ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬನ್ನಿ ಕೈಗೊಳ್ಳಲು ಸಂ …. ಕ್ರಮಣವನ್ನು- ವೀಣಾ ಹೇಮಂತಗೌಡ ಪಾಟೀಲ್

ಸಂಕ್ರಾಂತಿ ಎಂದರೆ ಸಂಕ್ರಮಣದ ಕಾಲ ಬದುಕಿನಲ್ಲಿ ಬರುವ ಸುಖ-ದುಃಖ,
 ನೋವು-ನಲಿವು ಸೋಲು-ಗೆಲುವು ಹೀಗೆ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುವ ಕಾಲ.


ಕೆಲ ಅನವಶ್ಯಕ ಅಭ್ಯಾಸಗಳನ್ನು ನಾವು ನಿರಂತರವಾಗಿ ಪಾಲಿಸಿಕೊಂಡು ಬಂದಿರುತ್ತೇವೆ. ಇನ್ನು ಕೆಲವು ನಾವು
ಬಿಟ್ಟೇನೆಂದರೂ ಬಿಡದೆ ನಮ್ಮೊಂದಿಗೆ ಇರುತ್ತವೆ. ಇನ್ನೂ ಕೆಲವು ಅಭ್ಯಾಸಗಳನ್ನು ಸಾಮಾಜಿಕ ಮನ್ನಣೆಯ ಕಾರಣದಿಂದ ನಾವು ನಿಭಾಯಿಸಬೇಕಾಗುತ್ತದೆ. ಮತ್ತೆ ಕೆಲವು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕಾಗಿರುತ್ತದೆ. ಉತ್ತಮ ಅಭ್ಯಾಸಗಳು ವ್ಯಕ್ತಿಯ ವೈಯುಕ್ತಿಕ,ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಉತ್ತಮ ದೈಹಿಕ ಆರೋಗ್ಯ, ಮಾನಸಿಕ ಸಂತೃಪ್ತಿಯನ್ನು ಕೊಡುತ್ತದೆ.
ಬನ್ನಿ ಈ ಸಂಕ್ರಮಣ ಕಾಲದಲ್ಲಿ ಅಂತಹ ಹಲವು ಅಭ್ಯಾಸಗಳ ಕುರಿತು ಧೇನಿಸೋಣ.
ಮೈಗೂಡಿಸಿಕೊಳ್ಳೋಣ, ಅನುಷ್ಠಾನಕ್ಕೆ ತರೋಣ..

ನೀರು….ನಮ್ಮ ಬಾಳಿನಲ್ಲಿ ಅತ್ಯಂತ ಅವಶ್ಯಕ ಪಾತ್ರವನ್ನು ವಹಿಸುತ್ತದೆ. ನಮ್ಮ ದೇಹದ ಶೇಕಡಾ 60 ಭಾಗ ನೀರು ತುಂಬಿಕೊಂಡಿದೆ. ಆದರೂ ಕೂಡ ಅವಶ್ಯಕ ಪ್ರಮಾಣದ ನೀರು ಸೇವನೆ ಮಾಡದೆ ಇರುವುದರಿಂದ ನಾವು ಆಮ್ಲ ಪಿತ್ತ, ಹುಳಿತೇಗು, ಹೊಟ್ಟೆ ಉಬ್ಬರ,  ವಾಯು ಬಾಧೆ ಮತ್ತು ಕರುಳಿನಲ್ಲಿ ಜೀರ್ಣಗೊಂಡ ಶೇಷದ ಅಸಮರ್ಪಕ ಚಲನೆಗೆ ಮತ್ತು ಮಲಬದ್ಧತೆಯ ಸಮಸ್ಯೆಗೆ ಕಾರಣವಾಗುತ್ತದೆ ಆದ್ದರಿಂದ ಕನಿಷ್ಠ  8 ಲೋಟಗಳಷ್ಟು ಅಂದರೆ ಸುಮಾರು ಎರಡುವರೆ ಲೀಟರ್ ನಷ್ಟು ನೀರನ್ನು ಪ್ರಯತ್ನಪೂರ್ವಕವಾಗಿ ಕುಡಿಯುವ ಸಂಕಲ್ಪ ಮಾಡಿರಿ

