ವಾಣಿ ಗೌಡ ಅವರ ಕೃತಿ “ಕಾಂಗ್ರೆಸ್ ಹೌಸ್” ಕಾದಂಬರಿ ಅವಲೋಕನ ರಾಮಪ್ರಸಾದ್ ಬಿ.ವಿ.

ಕಾಂಗ್ರೆಸ್ ಹೌಸ್, ಕಾದಂಬರಿ,
ಲೇಖಕರು-ವಾಣಿ ಗೌಡ
ಪ್ರಕಾಶಕರು- ವಿ ಫೋರ್ಸ್ ಮೀಡಿಯಾ ಶಿವಮೊಗ್ಗ
ಪ್ರಥಮ ಮುದ್ರಣ 2023

ನಾನು ಇತ್ತೀಚೆಗೆ ವಾಲ್ಮೀಕಿ ರಾಮಾಯಣದ ಇಂಗ್ಲಿಶ್‌ ಅನುವಾದವೊಂದನ್ನು ಓದುತ್ತಿದ್ದೇನೆ. ಅನುವಾದಕರು ತಾನು ವಾಲ್ಮೀಕಿ ರಾಮಾಯಣದ ಕತೆಯನ್ನು ಮಾತ್ರ ಗದ್ಯದಲ್ಲಿ ಹೇಳುತ್ತಿದ್ದೇನೆ ಹಾಗು ವಾಲ್ಮೀಕಿಯ ಕಾವ್ಯದ ಶೈಲಿ, ಸೌಂದರ್ಯವನ್ನು ತರಲು ಪ್ರಯತ್ನಿಸಿಲ್ಲ ಅಂದು ಹೇಳುತ್ತಾರೆ. ಇದು ಒಂದು ರೀತಿಯ ಸಪ್ಪೆ ಅನುವಾದವಾದರೂ ಓದುವಾಗ ಮನಸ್ಸನ್ನು ತಟ್ಟುತ್ತದೆ. ರಾಮಾಯಣದಲ್ಲಿ ಭಾಷೆ, ಶೈಲಿ, ಕಾವ್ಯ, ಛಂದಸ್ಸು, ಉಪಮೆ, ಅಲಂಕಾರಗಳ ಆಚೆಗೂ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವ ಕತೆಯಿದೆ. ಹೇಗೇ, ಯಾವುದೇ ಕಲಾಕಾರಿಕೆ ಇಲ್ಲದೇ ಹೇಳಿದರೂ ರಾಮಾಯಣದ ಕೆಲವು ಘಟನೆಗಳು ನಮ್ಮ ಮನಸ್ಸನ್ನು ಕಲಕುತ್ತವೆ.
ಕಾಂಗ್ರೆಸ್‌ ಹೌಸ್‌ ಕಾದಂಬರಿಯೂ ಹೀಗೆಯೇ. ಕತೆಯಲ್ಲೇ ಅಷ್ಟು ಶಕ್ತಿಯಿರುವಾಗ ಬೇರೆ ಯಾವುದೇ ಕಲಾಕಾರಿಕೆ ಗೌಣ ಅನಿಸುತ್ತದೆ. ಈ ಕಾದಂಬರಿಯಲ್ಲಿ ಸೀತೆಯ ಉಲ್ಲೇಖವೂ ಇದೆ. ಸೀತೆಗಾದರೂ ವಾಲ್ಮೀಕಿ ಆಶ್ರಮದ ಸುರಕ್ಷತೆಯಿತ್ತು, ಈ ಕಾದಂಬರಿಯ ನಾಯಕಿ/ಖಳನಾಯಕಿಯಾದ ಲಕ್ಷಿಯಂತವಳಿಗೆ ಅವಳಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲಿ ಆಶ್ರಯ ಸಿಗಬಹುದು ಅನ್ನುವ ಪ್ರಶ್ನೆಯನ್ನು