ಜಿ. ಹರೀಶ್ ಬೇದ್ರೆ ಪ್ರವಾಸಕಥನ-ಮೀರಾ ಮಾಧವ

ಪರಮ ಪೂಜ್ಯ ಶ್ರೀಕೃಷ್ಣನ  ಆರಾಧಿಸುವವರು, ಪೂಜಿಸುವವರು ಕೇವಲ ಭಾರತೀಯರು ಮಾತ್ರವಲ್ಲ ಅನ್ಯ ದೇಶಿಗರು ಇದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಂತ ವಿಷಯ. ಬಡವ ಬಲ್ಲಿದ ಎನ್ನುವ ಯಾವುದೇ ಭೇದ ಭಾವವಿಲ್ಲದ ಕುಚೇಲನೊಂದಿಗಿನ ನಿರ್ಮಲ ಸ್ನೇಹ, ಸಖಿ ರಾಧೆಯೊಂದಿಗೆ ನಿಷ್ಕಳಂಕ ಪ್ರೀತಿ, ದ್ರೌಪದಿಯ ಜೊತೆಗೆ ಇದ್ದ ಅದ್ಭುತ ಸಹೋದರತ್ವ, ನಂಬಿದವರನ್ನು ಎಂದಿಗೂ ಕೈಬಿಡದ ದೈವತ್ವ ಎಂತವರನ್ನು ಆರಾಧಿಸುವಂತೆ ಪೂಜಿಸುವಂತೆ ಮಾಡುವುದು ಸುಳ್ಳಲ್ಲ.
ಶ್ರೀಕೃಷ್ಣನನ್ನು ಅಂದಿನಿಂದ ಇಂದಿನವರೆಗೂ ಭಕ್ತಿಯಿಂದ ಪೂಜಿಸುವ ಕೋಟ್ಯಾನು ಕೋಟಿ ಭಕ್ತರ ತೂಕ ಒಂದು ಕಡೆಯಾದರೆ, ತನ್ನ ಇಡೀ ಬದುಕನ್ನು ತನ್ನ ಆರಾಧ್ಯ ದೈವ ಕೃಷ್ಣನ ಆರಾಧನೆಗಾಗಿ ಮುಡಿಪಾಗಿಟ್ಟ ಮೀರಾ ಬಾಯಿಯದೇ ಒಂದು ತೂಕ. ರಾಜಪೂತರ ರಾಜವಂಶದಲ್ಲಿ ಹುಟ್ಟಿದ ಮೀರಾ ಬಾಯಿ ರಾಜ ಭೋಜ್ ಸಿಂಗ್ ಜೊತೆ ಮದುವೆಯಾಗುತ್ತಾಳೆ. ಆದರೆ ಆತ ಅಲ್ಪಕಾಲದಲ್ಲೇ ಮೃತಪಟ್ಟಾಗ ಆಗ ರೂಢಿಯಲ್ಲಿದ್ದ ಸತಿ ಸಹಗಮನ ಪದ್ಧತಿಗೆ ಒಪ್ಪದೆ ತನ್ನ ಉಳಿದ ಬದುಕನ್ನು ಕೃಷ್ಣನ ಆರಾಧನೆಯಲ್ಲಿ ಕಳೆಯಲು ತೀರ್ಮಾನಿಸಿ, ಹುಟ್ಟಿನಿಂದ ಬಳುವಳಿಯಾಗಿ ಬಂದಿದ್ದ ರಾಜವೈಭೋಗವನ್ನೆಲ್ಲಾ  ತ್ಯಜಿಸಿ ಸಾಧು ಸಂತರಂತೆ ಬದುಕುವ ಆಯ್ಕೆ ಮಾಡಿಕೊಳ್ಳುತ್ತಾಳೆ. ಮೀರಾ ಬಾಯಿ ಭಕ್ತರ ಜೊತೆ ಭಕ್ತಿಯಿಂದ ಭಾವಪರವಶಳಾಗಿ ತಾನೇ ರಚಿಸಿದ ಹಾಡುಗಳನ್ನು ಹೇಳುತ್ತಾ, ಪೂಜೆ ಮಾಡುತ್ತಾ ಕುಣಿಯುವುದನ್ನು ನೋಡಿ ರಾಜಮನೆತನದವರು ಸಹಿಸದೆ ಹೋದಾಗ, ಚಿತ್ತೋರ್ಘಡದಿಂದ ಮಥುರಾ, ದ್ವಾರಕಕ್ಕೆ ಬರುತ್ತಾಳೆ. ಅವಳಿಗೆ ಶ್ರೀಕೃಷ್ಣನ ಬಗೆ ಇರುವ ಅದಮ್ಯ ಭಕ್ತಿಯನ್ನು ಕಂಡು ಎಲ್ಲೆಡೆಯೂ ಗೌರವ ಸಲ್ಲುತ್ತದೆ.  ಅಲ್ಲದೇ ತನ್ನ ಆರಾಧ್ಯ ದೈವದ ಪೂಜೆಯಿಂದಾಗೇ ದೈವತ್ವ ಪಡೆದ ಇವಳದೇ ದೇವಸ್ಥಾನವನ್ನು  ರಾಜಪೂತ ರಾಜ ಮಹಾರಾಣ ಕುಂಭನು ಚಿತ್ತೋರಗಡದಲ್ಲಿ  ಕಟ್ಟಿಸಿದ್ದಾನೆ. ಈ ದೇವಸ್ಥಾನವು ನೋಡಲು ತುಂಬಾ ಸುಂದರವಾಗಿದ್ದು ಪ್ರಸಿದ್ಧ ಪುಣ್ಯಕ್ಷೇತ್ರವಾಗಿ ಹೆಸರು ಮಾಡಿದೆ.