ಆಹಾರ….ಆಹಾರ ಕೂಡ ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಒಂದು ಮತ್ತು ಆಹಾರ ಸಂಪಾದನೆಗಾಗಿ ದುಡಿಯುವುದು ಮನುಷ್ಯನ ಜೀವನದ ಅವಿಭಾಜ್ಯ ಕರ್ತವ್ಯ. ಸಿಕ್ಕಲ್ಲಿ, ಸಿಕ್ಕಷ್ಟು, ಸಿಕ್ಕು ಸಿಕ್ಕಂತೆ ತಿಂದು ಮೈ ಬೆಳಸಿಕೊಳ್ಳುವುದು ಸರಿಯಲ್ಲ. ನಮ್ಮ ದೇಶದ ಎಷ್ಟೋ  ಜನರು ಒಂದು ಹೊತ್ತಿನ ಸಂಪೂರ್ಣ ಆಹಾರಕ್ಕಾಗಿ ಇಂದಿಗೂ ಒದ್ದಾಡುತ್ತಾರೆ. ಸಾವಿರಾರು ಮಕ್ಕಳು ಪ್ರತಿದಿನ ಅಪೌಷ್ಟಿಕತೆಯಿಂದ ನರಳುತ್ತಾರೆ ಮತ್ತು ಸಾಯುತ್ತಾರೆ ಕೂಡ. ಅಂತದ್ದರಲ್ಲಿ ಆಹಾರವನ್ನು ಪೋಲು ಮಾಡದೆ ನಿಯಮಿತವಾಗಿ ಆಹಾರ ಸೇವಿಸಬೇಕು. ಆಹಾರವನ್ನು ಹೆಚ್ಚು ಹೆಚ್ಚು ತಯಾರಿಸದೆ ತಯಾರಿಸಿದ ಆಹಾರವನ್ನು ತಂಗಳು ಪೆಟ್ಟಿಗೆಗೆ ತುಂಬದೆ, ತುಂಬಿದ ಕಾರಣಕ್ಕಾಗಿಯೇ ಅದನ್ನು ಪದೇ ಪದೇ ಬಿಸಿ ಮಾಡಿ ಸೇವಿಸುವ ಕರ್ಮ ಬೇಕಾಗಿಲ್ಲ.  ಸಮಯಕ್ಕೆ ಸರಿಯಾಗಿ ನಮ್ಮ ಅವಶ್ಯಕತೆಗೆ ತಕ್ಕಷ್ಟು ತಾಜಾ ಆಹಾರವನ್ನು ತಯಾರಿಸಿ ಸೇವಿಸುವ ಸಂಕಲ್ಪವನ್ನು ಮಾಡಿರಿ. ಆದಷ್ಟು ಹೊರಗಿನ ಆಹಾರವನ್ನು ತ್ಯಜಿಸಿರಿ.

ನಡಿಗೆ…. ನಮ್ಮ ಜೀವನದ ಇನ್ನೊಂದು ಮುಖ್ಯ ಸಂಕಲ್ಪವಾಗಿರಲಿ. ಇತ್ತೀಚಿನ ವರದಿಗಳ ಪ್ರಕಾರ ನಮ್ಮನ್ನು ಕಟ್ಟಿ ಹಾಕಿರುವುದು ಕೇವಲ ಆಹಾರ, ವ್ಯಾಯಾಮರಹಿತ ಜೀವನ ಶೈಲಿ ಮಾತ್ರವೇ ಅಲ್ಲ ಕುರ್ಚಿಯು ಕೂಡ ನಮ್ಮನ್ನು ಕಟ್ಟಿ ಹಾಕಿದೆ. ದೀರ್ಘಕಾಲ ಕುಳಿತೇ ಕಾರ್ಯನಿರ್ವಹಿಸುವುದರಿಂದ ಮೊಣಕಾಲು ಗಂಟು ಹಿಡಿದಂತಾಗಿ ಸೆಳೆತ ಉಂಟಾಗುತ್ತದೆ. ಸತತವಾಗಿ ಕುಳಿತುಕೊಂಡೇ ಇರುವುದನ್ನು ಅಭ್ಯಾಸ ಮಾಡಿಕೊಂಡರೆ ಪೃಷ್ಠ ಮತ್ತು ಸೊಂಟದ ಭಾಗದಲ್ಲಿ ಬೊಜ್ಜು ಆವರಿಸಿಕೊಳ್ಳುತ್ತದೆ. ಹೊಟ್ಟೆಯ ಬೊಜ್ಜು ಇದಕ್ಕೆ ಸೇರಿಕೊಂಡರೆ ಮನುಷ್ಯನ ದೇಹದ ವಿವಿಧ ಅಂಗಗಳು ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುವಲ್ಲಿ ಮುಷ್ಕರ ಹೂಡುತ್ತವೆ. ಆದ್ದರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ನೀವು ಕುಳಿತ ಜಾಗದಿಂದ ಎದ್ದು ಕೆಲವು ಹೆಜ್ಜೆ ನಡೆಯುವುದು ಒಳಿತು. ದಿನಕ್ಕೆ ಅತ್ಯಂತ ಕಡಿಮೆ ಎಂದರು ಏಳೆಂಟು ಸಾವಿರ ಹೆಜ್ಜೆಗಳ ನಡಿಗೆಯ ಗುರಿ ನಿಮ್ಮದಾಗಿರಲಿ.

