“ಆರಕ್ಕೆ ಏರಲಾರದ ಮೂರಕ್ಕೆ ಇಳಿಯಲಾರದ ಪರಿಸ್ಥಿತಿಯ ಕೈಗೊಂಬೆಗಳು ನಾವುಗಳು…”   ಇದು ಮಧ್ಯಮ ವರ್ಗದವರು ಅನುಭವಿಸುವ ಯಾತನೆಯ ಮಾತುಗಳು… ಬೆಲೆ ಏರಿಕೆಯಾಗಲಿ, ಬೆಲೆ ಇಳಿಕೆಯಾಗಲಿ ಇವರಿಗೆ ನೋವುಗಳು ಕಡಿಮೆಯೇ ಆಗುವುದಿಲ್ಲ.  

 ‘ಮಧ್ಯಮ ವರ್ಗ’ ಎಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ, ಮೇಲ್ಮೈಪದರು ಅಲ್ಲದ, ಬಡತನದ ಕೆಳಗಿನ ಪದರು ಅಲ್ಲದ ಒಟ್ಟಾರೆ  ಇರುವ ಪರಸ್ಥಿತಿಯೇ ಮಧ್ಯಮ ವರ್ಗ’ ಎನ್ನಬಹುದು.  ಒಟ್ಟಾರೆ ಇವರು ಮಧ್ಯಮ ಮಾರ್ಗದಲ್ಲಿ ಬದುಕುವ, ಬದುಕನ್ನು ಸಾಗಿಸುವ ಜನಗಳು..!!  ಇವರು ಕುಟುಂಬ, ಮಕ್ಕಳು, ತಮ್ಮ  ಬದುಕನ್ನು ಕಟ್ಟಿಕೊಳ್ಳಲು   ಹೆಣಗಾಡುತ್ತಾರೆ.  ಸದಾ ಗಗನಕ್ಕೆರುತ್ತಿರುವ ಬೆಲೆಗಳ ಹೊಡೆತವನ್ನು ಇವರು ತಡೆದುಕೊಳ್ಳಲು ಆಗುವುದಿಲ್ಲ. ಆದರೆ ತಡೆದುಕೊಳ್ಳುವಂತೆಯೇ ವರ್ತಿಸಲೇಬೇಕು. ತಡೆದುಕೊಳ್ಳುವುದಾಗುವುದಿಲ್ಲ ಎನ್ನುವುದನ್ನು ತೋರಿಸುವಂತೆಯೂ ಇಲ್ಲ.

 ಹಾಗಾಗಿ ಇವರ ಬದುಕು ಗೊಂದಲದ ಗೂಡು, ದ್ವಂದ್ವದ ಅರಮನೆ, ಇವರು ಮೇಲುರ್ಗದವರಂತೆ ಅತ್ಯಂತ ಫ್ಯಾಶನ್ ರೀತಿಯಿಂದ ವಿಲಾಸಿ ಬದುಕನ್ನು ಮಾಡಲು ಆಗುವುದಿಲ್ಲ.
“ಬೆಲೆ ಎಷ್ಟೇ ಇರಲಿ, ನಾವು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ ನಾವೇ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತೇವೆ” ಎನ್ನುವಂತೆಯೂ ಇಲ್ಲ.

 ಇನ್ನು, “ಅಯ್ಯೋ ಬೆಲೆ ಏರಿದರೆ ಏನಾಯ್ತು ಇದ್ದುದರಲ್ಲಿಯೇ ಜೀವನ ಮಾಡಿದರಾಯಿತು” ಎನ್ನುವಂತಿಲ್ಲ.  ಅತ್ಯಂತ ಕನಿಷ್ಠ ಜೀವನವನ್ನು ಮಾಡುವಂತಿಲ್ಲ. ಸಾಮಾಜಿಕವಾಗಿ ಯಾರಾದರೂ ನಮ್ಮ ಬಗ್ಗೆ  ಏನೆಂದುಕೊಳ್ಳುತ್ತಾರೆಯೋ ಎನ್ನುವ ನೋವು ಇವರನ್ನು ಸದಾ ಕಾಡುತ್ತದೆ.
 “ಏನು ಇಲ್ಲದವರಂತೆ ಜೀವನ ಮಾಡುತ್ತಾರೆ, ಎಂತಹ ಜಿಪುಣರಪ್ಪ ಎನ್ನುವ ಕೊಂಕು ಮಾತುಗಳು ಇವರನ್ನು ಹಿಂಡಿ ಹಿಪ್ಪೆ ಮಾಡುತ್ತವೆ.

