ಹೆಚ್. ಎಸ್. ಪ್ರತಿಮಾ ಹಾಸನ್ ರವರ ಕೃತಿ’ಮನದಾಳದ ಪ್ರತಿಬಿಂಬ’ದ ಬಗ್ಗೆ-ಡಾ ಕೊಳ್ಚಪ್ಪೆ ಗೋವಿಂದ ಭಟ್

ಬರೆಯುವುದೆಂದರೆ ಒಂದು ತಪಸ್ಸು. ಬರೆಯುವುದು ಎಷ್ಟು ಮುಖ್ಯವೋ ಬರೆಯುವ ಮನ:ಸ್ಥಿತಿಯು ಅಷ್ಟೇ ಮುಖ್ಯ. ಲೇಖನ ಬರೆಯುವಾಗ ತಾರ್ಕಿಕ ಜೋಡಣೆ ಅನುಸರಿಸಿದರೆ ಓದುಗನ ಮನ ಸೆಳೆಯಲು ಸಾಧ್ಯ. ಲೇಖನ ಓದಿಸಿಕೊಂಡು ಹೋಗಬೇಕಾದ್ದು ಅದರ ಯಶಸ್ಸಿನ ಗುಟ್ಟು ಎನ್ನಬಹುದು. ಲೇಖನವೂ ಆಯ್ದ ವಿಷಯದ ಕುರಿತ ಮುಖ್ಯ ಅಂಶಗಳನ್ನು ಆಸಕ್ತಿ ಮೂಡಿಸುವಂತೆ ಹಿಡಿದಿಡಬೇಕು. ಒಟ್ಟಿನಲ್ಲಿ ಹೇಳಬೇಕೆಂದರೆ ಲೇಖನ ಕಲೆ ಒಂದು ಕುಸುರಿ ಕೆಲಸದ ಹಾಗೆ.

ಲೇಖನ ಒಂದು ಗದ್ಯ ಪ್ರಕಾರವಾಗಿದ್ದು ಜನರಿಗೂ ಉಪಯುಕ್ತವಾಗುವಂತೆ ಬರೆಯಬಹುದಾದ ಪ್ರಕಾರವಾಗಿದೆ. ದಿನನಿತ್ಯ ಕಾಣುವ ಆಗುಹೋಗುಗಳನ್ನು ಜನಸಾಮಾನ್ಯರ ದೃಷ್ಟಿಯಲ್ಲಿ ವಿವೇಚಿಸಿ ಗದ್ಯರೂಪದಲ್ಲಿ ಬರೆದರೆ ಲೇಖನವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ತಮ್ಮ ಲೇಖನಗಳ ಮೂಲಕ ಜನಪ್ರಿಯರಾಗಿದ್ದಾರೆ. ಯಾವುದೇ ವಿಷಯದ ಬಗ್ಗೆ ತಲಸ್ಪರ್ಶಿಯಾಗಿ ವಿವೇಚಿಸಿ ಲೇಖನ ತಯಾರಿಸುವುದು ಅವರ ಹೆಗ್ಗಳಿಕೆ. ‘ಮನದಾಳದ ಪ್ರತಿಬಿಂಬ’ ಅವರ ಚೊಚ್ಚಲ ಲೇಖನ  ಸಂಕಲನ. 42 ವೈವಿಧ್ಯಮಯ ವಿಷಯಗಳನ್ನು ಆಯ್ದುಕೊಂಡು ಬರೆದ ಕೃತಿ ಇದು. ಪ್ರತಿಯೊಂದು ಲೇಖನವನ್ನು ಅದಕ್ಕೊಪ್ಪುವ ಚೌಕಟ್ಟಿನಲ್ಲಿ ರಚಿಸುವುದು ಲೇಖನಗಳಿಗೆ  ಹೆಚ್ಚಿನ ಓದುಗಾರಿಕೆಯನ್ನು ನೀಡುತ್ತದೆ.


ಪ್ರತಿಯೊಂದು ಲೇಖನವೂ ಒಂದು ಯುಕ್ತ ಮುಕ್ತಕದೊಂದಿಗೆ ಪ್ರಾರಂಭವಾಗುತ್ತದೆ. ಅದಕ್ಕೆ ಲೋಕ ರೂಢಿಯನ್ನು  ಆರೋಪಿಸಿ ಲೇಖನ ಮುಂದುವರಿಯುತ್ತದೆ. ವಿವಿಧ ವಿಷಯ ಮೂಲಗಳಿಂದ, ತತ್ವ ಮೂಲಗಳಿಂದ ಮತ್ತು ಲೇಖಕಿಯ ಚಿಂತನಾ ಲಹರಿಯಿಂದ  ಲೇಖನವು ಸುಸಂಪನ್ನಗೊಳ್ಳುತ್ತದೆ.  ಪ್ರತಿಯೊಂದು ಲೇಖನವೂ ಸಮಾಜ ಮುಖಿಯಾಗಿದ್ದು ಉತ್ತಮ ಆಶಯವನ್ನು ಗರ್ಭೀಕರಿಸಿಕೊಂಡು ಬೆಳೆಯುತ್ತಾ ಹೋಗುತ್ತದೆ. ಕೃತಿಯ ಆದ್ಯಂತ ಲೇಖನಗಳಲ್ಲಿ ಸೂಕ್ತವಾದ ಗಾದೆ ಮಾತುಗಳು, ಪಕ್ವ ಅನುಭವದ ಚಿಂತನೆಗಳು ಓದಿನ ಆನಂದವನ್ನು ಹೆಚ್ಚಿಸುತ್ತವೆ.

ಲೇಖನ ಸಂಕಲನದಲ್ಲಿ  ಲೇಖಕಿಯ ಬರಹ ಬಹುಮುಖವಾಗಿ ಹೊರಹೊಮ್ಮಿದೆ. ವಿಷಯ ವೈವಿಧ್ಯ, ಬರವಣಿಗೆಯ ಶೈಲಿ ಸ್ವಂತಿಕೆಯನ್ನು ಹೊಂದಿರುವುದರಿಂದ  ಮತ್ತು ಚಿಂತನಾಜನ್ಯವಾಗಿರುವುದರಿಂದ ಏಕತಾನತೆ ಎಲ್ಲಿಯೂ ಮೂಡುವುದಿಲ್ಲ. ಲೇಖಕಿಯ ಅನುಭವ ಬರಹಗಳಲ್ಲಿ ಹಾಸು ಹೊಕ್ಕಾಗಿರುವುದರಿಂದ  ಪ್ರತಿಯೊಂದೂ ರಸ ವಿಶೇಷವನ್ನು ತೋರುತ್ತದೆ.
ಕನ್ನಡದ ಕಂಪು ಎಂಬ ಮೊದಲ ಲೇಖನದಲ್ಲಿ  ಕನ್ನಡದ ಕಂಪನ್ನು ಬೀರಿದ ಹಳೆ ತಲೆಮಾರಿನ ಲೇಖಕರನ್ನು ಸ್ಮರಿಸುತ್ತಾ ಕನ್ನಡವನ್ನು ಉಳಿಸಿ ಬೆಳೆಸಲು ಹಲವು ಉಪಕ್ರಮಗಳನ್ನು ಸೂಚಿಸಿದ್ದಾರೆ. ಭಾವನಾತ್ಮಕವಾಗಿ ಕನ್ನಡವನ್ನು ತಮ್ಮ ಅಮ್ಮನೆಂದು ತಿಳಿಯಬೇಕೆಂಬ ಸಂದೇಶವನ್ನು ಪ್ರತಿಪಾದಿಸಿದ್ದಾರೆ. ಆರಂಭಿಕ ಲೇಖನದಿಂದ ಕೃತಿಗೆ ಉತ್ತಮ ಪ್ರವೇಶ ನೀಡಿದಂತಾಗಿದೆ.