ಕಾದಂಬರಿ ಕೇಳುತ್ತದೆ. ಹೂವಿನ ಗಿಡಗಳ ನಡುವೆ ತನ್ನ ತಮ್ಮನ ಜೊತೆ ಸೇರಿ ಚಿಟ್ಟೆ ಹಿಡಿಯುವ ಆಟ ಆಡುವ ಹದಿನಾರು ವರ್ಷದ ಲಕ್ಷಿಗೆ ಅವರ ಅಮ್ಮ ಬಲವಂತವಾಗಿ ಈಗಾಗಲೇ ಎರಡು ಮದುವೆಯಾಗಿರುವ ಗಂಡಸಿಗೆ ಮದುವೆ ಮಾಡುತ್ತಾರೆ. ಮದುವೆ ನಂತರ ತವರು ಮನೆಯಿಂದಲೂ ದೂರವಾಗುವ ಲಕ್ಷ್ಮಿ ಒಂದು ಮಗುವಾದ ಬಳಿಕ ಗಂಡನ ಹಿಂಸೆ ತಾಳಲಾರದೇ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ನಂತರ ಸಿನಿಮೀಯವಾದ (ಕಾದಂಬರಿಗಳಲ್ಲಿ ಸಿನಿಮೀಯ ಅನ್ನುವುದು ದೋಷವೇ ಆಗಬೇಕಿಲ್ಲ) ರೀತಿಯಲ್ಲಿ ಆಗಿನ ಬಾಂಬೆಯ ಕಾಂಗ್ರೆಸ್ ಹೌಸ್‌ ಅನ್ನುವ ಸಂಕೀರ್ಣದಲ್ಲಿರುವ ವೈಶ್ಯಾಗೃಹವೊಂದಕ್ಕೆ ಸೇರಿಕೊಳ್ಳುತ್ತಾಳೆ. ನಂತರ ತನ್ನ ಮಗುವಿಗೋಸ್ಕರ ವಾಪಾಸು ಬಂದು ಅನೇಕ ಸಮಸ್ಯೆಗಳಲಿ ಸಿಕ್ಕಿಹಾಕಿಕೊಂಡು, ತಪ್ಪಿಸಿಕೊಂಡು ಕಾಂಗ್ರೆಸ್‌ ಹೌಸ್‌ಗೆ ಮರಳುವುದು ಈ ಕಾದಂಬರಿಯ ಕತೆ. ಕಾದಂಬರಿಯ ಲೇಖಕಿ ವಾಣಿ ಗೌಡ ಅವರು ಒಂದು ಹೆಣ್ಣಿನ ಅನುಭವವನ್ನು ಅವಳಿಂದಲೇ ಕೇಳಿ ಬರೆದ ಕಾದಂಬರಿ ಇದು ಎಂದು ಹೇಳಿದ್ದಾರೆ. ಹಾಗಾಗಿ ಇದು ನೈಜ ಜೀವನವನ್ನು ಆಧಾರಿಸಿದ ಕಾದಂಬರಿ.
 ರಾಮಾಯಣದಲ್ಲಿನ ಹಾಗೆ ಈ ಕಾದಂಬರಿಯಲ್ಲಿ ಅತೀ ಅನಿಸುವ ಕ್ರೌರ‍್ಯದ ಘಟನೆಗಳಿವೆ. ಲಕ್ಷ್ಮಿಗೆ ಮಗುವನ್ನು ಫಾತಿಮಾ ಬೇಗಮ್‌ ಅನ್ನುವವಳಿಂದ ಕೊಡಿಸಬೇಕಾದಾಗ ಪೊಲೀಸ್‌ ಇನ್ಸ್ಪೆಕ್ಟರ್‌ ಹೊಡೆತದ ಬೆದರಿಕೆ ಒಡ್ಡುತ್ತಾನೆ. ʼಸ್ವೀಕಾರ ಕೇಂದ್ರʼ ಎಂದು ಹೆಸರಿರುವ ಹಾಸ್ಟೆಲ್ನ ವಾರ‍್ಡನ್‌ ಶಾಂತಮ್ಮ ಶಾಂತಿಯಿಂದ ಇರುವುದೇ ಕಡಿಮೆ. ಬೆತ್ತದಲ್ಲಿ ಹೊಡೆಯುವುದು ಅವಳಿಗೆ ಮಾಮೂಲು. ಮಾತೆತ್ತಿದರೆ ʼರಂಡೆʼ, ʼಮುಂಡೆʼ,ʼಬೇವರ‍್ಸಿʼ, ʼಛಿನಾಲಿʼ ಎಂದು ಸ್ವೀಕಾರ ಕೇಂದ್ರದ ಹುಡುಗಿಯರಿಗೆ ಬೈಯುತ್ತಾಳೆ. ಅವಳಿಗೂ ಇಬ್ಬರು ಹೆಣ್ಣು ಮಕ್ಕಳ್ಳಿದ್ದಾರೆ ಅನ್ನುವುದನ್ನು ಮರೆತು ಅಧಿಕಾರದ ದರ್ಪದಲ್ಲಿ ಲಕ್ಷ್ಮಿಯ ಮಗುವಿಗೂ ಸೇರಿದಂತೆ ಉಪವಾಸ ಹಾಕುತ್ತಾಳೆ. ಈ ಸ್ವೀಕಾರ ಕೇಂದ್ರಕ್ಕೆ ಬರುವ ಹುಡುಗಿಯರು ಅನಾಥರು, ಸಣ್ಣ ಪುಟ್ಟ ತಪ್ಪು ಮಾಡಿ ಪೋಲಿಸರಿಗೆ ಸಿಕ್ಕಿ ಹಾಕಿಕೊಂಡಿರುವವರು, ಅಥವಾ ಲೈಂಗಿಕ ಕಾರ‍್ಯಕರ‍್ತೆಯರು. ಅವರಿಗೆ ಅಧಿಕಾರದ ವಿರುದ್ಧ ಮಾತನಾಡುವ ಹಕ್ಕೂ ಇರುವುದಿಲ್ಲ. ಇಲ್ಲಿ ಕಾಣುವ ಕ್ರೌರ್ಯ ವ್ಯವಸ್ಥೆಯೇ ಒಂದು ರೀತಿಯಲ್ಲಿ ಅನಮೋದಿಸಿರುವ ಕ್ರೌರ್ಯ.
ಮದುವೆ ಅನ್ನುವ ವ್ಯವಸ್ಥೆಯಲ್ಲೂ ಗಂಡಿಗೆ ಕ್ರೌರ್ಯದ ಹಕ್ಕಿದೆಯಲ್ಲಾ? ಲಕ್ಷ್ಮಿಯ ಪತಿಯ ಕ್ರೌರ್ಯ ಎಲ್ಲಾ ಎಲ್ಲೆಯನ್ನೂ ಮೀರುತ್ತದೆ. ತುಂಬು ಗರ್ಭಿಣಿ ಲಕ್ಷ್ಮಿಗೆ ಸೈಕಲ್‌ ಚೈನ್ ನಲ್ಲಿ ಹೊಡೆದು ಮಂಚಕ್ಕೆ ಕರೆಯುತ್ತಾನೆ. ಬಾಣಂತಿಯಾದ ಲಕ್ಷ್ಮಿಯನ್ನು ನಾಕು ಜನ ಕೆಲಸದ ಹೆಂಗಸರ ನಡುವೆಯಿಂದ ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡುತ್ತಾನೆ. ಮೂವತ್ತು ವರ್ಷಗಳ ಹಿಂದೆ ಹೆಂಡತಿಗೆ ಕೌಟುಂಬಿಕ ದೌರ್ಜನ್ಯದ ವಿರುದ್ಧ ಹೋರಾಡಲು ಯಾವ ಅಧಿಕಾರವಿತ್ತು? ಆ ಕೆಲಸದ ಹೆಂಗಸರು ಲಕ್ಷ್ಮಿಗೆ ಹೇಳುತ್ತಾರೆ “ಸೂಳೆಗಾದರೂ ಅಧಿಕಾರವಿದೆ. ನಿನಗೆ ಯಾವ ಅಧಿಕಾರವೂ ಇಲ್ಲʼʼ.
