ಕಾವ್ಯ ಸಂಗಾತಿ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಪ್ರವಾಸ ಕಥನ
ಎಲ್ಲ ಕಡೆ ಇರುವರು ಆಪದ್ಬಾಂಧವರು!
ರೋಂ ನಗರದಲ್ಲಿ:
“ಎಲ್ಲರೂ ಒಟ್ಟಿಗೆ ಕೆಳಗಿಳಿಯುವುದು ಬೇಡ, ನೀವಿಲ್ಲೆ ನಿಂತಿರಿ; ನಾ ಕೆಳಗೆ ಹೋಗಿ ಯಾವಕಡೆ ಟ್ರೇನ್ ಬರುತ್ತೆ ಅಂತ ನೋಡಿ ಕಾಲ್ ಮಾಡ್ತೀನಿ” ಎಂದು ಹೇಳಿ ಸ್ಟೇಷನ್ನಿನತ್ತ ಮೆಟ್ಟಿಲಿಳಿದು ಹೋದರು, ಗೋವಿಂದ್. ಸ್ವಲ್ಪ ಹೊತ್ತಿನಲ್ಲಿ ಆರಾಧನಳ ಮೊಬೈಲ್ ಘಂಟೆ ಬಾರಿಸಿ ಕೆಳಗಿನ ಸ್ಟೇಷನ್ನಿನಿಂದ ನಮಗೆ ಕರೆ ಬಂದು ನಾವೆಲ್ಲ ಒಟ್ಟಾಗಿ ಇಳಿದೆವು. ನಾವು ಪಿಗ್ನೆಟೊ (ಪಿನ್ಯಾತೊ ಎಂದು ಇಟಾಲಿಯನ್ ಭಾಷೆಯ ಉಚ್ಛಾರ) ಸಬ್ ವೇ ರೈಲು ನಿಲ್ದಾಣದತ್ತ ತುಂಬ ಕೆಳಗೆ ಅನಿಸುವಷ್ಟು ಮೆಟ್ಟಿಲುಗಳನ್ನು ಇಳಿದು ಗೋವಿಂದ್ ನಿಂತಿದ್ದ ಸ್ಥಳ ತಲಪಿ ಮೆಟ್ರೊ ರೈಲಿನ ಆಗಮನಕ್ಕೆ ಕಾಯತೊಡಗಿದೆವು.
ನಾವು ಒಟ್ಟು ಏಳು ಮಂದಿ: ನಾನು, ನನ್ನ ಮಡದಿ ಕಮಲ ಹಾಗು ನಮ್ಮ ಬೀಗರಾದ ದುರ್ಗಪ್ಪ ಕಡಬಗೇರಿಯವರು, ಮೂವರು ಜೂನ್ ಹದಿಮೂರರಂದು ಬೆಂಗಳೂರಿಂದ ಜರ್ಮನಿಯ ಫ್ರಾಂಕ್ಫರ್ಟ್ (Frankfurt) ಮೂಲಕ ಲುಫ್ತಾನ್ಜ ಏರ್ಲೈನ್ಸ್ ವಿಮಾನ ಏರಿ ಪೋರ್ಚುಗಲ್ ರಾಜಧಾನಿ ಲಿಸ್ಬನ್ (Lisbon) ತಲಪಿದ್ದೆವು; ಅಲ್ಲಿಗೆ ಅಮೆರಿಕದ ನ್ಯೂಜರ್ಸಿಯಿಂದ ನಮ್ಮ ಅಳಿಯ, ಗೋವಿಂದ್, ಮಗಳು ಆರಾಧನ ಮತ್ತು ಮೊಮ್ಮಕ್ಕಳಾದ ಕಾವ್ಯ ಹಾಗು ಶಿವಾಂಕರ್ ಸ್ವಿಟ್ಜರ್ಲೆಂಡಿನ ಜುರಿಕ್ (Zurich) ಮೂಲಕ ಅದೇ ದಿನ ಬಂದಿದ್ದರು. ನಮ್ಮ ಪ್ರಯಾಣ ವಿವರದ ಪ್ರಕಾರ, ಅಂದು ಸಂಜೆ ಲಿಸ್ಬನ್ನಿನ ಎಮರಾಲ್ಡ್ ಹೌಸ್ (ಹಿಲ್ಟನ್ ಆಡಳಿತದ) ಎಂಬ ಹೋಟೆಲಿನಲ್ಲಿ ತಂಗಿದ್ದು ಮಾರನೆ ದಿನ, ಹದಿನಾಲ್ಕರಂದು ಲಿಸ್ಬನ್ ನಗರ ಪ್ರದಕ್ಷಿಣಿ ಕೈಗೊಂಡು, ಹದಿನೈದರ ಮಧ್ಯಾಹ್ನ ನಾರ್ವೇಜಿಯನ್ ಕ್ರೂಸ್ ಲೈನರ್ ಹಡಗನ್ನೇರಿ, ಮುಂದಿನ ಹತ್ತು ದಿನಗಳ ಪ್ರವಾಸ ಕೈಗೊಳ್ಳುವುದು. ಅಂದರೆ ಪ್ರತಿ ರಾತ್ರಿ ಕ್ರೂಸ್ ಪ್ರಯಾಣ ಮಾಡಿ ನಂತರ ಮರು ದಿನದಿಂದ ಪ್ರತಿ ದಿನ ಒಂದೊಂದು ನಗರದಲ್ಲಿ ಇಳಿದು ಊರು ಸುತ್ತಿ ಮತ್ತೆ ಜಹಜು ಏರಿ ಯಾನ ಮುಂದುವರಿಸುವುದು; ಅಂತಿಮ ದಿನ ರೋಮ್ ನಗರದಲ್ಲಿ ಇಳಿದು, ಮರು ದಿನವಿಡಿ ಎಷ್ಟು ಸಾಧ್ಯವೊ ಅಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಕೊನೆ ದಿನ, ಅಂದರೆ ಜೂನ್ ಇಪ್ಪತ್ತನಾಲ್ಕರಂದು ರೋಮ್ ಬಿಟ್ಟು ಜರ್ಮನಿಯ ಮ್ಯೂನಿಕ್ ಮೂಲಕ ನಾವು ಮೂವರು ಬೆಂಗಳೂರಿನತ್ತ ಮತ್ತು ಅಳಿಯ, ಮಗಳು, ಮೊಮ್ಮಕ್ಕಳು ನ್ಯೂ ಜರ್ಸಿ ಕಡೆ ಪ್ರಯಾಣ ಬೆಳೆಸುವುದು; ಇದು ನಮ್ಮ ಐಟಿನರರಿ ಆಗಿತ್ತು. ಆ ಇಡಿ ಪ್ರವಾಸದ ಬಗ್ಗೆ ಮುಂದೆ ಬರೆಯುವ ಯೋಚನೆ ಇದೆ. ಸದ್ಯಕ್ಕೆ ಜಹಜಿನ ನಂಟು ಮುಗಿಸಿ, ನಮ್ಮ ಲಗ್ಗೇಜಿನ ಸಮೇತ ನಮ್ಮ ಹೊಟೆಲಿಗೆ ಹೋಗುವ ಸಲುವಾಗಿ ಮೆಟ್ರೊ ಹತ್ತಲು ಹೋಗುತ್ತಿದ್ದೆವು.