‘ಕಾಫಿ ಬೇಕು ಕಾಫಿ’ ಲೇಖನ ಒಂದು ಅನುಭವದ ನಿರೂಪಣೆ ಎನ್ನಬಹುದು. ಸಾಹಿತ್ಯ ಕಾರ್ಯಕ್ರಮ ಒಂದಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಲೇಖಕಿ ಜನಸಾಮಾನ್ಯರ ದೈನಂದಿಕ ಜೀವನ ಶೈಲಿಯಾದ ಬೆಳಗ್ಗಿನ ಕಾಫಿಗಾಗಿ ಹುಡುಕಾಡಿ ಪಡೆದ ಅನುಭವ ರೋಚಕವಾಗಿ ಮೂಡಿದೆ. ಇರುವ ಮೂರು ದಿನದ ಬಾಳಿನಲ್ಲಿ ಇತರರಿಗೆ ಒಳಿತನ್ನು ಮಾಡುತ್ತಾ ಸಾಗಬೇಕಾಗಿದೆ ಎಂಬುವ ಸಂದೇಶ ಶಕ್ತಿಯುತವಾಗಿ ಮೂಡಿದೆ.

ಮಾನವೀಯ ಸಂಬಂಧಗಳು ಲೇಖಕಿ ಪ್ರತಿಮಾ ಅವರ ಮೆಚ್ಚಿನ ಆಸಕ್ತಿ ಎನಿಸುತ್ತದೆ. ‘ಮರೆಯದ ನೆನಪು’ ಲೇಖನದಲ್ಲಿ ಜೀವನದಲ್ಲಿ ಎದುರಾಗುವ ಸಂಬಂಧಗಳನ್ನು ಬಲಪಡಿಸುವುದರ ಬಗೆಗೆ ಅವಲೋಕನವಿದೆ. ನಮ್ಮ ಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿಗಳು ನಮಗೆ ಆಪ್ತರಾಗುತ್ತಾರೆ. ಅಂತಹ ಬಂಧಗಳನ್ನು ಕಾಲದಿಂದ ಕಾಲಕ್ಕೆ ನವೀಕರಿಸಿ ಸುಸ್ಥಿತಿಯಲ್ಲಿ ಉಳಿಸಲು ವಿಶೇಷ ಪ್ರಯತ್ನ ಬೇಕಾಗುತ್ತದೆ. ಇಲ್ಲದಿದ್ದರೆ ಸಂಬಂಧಗಳು ಬರಡು ನೆಲದಲ್ಲಿ ಬಿತ್ತಿದ ಬೀಜದಂತೆ ಸೊರಗಿ ಹೋಗುತ್ತವೆ ಎಂಬ ಉಪಯುಕ್ತ ಆಶಯ ಚೆನ್ನಾಗಿ ಮೂಡಿ ಬಂದಿದೆ.
ಲೇಖನದ ವಸ್ತು ವಿಷಯಗಳ ಆಧಾರದ ಮೇಲೆ ಲೇಖಕಿಯ ಬರವಣಿಗೆಯ ದಾರಿ ಬದಲಾಗುತ್ತದೆ. ಇದು ಲೇಖನಗಳಿಗೆ ಹೆಚ್ಚಿನ ಬಂಧವನು ಕೊಡುತ್ತದೆ.  ಸಂವೇದನಾತ್ಮಕ ವಿಷಯವಾಗಿದ್ದರೆ ಎಳೆಗಳನ್ನು ಹಿಡಿಯುತ್ತಾ ತಾವು ನೀಡಬೇಕಾದ ಸಂದೇಶಗಳನ್ನು ಸಶಕ್ತವಾಗಿ ಮುಂದಿಡುತ್ತಾರೆ.