ಒಪ್ಪಿತ ವ್ಯವಸ್ಥೆಯ ಒಳಗಿರುವವರೇ ಹೀಗಿರುವಾಗ ವ್ಯವಸ್ಥೆಯ ಆಚೆಗೆ ಕ್ರೌರ್ಯವಿಲ್ಲದೇ ಇರುತ್ತದೆಯೇ? ಲಕ್ಷ್ಮಿಯ ದೇಹ ಸೌಂದರ್ಯದಿಂದ ಲಾಭ ಮಾಡಿಕೊಳ್ಳುವ ಕಮಲಾಕರ ಲಕ್ಷ್ಮಿಯ ಮಗು ಏಳಬಾರದು ಅಂದು ಅದಕ್ಕೆ ಹೆಂಡ ಕುಡಿಸುತ್ತಾನೆ. ಲಕ್ಷ್ಮಿಯ ಬಳಿಗೆ ಅವನು ಕರೆದುಕೊಂಡು ಬಂದ ಗಂಡಸೊಬ್ಬ ಅವಳಿಗೆ ಎಲ್ಲಾ ರೀತಿಯ ದೈಹಿಕ ಹಿಂಸೆಯನ್ನೂ ಮಾಡುತ್ತಾನೆ. ಆಗಲೇ ನರಳುತ್ತಿರುವ ಲಕ್ಷ್ಮಿಯ ಮೇಲೆ ಕಮಲಾಕರ ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಾನೆ. ಮದುವೆ ಒಳಗಿನ ಸಂಬಂಧದಲ್ಲೇ ಹಿಂಸೆ ಅನುಭವಿಸಿರುವ ಲಕ್ಷ್ಮಿ ಈ ಹಿಂಸೆಗೆ ಪ್ರತಿರೋಧ ಹೇಗೆ ತಾನೆ ಒಡ್ಡಬಹುದು?
ಬರೀ ದೈಹಿಕ ಹಿಂಸೆಯಷ್ಟೇ ಅಲ್ಲದೇ ʼಪುರುಷ ದೃಷ್ಟಿʼಯ ಹಿಂಸೆಯನ್ನೂ ಲಕ್ಷ್ಮಿಯು ಸಹಿಸಿಕೊಳ್ಳಬೇಕಾಗುತ್ತದೆ. ಕ್ಲೀಷೆಯ ಭಾಷೆಯಲ್ಲಿ ಹೇಳುವುದಾದರೆ ಲಕ್ಷ್ಮಿಯ ಸೌಂದರ್ಯವೇ ಅವಳಿಗೆ ಮುಳ್ಳು. ನ್ಯಾಯ ಕೇಳಲು ಬಂದವಳನ್ನು ಪೋಲೀಸ್‌ ಸ್ಟೇಷನ್ನನಲ್ಲಿ ಎಲ್ಲರೂ ಕದ್ದು ಮುಚ್ಚಿ ನೋಡುತ್ತಾರೆ. ಲಕ್ಷ್ಮಿ ಅಳುತ್ತಿದ್ದಾಗಲೂ ಅವಳ ಸೌಂದರ್ಯವೇ ಇನ್ಸ್ಪೆಕ್ಟರ್ನ್ನ ಕಣ್ಣು ಕುಕ್ಕುತ್ತಿರುತ್ತದೆ. “ಕಣ್ಣಿನಲ್ಲೇ ಅವಳನ್ನು ಸಂಪೂರ್ಣವಾಗಿ ಸೆರೆಹಿಡಿದು ತನ್ನ ಜೀವನದ ಒಂದು ಭಾಗವನ್ನಾಗಿಸಿ ಕೊಳ್ಳಬೇಕುʼʼ ಅನ್ನುವ ಆಸೆ ಅವನಲ್ಲಿ ಹುಟ್ಟಿರುತ್ತದೆ. ಅವಳನ್ನೂ, ಅವಳ ಮಗುವನ್ನೂ ನೋಡಿಕೊಳ್ಳುತ್ತೇನೆ ಅನ್ನುವ ಆಮಿಷ ಒಡ್ಡುತ್ತಾನೆ.