ಮಧ್ಯಮ ವರ್ಗದವರೆಂದರೆ ನೌಕರರು,  ಕನಿಷ್ಠ ಕೂಲಿ ಮಾಡದೆ ತಿಂಗಳ ವೇತನವನ್ನು ಎಣಿಸುವ ಸರ್ಕಾರಿ, ಅರೆಸರ್ಕಾರಿ ನೌಕರರನ್ನು ನಾವು ಪರಿಗಣಿಸಬಹುದು. ಇವರೆಲ್ಲರೂ ತಿಂಗಳ ಸಂಬಳಕ್ಕಾಗಿ ನಿರೀಕ್ಷಿಸುತ್ತಾರೆ. ಸಂಬಳ ಒಂದೇರಡು ದಿನ ತಡವಾದರೆ ಇವರ ಕಷ್ಟ ಕೇಳುವಂತಿಲ್ಲ..!!  ದಿನಸಿ ಅಂಗಡಿಯವರು, ತರಕಾರಿಯವರು, ಹಾಲಿನವರು, ಗ್ಯಾಸಿನವರು, ಬಾಡಿಗೆಯವರು… ಎಲ್ಲರೂ ಒಬ್ಬರ ಮೇಲೊಬ್ಬರು ಮುಗಿ ಬೀಳುವ ಧಾವಂತ ಅವರಿಗೂ ಇರುತ್ತದೆ.

 ಎಲ್ಲವನ್ನು, ಎಲ್ಲರನ್ನೂ ಅತ್ಯಂತ ನಾಜೂಕಾಗಿ ನಿಭಾಯಿಸಲೇಬೇಕು. ಇಲ್ಲದೆ ಹೋದರೆ ಬದುಕಿನ ಲೆಕ್ಕಾಚಾರ ತಪ್ಪಿ ಹೋಗುತ್ತದೆ. ಲೆಕ್ಕ ತಪ್ಪಿದರೆ ಬದುಕಿನ ಆಯಾ ತಪ್ಪಿದಂತೆ.  ಒಲವೇ ಜೀವನ ಲೆಕ್ಕಾಚಾರ :  ಲೆಕ್ಕಾಚಾರವೇ ಒಲವು. ಒಲವಿದ್ದರೇನೆ ಜೀವನ…!!  ಹಾಗಾದರೆ ಮಾತ್ರ ಎಲ್ಲವೂ ಸಲೀಸಾಗಿ ನಡೆಯುತ್ತವೆ. ಒಂದು ಸ್ವಲ್ಪ ಹೆಚ್ಚಾದರೂ ತಡೆದುಕೊಳ್ಳುವ, ಸ್ವಲ್ಪ ಕಡಿಮೆಯಾದರೂ ತಾಳ್ಮೆ ವಹಿಸುವ ಸಂಬಂಧಗಳು, ವ್ಯವಹಾರಗಳು, ಬಾಂಧವ್ಯಗಳು ಇವತ್ತು ಮಧ್ಯಮ ವರ್ಗದವರಿಗೆ ಉಳಿಯದಿರುವುದು ವಿಷಾದನೀಯ.

ಮಕ್ಕಳ ಸ್ಕೂಲ್ಗೆ ಫೀಸ್ ಕಟ್ಟಬೇಕು.  ಓದುವ ದೊಡ್ಡ ಮಗಳ ಕಾಲೇಜಿನ ಫೀಜು ಇದರಲ್ಲಿಯೇ ನಿಭಾಯಿಸಬೇಕು. ತಾಯಿಯ ವೈದ್ಯಕೀಯ ವೆಚ್ಚವು ನೋಡಿಕೊಳ್ಳಬೇಕು. ತಿಂಗಳಾದರೆ ಬಾಡಿಗೆಗೆ ತೆಗೆದಿರಿಸಲೇಬೇಕು.  ಈ ತಿಂಗಳ ಎರಡು ಪ್ರಮುಖ ಹಬ್ಬಗಳು ಬೇರೆ ಅವುಗಳನ್ನು ಸರಿದೂಗಿಸಲೇಬೇಕು. “ಅಯ್ಯೋ ನಾಳೆ ನೆಂಟರು  ಮನೆಗೆ ಬರುತ್ತಾರೆಂದರೆ ಸಾಕು ಮನದ ತೊಳಲಾಟ ನೂರಾರು. ಏನು ಮಾಡುವಂತಿಲ್ಲ ; ಎಲ್ಲವನ್ನು ಸರಿಸಮವಾಗಿ ನಿಭಾಯಿಸಬೇಕು ಅಷ್ಟೇ.  ಇದು ಮಧ್ಯಮ ವರ್ಗದವರ ಆರ್ಥಿಕ ಸಂಕಟಗಳ ತೊಳಲಾಟ.