ಸಾಮಾನ್ಯವಾಗಿ ತಾಯಿಯೇ ಎಲ್ಲರಿಗೂ ಆಪ್ತಳು ಮತ್ತು ಪ್ರೀತಿ ಪಾತ್ರಳು. ಸಾಮಾನ್ಯ ಅಭಿಪ್ರಾಯ ಹೀಗಿರುವಾಗ ಅಪ್ಪನಿಗೆ ಹೆಚ್ಚಿನ ಪ್ರಾಧಾನ್ಯತೆ ಸಿಗುವುದಿಲ್ಲ. ‘ಅಪ್ಪನೆಂಬ ಹೀರೋ’ ಎಂಬ ಶೀರ್ಷಿಕೆಯ ಲೇಖನದಲ್ಲಿ ಅಪ್ಪ ಹೇಗೆ ಮುಖ್ಯನಾಗುತ್ತಾನೆ ಎಂಬ ವಿವೇಚನೆ ಇದೆ. ಈ ಲೇಖನದಲ್ಲಿ ಅಪ್ಪನಿಗೆ ಸಲ್ಲಬೇಕಾದ ಗೌರವ, ಪ್ರೀತಿ ,ಆದರ ಮತ್ತು ಪ್ರಾಮುಖ್ಯತೆ ದೊರಕಿಸಿ ಕೊಟ್ಟಿದ್ದಾರೆ.
ಈಗಿನ ದಿನಗಳಲ್ಲಿ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ಬೆಳೆಯುತ್ತಿದೆ. ಯೋಗದ ವಿಧಾನದಿಂದ  ಆರೋಗ್ಯವನ್ನು ಸುಧಾರಿಸಲು ಮಾಡುವ ಜೀವನ ಕ್ರಮವಾಗಿದೆ. ಅದರ  ಪ್ರಯೋಜನಗಳು, ವಿಧಾನಗಳು, ಅಭ್ಯಾಸದ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿ ಓದುಗರ ಮುಂದಿಟ್ಟಿದ್ದಾರೆ. ಇದು ಒಂದು ಸಮಗ್ರ ಲೇಖನವಾಗಿದೆ.

ಭಕ್ತಿ ಎಂಬುದು ಭಾವನಾತ್ಮಕ ಅನುಸರಣೆ. ಮನಸ್ಸಿನ ಉತ್ತಮತೆಗೆ ಮತ್ತು ಹಿತಕ್ಕೆ ಭಕ್ತಿ ಮುಖ್ಯವಾಗುತ್ತದೆ. ಇದೇ ಈ ಲೇಖನದ ಮುಖ್ಯ ಅಡಕ.
ಪತ್ರಕರ್ತರು ಮಾಧ್ಯಮದ ವೃತ್ತಿಪರರು. ಸತ್ಯ ಪ್ರತಿಪಾದನೆ ಅವರ ಮುಖ್ಯ ಧರ್ಮ. ಅವರು ತಮ್ಮ ಧರ್ಮವನ್ನು ಹೇಗೆ ಪಾಲಿಸುತ್ತಾರೆ ಎನ್ನುವುದು ಪತ್ರಕರ್ತನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇದನ್ನು ವಿವೇಚಿಸಿದ ಲೇಖನ ಪತ್ರಕರ್ತನ ಬದುಕಿನ ಮೇಲೆ ಬೆಳಕು ಚೆಲ್ಲಿದೆ.
ಮನಸ್ಸು ನಮ್ಮ ಬದುಕನ್ನು ನಿಯಂತ್ರಿಸುವ ದೇಹದ ಮುಖ್ಯವಾದ ಅಂಗವಾಗಿದೆ. ಒಬ್ಬೊಬ್ಬರದು ಒಂದೊಂದು ಮನೋ ಪ್ರವೃತ್ತಿ ಇರುತ್ತದೆ. ಕೆಲವರಿಗೆ ಮನೋ ವೈಕಲ್ಯಗಳು ಘಾಸಿಗೊಳಿಸುತ್ತವೆ. ಮಾನಸಿಕ ಖಿನ್ನತೆ ಅಂತಹ ಒಂದು ಮನೋ ಸ್ಥಿತಿ. ಇದು ಹಂತ ಹಂತವಾಗಿ ಮನುಷ್ಯನನ್ನು ದುರ್ಬಲಗೊಳಿಸುವಂತಹದು. ಮನೋ ವ್ಯಾದಿಗಳನ್ನು ಹೇಗೆ ತಡೆಯಬಹುದೆಂಬ ಮಾಹಿತಿಗಳು ಮಾನಸಿಕ ಖಿನ್ನತೆ ಎಂಬ ಲೇಖನದಲ್ಲಿ ಮೂಡಿಬಂದಿವೆ. ಎಲ್ಲರಿಗೂ ಅರಿವಿರಬೇಕಾದ ಮನೋವೈಜ್ಞಾನಿಕ ಅಂಶಗಳನ್ನು ಈ ಲೇಖನದಲ್ಲಿ ಒಡ ಮೂಡಿಸಿದ್ದಾರೆ.
ಸಾಹಿತ್ಯ ಲೋಕದಲ್ಲಿ ತಾಯಿಯ ಬಗ್ಗೆ ಬರೆದಷ್ಟು ಲೇಖನಗಳು ಬೇರೆ ಯಾವುದೇ ವಿಷಯದ ಬಗ್ಗೆ ಬರೆದಿರಲಾರರು. ತಾಯಿಯ ಮಮತೆ ಅಂತಹ ಒಂದು ಸಂಬಂಧ. ಅದೇ ಶೀರ್ಷಿಕೆಯ ಲೇಖನದಲ್ಲಿ ತಾಯಿ ಮಾಡುವ ಮಹಾ ಕಾರ್ಯಗಳ ಬಗ್ಗೆ ಸವಿವರವಾದ ಸಂವೇದನಾತ್ಮಕ ವಿವರಗಳಿಗೆ.
ಪತಿ ಪತ್ನಿಗಳದ್ದು ಒಂದು ಮನೋದೈಹಿಕ  ಸಂಬಂಧ. ಅದು ಜೀವನದ ಸಫಲತೆಗೆ ಒಂದು ಸೂತ್ರವೂ ಆಗಿದೆ. ಇದನ್ನು ಸದೃಢವಾಗಿ ಉಳಿಸಬೇಕಾದರೆ ಅನುಸರಿಸಬೇಕಾದ ಜೀವನ ಕ್ರಮ ಮತ್ತು ಸಂವೇದನೆಗಳನ್ನು ಈ ಲೇಖನದಲ್ಲಿ ಚೆನ್ನಾಗಿ ಮೂಡಿಸಲಾಗಿದೆ.

ಪ್ರೀತಿ ಎಂಬುದು ಒಂದು ಮಹತ್ವದ ದ್ರವ್ಯ. ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸಲು ಪ್ರೀತಿಯ ಪ್ರಾಮುಖ್ಯತೆಯನ್ನು ವಿಸ್ತರಿಸಿ ಸೋದಾರಣವಾಗಿ ತಿಳಿಸಿದ್ದಾರೆ.
ಸಮಯವು ನಮ್ಮ ಬದುಕಿನಲ್ಲಿ ಮುಖ್ಯವಾದ ವಸ್ತು ಮತ್ತು ಸಂಪನ್ಮೂಲ. ಅದನ್ನು ಸಮರ್ಪಕವಾಗಿ ಬಳಸದಿದ್ದರೆ  ದುರ್ವ್ಯಯವಾಗುವುದು ಮತ್ತು ಸಾಧನೆಯನ್ನು  ಕುಂಟಿತಗೊಳಿಸುವುದು ಎಂಬ ಸಂದೇಶವನ್ನು ಸೂಕ್ತವಾಗಿ ಕೊಟ್ಟಿದ್ದಾರೆ.