ಲೇಖಕಿಗೇ ಲಕ್ಷ್ಮಿ ನಾಯಕಿಯೋ ಖಳನಾಯಕಿಯೋ ಅನ್ನುವ ಅನುಮಾನ ಇರುವುದು ಕೆಲವೊಮ್ಮೆ ಅವಳು ಪ್ರತಿರೋಧವಾಗಿ ಹಿಂಸೆಯನ್ನೇ ಬಳಸುವುದರಿಂದ ಇರಬಹುದು. ಸ್ವೀಕಾರ ಕೇಂದ್ರದ ಇತರ ಹುಡುಗಿಯರನ್ನು ಸೇರಿಸಿ ವಾರ‍್ಡನ್‌ ಶಾಂತಮ್ಮನನ್ನು ಕಟ್ಟಿ ಹಾಕಿ ಹೊಡೆಯುತ್ತಾಳೆ. ಅವಳ ಸೀರೆ ಬಿಚ್ಚಿ ಕೂರಿಸುತ್ತಾಳೆ. ತನ್ನ ಮೇಲೆ ಅತ್ಯಾಚಾರ ಮಾಡಲು ಬಂದ ಕಮಲಾಕರನ “ಎದೆಯ ಮೇಲೆ ಕಾಲನ್ನು ಇಟ್ಟು … ಕಬ್ಬಿಣದ ರಾಡ್‌ ಅನ್ನು ತೆಗೆದುಕೊಂಡುʼʼ ತಲೆ ಮೇಲೆ ಹೊಡೆದು “ನಿನ್ನಂತ ಕ್ರೂರಿಯನ್ನು ಬದುಕಲು ಬಿಟ್ಟರೆ ಇನ್ನೆಷ್ಟು ಹೆಣ್ಣು ಮಕ್ಕಳನ್ನು ಸಾಯಿಸುವೆ ಎಂದು ಅವನ ಪುರುಷಾಂಗವನ್ನು ಚುಚ್ಚಿ ಚುಚ್ಚಿ” ಹಾಕುತ್ತಾಳೆ. ಆದರೆ ಲಕ್ಷ್ಮಿಯ ಹಿಂಸೆ ಅವಳ ಅಸಹಾಯಕತೆಯಿಂದ ಬಂದಿರುವುದು. ಹಿಂಸೆ ಬೇರೆ ಯಾವುದೂ ದಾರಿ ಕಾಣದಾದಾಗ ಲಕ್ಷ್ಮಿ ಬಳಸುವ ಕೊನೆಯ ಅಸ್ತ್ರ.
ಲಕ್ಷ್ಮಿ ಕಮಲಾಕರನನ್ನು ಕೊಲ್ಲುವ ತರದ ಮನಸ್ಸಿಗೆ ತಟ್ಟುವ, ಸ್ವಲ್ಪ ಹೆಚ್ಚೇ ಸಿನಿಮೀಯವಾಯಿತೇನೋ ಅನಿಸುವ ಕೆಲವು ʼದೃಶ್ಯʼಗಳು ಈ ಕಾದಂಬರಿಯಲ್ಲಿವೆ. ಸೊಲೋಮನ್‌ ಕತೆಯಲ್ಲಿರುವಂತೆ ಹೆತ್ತ ತಾಯಿ-ಸಾಕು ತಾಯಿ ಯಾರೆಂದು ಕಂಡುಹಿಡಿಯುವ ಪರೀಕ್ಷೆಯಿದೆ. ಪೋಲೀಸ್‌ ಸ್ಟೇಷನ್‌ನಲ್ಲಿ ಒಂದು ಕಡೆ ಲಕ್ಷ್ಮಿ, ಇನ್ನೊಂದು ಕಡೆ ಮಗುವಿನ ಸಾಕು ತಾಯಿ, ಮಧ್ಯ ಮಗು; ಆ ಮಗು ಕೊನೆಗೆ ಲಕ್ಷ್ಮಿಯ ಬಳಿ ಬರುತ್ತದೆ. ಕ್ರೂರಿ ವಾರ‍್ಡನ್‌ ಶಾಂತಮ್ಮ ಪ್ರತಿ ರಾತ್ರಿ ಇಬ್ಬರು ಹೆಣ್ಣು ಮಕ್ಕಳ ಜೊತೆ ಕೂತು ಚೌಕಾಬಾರ ಆಡುವ ʼದೃಶ್ಯʼ ಅನೇಕ ರೀತಿಗಳಲ್ಲಿ ಕುತೂಹಲಕಾರಿ. . ಲಕ್ಷ್ಮಿಯ ಅಮ್ಮ ಚಪ್ಪರದ ಕೆಳಗೆ ಅಡ್ಡ ಉದ್ದಗಲಕ್ಕೂ ಮಲಗಿ ಲಕ್ಷ್ಮಿ ಮದುವೆ ಆಗದೇ ಇದ್ದರೆ ಸಾಯುತ್ತೇನೆಂದು ಮಾಡುವ ಮೆಲೋಡ್ರಾಮ ಇದೆ. ಕಾದಂಬರಿಯಲ್ಲಿ ಬರುವ “ನೈಜವಾದ ಅಂಶಗಳನ್ನು ವಿಷಯಗಳನ್ನು ಯಾರಿಗೇ ಹೇಳಿದರೂ ಈ ಸಮಾಜ ಒಪ್ಪುವುದಿಲ್ಲ” ಅನ್ನುವ ಸಾಲನ್ನು ಇಲ್ಲಿ ನೆನಪಿಸಿಕೊಳ್ಳಬೇಕೇನೋ?