ಇದಲ್ಲದೆ ನಾನು ನೋಡಿದ ಮತ್ತೊಂದು ವಿಶೇಷವನ್ನು ಹೇಳಲೇ ಬೇಕು. ಏನೆಂದರೆ ಎಲ್ಲೆಡೆ ನಾವು ಕೃಷ್ಣ ಒಬ್ಬನೇ ಇರುವ ಅಥವಾ ಆತನೊಂದಿಗೆ ರಾಧೆಯೋ ರುಕ್ಮಿಣಿಯೋ ಇರುವ ಮತ್ತು ಅವರಿಬ್ಬರೂ ಇವನ ಜೊತೆಗಿರುವ ದೇವಸ್ಥಾನಗಳನ್ನು ಖಂಡಿತಾ ನೋಡುತ್ತೇವೆ, ನೋಡಿರುತ್ತೇವೆ. ಆದರೆ ತನ್ನ ಆರಾಧ್ಯ ದೈವದ ಆರಾಧನೆಯಲ್ಲೇ ಇಡೀ ಬದುಕನ್ನು ಕಳೆದು ದೈವತ್ವ ಪಡೆದು ಅಮರಳಾದ ಮೀರಾ ಬಾಯಿ  ಜೊತೆ ಜೊತೆಗೆ ಅವಳ ಇಷ್ಟ ದೇವ ಕೃಷ್ಣನನ್ನು ಪ್ರತಿಷ್ಠಾಪಿಸಿ, ಅತೀ ಸುಂದರವಾದ ಅಮೃತಶಿಲೆಯ ದೇವಾಲಯವನ್ನು ಕಟ್ಟಿ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿರುವ ವಿಷಯ ಗೊತ್ತೇ?  
1599 ರಿಂದ 1608ನೇ ಇಸವಿಯ ನಡುವೆ ರಾಜ ಮಾನ್ ಸಿಂಗ್ ರವರ ಪತ್ನಿ ರಾಣಿ ಕನಕವತಿಯವರು ತಮ್ಮ ಮಗ ಜಗತ್ ಸಿಂಗ್ ಸ್ಮರಣಾರ್ಥ ಕಟ್ಟಿಸಿದ ದೇವಸ್ಥಾನವೇ ಮೀರಾ ಮಾಧವರ ದೇವಸ್ಥಾನ. ಇಲ್ಲಿ ಮೀರಾ ಬಾಯಿ ಪೂಜಿಸುತ್ತಿದ್ದ ಕೃಷ್ಣನ ಮೂರ್ತಿಯನ್ನೇ ಪ್ರತಿಷ್ಠಾಪಿಸಿದ್ದಾರೆ‌. ಜೊತೆಗೆ ಮೀರಾ ಬಾಯಿಯ ಮೂರ್ತಿಯನ್ನು ಅದರ ಪಕ್ಕದಲ್ಲೆ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಮಾಡುತ್ತಿದ್ದಾರೆ. ದೇವಸ್ಥಾನವು ತುಂಬಾ ಸುಂದರವಾಗಿದ್ದು ಸಂಪೂರ್ಣ ಬಿಳಿಯ ಅಮೃತಶಿಲೆಯಲ್ಲೇ ಕಟ್ಟಿದ್ದಾರೆ. ಇದು ರಾಜಸ್ಥಾನದ ಅಮೇರ್ ಕೋಟೆಯ ಅತೀ ಸಮೀಪದಲ್ಲೇ ಇದೆ. ಇದೊಂದು ದೇವರು ಹಾಗೂ ಭಕ್ತೆಯು ಜೊತೆ ಜೊತೆಗೆ ಪೂಜಿಸಲ್ಪಡುವ ವಿಶೇಷ ದೇವಸ್ಥಾನವಾಗಿದ್ದರೂ ಯಾಕೋ ಏನೋ ಅಷ್ಟೊಂದು ಪ್ರಸಿದ್ಧ ಹೊಂದಿಲ್ಲ.  ಗೊತ್ತಿರುವವರು, ವಿಶೇಷವಾಗಿರುವುದನ್ನು ನೋಡಬೇಕು ಎಂದು ಹುಡುಕಿಕೊಂಡು ಹೋಗುವವರು ಮಾತ್ರ ಈ ದೇವಾಲಯವನ್ನು ನೋಡುತ್ತಾರೆ. ಇಲ್ಲಿನ ಗೈಡ್ ಆಗಲಿ, ಸ್ಥಳೀಯರಾಗಲಿ ತಾವಾಗಿ ಇದರ ಬಗ್ಗೆ ಹೇಳುವುದಿಲ್ಲ. ನಿಜ ಹೇಳಬೇಕೆಂದರೆ ಕೃಷ್ಣ ಹಾಗೂ ಮೀರಾ ಬಾಯಿ ಜೊತೆಗಿರುವ ದೇವಸ್ಥಾನ ಪ್ರಪಂಚದಲ್ಲಿ ಇದೊಂದೇ ಇರಬೇಕು ಎನ್ನುವುದು ನನ್ನ ಅನಿಸಿಕೆ. ಈ ದೇವಸ್ಥಾನವೂ ಜಗತ್ ಶಿರೋಮಣಿ ಎನ್ನುವ ಹೆಸರಿನಿಂದ ಪ್ರಚಲಿತ ಆಗಿದೆ. ನೀವೇನಾದರೂ ರಾಜಸ್ಥಾನಕ್ಕೆ ಪ್ರವಾಸ ಹೋದರೆ ಖಂಡಿತವಾಗಿಯೂ ಇಲ್ಲಿಗೆ ಭೇಟಿಕೊಡಿ. ನಿಮ್ಮ ಮನಸ್ಸಿಗೆ ನೆಮ್ಮದಿ ಸಂತೋಷ ಎರಡೂ ಸಿಗುವುದರಲ್ಲಿ ಯಾವ ಅನುಮಾನವೂ ಇಲ್ಲ.


2 thoughts on “ಜಿ. ಹರೀಶ್ ಬೇದ್ರೆ ಪ್ರವಾಸಕಥನ-ಮೀರಾ ಮಾಧವ

    1. ಪ್ರತಿಬಾರಿಯೂ ಹೊಸತೊಂದು ವಿಷಯವನ್ನು ಹೊತ್ತು ತರುವ ಬರಹಗಳು ತುಂಬಾ ಇಷ್ಟವಾಗುತ್ತದೆ. ತಮ್ಮ ಮುಂದಿನ ಬರಹಕ್ಕೆ ಕಾಯುತ್ತಿರುವೆ, ಅಭಿನಂದನೆಗಳು, ಶುಭವಾಗಲಿ.

Leave a Reply

Back To Top