ಪ್ಲಾಟ್ಫಾರಮ್ ಮೇಲೆ ನಾನು, ಕಮಲ ಮತ್ತು ಬೀಗರು ಒಂದು ಬಾಗಿಲ ಮುಂದೆ ಮತ್ತು ಅಳಿಯ, ಮಗಳು, ಮೊಮ್ಮಕ್ಕಳು ಪಕ್ಕದ ಬಾಗಿಲ ಮುಂದೆ ನಿಂತೆವು. ಅಷ್ಟರಲ್ಲಾಗಲೆ ಪೋರ್ಚುಗಲ್, ಸ್ಪೇನ್, ಫ್ರಾನ್ಸ್ ಮತ್ತು ಇಟಲಿಯ ಬೇರೆಬೇರೆ ನಗರಗಳಲ್ಲಿ ಸಬ್ ವೇ ಮೆಟ್ರೊ ಹಾಗು ಇತರೆ ರೈಲುಗಳ ಅಲ್ಪ ಹೊತ್ತಿನ ನಿಲುಗಡೆಗಳ ಅನುಭವ ನಮಗೆಲ್ಲ ಆಗಿತ್ತು; ಹಾಗಾಗಿ ವೇಗವಾಗಿ ಒಳಹೋಗುವ ಮತ್ತು ಹೊರಬರುವ ರೂಢಿ ಕೂಡ. (ಅದೃಷ್ಟಕ್ಕೆ ಇಲ್ಲಿ ಮುಂಬೈ ನಗರದಲ್ಲಿ ಜನಗಳ ನಡುವೆ ತೂರಿಕೊಂಡು ನುಗ್ಗಿ ರೈಲು ಹತ್ತಿದಂತಿರಲಿಲ್ಲ!) ವಯಸ್ಸಾದ ನಮ್ಮ ಕೈಗಳಲ್ಲಿ ಸಣ್ಣಸಣ್ಣ ಲಗ್ಗೇಜಿತ್ತು ಅವರುಗಳು ಸೂಟ್ಕೇಸುಗಳು ಮತ್ತು ಇನ್ನಿತರೆ ಕೈಚೀಲ ಹಿಡಿದು ನಿಂತಿದ್ದರು. ಇನ್ನೊಂದು ವಿಚಿತ್ರ ಏನೆಂದರೆ ನಾವು ಸ್ಟೇಷನ್ ತಲಪಿದಾಗ ಒಬ್ಬಿಬ್ಬರಷ್ಟೆ ಇದ್ದ ಪ್ರಯಾಣಿಕರು ರೈಲು ಬರುವ ಹೊತ್ತಿಗೆ ಇಡಿ ಪ್ಲಾಟ್ಫಾರಮ್ಮನ್ನು ತುಂಬಿಕೊಂಡಿದ್ದರು. ರೈಲು ಬಂದು ನಿಂತಿದ್ದು ಹೊರಟಿದ್ದು ಎಲ್ಲ ಒಮ್ಮೆ ಕಣ್ಣು ಮುಚ್ಚಿ ತೆರೆಯುವ ಹೊತ್ತಿಗೆ ನಡೆದುಹೋದಂತೆ!ನಾವುಗಳೆ ಮುಂದೆ ನಿಂತಿದ್ದರಿಂದ ಒಳ ಹೋಗಿ ಅಲ್ಲೊಂದು ಇಲ್ಲೊಂದು ಸೀಟುಗಳನ್ನು ಹಿಡಿದು ಕುಳಿತೆವು. ಆದರೆ ಗೋವಿಂದ್ ಮತ್ತು ಶಿವಾಂಕರ್ ನಿಂತೆ ಇದ್ದರು. ಕಾವ್ಯ, ಆರಾಧನ ಕಾಣಲಿಲ್ಲ. ಹಿಂದೆಲ್ಲೊ ಕೂತಿರಬಹುದು ಅಂದುಕೊಂಡೆ. ನಾವು ಏರಿ ಹೊರಟಿದ್ದ ಆ ರೈಲು ಮೆಟ್ರೊ ‘ಸಿ ಲೈನ್ ದಾರಿಯಲ್ಲಿ ಒಡಾಡುತ್ತಿದ್ದು, ಜೊವಾನ್ನಿ (Giovanni) ಎಂಬ ನಿಲ್ದಾಣದಿಂದ ಹೊರಟು ಪಂಟಾನೊ (Pantano) ಎಂಬ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ. ನನಗೆ ತಿಳಿದಂತೆ ರೋಂ ನಗರದ ಸಬ್ ವೇನಲ್ಲಿ ಎ,ಬಿ,ಸಿ ಎಂಬ ಮೂರು ವಿವಿಧ ರೈಲ್ವೆ ಲೈನುಗಳಿವೆ. ಪಿಗ್ನೆಟೊ/ಪಿನ್ಯಾತೊ (Pigneto) ಸ್ಟೇಷನ್ ನಂತರ ನಮ್ಮ ಮುಂದಿನ ನಿಲ್ದಾಣ ಮಲಟೆಸ್ಟಾ/ಮಲತೆಸ್ತಾ (Malatesta); ನಂತರ ಟಿಯಾನೊ (Teano), ಗಾರ್ಡೆನಿ/ಗಾರ್ದೇನಿ (Gardenie), ಮಿರ್ಟಿ/ಮೀರ್ತಿ (Mirti), ಪಾರ್ಕೊ ಡಿ ಚೆಂಟೊಚಲ್ಲೆ (Parco di Centocelle), ಅಲೆಸ್ಸಾಂಡ್ರೀನೊ (Alessandrino), ಟೊರ್ರೆ/ತೋರ್ರೆ ಸ್ಪಕ್ಕಾತ (Torre Spaccata) ಮತ್ತು ಅಂತಿಮ ಅಂದರೆ ನಾವು ಇಳಿಯಬೇಕಾಗಿದ್ದ ಟೊರ್ರೆ ಮೋರ (Torre Maura). (ಇಟಾಲಿಯನ್ ಭಾಷೆಯ ಹೆಸರುಗಳ ಬಗ್ಗೆ ನನಗೆ ಕುತೂಹಲ ಏಕೆಂದರೆ ಸೋಮಾಲಿಯ ರಾಜಧಾನಿಯಲ್ಲಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ, ಆ ದೇಶದ ದಕ್ಷಿಣ ಪ್ರಾಂತ್ಯ ಒಂದೊಮ್ಮೆ ಇಟಾಲಿಯನ್ನರ ಆಳ್ವಕೆಗೆ ಒಳಪಟ್ಟಿದ್ದರಿಂದ, ನಮ್ಮ ಸಂಗಡ ಇಟಲಿ ಪ್ರಜೆಗಳು ಸಹ ಕೆಲಸ ಮಾಡುತ್ತಿದ್ದರು ಮತ್ತು ನಮ್ಮ ಇಂಗ್ಲಿಷಿನ ಥರ ಸೋಮಾಲಿ ಜನ ಇಟಾಲಿಯನ್ ಭಾಷೆ ಮಾತನಾಡುತ್ತಿದ್ದರು). ಒಂದು ನಿಲ್ದಾಣ ಬಿಡುತ್ತಿದ್ದಂತೆ ಮತ್ತು ಮುಂದಿನ ನಿಲ್ದಾಣ ಹತ್ತಿರ ಆಗುತ್ತಿದ್ದಂತೆ ಬರುವ ನಿಲ್ದಾಣದ ಹೆಸರಿನ ಪ್ರಸಾರ ಮೈಕ್ ಸಿಸ್ಟಂನಲ್ಲಿ ಬರುತ್ತದೆ.
ನಮ್ಮ ನಿಲ್ದಾಣ ಅಂತು ಬಂದು ನಾವೆಲ್ಲ ಇಳಿದರೂ, ಆರಾಧನ ಮತ್ತು ಕಾವ್ಯ ಇಳಿಯಲಿಲ್ಲ. ವಾಸ್ತವ ಏನೆಂದರೆ ಅವರಿಗೆ ಸೂಟ್ ಕೇಸಿನ ಸಮೇತ ಹತ್ತುವ ಪ್ರಯತ್ನದಲ್ಲೆ ರೈಲು ಚಲಿಸಿ ಅವರು ಹತ್ತಲಾಗಿರಲೆ ಇಲ್ಲ. ಈಗ? ಆ ಕ್ಷಣ ನನಗೆ ಒಂದು ಯೋಚನೆಯಿಂದ ಹಿಂಸೆ ಆರಂಭವಾಯ್ತು; ಇತರರಿಗೂ ಅಂಥ ಹಿಂಸೆ ಇತ್ತು ಎನ್ನಲಾರೆ. ಸಾಮಾನ್ಯವಾಗಿ ನಮ್ಮ ಇಡಿ ಪ್ರವಾಸದಲ್ಲಿ ಯಾವುದೆ ರೈಲು ಅಥವ ಬಸ್ ಹತ್ತುವ ಮತ್ತು ಇಳಿವ ನಿಲ್ದಾಣಗಳ ಹೆಸರು ತಿಳಿಯುವ ಪ್ರಯತ್ನ ಯಾರು ಮಾಡುತ್ತಿರಲಿಲ್ಲ ; ಅದರ ಅವಶ್ಯಕತೆ ಇರಲಿಲ್ಲ- ಕಾರಣ ಇಳಿವ ಒಂದು ಸ್ಟಾಪ್ ಮೊದಲೆ ಮುಂದೆ ಇಳಿಯುವ ಸೂಚನೆಯನ್ನು ಅಳಿಯ, ಗೋವಿಂದ್ ಕೊಡುವ ರೂಢಿ ಇದ್ದುದರಿಂದ. ಹಾಗಾಗಿ ಆಗಲೂ ಆರಾಧನ ಅಥವ ಕಾವ್ಯ ಇಳಿಯುವ ನಿಲ್ದಾಣದ ಹೆಸರು ತಿಳಿದಿರುವ ಸಾಧ್ಯತೆ ಇರಲಿಲ್ಲ; ಹಾಗಾದರೆ ಅವರು ಹೇಗೆ ಮತ್ತು ಎಲ್ಲಿ ಇಳಿಯುವರು? ನಮ್ಮ ಅಳಿಯ ಕೂಡ ಇದೆ ಚಿಂತೆಯಲ್ಲಿದ್ದರೋ ಇಲ್ಲವೋ ಅರಿಯೆ. ಏಕೆಂದರೆ, ಅಂತರರಾಷ್ಟ್ರೀಯ ರೋಮಿಂಗ್ ಫೋನುಗಳು ಎರಡೆ ಇದ್ದದ್ದು, ಒಂದು ನನ್ನಲ್ಲಿ ಮತ್ತೊಂದು ಗೋವಿಂದ್ ಸಂಗಡ. ಹಾಗಾಗಿ ಫೋನ್ ಸಂಪರ್ಕ ಸಹ ಅಂಥ ಸಂಕಷ್ಟದ ಸ್ಥಿತಿಯಲ್ಲಿ ಅಸಾಧ್ಯವಾಗಿತ್ತು! ನಾವು ಇಳಿದ ಸ್ವಲ್ಪ ಸಮಯಕ್ಕೆ ಇಡಿ ಪ್ಲಾಟ್ಫಾರಮ್ ಖಾಲಿ – ನಮ್ಮನ್ನುಳಿದು.”ಇಲ್ಲೇ ಕಾಯೋಣವೆ, ಗೋವಿಂದ್?” ಎಂದೆ. “ಇಲ್ಲ ಬನ್ನಿ” ಎಂದವರೆ, ಲಿಫ್ಟಿನತ್ತ ಹೆಜ್ಜೆ ಹಾಕಿಬಿಟ್ಟರು; ಯಥಾಪ್ರಕಾರ ನಾವೆಲ್ಲ ಅವರ ಹಿಂದೆ. ಮೇಲೆ ಲಿಫ್ಟಿಂದ ಹೊರಗೆ ಬಂದ ಮೇಲೆ ಎಡಪಕ್ಕಕ್ಕೆ ದೊಡ್ಡ ರಸ್ತೆ, ಲಿಫ್ಟಿನ ಅದೆ ಪಕ್ಕಕ್ಕೆ ಮೂತ್ರದ ಗಬ್ಬು – ಇದು ಇಟಲಿ ಅನ್ನಿಸಿತು; ಮತ್ತು ನಮ್ಮ ದೇಶದ ಅಂಥ ಸ್ಥಳಗಳ ನೆನಪು ಸಹ ಬರದೆ ಇರಲಿಲ್ಲ. ಇನ್ನು ಬಲಬದಿಗೆ ಕೂರಲು ಅಥವ ಮಲಗಬಹುದಾದ ಒಂದೆರಡು ಕಲ್ಲು ಬೆಂಚಿನ ಹಾಸು, ದೊಡ್ಡ ಮೈದಾನ ಮುಂತಾಗಿ. ಸ್ವಲ್ಪ ಸಮಯದ ಬಳಿಕ ಏನನ್ನಿಸಿತೊ ಏನೋ, ಗೋವಿಂದ್ ಮತ್ತೆ ನೋಡಿ ಬರುವುದಾಗಿ ಲಿಫ್ಟಿನಲ್ಲಿ ಇಳಿದರು. ಸದ್ಯ ನಮ್ಮ ಅದೃಷ್ಟ ಕೈಕೊಟ್ಚಿರಲಿಲ್ಲ, ತುಸು ಹೊತ್ತಿಗೆ ಸೂಟ್ ಕೇಸ್ ಸಮೇತ ಮೂವರು ಲಿಫ್ಟಿಂದ ಹೊರಬಂದಾಗ ನಮ್ಮ ಹೆದರಿಕೆ ಅಂತ್ಯವಾಗಿತ್ತು!