ಈ ಲೇಖನ ಮಾಲೆಯಲ್ಲಿ ಮೂಡಿ ಬಂದ ಅಪರೂಪದ ಲೇಖನ ‘ಮಂಗಳಮುಖಿ’ಯರ ಕುರಿತಾದದ್ದು. ಅದೇ ಶೀರ್ಷಿಕೆಯಲ್ಲಿ ಮೂಡಿಬಂದಿದೆ. ಅವರೊಡನೆ ಚರ್ಚಿಸಿ ಪಡೆದ ಅನುಭವದಿಂದ ಮಂಗಳಮುಖಿಯರ ಹೀನಾಯ ಬದುಕು, ಅವರ ಭಾವನೆಗಳು ಅವರ ಸಾಮಾಜಿಕ ಭಿಕ್ಷಾಟನೆಯ ಬದುಕಿನ ನಿರ್ವಹಣೆ ಮುಂತಾದ ಆಯಾಮಗಳ ಬಗ್ಗೆ  ಮತ್ತು ಸಮಾಜದ ದೃಷ್ಟಿ ಮತ್ತು ಧೋರಣೆಗಳ ಬಗ್ಗೆ ಸವಿವರ ಮಾಹಿತಿಯನ್ನು ಕಟ್ಟಿಕೊಟ್ಟಿದ್ದಾರೆ.
ನೀರು ಒಂದು ಅಮೂಲ್ಯ ಸಂಪನ್ಮೂಲ. ವಿಪುಲವಾಗಿ ಸಿಗುತ್ತದೆ ಎಂಬ ತಪ್ಪು ಧೋರಣೆಯಿಂದ ಅದರ ದುರ್ವ್ಯಯ  ಮನುಷ್ಯ ಬದುಕನ್ನು ಅಪಾಯಕ್ಕೆ  ತಳ್ಳಬಹುದು ಎಂಬ ಸಕಾಲಿಕ ಎಚ್ಚರಿಕೆ ಈ ಲೇಖನದಲ್ಲಿದೆ. ಅದರ ಸೂಕ್ಷ್ಮ ಬಳಕೆ ಈ ಲೇಖನದ ಕೇಂದ್ರ ಸಂದೇಶ.

ಹಬ್ಬಗಳು ನಮ್ಮ ಸಂಸ್ಕೃತಿಯ ಮುಖ್ಯ ಅಂಶಗಳು. ಈ ಸಂಕಲನದಲ್ಲಿ ವಿಜಯದಶಮಿ, ಮೊಹರಂ, ರಕ್ಷಾ ಬಂಧನ, ಮಕರ ಸಂಕ್ರಾಂತಿ, ಶಿವರಾತ್ರಿ, ಪ್ರೇಮಿಗಳ ದಿನಾಚರಣೆ ಮುಂತಾದ ಮುಖ್ಯ ಆಚರಣೆಗಳ ಬಗ್ಗೆ ಲೇಖನಗಳು ಗಮನಹರಿಸಿವೆ.
ಇಂದಿನ ದಿನಗಳಲ್ಲಿ ಪ್ರವಾಸಿ ತಾಣಗಳಿಗೆ ಮತ್ತು ಧಾರ್ಮಿಕ ಸ್ಥಳಗಳಿಗೆ ಭೇಟಿಕೊಟ್ಟು ಸಂತೃಪ್ತರಾಗುವುದು ಒಂದು ಜೀವನ ಕ್ರಮವೇ ಆಗಿದೆ. ಅಂತಹ ಸ್ಥಳಗಳಾದ ಕದ್ರಿ ಮಂಜುನಾಥೇಶ್ವರ ಕ್ಷೇತ್ರ, ಹಾಸನಾಂಬ ದೇವಾಲಯ ಮುಂತಾದ ಯಾತ್ರಾ ಸ್ಥಳಗಳ ಪೌರಾಣಿಕ, ಐತಿಹಾಸಿಕ ಮತ್ತು ಐತಿಹ್ಯ ಆಧಾರಿತ ವಿವರಗಳ ಜೊತೆಗೆ ಪ್ರವಾಸ ಕಥನವಿದೆ.