ಈ ಕಾದಂಬರಿ ತಾನು ಕೇಳಬೇಕಾದ ಪ್ರಶ್ನೆಗಳನ್ನು ವಾಚ್ಯವಾಗಿಯೇ ನಮ್ಮ ಮುಂದಿಡುತ್ತದೆ. ʼಕಲಾಕಾರಿಕೆʼ ಈ ಕಾದಂಬರಿಯ ಉದ್ದೇಶವಲ್ಲ. ಹೆಣ್ಣಿಗೆ ಸುರಕ್ಷತೆ ಎಲ್ಲಿ? ಎಂದು ಕೇಳುವುದು ಈ ಕಾದಂಬರಿಗೆ ಮುಖ್ಯ. ಹಾಗೆಯೇ ಲಕ್ಷ್ಮಿ ತೆಗೆದುಕೊಂಡ ತೀರ‍್ಮಾನಗಳು ಎಷ್ಟರ ಮಟ್ಟಿಗೆ ಸರಿ ಅನ್ನುವ ಪ್ರಶ್ನೆಯೂ ಇದೆ. “ಮಲಗಲು ಒಂದು ಮನೆ, ಮಗುವನ್ನು ಸಾಕಲು ಹಣ” ಇದ್ದರೆ ಅಷ್ಟು ಸಾಕು ಅಂದು ಲಕ್ಷ್ಮಿ ಕಾಂಗ್ರೆಸ್‌ ಹೌಸ್‌ ಜೀವನಕ್ಕೆ ಒಪ್ಪಿದ್ದಾಳೆ. ಅವಳು ಹೇಳುವಂತೆ “ಹಿಂಸೆಯಿಲ್ಲದ ಕೆಲಸ ಯಾವುದಾದರೇನು?” ಆದರೆ ಇನ್ಸ್ಪೆಕ್ಟರ್‌ ಲಕ್ಷ್ಮಿಯನ್ನು ನೋಡಿಕೊಳ್ಳುತ್ತೇನೆ ಅಂದಾಗ ತಿರಸ್ಕರಿಸಿ ತನ್ನ ಲೈಂಗಿಕ ಕಾರ್ಯಕರ್ತೆ ಜೀವನಕ್ಕೇ ಹಿಂದಿರುಗುವ ತೀರ‍್ಮಾನ ಮಾಡುತ್ತಾಳೆ. ಕಾಂಗ್ರೆಸ್‌ ಹೌಸ್‌ನ ತನ್ನ ಮನೆಯ ʼಅಮ್ಮʼನ ಬಗೆಗಿನ ಅವಳ ನಿಷ್ಠೆ ಆದರ್ಶವಾಗಬೇಕಿಲ್ಲ. ಅವಳ ʼಅಮ್ಮʼ  ಸ್ವಾರ್ಥ ಇಲ್ಲದೇ ಇರುವವಳೂ ಅಲ್ಲ. ಆದರೆ ಕೊನೆಯ ಪಕ್ಷ ಆ ʼಅಮ್ಮʼನ ಮನೆಯಲ್ಲಿ ಕೆಲವು ನಿಯಮಗಳಿವೆ: ಯಾರಿಗೂ ಬಲವಂತವಿಲ್ಲ, ಯಾರೂ ಹಿಂಸೆ ಮಾಡುವ ಹಾಗಿಲ್ಲ, ಇತ್ಯಾದಿ. ʼಯಾವ ಪ್ರಪಂಚದಲ್ಲಿ ಇದ್ದರೆ ಹೆಣ್ಣು ಮಕ್ಕಳು ಸುರಕ್ಷಿತವಾಗಿರುತ್ತಾರೆʼ ಎಂದು ಮತ್ತೆ ಮತ್ತೆ ಕೇಳುವ ಈ ಕಾದಂಬರಿಯ ಕೊನೆಗೆ ಲಕ್ಷ್ಮಿ ʼಆʼ ಮನೆಯ ಯಜಮಾನಿಯಾಗಿ “ಮನೆಯಲ್ಲಿ ಸುರಕ್ಷತೆಯ ಭರವಸೆಯನ್ನು ಹೆಣ್ಣು ಮಕ್ಕಳಿಗೆ ಕೊಡುತ್ತಾ ವ್ಯವಹರಿಸಿಕೊಂಡು ಹೋಗುತ್ತಾಳೆ”. ಮದುವೆ ಅನ್ನುವ ವ್ಯವಸ್ಥೆಯ ಹೊರಗಿರುವ ಈ ವ್ಯವಸ್ಥೆ ಹೆಣ್ಣಿನ ಶೋಷಣೆಯ ದೃಷ್ಟಿಯಿಂದ ಆದರ್ಶವೇನಲ್ಲ, ಆದರೆ ಲಕ್ಷ್ಮಿಯ ಜೀವನದ ಸಂದರ್ಭದಲ್ಲಿ ಅವಳಿಗೆ ನೆಮ್ಮದಿ ತಂದು ಕೊಟ್ಟಿದೆ.