ಮಧ್ಯಮ ವರ್ಗದವರಿಗೆ ಬಡತನದ ಕೆಳ ವರ್ಗದವರಿಗಿರುವ ಯಾವ ಸರ್ಕಾರಿ ಸೌಲಭ್ಯಗಳು ಇರುವುದಿಲ್ಲ.  ಇವರಿಗೆ ನೌಕರಿಯಿದೆ, ಹಾಗಾಗಿ ಇವರಿಗೆ ಪಡಿತರ ಚೀಟಿ ಬೇಡವೇ ಬೇಡ ಎನ್ನುವ ಸರ್ಕಾರಗಳು,  ಇವರಿಗೆ ರಿಯಾಯಿತಿಯಲ್ಲಿ ಸರ್ಕಾರಿ ಸೌಲಭ್ಯಗಳು ಕೊಡುವುದೇ ಬೇಡ. ಇವರಿಗೆ  ಸರ್ಕಾರದ ಯಾವ ಸವಲತ್ತುಗಳು ಇವರಿಗೆ ದಕ್ಕುವುದಿಲ್ಲ. ದಕ್ಕಲಾರದಂತೆ ಕಾನೂನುಗಳು ಈ ನೆಲದಲ್ಲಿ ಅಚ್ಚೊತ್ತಿವೆ. ಈ ಸಂಕಟಗಳನ್ನು ಮೌನವಾಗಿ ಸಹಿಸಿಕೊಳ್ಳಲೇಬೇಕು.

ಇನ್ನು ಮಧ್ಯಮ ವರ್ಗದವರ ಬದುಕಿನ ಮುಸ್ಸಂಜೆಯ ಕಾಲಘಟ್ಟದಲ್ಲಿ ಪಿಂಚಣಿ ಯೋಜನೆಯನ್ನು ನಂಬಿ ಬದುಕನ್ನು ದೂಡಬೇಕಾದ ಪರಿಸ್ಥಿತಿ.  ತಮಗೆ ಬೇಕಾದ ಔಷಧಿಗಳು, ಗುಳಿಗೆಗಳು, ಟಾನಿಕ್ ಗಳು,  ಇವೆಲ್ಲವನ್ನೂ ಅದ್ದರಿಂದಲೇ ನಿಭಾಯಿಸಬೇಕು.

ಮಧ್ಯಮ ವರ್ಗದ ವೃದ್ಧಾಪ್ಯದಲ್ಲಿರುವವರ ಗೋಳು ಹೇಳತೀರದು. ಮಕ್ಕಳ ಆಶ್ರಯವಿಲ್ಲದೆ ಬದುಕಿನ ಮುಸ್ಸಂಜೆ ಹೊತ್ತು ಕಳೆಯಬೇಕಾದ ಅನಿವಾರ್ಯತೆ.

ಸ್ನೇಹಿತರೇ, ಅದೇನೇ ಇರಲಿ. ಮಧ್ಯಮ ವರ್ಗದ ಜನರ ಗೋಳು ಹೇಳವಂತಿಲ್ಲ, ಕೇಳುವಂತಿಲ್ಲ. ಮಧ್ಯಮ ವರ್ಗದವರಿಗೆ ನಲಿವುಗಳಿಗಿಂತ ನೋವುಗಳೇ ಹೆಚ್ಚು. ಬಡತನಕ್ಕೆ ಪ್ರಜಾಸತ್ತಾತ್ಮಕ ಸರ್ಕಾರದ ಬೆಂಬಲ ಇದ್ದೆ ಇರುತ್ತದೆ. ಅದು ಇರಲೇಬೇಕು. ಶ್ರೀಮಂತರಿಗೆ ಬಡವರ ಬೆವರಿನಾಶ್ರಯ. ಮಧ್ಯಮ ವರ್ಗದವರಿಗೆ ಸಂಬಳವೇ ಆಸರ ಎನ್ನುವಂತಾಗಿದೆ. ಮಧ್ಯಮ ವರ್ಗದ ಜನರೂ ಕೂಡ ಮನುಷ್ಯರು. ಅವರಿಗೂ ಎಲ್ಲರಂತೆ ಹೆಮ್ಮೆಯ ಸುಖವಾದ ಬದುಕು ದೊರಕಲೇಂದು ಆಶೀಸೋಣ.


Leave a Reply

Back To Top