ಜನಸಾಮಾನ್ಯರಿಗೆ ಭಾವನಾತ್ಮಕವಾಗಿ ಕೆಲವು ವಿಷಯಗಳು ಹೆಚ್ಚಿನ ಆಸಕ್ತಿಯ ವಿಷಯಗಳಾಗಿವೆ. ಪ್ರಕೃತಿಯ ಮಡಿಲು, ವೃದ್ಧಾಪ್ಯ ಮತ್ತು ಹೊಣೆ, ಭ್ರೂಣ ಹತ್ಯಾ ಪಾಪ,  ಪರಿಸರ ಕಾಳಜಿ, ಕಾವೇರಿ ನೀರಿನ ಒಡೆತನ  ಮುಂತಾದ ವಿಷಯಗಳು ಆಸಕ್ತಿಯ ವಿಷಯಗಳಾಗಿವೆ. ಈ ಕುರಿತ ಲೇಖನಗಳು ವಿವೇಚನಾತ್ಮಕವಾಗಿ ಸ್ವಯಂಪೂರ್ಣವಾಗಿ ಮೂಡಿಬಂದಿವೆ.
ಇಂದಿನ ವಸ್ತುಸ್ಥಿತಿಯನ್ನು ಕಂಡಾಗ ನಮ್ಮ ಸುತ್ತಮುತ್ತ ನೋಡಿದರೆ ಸ್ವಾತಂತ್ರ್ಯ ಎಲ್ಲಿದೆ ಎಂಬ ಉದ್ಗಾರ ಲೇಖಕಿಯ ಬಾಯಿಯಿಂದ ಮೂಡಿಬಂದಿರುವುದು ಸ್ವಾತಂತ್ರ್ಯದ ದುಸ್ಥಿತಿಯನ್ನು ಬೊಟ್ಟು ಮಾಡುತ್ತದೆ. ತುಂಬಾ ಮಾರ್ಮಿಕವಾದ ಲೇಖನ ಇದು.

ಸಮಾಜದಲ್ಲಿ ಶಿಕ್ಷಕರ ಜವಾಬ್ದಾರಿ ಗುರುತರವಾದದ್ದು. ಸ್ವಯಂ ಶಿಕ್ಷಕಿಯಾಗಿರುವ ಲೇಖಕಿ ಗುರುಗಳಿಗೆ ಇರಬೇಕಾದ ಹಲವು ಗುಣಗಳ ಬಗ್ಗೆ ಅವುಗಳಲ್ಲಿಯೂ ಮುಖ್ಯವಾಗಿ ತಾಳ್ಮೆಯ ಬಗ್ಗೆ ಬಲವಾಗಿ ಪ್ರತಿಪಾದಿಸಿದ್ದಾರೆ.
ಹೆಣ್ಣೇ ಬಾಳಿನ ಕಣ್ಣು, ಸ್ತ್ರೀ ಶಕ್ತಿ, ಮಹಿಳಾ ಸಬಲೀಕರಣ, ತಾಯಿತನದ ಸಂತಸ ಮುಂತಾದ ಲೇಖನಗಳು ಮಹಿಳೆಯರ ಸಮಸ್ಯೆಗಳನ್ನು ಮುನ್ನೆಲೆಗೆ ತಂದು ಚರ್ಚಿಸಿ ಸೂಕ್ತ ಪರಿಹಾರಗಳನ್ನು ಸೂಚಿಸುತ್ತದೆ.
