊತೆಗಿದ್ದre ಅವರ balu ಬಂಗಾರ ಆಗುವುದು. ಕಥಾ ಸಂಕಲನ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

Leave a Reply

Back To Top