ಆದದ್ದೇನೆಂದರೆ ಪಿಗ್ನೆಟೊ ನಿಲ್ದಾಣದಲ್ಲಿ ಒಂದು ಬಾಗಿಲಿನಿಂದ ನಾನು, ನನ್ನ ಮಡದಿ ಮತ್ತು ಬೀಗರು ಹತ್ತಿದ್ದೆವು; ಪಕ್ಕದ ಬಾಗಿಲಿನಲ್ಲಿ ಗೋವಿಂದ್ ಮತ್ತು ಶಿವಾಂಕರ್ ಒಂದು ಕಡೆ ಸೂಟ್ ಕೇಸ್ ಹಿಡಿದು ಏರಿದರೆ, ಅದೇ ರೀತಿ ಕಾವ್ಯ ಮತ್ತು ಆರಾಧನ ಇನ್ನೊಂದು ಸೂಟ್ ಕೇಸ್ ಎತ್ತಿ ಒಳನೂಕುವ ಪ್ರಯತ್ನ ಮಾಡುತ್ತಿದ್ದಾಗಲೆ ರೈಲು ಹೊರಡುವ ಸೂಚನೆ ಬಂದಾಗ, ಇನ್ನು ಕಷ್ಟ ಎಂದರಿತು ಸೂಟ್ ಕೇಸನ್ನು ವಾಪಸ್ ಎಳೆದುಕೊಂಡು ಹೊರಗೆ ಪಿಗ್ನೆಟೊ ನಿಲ್ದಾಣದಲ್ಲೆ ಉಳಿದುಬಿಟ್ಟಿದ್ದರು. ಆದರೆ ಅದುವರೆಗೂ ಎಲ್ಲೂ ಇಳಿಯಬೇಕಾದ ನಿಲ್ದಾಣದ ಹೆಸರು ಕೇಳದಿದ್ದ ಮಗಳು, ಬಹುಶಃ ಆರನೆ ಇಂದ್ರಿಯದ (ಸಿಕ್ಸ್ತ್ ಸೆನ್ಸ್) ಕಾರಣವೋ ಏನೋ ಪಿಗ್ನೆಟೊ ಸ್ಟೇಷನ್ನಿನಲ್ಲಿ ಕಾಯುತ್ತ ನಿಂತಿದ್ದಾಗ, ಕೇಳಿ ತಿಳಿದುಕೊಳ್ಳಬೇಕು ಅನ್ನುವ ದರ್ದಿಂದ ಅಲ್ಲದಿದ್ದರೂ ಆಕಸ್ಮಿಕವಾಗಿ, “ಮುಂದೆ ಯಾವ ಸ್ಟೇಷನ್ನಿನಲ್ಲಿ ಇಳಿಯುವುದು” ಎಂದು ಪತಿಯನ್ನು ಕೇಳಿ ತಿಳಿದುಕೊಂಡೂ ಕೂಡ ಇರಾದೆ ಇಲ್ಲದಿದ್ದರಿಂದ ಮರೆತಿದ್ದಳಂತೆ; ಆದರೆ ಅಪ್ಪ ಹೇಳಿದ್ದನ್ನು ಕಾವ್ಯ ನೆನಪಿನಲ್ಲಿಟ್ಟುಕೊಂಡಿದ್ದರಿಂದ ನಿಖರವಾಗಿ ಟೋರ್ರೆ ಮೋರ ನಿಲ್ದಾಣದಲ್ಲೆ ಇಳಿದು, ಜನರೆಲ್ಲ ಸಂಪೂರ್ಣ ಖಾಲಿಯಾಗಿದ್ದರೂ, ಅನಿವಾರ್ಯವಾಗಿ ತಾಯಿ ಮಗಳಿಬ್ಬರೆ ಏನು ಮಾಡಲೂ ತೋಚದೆ ಅತ್ತಿಂದಿತ್ತ ಇತ್ತಿಂದತ್ತ ನಿರ್ಜನ ಪ್ಲ್ಯಾಟ್ಫಾರಮ್ಮಿನಲ್ಲಿ ಅಡ್ಡಾಡುತ್ತಿದ್ದಾಗ, ಗೋವಿಂದ್ ಲಿಫ್ಟಿನಿಂದ ಕೆಳಗಿಳಿದಿದ್ದು ಸದ್ಯ ಬಂದರಲ್ಲ ಎಂದು ನಿಟ್ಟುಸಿರುಬಿಟ್ಟು, ಧನ್ಯತಾಭಾವದಿಂದ ಮೇಲೆ ಬಂದಾಗ ನಮಗೂ ನಿರಾಳ! ಅಕಸ್ಮಾತ್ ಸ್ಟೇಷನ್ ಹೆಸರು ಗೊತ್ತಿಲ್ಲದೆ ಇದ್ದಿದ್ದರೆ ಮಗಳು ಮತ್ತು ಮೊಮ್ಮಗಳ ಪರಿಸ್ಥಿತಿಯ ಬಗ್ಗೆ ಯೋಚಿಸಿದರೂ ಭಯದಿಂದ ನಡುಕವಾಗುವುದು ಖಂಡಿತ! ಸದ್ಯ ಹಾಗಾಗದಿದ್ದರಿಂದ, ಇನ್ನೆಂದೆಂದೂ ಹೀಗಾಗದಂತೆ ಎಚ್ಚರ ವಹಿಸುವ ಸಂಕಲ್ಪ ಎಲ್ಲರಲ್ಲು ಮೂಡಿರಲೂಬಹುದು.