ಧ್ಯಾನ… ದೈಹಿಕ ಆರೋಗ್ಯದ ಜೊತೆ ಜೊತೆಗೆ ಮಾನಸಿಕ ಆರೋಗ್ಯವು ಮನುಷ್ಯನಿಗೆ ಬೇಕೇ ಬೇಕು. ದಾವಂತದ ಈ ಬದುಕಿನಲ್ಲಿ ನಮಗೆ ಧ್ಯಾನದ ಕುರಿತ ಒಲವು ಕಡಿಮೆ. ಧ್ಯಾನ ಎನ್ನುವುದು ಕೈಗೆ ಸಿಕ್ಕದ ಕನಸಿನ ಕನ್ಯೆ. ಆದರೆ ಸತತವಾಗಿ ಆಕೆಯ ಹಿಂದೆ ಬಿದ್ದರೆ ಆಕೆ ನಮ್ಮ ಕೈ ಹಿಡಿಯುತ್ತಾಳೆ ನಮ್ಮನ್ನು ತನ್ನ ಶಾಂತಿ ಸಮಾಧಾನಗಳ ಉಯ್ಯಾಲೆಯಲ್ಲಿಟ್ಟು ತೂಗುತ್ತಾಳೆ, ಪೊರೆಯುತ್ತಾಳೆ. ಧ್ಯಾನದಿಂದ ಒತ್ತಡಕ್ಕೆ ತಡೆ ಹಾಕಬಹುದು. ಆದ್ದರಿಂದ ದಿನದಲ್ಲಿ ಒಂದೇ ಬಾರಿ 10 ರಿಂದ 20 ನಿಮಿಷಗಳ ಕಾಲ ಧ್ಯಾನ ಮಾಡಲಾಗದಿದ್ದರೂ ಸಹ ಎರಡು ಗಂಟೆಗೊಮ್ಮೆ ನಾಲ್ಕೈದು ನಿಮಿಷ ಕಾಲ ಏನನ್ನು ಮಾಡದೆ ಕಣ್ಣು ಮುಚ್ಚಿ ದೇಹದ ಮತ್ತು ಉಸಿರಾಟದಲ್ಲಾಗುವ ಬದಲಾವಣೆಗಳನ್ನು ಗಮನಿಸಿ. ಮತ್ತು ಧ್ಯಾನಿಸುವುದನ್ನು ದೈನಂದಿನ ಕ್ರಿಯೆಯಾಗಿ ರೂಢಿಯಲ್ಲಿ ತನ್ನಿ ಒತ್ತಡವನ್ನು ದೂರವಿರಿಸಿ.