ಸಾಮಾಜಿಕ ಕಾರ್ಯಕರ್ತೆಯಾದ ಶ್ರೀಮತಿ ಪ್ರತಿಮಾ ಹಾಸನ್  ಅವರು ದುರ್ಬಲರ ಪರವಾಗಿ ಕೆಲಸ ಮಾಡುತ್ತಾರೆ. ಬೀದಿ ವ್ಯಾಪಾರಿಗಳ ಬವಣೆ ಒಂದು ಉದಾಹರಣೆಯಾಗಿ ಆಯ್ದುಕೊಂಡು ಅವರು ಅನುಭವಿಸುವ ಅನಿಶ್ಚಿತತೆ ಮತ್ತು ನೆಲೆಯ ಬಗೆಗಿನ ಚಿಂತನೆ ಎಲ್ಲರನ್ನೂ ಯೋಚನೆಗೆ ಹಚ್ಚುತ್ತದೆ. ದೊಡ್ಡ ವ್ಯಾಪಾರಗಳು ಅವರ ಬದುಕನ್ನು ನಲುಗಿಸಿದ ಕಥೆ ಮನಮಿಡಿಯುವಂತಿದೆ. ಅಷ್ಟೇ ಅಲ್ಲದೆ ನಾವು ಸಾರ್ವಜನಿಕರು ಅವರ ಕಡೆಗೆ ವಿಶೇಷ ಗಮನ ಕೊಡಬೇಕೆಂಬ ಸಂದೇಶವನ್ನು ಕೂಡ ಸಾರಿದ್ದಾರೆ. ಇಂತಹ ಕಾಳಜಿಯೇ ಲೇಖಕಿಯ ಯಶಸ್ಸಿನ ಗುಟ್ಟು ಎಂದು ಅನಿಸುತ್ತದೆ.

ಶ್ರೀಮತಿ ಪ್ರತಿಮಾ ಹಾಸನ್  ಅವರು ತಮ್ಮ ಲೇಖನಗಳಲ್ಲಿ ತಲಸ್ಪರ್ಶಿಯಾದ ಒಳನೋಟಗಳನ್ನು ತೋರಿಸುವುದು ಮಹತ್ವದ ಅಂಶವಾಗಿದೆ. ಆದ್ದರಿಂದಲೇ ಅವರ ಲೇಖನಗಳು ಸ್ವಯಂಪೂರ್ಣತೆಯ ದೃಷ್ಟಿಯಿಂದ ಮೌಲಿಕವಾಗಿವೆ. ಸಾಮಾನ್ಯ ಓದುಗನಿಗೆ ಇದೊಂದು ಉಪಯುಕ್ತ ಸರಕು ಎಂಬುದು ಮುಖ್ಯ ಅಂಶವಾಗಿದೆ.
ಒಟ್ಟಂದದಲ್ಲಿ ಮನದಾಳದ ಪ್ರತಿಬಿಂಬ ಲೇಖನ ಮಾಲೆ ಒಂದು ಉಪಯುಕ್ತ ಕೃತಿ. ಲೇಖಕಿಯ ಚಿಂತನಾಕ್ರಮ ಆಪ್ತವಾಗುವ ಜೊತೆಗೆ ಪ್ರತಿಪಾದಿಸುವ ಆಶಯಗಳು ಓದುಗರನ್ನು ತಟ್ಟುತ್ತವೆ, ಕಾಡುತ್ತವೆ. ಆದ್ದರಿಂದಲೇ ಈ ಕೃತಿ ಸಾರ್ಥಕ್ಯವನ್ನು ಪಡೆಯುತ್ತದೆ. ಈ ಕೃತಿಯನ್ನು ” ಕಥಾ ಬಿಂದು ಪ್ರಕಾಶನ” ದಿಂದ ಬಿಡುಗಡೆಯಾಗುತ್ತಿದ್ದು. ಪ್ರದೀಪ್ ಕುಮಾರ್ ರವರ ಸಾರಥ್ಯದಲ್ಲಿ ನಡೆಯುತ್ತಿರುವ ಕಥಾ ಬಿಂದು ಸಾಹಿತ್ಯ ಸಮ್ಮೇಳನದಲ್ಲಿ 21.1.2024 ರಂದು ನಡೆಯುತ್ತಿರುವ ಕಥಾ ಬಿಂದು ಸಾಹಿತ್ಯ ಮಾಲೆ ೨(40 ಕೃತಿಗಳ ಅನಾವರಣ) ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ಲೋಕಾರ್ಪಣೆಯಾಗಲಿದೆ.

160 ಪುಟ
250 ರೂಪಾಯಿ


Leave a Reply

Back To Top