ಆ ಕ್ಷಣದಿಂದ ಊಬರ್ ಟ್ಯಾಕ್ಸಿಗಾಗಿ ಹರಸಾಹಸ ಆರಂಭ! ಯೂರೋಪಿನಲ್ಲಿ ಟ್ಯಾಕ್ಸಿಗಳ ಬರವೋ ಅಥವ ಚಾಲಕರು ಬೇಕಾಬಿಟ್ಟಿಯೋ ಅರಿವಾಗಲಿಲ್ಲ. ಒಂದಿಬ್ಬರು ದೂರವಾಣಿ ಕರೆ ಸ್ವೀಕರಿಸಿ ಸಹ ಬರಲು ನಿರಾಕರಿಸಿದ್ದರು; ಮತ್ತೊಬ್ಬ ಬರವುದಾಗಿ ಒಪ್ಪಿ ಸಹ ಎಷ್ಟು ಕಾಯ್ದರು ಬರಲೇ ಇಲ್ಲ. ಹೀಗೆ ಟ್ಯಾಕ್ಸಿಯ ಶಿಕಾರಿಯಲ್ಲಿ ಅಳಿಯ ಮತ್ತು ಮಗಳು ಪ್ರಯತ್ನ ಮಾಡುತ್ತಿದ್ದಾಗ, ನನಗೆ ಮೂತ್ರ ಮಾಡಬೇಕಾಗಿದ್ದರೂ ವಿಧಿ ಇಲ್ಲದೆ ತಡೆದುಕೊಂಡು ಸುಮ್ಮನೆ ಇರುವ ಅವಶ್ಯವಿತ್ತು ಆ ಕ್ಷಣ – ನನ್ನ ಡೈಯಾಬಿಟೀಸ್ ಸಹ ಅತಿ ಮೂತ್ರದ ತಾಪತ್ರಯಕ್ಕೆ ಕಾರಣ! ಹಾಗಂತ ಅಲ್ಲೇ ಪಕ್ಕದಲ್ಲೆ ಮೂತ್ರದ ಗಬ್ಬು ಮೂಗನ್ನು ಬಡಿಯುತ್ತಿದ್ದರು ಸಹ, ನಾನು ಹೇಗೆ ಅಂತಹ ಕೆಲಸ, ಅದೂ ಪರದೇಶದಲ್ಲಿ ಮಾಡಲಾದೀತು? ಮತ್ತೊಂದು ವಿಶೇಷ ಎಂದರೆ, ಯೂರೋಪಿನಲ್ಲಿ ನಾವು ತಿರುಗಿದ ಎಲ್ಲ ನಾಲ್ಕು – ಪೋರ್ಚುಗಲ್, ಸ್ಪೇನ್, ಫ್ರಾನ್ಸ್ ಮತ್ತು ಇಟಲಿ – ದೇಶಗಳಲ್ಲೂ ಮೂತ್ರ ಮಾಡುವ ಸೌಲಭ್ಯದ ಕೊರತೆ ಎದ್ದು ತೋರುತ್ತಿತ್ತು; ಹೋಟೆಲುಗಳಲ್ಲಿ ಕೂಡ ಟಾಯ್ಲೆಟ್ ಮುಂದೆ ‘ಕಸ್ಟಮರ್ಸ್ ಓನ್ಲಿ’ ಎಂಬ ದೊಡ್ಡ ಫಲಕ ಕಣ್ಣಿಗೆ ರಾಚುತ್ತಿದ್ದವು! ಇನ್ನು ಇತರೆ ಯೂರೋಪ್ ದೇಶಗಳ ಕಥೆ ಆ ದೇವರೆ ಬಲ್ಲ. ಅದರೆ ಅಮೆರಿಕದಲ್ಲಿ ಅಂಥ ತೊಂದರೆ ಕಿಂಚಿತ್ತೂ ಇದ್ದದ್ದು ಎಲ್ಲೂ ಕಾಣಲಿಲ್ಲ; ಎಲ್ಲ ಕಡೆ ಟಾಯ್ಲೆಟ್ಟುಗಳಿದ್ದು ಯಾರಿಗೂ ನಿರ್ಬಂಧ ಇರುವುದಿಲ್ಲ. ಹಾಗೆಯೆ ಲಿಸ್ಬನ್ ನಗರದಲ್ಲಿ ಸಹ ನಾನು ಮೂತ್ರಕ್ಕಾಗಿ ಹುಡುಕಾಡಿ, ಕೊನೆಗೆ ರೈಲಿನಲ್ಲಿ ನೋಡಿದ ತಕ್ಷಣ ಖುಷಿಯಿಂದ ಓಡಿದರೆ ಬೀಗ ಹಾಕಿತ್ತು. ರೈಲು ಇಳಿದಾಗ ನಿಲ್ದಾಣದಲ್ಲಿ ಪಬ್ಲಿಕ್ ಟಾಯ್ಲೆಟ್ ಫಲಕ ಕಂಡು ಓಡಿದೆ; ಮುಗಿಸಿ ಹೊರಬಂದಾಗ ಅದಕ್ಕಾಗಿ ಒಂದು ಯೂರೊ (ಸುಮಾರು ತೊಂಭತ್ತು ರೂಪಾಯಿ) ಪೀಕಬೇಕಾಯಿತು! ಭಾರತದಲ್ಲಿ ಸಹ ಊರೂರಲ್ಲು ಮೂತ್ರಕ್ಕೆ ಅಗಾಧ ತೊಡಕಿದ್ದರು ಕೂಡ, ಎಲ್ಲೆಂದರಲ್ಲಿ ನಿಂತು ಹರಿಸಿಬಿಡುವಂಥ ‘ಅದ್ಭುತ ಅವಕಾಶ’ ಇರುವುದರಿಂದ ಗಂಡಸರಿಗೆ ತೊಂದರೆ ಆಗದು; ಹೆಂಗಸರಿಗೆ ಮಾತ್ರ ಆ ‘ಸ್ವಾತಂತ್ರ್ಯ’ವೂ ಇಲ್ಲದ ಸಂಕಷ್ಟ. ಅಂತು ಕೊನೆಗೆ ಒಬ್ಬ ಟ್ಯಾಕ್ಸಿಯವನು ಒಪ್ಪಿ ಬಂದ. ಅದರಲ್ಲಿ ನಾವು ವಯಸ್ಸಾದ ಮೂವರ ಸಂಗಡ ಶಿವಾಂಕರನನ್ನು ಕೂರಿಸಿ ಹ್ಯಾಂಪ್ಟನ್ (Hampton by Hilton Rome East) ಎಂಬ ಹೋಟೆಲಿನತ್ತ ಕಳಿಸಿ, ಉಳಿದ ಮೂವರು ಇನ್ನೊಂದು ಟ್ಯಾಕ್ಸಿಯಲ್ಲಿ ಬರುವುದಾಗಿ ತಿಳಿಸಿದರು. ಅದೃಷ್ಟಕ್ಕೆ ನಮ್ಮನ್ನು ಹೆಚ್ಚು ಹೊತ್ತು ಕಾಯಿಸದೆ ಅವರೂ ಸಹ ಬಂದು ಸೇರಿದರು. ಹಾಗಾಗಿ ಮಧ್ಯಾಹ್ನದ ಊಟ ಬಹಳ ತಡವಾದದ್ದರಿಂದ, ಆ ಸಂಜೆ ಸಂಪೂರ್ಣ ವಿರಾಮಕ್ಕೆ ದಾರಿಯಾಯಿತು.
ಮಾರನೆಯ ದಿನ ರೋಂ ನಗರದಲ್ಲಿ ನೋಡಬಹುದಾದ ಅತಿ ಪ್ರಮುಖ ಸ್ಥಳಗಳನ್ನು ಕಣ್ತುಂಬಿಸಿಕೊಂಡು (ಏಕೆಂದರೆ ಅದು ಅತಿ ಪುರಾತನ ಪ್ರಸಿದ್ಧ ‘ರೋಂ’ ಕೇವಲ ಒಂದು ದಿನದಲ್ಲಿ ನೋಡಿ ಮುಗಿಸುವಂಥದ್ದಲ್ಲ), ರಾತ್ರಿ ಹೋಟೆಲಿಗೆ ಹಿಂತಿರುಗಿ, ಮಾರನೆ ದಿನ ಬೆಳಿಗ್ಗೆ ಐದು ಘಂಟೆಗೆ ರೋಂ ನಗರದ ಲಿಯೊನಾರ್ಡೊ ಡ ವಿನ್ಚಿ-ಫ್ಯೂಮಿಚೀನೊ ವಿಮಾನ ನಿಲ್ದಾಣದತ್ತ ಪಯಣಿಸುವುದಿತ್ತು. ರೋಂನಿಂದ ಮ್ಯೂನಿಕ್ ಮೂಲಕ ನಾವು ಮೂವರು ಮುಂಬಯಿಯತ್ತ, ಮತ್ತು ಮಗಳ ಕುಟುಂಬ ನ್ಯೂ ಜರ್ಸಿ ಕಡೆಗೆ ಪ್ರಯಾಣ ಮಾಡುವುದಿತ್ತು.