ಕಾದಂಬರಿಯ ಪ್ರಾರಂಭದಲ್ಲಿ ಅತೀ ಕಡಿಮೆ ಪದಗಳನ್ನು ಬಳಸಿ ಮಲೆನಾಡಿನ ಭಾವವನ್ನು ಕಾದಂಬರಿ ಮೂಡಿಸುತ್ತದೆ. ʼಛತ್ರಿಯನ್ನು ಹುಡುಕಿದಳುʼ, ʼತುಂತುರು ಮಳೆಯೊಂದಿಗೆ ನೆನೆದುಕೊಂಡುʼ, ʼಕೇಳಿಸುತ್ತಿದ್ದದ್ದು ಕೇವಲ ನಿಂತ ಮಳೆಯ ಹನಿಗಳ ಶಬ್ದʼ ಈ ರೀತಿ ವಾಕ್ಯಗಳು ಮಳೆಯ ವಾತಾವರಣವನ್ನು ಕಟ್ಟಿ ಕೊಡುತ್ತವೆ. ತುಂಬಾ ಸರಳವಾದ ಹೋಲಿಕೆಗಳನ್ನು ಕಾದಂಬರಿ ಬಳಸುತ್ತದೆ. ʼಅವಳ ಕೋಪ ಹೇಗಿತ್ತೆಂದರೆ ಮಿಂಚುಗಳಷ್ಟೇ ಅಬ್ಬರಿಸುವಂತಿತ್ತುʼ, ʼಅವಳ ದುಃಖ ದೇವರಿಗೆ ಮುಟ್ಟುವಷ್ಟು ಹತ್ತಿರವಾಗಿತ್ತುʼ, ʼಬಹು ಹೊತ್ತಿನಿಂದ ತಾಯಿಯನ್ನು ಕಳೆದುಕೊಂಡ ಆಕಳ ಕರುವೊಂದು ತಾಯಿ ಹಸು ಕಂಡಾಗ ಹೇಗೆ ಕುಣಿದಾಡುತ್ತದೆಯೋ, ಕರುವನ್ನು ಕಾಣದೇ ಭೀತಗೊಂಡ ಹಸುವು ಕರುವನ್ನು ಕಂಡಾಗ ಹೇಗೆ ಸಂಭ್ರಮಿಸುತ್ತದೆಯೋ ಆ ಸಂಭ್ರಮ ಅಲ್ಲಿತ್ತುʼ, ಇತ್ಯಾದಿ. ದಿವಾಕರ್‌ ಅನ್ನುವವನ ಜೊತೆಗೆ ಲಕ್ಷ್ಮಿಯ ಮಿಲನದ ವರ್ಣನೆ ಪರಿಣಾಮಕಾರಿಯಾಗಿದೆ (ಅವರಿಬ್ಬರ ಈಜುವಿಕೆಗೆ ಹಾಸಿಗೆಯೇ ಕಾವಾಗಿ ಚಳಿಯೇ ಹೆದರಿ ಓಡಿತ್ತುʼ). ಆದರೆ ಒಟ್ಟಾರೆ ಕಾದಂಬರಿ ಭಾಷೆಯ ಬಗೆಗೆ, ಶೈಲಿಯ ಬಗೆಗೆ, ಅಷ್ಟು ಗಮನ ಹರಿಸಿದಂತಿಲ್ಲ. ಕತೆಯನ್ನು ನೇರವಾಗಿ ಓದುಗರಿಗೆ ಮುಟ್ಟಿಸಿದರೆ ಸಾಕು ಅನ್ನುವ ಭಾವವಿರಬೇಕು.