ಒಳ್ಳೆಯ ನಿದ್ರೆ… ದಿಂಬಿನ ಮೇಲೆ ತಲೆ ಇಟ್ಟರೆ ಸಾಕು ಸುಖವಾದ ನಿದ್ರೆ ಬರಲು ಎಂಬಂತಹ ಮನಸ್ಥಿತಿಯನ್ನು ಹೊಂದಿರಬೇಕು. ಉತ್ತಮ ಆರೋಗ್ಯ, ಸುಮಧುರವಾದ ಕೌಟುಂಬಿಕ ಬಾಂಧವ್ಯಗಳು, ಆರೋಗ್ಯಕರ ಹವ್ಯಾಸಗಳು, ಮನುಷ್ಯನಿಗೆ ಒಳ್ಳೆಯ ನಿದ್ರೆಯನ್ನು ಕೂಡ ತಂದುಕೊಡಬಲ್ಲವು. ನಿದ್ರೆ ನಮ್ಮೆಲ್ಲಾ ಮಾನಸಿಕ ಕ್ಲೇಶಗಳು, ಜಾಡ್ಯಗಳು, ಸಂಕಷ್ಟಗಳು ಮತ್ತು ಅವಿಶ್ರಾಂತ ಕಾರ್ಯ ಚಟುವಟಿಕೆಗಳಿಗೆ ಉತ್ತಮ ಮದ್ದಾಗಿ ಕಾರ್ಯ ನಿರ್ವಹಿಸುವುದರಿಂದ ರಾತ್ರಿ ಸಮಯದಲ್ಲಿ ಮೊಬೈಲ್ ಫೋನನ್ನು ದೂರವಿರಿಸಿ ಒಳ್ಳೆಯ ನಿದ್ರೆಯನ್ನು ಮಾಡುತ್ತೇವೆಂಬ ಸಂಕಲ್ಪವನ್ನು ಮಾಡಬೇಕು.

ಹಳೆಯ ತಪ್ಪುಗಳಿಂದ ಕಲಿಯಿರಿ ಮತ್ತು ಮುನ್ನಡೆಯಿರಿ…. ಎಲ್ಲಾ ತಪ್ಪುಗಳನ್ನು ನಾವೇ ಮಾಡಬೇಕೆಂದಿಲ್ಲ. ಬೇರೆಯವರು ಮಾಡಿರುವ ತಪ್ಪುಗಳಿಂದಲೂ ನಾವು ಪಾಠ ಕಲಿಯಬಹುದು. ಬದುಕಿನಲ್ಲಿ ಹೊಸ ದಿಕ್ಕನ್ನು ತೋರಿಸುವ ಪಾಠಗಳಾಗಬೇಕು ನಮ್ಮ ತಪ್ಪುಗಳು. ತಪ್ಪನ್ನು ತಿದ್ದಿಕೊಳ್ಳುವುದು ಮತ್ತು ಮತ್ತೆ ತಪ್ಪುಗಳೆಸಗದಂತೆ ಮುನ್ನಡೆಯುವುದು ಬದುಕಿನ ಮತ್ತೊಂದು ಮೈಲಿಗಲ್ಲಾಗಬೇಕು.

ಇದರ ಜೊತೆ ಜೊತೆಗೆ ಗಿಡ ನೆಡುವುದು, ಕೈತೋಟದ ನಿರ್ವಹಣೆ, ಮುಂಜಾನೆ ಮತ್ತು ಸಂಜೆಯ ಎಳೆ ಬಿಸಿಲಿನಲ್ಲಿ ನಡಿಗೆ, ನಂಜಿನ ಮಾತುಗಳನ್ನಾಡುವವರನ್ನು ದೂರವಿಡುವುದು, ಚಿಕ್ಕ ಪುಟ್ಟ ಹಂತಗಳಲ್ಲಿ ಯಶಸ್ಸನ್ನು ವಿಂಗಡಿಸಿ ಒಂದೊಂದೇ ಮೆಟ್ಟಿಲುಗಳನ್ನೇರುವುದು, ನಮ್ಮ ಜೊತೆಗಿರುವವರನ್ನು ಸಹ ನಮ್ಮ ಜೀವನ ಪಯಣದಲ್ಲಿ ಕರೆದೊಯ್ಯುವುದು ಹೀಗೆ ಹತ್ತು ಹಲವು ಯೋಜನೆಗಳನ್ನು ಹಾಕಿಕೊಂಡು ಅದರಂತೆಯೇ ನಡೆಯುವ ಸಂಕಲ್ಪಗಳನ್ನು ಮಾಡೋಣ.

ಬನ್ನಿ ಹೊಸ ಸಂ…..ಕ್ರಮಣದತ್ತ ಹೆಜ್ಜೆ ಹಾಕೋಣ


Leave a Reply

Back To Top