ಮರುದಿನ ಬೆಳಗಿನ ಉಪಾಹಾರ ಮುಗಿದ ಮೇಲೆ ರೋಂ ನಗರದ ಕ್ಷಿಪ್ರ ಪ್ರದಕ್ಷಿಣೆಗೆ ಹೊರಟು, ಪ್ರಪ್ರಥಮವಾಗಿ ‘ಕಾಲಸಿಯಮ್’ (Colloseum) ಎಂಬ ಜಗತ್ತಿನ ಅಂದಿನ ಮತ್ತು ಇಂದಿಗೂ ಅತ್ಯಂತ ಬೃಹತ್ತಾದ ‘ಆಮ್ಫಿಥಿಯೇಟರ್’ (amphitheater) ನಿಂದ ಆರಂಭಗೊಂಡ ನಮ್ಮ ಅವಲೋಕನದ ಸುತ್ತು, ನಂತರ ‘ರೋಮನ್ ಫೋರಮ್’ (Roman Forum) ಎಂಬ ಪುರಾತನ ಮಾರುಕಟ್ಟೆಯ ಭಗ್ನಗೊಂಡ ಅವಶೇಷಗಳನ್ನು ನೋಡಿದಾಗ, ಇನ್ನೂ ಅದನ್ನು ಜಗತ್ಪ್ರಸಿದ್ಧ ಸ್ಮಾರಕವಾಗಿ ಉಳಿಸಿಕೊಂಡಿರುವ ಇಟಲಿ ಸರ್ಕಾರಕ್ಕೆ ಮತ್ತು ಪ್ರಜೆಗಳಿಗೆ ಒಂದು ದೊಡ್ಡ ಸಲಾಂ ಎಂದೆನಿಸಿತು; ನಮ್ಮ ದೇಶದಲ್ಲಾಗಿದ್ದರೆ ‘ರಾಜಕೀಯ ಮಹಾನ್ ಗಣ್ಯರ’ ಕಣ್ಣನ್ನು ಅಂಥ ಜಾಗಗಳು ಸದಾ ಕುಕ್ಕಿಕುಕ್ಕಿ ಸೈಟುಗಳನ್ನಾಗಿಯೋ ಅಥವ ಸ್ವಾರ್ಥಕ್ಕೆ ಇನ್ನೆಂಥದ್ದೊ ಆಗಿ ಪರಿವರ್ತಿಸುವವರೆಗು ಬಿಡುತ್ತಿರಲಿಲ್ಲ! ಮುಂದೆ ‘ಟ್ರೆವಿ ಫೌಂಟೆನ್’ (Trevi Fountain) ಎಂಬ 86 ಅಡಿ ಎತ್ತರ ಮತ್ತು 161 ಅಡಿ ಅಗಲದ ರೋಂನ ಅತಿ ಎತ್ತರದ ಮತ್ತು ಜಗತ್ತಿನ ಪ್ರಮುಖ ಕಾರಂಜಿಗಳಲ್ಲಿ ಒಂದು ಎನಿಸಿರುವುದನ್ನು ನೋಡಿ, ಮುಂದೆ ‘ಪ್ಯಾಂಥಿಯನ್’ (Pantheon) ಎಂಬ ಒಂದೊಮ್ಮೆಯ ಪುರಾತನ ರೋಮನ್ ದೇವಸ್ಥಾನವಾಗಿದ್ದುದು, ನಂತರ ಕ್ರಿ.ಶ.609 ರಿಂದಿತ್ತೀಚೆಗೆ ಪ್ರಮುಖ ಕ್ಯಾಥೊಲಿಕ್ ಚರ್ಚ್ ಆಗಿ ಪರಿವರ್ತಿತವಾಗಿರುವುದನ್ನು ನೋಡಿದ ಮೇಲೆ, ‘ಟ್ರಿನಿಟ ಡೆ ಮಾಂಟಿ’ (Trinita de monti) ಎಂಬ ಎತ್ತರದ ಚರ್ಚಿನತ್ತ ಏರಿ ಹೋಗಲು ನಿರ್ಮಿಸಿರುವ 135 ಮೆಟ್ಟಿಲುಗಳ ಸುಮಾರು 95 ಅಡಿಗಳ (29 ಮೀಟರ್) ‘ಸ್ಪ್ಯಾನಿಷ್ ಸ್ಟೆಪ್ಸ್’ ಎಂಬ ವಿಶೇಷವನ್ನು ಕಂಡು ಆಶ್ಚರ್ಯಪಟ್ಟು, ಮುಂದೆ ಸಾಗುತ್ತ ‘ಪಿಯಾಜಾ ನವೋನ’ ಎಂಬ ಪುರಾತನ ರೋಮನ್ನರ ಆಟಗಳ ‘ಡೊಮಿಷನ್ ಸ್ಟೇಡಿಯಮ್’ ಆಗಿದ್ದುದು, ಇಂದು ರೋಂ ನಗರದ ಪ್ರಧಾನ ಚೌಕವಾಗಿರುವುದನ್ನು ಕಂಡೆವು. ಮತ್ತು ಅಷ್ಟಲ್ಲದೆ ವ್ಯಾಟಿಕನ್ ಮತ್ತು ಅದರೊಳಗಿನ ಸೆಂಟ್ ಪೀಟರ್ಸ್ ಬೆಸಿಲಿಕ ಮುಂತಾದ ಎಲ್ಲವನ್ನು ಬರಿದೆ ಕಣ್ತುಂಬಿಕೊಂಡು ಬರಲು ಇಡಿ ದಿನ ಮುಗಿದೆ ಹೋಗಿ ಹೋಟೆಲ್ಲಿಗೆ ಹಿಂತಿರುಗಿ ಹೋಗುವ ಸಮಯ ಬಂದೇಬಿಟ್ಟಿತು. ಇನ್ನು ಆ ಎಲ್ಲ ಸ್ಮಾರಕಗಳಲ್ಲಿ ಒಳಹೋಗಲು ಪ್ರತಿಯೊಂದಕ್ಕೂ ಪ್ರತ್ಯೇಕ ಸರತಿಯಲ್ಲಿ ನಿಂತು, ಪ್ರವೇಶಕ್ಕೆ ಟಿಕೆಟ್ಟುಗಳನ್ನು ಪಡೆದು ಒಳಹೊಕ್ಕು ಮತ್ತೆ ಸರತಿಯಲ್ಲಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ, ಅಲ್ಲಿನ ಬರಹಗಳನ್ನು ಓದುತ್ತ ವಿವರಗಳನ್ನು ಅರಿಯಬೇಕೆಂದಿದ್ದರೆ ಅದೆಷ್ಟು ದಿನ ಬೇಕಾಗುತ್ತಿತ್ತೊ ಏನೋ, ನಮಗಂತು ರೋಂ ನಗರ ನೋಡಲು ನಮ್ಮ ಐಟಿನರರಿ ಪ್ರಕಾರ ಇದ್ದದ್ದು ಒಂದೇ ಒಂದು ದಿನ!
ಎಲ್ಲ ನೋಡಿ ಒಂದು ರಸ್ತೆ ಬದಿಯ ಹೋಟೆಲಿನಲ್ಲಿ ಕಾಫಿ ಕುಡಿದಮೇಲೆ, ಗೋವಿಂದ್ ಮತ್ತೆ ಟ್ಯಾಕ್ಸಿ ಕರೆಯುವ ಸಾಹಸದಲ್ಲಿ ತೊಡಗಿದರು. ಎಷ್ಟು ಹೊತ್ತು ಪ್ರಯತ್ನಿಸಿದರೂ ವ್ಯರ್ಥ ಎನಿಸುತ್ತಿರುವ ಪರಿಸ್ಥಿತಿಯನ್ನು ಗಮನಿಸಿ ನಾನು, “ಇಲ್ಲಿಂದ ಟ್ರೇನ್ ಇಲ್ಲವೆ?” ಎಂದು ಮಗಳನ್ನು ಕೇಳಲಾಗಿ, ರೈಲ್ವೆ ನಿಲ್ದಾಣಕ್ಕಾಗಿ ಬಹಳ ಆಳಕ್ಕೆ ಮೆಟ್ಟಿಲಿಳಿಯಲು, ಮೊದಲೆ ದಣಿದಿರುವ ನಿಮ್ಮ ವಯಸ್ಸಾದ ಕಾಲುಗಳಿಗೆ ಕಷ್ಟ ಎಂದು ಟ್ಯಾಕ್ಸಿಗೆ ಪ್ರಯತ್ನ ಎಂದಳು. ನಾವು ಪರವಾಗಿಲ್ಲ ಎಂದಾಗ, ರೈಲಿನತ್ತ ನಿಧಾನ ಮೆಟ್ಟಿಲಿಳಿದು ತಲಪಿದೆವು. ಆಗಲೆ ರಾತ್ರಿ ಒಂಭತ್ತು ದಾಟಿತ್ತು. ಅಂತೂ ರೈಲು ಏರಿ ಮತ್ತೆ ಟೋರ್ರೆ ಮೋರ ನಿಲ್ದಾಣದಲ್ಲೆ ಇಳಿದು, ಎರಡು ಗುಂಪಾಗಿ ಲಿಫ್ಟ್ ಏರಿ ರಸ್ತೆಯ ಪಕ್ಕಕ್ಕೆ ಬಂದೆವು. ಅಲ್ಲಿಂದ ಮತ್ತೆ ಟ್ಯಾಕ್ಸಿಗಾಗಿ ಸಾಹಸ ಆರಂಭ. ಹೋಟೆಲ್ಲಿಗೆ ಹತ್ತು ಹದಿನೈದು ನಿಮಿಷದ ಪ್ರಯಾಣ.
ಬೀಗರು ಒಂದು ಕಲ್ಲು ಬೆಂಚಿನಮೇಲೆ ಉರುಳಿಕೊಂಡರು. ಮೊಮ್ಮಕ್ಕಳು ನಾನು, ಕಮಲ ಇನ್ನೊಂದರಲ್ಲಿ ಅದು ಇದು ಹರಟುತ್ತ ಕುಳಿತಿದ್ದೆವು. ಅತ್ತ ಅಳಿಯ, ಮಗಳ ಟ್ಯಾಕ್ಸಿ ಬೇಟೆ ಫೋನ್ ಮೂಲಕ ನಿರಂತರ ನಡೆದಿತ್ತು. ರಾತ್ರಿ ಹನ್ನೊಂದು ಕಳೆದರೂ ಒಂದೇ ಒಂದು ಊಬರ್ ಸುಳಿವಿಲ್ಲ. ಮೇಲಾಗಿ ನಾವು ಬೆಳಿಗ್ಗೆ ಐದರ ಹೊತ್ತಿಗೆ ಏರ್ಪೋರ್ಟಿನತ್ತ ಹೊರಡುವುದಿತ್ತು; ಅಷ್ಟರಲ್ಲಿ ಹೋಟೆಲನ್ನು ಎರಡು ಟ್ಯಾಕ್ಸಿಗಳಲ್ಲಿ ಅಥವ ಒಂದೆ ಒಂದಾದರು ಸಿಕ್ಕಿದರೆ ಎರಡು ಬಾರಿ ಅದರಲ್ಲೆ ಎರಡು ಗುಂಪಾಗಿ ಸಾಗುವುದು, ಊಟ ದೊರೆತರೆ ಮಾಡಿದ ನಂತರ ಮೊಮ್ಮಕ್ಕಳಿಗೆ ವಿದಾಯ ಹೇಳಿ, ಕೆಲವು ಘಂಟೆಯ ನಿದ್ದೆಯ ಬಳಿಕ ವಿಮಾನ ನಿಲ್ದಾಣದತ್ತ ದೌಡು.