ಹಾಗಾಗಿ ಕಾಂಗ್ರೆಸ್‌ ಹೌಸ್‌ ಕಾದಂಬರಿಯನ್ನು ಓದಿದಾಗ ಒಬ್ಬ ಅಸ್ತವ್ಯಸ್ತ ವ್ಯಕ್ತಿಯನ್ನು ನೋಡಿದ ಹಾಗಾಗುತ್ತದೆ. ತಲೆ ಕೆದರಿಕೊಂಡಿರುವ, ಅಂಗಿಯ ಗುಂಡಿಯನ್ನು ಸರಿಯಾಗಿ ಹಾಕಿಕೊಂಡಿರದ ಒಬ್ಬ ಬಹಳ ಅತುರದಿಂದ ಕತೆ ಹೇಳುತ್ತಿದ್ದಾನೆ ಅಂದುಕೊಳ್ಳಿ. ಈ ಮನುಷ್ಯ ಕೆಲವೊಮ್ಮೆ ತೊದಲುತ್ತಿದ್ದಾನೆ, ಕೆಲವೊಮ್ಮೆ ಪದಗಳನ್ನು ನುಂಗುತ್ತಿದ್ದಾನೆ, ಕೆಲವೊಮ್ಮೆ ವಾಕ್ಯಗಳನ್ನು ತಪ್ಪಾಗಿ ಉಪಯೊಗಿಸುತ್ತಿದ್ದಾನೆ. ಈತ ಸ್ವಲ್ಪ ತಲೆ ಬಾಚಿಕೊಳ್ಳಬಹುದಿತ್ತು, ಚೂರು ಅಚ್ಚುಕಟ್ಟಾಗಬೇಕಾಗಿತ್ತು, ಸ್ವಲ್ಪ ಕತೆ ಹೇಳುವ ಶೈಲಿಯ ಬಗೆಗೆ ಗಮನ ವಹಿಸಬೇಕಿತ್ತು, ಪದಗಳ ಆಯ್ಕೆಯಲ್ಲಿ ಎಚ್ಚರ ವಹಿಸಬಹುದಿತ್ತು ಅನ್ನಿಸಬಹುದು. ಆದರೆ ಆತ (ನಿಜವಾಗಿ ನೋಡಿದರೆ ಆಕೆ) ಹೇಳುತ್ತಿರುವ ಕತೆಯ ಗಾಢತೆ, ಹೇಳುವಾಗ ಇರುವ ಭಾವತೀವ್ರತೆ, ಕತೆ ಹೇಳುವುದರಿಂದ ಒಳ್ಳೆಯದೇನೋ ಆಗಬಹುದು ಅನ್ನುವ ನಂಬಿಕೆ, ಮತ್ತು ಈ ಕತೆಯನ್ನು ಹೇಳಲೇ ಬೇಕು ಅನ್ನುವ ತುಡಿತ- ಇವನ್ನು ಗಮನಿಸಿದರೆ ಮೇಲ್ಮೈನ ಸಣ್ಣಪುಟ್ಟ ʼದೋಷʼಗಳನ್ನು ನಿರ್ಲಕ್ಷಿಸಿಸಬಹುದು. ಕಾಂಗ್ರೆಸ್‌ ಹೌಸ್‌ ಖಂಡಿತವಾಗಿ ಒಂದು ಮನಕಲಕುವಂತಃ ಕಾದಂಬರಿ.


Leave a Reply

Back To Top