ಇಷ್ಟೆಲ್ಲ ಆಗುವುದಿತ್ತಾದರೂ ಸಹ ಇನ್ನೂ ಊಬರ್ ಸುಳಿವು ಇಲ್ಲ! ಅಂಥ ತಡರಾತ್ರಿ ಹೊತ್ತಿನಲ್ಲೂ ಮಗಳು ಅತ್ತ ಬರುವ ಎಲ್ಲ ಥರದ ವಾಹನಗಳನ್ನು ನಿಲ್ಲಿಸಿ ವಿಚಾರಿಸಿತ್ತಿದ್ದುದು, ನಕಾರಾತ್ಮಕ ಉತ್ತರ ಬಂದಾಗ ಸಂಕಟ ಪಡುತ್ತಿದ್ದುದು ನಮಗೆ ಅರಿವಾಗುತ್ತಿತ್ತು. ಆದರೆ ಆ ಪರ ಊರಿನಲ್ಲಿ ನಾವು ಅಳಿಯ ಮಗಳಿಗಿಂತ ಹೆಚ್ಚು ಅಸಹಾಯಕರಾಗಿದ್ದೆವು. ಬಹುಶಃ ಹತಾಶೆಯ ಹಂತ ತಲಪುತ್ತಿದ್ದಾರೋ ಏನೋ ಅನ್ನಿಸಿತು ನನಗೆ. ಹೌದಲ್ಲವೆ? ಅಕಸ್ಮಾತ್ ಇಡಿ ರಾತ್ರಿ ವಾಹನ ಸಿಗದೆ, ಬೆಳಗಿನವರೆಗೂ ಅಲ್ಲೆ ಅನಾಥ ರಸ್ತೆ ಬದಿಯಲ್ಲೆ ಕಳೆಯುವ ಸ್ಥಿತಿ ಬಂದರೆ?ಬೆಳಿಗ್ಗೆಯ ಪ್ರಯಣದ ಗತಿ? ಏನೆಲ್ಲ ಸಾಧ್ಯ ಅಲ್ಲವೆ ಅಂಥ ಕಠಿಣ ಸಮಯದಲ್ಲಿ! ಸುತ್ತಲು ನಿರ್ಜನ, ಹನ್ನೊಂದು ದಾಟಿದ ರಾತ್ರಿ, ಯಾವುದೆ ಥರದ ವಾಹನಗಳ ಸದ್ದಿಲ್ಲ, ಮೇಲಾಗಿ ನಾವು ವಿದೇಶಿ ಪ್ರವಾಸಿಗರು! ನಮ್ಮ ದೇಶದಲ್ಲಾಗಿದ್ದರೆ ಇಷ್ಟು ಸರಕು ಸಾಕಿತ್ತಲ್ಲವೆ ಪೋಲಿಸರ ದುರುಳತನಕ್ಕೆ! ಅಥವ ದರೋಡೆಗೆ! ಆದರೆ ಆ ಕ್ಷಣದಲ್ಲಿ ನಾವಿದ್ದ ಆ ದೇಶದಲ್ಲಿ ಪೋಲಿಸರ ಬೀಟ್ ಸಹ ಇರಲಿಲ್ಲ! ಎಲ್ಲ ಪ್ರಶಾಂತ! ಹತಾಶಾಭಾವದಿಂದ ಅಂತಿಮ ಪ್ರಯತ್ನವಾಗಿ ಅನತಿ ದೂರದಲ್ಲಿ ಇನ್ನೂ ತೆರೆದಿದ್ದ, ಆದರೆ ಇನ್ನೇನು ಮುಚ್ಚುವ ಸೂಚನೆ ಎಂಬಂತೆ ಕೆಲ ದೀಪಗಳನ್ನು ಆರಿಸುತ್ತಿದ್ದುದನ್ನು ಗಮನಿಸಿ, ಮುಳುಗುವವನಿಗೆ ದೊರಕುವ ಹುಲ್ಲು ಕಡ್ಡಿಯೋ ಎಂಬಂಥ, ಆ ಒಂದು ಹೋಟೆಲಿಗೆ ಹೋಗಿ ನಮ್ಮ ಆ ಹೊತ್ತಿನ ಸಂಕಷ್ಟವನ್ನು, ಅದೃಷ್ಟಕ್ಕೆ ಅಲ್ಲಿಯ ಮಾಲಿಕೆ ಆಗಿದ್ದ ಆ ಮಹಿಳೆಗೆ ಅರಿವು ಮಾಡಿಕೊಟ್ಟು ಅವರದ್ದೇನಾದರು ವಾಹನ ಇದ್ದರೆ ಹಣಕ್ಕಾಗಿ ಕಳಿಸಿಕೊಡಲಾದೀತೆ ಎಂದು ಕೇಳಿದಳು ಮಗಳು. ಅದೆಂಥ ಕನಿಕರ ಆ ಮಹಿಳೆಯ ಮನಸ್ಸಿನಲ್ಲಿ ಮೂಡಿತೋ ಏನೊ, ಅವರ ಹೋಟೆಲಿನ ವಾಹನ ಇಲ್ಲದಿದ್ದನ್ನು ಹೇಳಿಯೂ, ತನಗೆ ತಿಳಿದಿರುವ ಟ್ಯಾಕ್ಸಿಗಳಿಗಾಗಿ ತಾನೆ ಪ್ರಯತ್ನ ಪಡುವುದಾಗಿ ಆಶ್ವಾಸನೆಯಿತ್ತು ದೂರವಾಣಿ ಕರೆ ಮಾಡತೊಡಗಿದಳು. ಕೊನೆಗೂ ಒಬ್ಬ ಕರೆ ಸ್ವೀಕರಿಸಿ ಬರಲು ಒಪ್ಪಿದ್ದ! ಸ್ವಲ್ಪ ಹೊತ್ತಿನಲ್ಲೆ ಬಂದ ಕೂಡ!
ಆಗ ಹನ್ನೆರಡರ ಆಸುಪಾಸು. ಮೇಲಾಗಿ, ಅಂಥ ಹೊತ್ತಲ್ಲಿ ನಾವು ತಂಗಿದ್ದ ಹೋಟೆಲಿನಲ್ಲಿ ಊಟ ದೊರಕುವ ಸಂಭವ ಇಲ್ಲದಿದ್ದರಿಂದ ಅಲ್ಲೆ ಏನಾದರು ಸಿಗಬಹುದೋ ಎಂದಾಗ, ಆ ಮಹಿಳೆ ತಮ್ಮ ಅಡಿಗೆಯವನಿಗೆ ಹೇಳಿ ಪೀಟ್ಸಾ (pizza) ಮಾಡಿಸಿ ಪಾರ್ಸೆಲ್ ಕೊಟ್ಟಿದ್ದು ಅಷ್ಟು ಹೊತ್ತಿನಲ್ಲಿ, ಅದೆಂಥ ಕರುಣೆಯೋ ಮಾನವೀಯತೆಯೋ ಅದೊಂದು ಅವಿಸ್ಮರಣೀಯ ಘಟನೆ!
ನಮ್ಮ ದೇಶದಲ್ಲಾಗಿದ್ದರೆ ಆ ಹೊತ್ತಿನಲ್ಲಿ ಆ ಟ್ಯಾಕ್ಸಿಯೊಂದರಲ್ಲೆ, ನಮ್ಮ ಏಳು ಜನರನ್ನೂ ಹೇಗೋ ತುಂಬಿಕೊಂಡು ಹೋಗುವ ಸಾಧ್ಯತೆ ಖಂಡಿತ ಇತ್ತು – ಹೆಚ್ಚಿನ ಹಣಕ್ಕಾಗಿ. ಆದರೆ ಆ ದೇಶಗಳಲ್ಲಿ ಕಾನೂನು ಬಿಟ್ಟು ಅದೆಂಥ ಹೊತ್ತಾದರು ಸರಿ ಆಚೀಚೆ ಸರಿಯುವ ಮಾತೆ ಇಲ್ಲ. ಮೊದಲ ಸಲ ಶಿವಾಂಕರ್ ಸಂಗಡ ನಾವು ಮೂವರು ವಯಸ್ಸಾದ ಜನ ಹೊಟೆಲ್ ತಲಪಿ ನಿಟ್ಟುಸಿರು ಬಿಡುವ ಹೊತ್ತಿಗೆ, ಅದೆ ಟ್ಯಾಕ್ಸಿ ಚಾಲಕ ಹಿಂತಿರುಗಿ ಹೋಗಿ ಅವರನ್ನೂ ಕರೆತಂದಿದ್ದ! ಅಂಥ ರಾತ್ರಿ ಒಪ್ಪಿ ಬಂದು ಎರಡು ಟ್ರಿಪ್ ಮಾಡಿ ಸಹಕರಿಸಿದ ಆ ಮಹಾನುಭಾವ ‘ಆಪದ್ಬಾಂಧವ’ ಚಾಲಕನಿಗೆ, ಗೋವಿಂದ್ ಎರಡು ಟ್ರಿಪ್ಪಿನ ಸಂಭಾವನೆಗಿಂತ ಹೆಚ್ಚು ಹಣ ಕೊಟ್ಟು, ಧನ್ಯತಾಭಾವದಿಂದ ಕಳಿಸಿಕೊಟ್ಟರು! ಅಲ್ಲಿಗೆ ಆ ರಾತ್ರಿ ನಾವೆ ಗೆದ್ದಂಥ ಭಾವನೆ. ಏಕೆಂದರೆ, ಆಕಸ್ಮಾತ್ ಆ ಹೊಟೆಲ್ ಅಷ್ಟು ಹೊತ್ತಿಗೆ ಮುಚ್ಚಿದ್ದರೆ ಅಥವ ಆ ಮಹಿಳೆ ನಕಾರಾತ್ಮಕ ಉತ್ತರ ಹೇಳಿದ್ದರೆ ಅಥವ ನನ್ನ ಮಗಳೆ ಅಲ್ಲೆಲ್ಲ ಹೇಗೆ ಕೇಳುವುದೆಂದು ಹಿಂಜರಿದಿದ್ದರೆ, ಅಥವ ಯಾವ ಟ್ಯಾಕ್ಸಿಯೂ ಬರದಿದ್ದರೆ ಮತ್ತು ಊಟವೂ ದೊರಕದಿದ್ದರೆ – ಹೀಗೆ ಎಷ್ಟೊಂದೆಲ್ಲ ‘ರೆ’ ಗಳ ಸಾಧ್ಯತೆ ಇದ್ದೂ ಸಹ ಗೆಲುವು ನಮ್ಮದಾಗಿತ್ತು!
ಮೊಮ್ಮಕ್ಕಳಿಗೆ ವಿದಾಯ ಹೇಳುವಾಗ ನನಗೆ ಮತ್ತು ನನ್ನ ಮಡದಿಗೆ ಸಂಕಟ. ಹಾಂಗಂತ ಒಟ್ಟಾಗಿ ಕಲೆಯುವುದು ಮತ್ತು ಬಿಟ್ಟು ಹೋಗುವುದು/ಬರುವುದು ಈ ಬದುಕಿನ ಏರು ತಗ್ಗುಗಳ ಚಲನವಲ್ಲವೆ. ಕಾವ್ಯ ಹಾಗು ಶಿವ ಇಬ್ಬರು ನಮ್ಮನ್ನು ತಬ್ಬಿ ಬೈಬೈ ಹೇಳಿ ಮಲಗಲು ಹೋದರು; ಅವರು ಅವರಪ್ಪನ ಥರ; ಭಾವುಕಾಗುವುದಿಲ್ಲ!
ಮಾರನೆ ಬೆಳಿಗ್ಗೆ ಮಗಳು ಎದ್ದು ಬಂದು ಕಳಿಸಿಕೊಟ್ಟಳು; ಮಗಳಲ್ಲವೆ, ಬಿಟ್ಟು ಹೊರಡುವುದು ನಮಗು ದುಃಖದ ವಿಷಯ. ಆದರೆ ಅವರು ಅವರ ಜೀವನದತ್ತ ಹೊರಳಲೆ ಬೇಕಲ್ಲವೆ? ಹಾಗೆಯೆ ನಾವೂ ಸಹ. ಗೋವಿಂದ್ ನಮ್ಮ ಸಂಗಡ ರೋಂನ ಫ್ಯೂಮಿಚಿನೊ ವಿಮಾನ ನಿಲ್ದಾಣಕ್ಕೆ ಬಂದು ಕಳಿಸಿಕೊಟ್ಟರು. ಮಗಳು ಮಕ್ಕಳಿಬ್ಬರೆ ಮಲಗಿದ್ದರಿಂದ ಬರಲಿಲ್ಲ.
ಮುಂಬೈ ನಗರದಲ್ಲಿ:
ಪ್ರಯಾಣದ ಮಧ್ಯೆ ಇನ್ನಾವ ಅಡಚಣೆ ಅಥವ ತೊಂದರೆ ಜರುಗದೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲಪಿದ್ದಾಯಿತು; ಬಹುಶಃ ಆಗ ಸಮಯ ರಾತ್ರಿ ಹನ್ನೆರಡರ ಆಸುಪಾಸು. ಮಾರನೆ ದಿನ ಬೆಂಗಳೂರಿಗೆ ವಿಸ್ತಾರ ಏರ್ ಲೈನ್ಸ್ ಮೂಲಕ ಬಹುಶಃ ಬೆಳಿಗ್ಗೆ ಆರು ಘಂಟೆಗೆ ಹೊರಡುವುದಿತ್ತು. ನಮ್ಮ ಸಂಗಡ ನನ್ನ ಮಗ, ಸೊಸೆ ಮತ್ತು ಮೊಮ್ಮಕ್ಕಳಿಬ್ಬರು ಅದೇ ಫ್ಲೈಟಿನಲ್ಲಿ ಬರುವುದಿತ್ತು. ಅವರು ನಾಲ್ವರು ಮೂರು ದಿನಗಳ ಹಿಂದೆ ಮುಂಬೈಗೆ ಬಂದು ಮಗನ ಗೆಳೆಯನೊಬ್ಬನ ಮನೆಯಲ್ಲಿ ತಂಗಿದ್ದರು – ಮುಂಬೈ ನೋಡಲು.
ಇಮ್ಮಿಗ್ರೇಶನ್ ಕೆಲಸ ಮುಗಿದ ಬಳಿಕ, ಕಸ್ಟಮ್ಸ್ ಕಡೆ ಹೋಗುವ ಮೊದಲು ನಮ್ಮ ಲಗ್ಗೇಜ್ ತೆಗೆದುಕೊಳ್ಳುವ ಕೆಲಸ ಇತ್ತು. ಅದಕ್ಕಾಗಿ ವಿಮಾನದಲ್ಲಿ ಮೊದಲೆ ಪ್ರಸರಣಗೊಂಡಿದ್ದ, ಲಗ್ಗೇಜ್ ಹೊತ್ತು ತಿರುಗುವ ಬೆಲ್ಟ್ ನಂಬರ್ ಹುಡುಕಿಕೊಂಡು ಹೋಗಿ ನಿಂತೆವು. ಅದು ಆಗಲೆ ತಿರುಗುತ್ತ ತನ್ನ ಕೆಲಸದಲ್ಲಿ ತೊಡಗಿತ್ತು. ತಮ್ಮ ತಮ್ಮ ಬ್ಯಾಗೇಜ್ ಬಂದ ಹಾಗೆ ಪ್ರಯಾಣಿಕರು ಎತ್ತಿಕೊಂಡು ಹೋಗುವ ಪ್ರಕ್ರಿಯ ಕೂಡ ನಡೆದಿತ್ತು. ಬೀಗರ ಸೂಟ್ ಕೇಸ್ ಮೊದಲು ಬಂದು ಎಷ್ಟು ಹೊತ್ತು ಕಾಯ್ದರು, ಕೊನೆಗೆ ಬೆಲ್ಟ್ ತಿರುಗುವುದು ನಿಂತ ಮೇಲೂ ಸಹ ನಮ್ಮದು ಬರಲೆ ಇಲ್ಲ. ಇರಲಿ ನಾವು ಇಲ್ಲಿಗೆ ಬರುವುದಕ್ಕೂ ಮೊದಲೆ ಅಕಸ್ಮಾತ್ ಅದು ಬಂದಿದ್ದು, ಯಾರಾದರೂ ತಮ್ಮದೆಂದು ನೋಡಿ ನಂತರ ತಮ್ಮದಲ್ಲದ್ದನ್ನು ಖಾತ್ರಿ ಮಾಡಿಕೊಂಡು ಕೆಳಗೆ ಹಾಕಿರುವ ಸಾಧ್ಯತೆ ಇದ್ದೀತೆಂದು, ಒಂದು ಸುತ್ತು ಹೊಡೆದೆವು; ಅಲ್ಲದೆ ಹೇಗಾದರಿರಲಿ ಎಂದು ಉಳಿದ ಬೆಲ್ಟ್ ಗಳ ಕಡೆಯೆಲ್ಲ ಹೋಗಿ ಸುತ್ತಿದರೂ ಎಲ್ಲೂ ಇರಲಿಲ್ಲ. ನನ್ನ ಮಡದಿಯ ಕಣ್ಣಿಗೆ ನಮ್ಮಂಥದೆ ನೀಲಿ ಸೂಟ್ ಕೇಸೊಂದು ಕಂಡು, ಹೋಗಿ ನೋಡಿದರೆ, ಅದೂ ಅದೆ ಥರದ್ದು ಆದರೆ ಬಹಳ ಹಳೆಯದು! ನಮ್ಮದು ಯೂರೋಪ್ ಟ್ರಿಪ್ಪಿಗಂತಲೆ ಕೊಂಡು ತಂದಿದ್ದ ಅಮೆರಿಕನ್ ಟೂರಿಸ್ಟರ್ ಬ್ರ್ಯಾಂಡ್; ಹೊಚ್ಕಹೊಸದು. ಕೊನೆಗೆ ಕಂಪ್ಲೇಂಟ್ ಡೆಸ್ಕಿಗೆ ಹೋಗಿ ಮೊದಲೆ ಇದ್ದ ಒಂದಿಬ್ಬರ ಹಿಂದೆ ನಿಂತೆ. ನಮ್ಮ ಫ್ಲೈಟಿನಲ್ಲೆ ಬಂದಿದ್ದ ಒಬ್ಬರಿಗೆ ಏರ್ ಲೈನ್ಸಿನ ಸಿಬ್ಬಂದಿ ತನಿಖೆ ನಡೆಸಿ, “ಸರ್ ನಿಮ್ಮ ಲಗ್ಗೇಜನ್ನು ರೋಂನಲ್ಲಿ ಆಕಸ್ಮಿಕ ಲೋಡ್ ಮಾಡಿಲ್ಲ; ಖಂಡಿತ ತರಿಸಿ ನಿಮಗೆ ಕಳಿಸಿಕೊಡುತ್ತೇವೆ, ಕಂಪ್ಲೇಂಟೊಂದನ್ನು ಬರೆದು ನಿಮ್ಮ ವಿಳಾಸ ಮುಂತಾದ ವಿವರ ಬರೆದುಕೊಟ್ಟು ಹೋಗಿ” ಎಂದಾಗ, ಆತನ ಕೋಪ ನೆತ್ತಿಗೇರಿ ಕೂತು “ನನಗೀಗ ಬಟ್ಟೆ ಸಹ ಇಲ್ಲ, ಏನು ಮಾಡಲಿ?” ಎಂದು ಕೂಗಾಡತೊಡಗಿದ. ಹೀಗೆ ಇನ್ನೊಬ್ಬರದನ್ನು ಆಕಸ್ಮಿಕವಾಗಿ ಮ್ಯೂನಿಕ್ ಏರ್ಪೋರ್ಟಲ್ಲಿ ಇಳಿಸಿದ್ದನ್ನು ಮುಂಬೈಗೆ ಹೊರಡುವ ವಿಮಾನಕ್ಕೆ ಲೋಡ್ ಮಾಡಿರಲಿಲ್ಲ; ಅದನ್ನು ಸಹ ತರಿಸುವುದಾಗಿ ಆಶ್ವಾಸನೆ. ನನ್ನ ಸರದಿ ಬಂದಾಗ, ಕೆಲವು ಟೆಲಿಫೋನ್ ಕರೆಗಳ ನಂತರ, ಮತ್ತು ನನ್ನ ಮಡದಿ ನೋಡಿದ್ದ ಅದೆ ಹಳೆಯ ನೀಲಿ ಸೂಟ್ಕೇಸಿನ ಏರ್ಲೈನ್ ಟ್ಯಾಗ್ ಪರೀಕ್ಷಿಸಿ, ನನ್ನ ಹೊಸ ಸೂಟ್ಕೇಸನ್ನು ಆ ಹಳೆ ಸೂಟ್ಕೇಸಿನ ವ್ಯಕ್ತಿ ತನ್ನ ಹಳೆಯದರ ಬದಲಿಗೆ ನನ್ನ ಹೊಸದನ್ನು ಎತ್ತಿ ಕೊಂಡೊಯ್ದದ್ದಲ್ಲದೆ, ಅಷ್ಟರಲ್ಲಾಗಲೆ ನಾಗಪುರದತ್ತ ತನ್ನ ಪ್ರಯಾಣಕ್ಕಾಗಿ ಏರ್ ಇಂಡಿಯ ಫ್ಲೈಟಿಗೆ ಚೆಕ್ ಇನ್ ಕೂಡ ಮುಗಿಸಿ, ಸೂಟ್ಕೇಸು ವಿಮಾನಕ್ಕೆ ಅಪ್ಲೋಡ್ ಆಗಿಹೋಗಿತ್ತು ಮತ್ತು ಇನ್ನು ಸ್ವಲ್ಪ ಹೊತ್ತಲ್ಲಿ ಆ ವಿಮಾನ ಹೊರಡುವುದರಲ್ಲಿತ್ತು. ಆ ಮಹಿಳಾ ಸಿಬ್ಬಂದಿ ಆದಷ್ಟು ಬೇಗ ಅದನ್ನು ತರಿಸಿಕೊಡುವುದಾಗಿ ಆಶ್ವಾಸನೆ ಇತ್ತು ಕೂರಲು ಹೇಳಿದಳು. ಅದರೆ ಕುರ್ಚಿ- ಬೆಂಚಿಲ್ಲದೆ ಎಲ್ಲಿ ಕೂರುವುದು? ಬೀಗರನ್ನು ಅನತಿ ದೂರದಲ್ಲಿದ್ದ ಒಂದು ಆಸನದ ಮೇಲೆ ಕೂರಿಸಿ, ನಾವಿಬ್ಬರು ನಿಂತೆ ಕಾಯತೊಡಗಿದೆವು.
ಅಷ್ಟರಲ್ಲಿ ಏರ್ಪೋರ್ಟ್ ಹೊರಗೆ ನಿಂತಿದ್ದ ನನ್ನ ಮಗ ಮತ್ತವನ ಗೆಳೆಯ, ಜಗದೀಶ್ ಇಬ್ಬರಿಗು ನಮ್ಮ ಕಳೆದಿರುವ ಲಗ್ಗೇಜ್ ಪರಿಸ್ಥಿತಿಯನ್ನು ತಿಳಿಸಿ, ನಾವು ಅದಕ್ಕಾಗಿ ಏರ್ಪೋರ್ಟ್ ಬಿಟ್ಟು ಹೊರಗೆ ಬರುವ ಪ್ರಮೇಯ ಇಲ್ಲವೆಂದು ಹೇಳಿ, ನೀವು ಮನೆಗೆ ಹೋಗಿ ಸ್ವಲ್ಪ ರೆಸ್ಟ್ ಮಾಡಿ ಬೇಗ ಏರ್ಪೋರ್ಟಿನತ್ತ ಬನ್ನಿ ಎಂದು ಅವರಿಬ್ಬರನ್ನು ಕಳಿಸಿದೆ; ಜಗದೀಶ್ ಮನೆ ಅಲ್ಲೆ ಹತ್ತಿರದಲ್ಲೆ ಇದ್ದ ವಿಷಯ ನನಗೆ ಗೊತ್ತಿತ್ತು. ಎಷ್ಟು ಹೊತ್ತು ಕಳೆದರು ಬ್ಯಾಗೇಜ್ ಬರುವ ಸೂಚನೆ ಇಲ್ಲದಿದ್ದಾಗ, ತನ್ನ ಕೆಲಸ ನಿಮಿತ್ತ ಆಗಿಂದಾಗ್ಗೆ ವಿಮಾನಯಾನ ಕೈಗೊಳ್ಳುವ ಮಗನ ಗೆಳೆಯ ಜಗದೀಶ್ ಕರೆಮಾಡಿ, “ಬ್ಯಾಗೇಜ್ ಕೂಪನ್ ತಗೊಂಡು ಹೊರಬಂದುಬಿಡಿ, ಸಿಕ್ಕಿದಾಗ ಅವರೇ ಕಳಿಸಿಕೊಡುತ್ತಾರೆ; ಹೊರ ಹೋಗುವುದಾಗಿ ಕೌಂಟರ್ನಲ್ಲಿ ಹೇಳಿ ನಿಮ್ಮ ಅಡ್ರೆಸ್ ಮತ್ತು ಫೋನ್ ನಂಬರ್ ಕೊಟ್ಟು ಬಂದುಬಿಡಿ. ಕಳಿಸಲೇಬೇಕಾದದ್ದು ಅವರ ಕರ್ತವ್ಯ” ಎಂದು ಹೇಳಿದರು. ಆದರು ಇರಲೆಂದು ಇನ್ನೂ ಅರ್ಧ ತಾಸು ಕಾಯ್ದಮೇಲು ಲಗ್ಗೇಜ್ ಬರುವ ಸೂಚನೆ ಇಲ್ಲದಿದ್ದಾಗ, ಜಗದೀಶ್ ಹೇಳಿದ ರೀತಿ ವಿಳಾಸ ಬರೆದುಕೊಟ್ಟು ಹೊರಕ್ಕೆ ಹೊರಟು, ಕಸ್ಟಮ್ಸ್ ಬಿಟ್ಟು ಬರುವಾಗ, ನಿಲ್ದಾಣದ ಆಚೆ ಹೋಗುವ ಮೊದಲು ಮಗನೊಡನೆ ಎಲ್ಲ ಹೇಳುತ್ತ ನಿಂತಿದ್ದಾಗ,”ಸರ್, ಏನ್ ನಿಮ್ಮ ಪ್ರಾಬ್ಲಮ್?” ಎಂದು ಅಪ್ಪಟ ಕನ್ನಡದಲ್ಲಿ ಕೇಳಿದ್ದು ಪೋಲಿಸ್ ಸಮವಸ್ತ್ರದಲ್ಲಿದ್ದ ಒಬ್ಬ ಆಗಂತುಕ ಮಹಿಳೆ! ಆಕೆಯ ಹೆಸರು ವಿಜಯಲಕ್ಷ್ಮಿ, ಬೆಳಗಾವಿ ಕಡೆ ಹೆಂಗಸು. ನಾವು ವಿವರಿಸಿದ ಮೇಲೆ ಯಾರಿಗೊ ಫೋನ್ ಮಾಡಿ, ತಕ್ಷಣ ಅಲ್ಲಿಗೆ ಬರುವಂತೆ ಆಗ್ರಹಿಸಿದರು. ಅಲ್ಲದೆ, “ನೀವು ಹೊರಕ್ಕೆ ಹೋಗಿಬಿಟ್ಟರೆ, ನೀವು ಮುಂದಿನ ಪ್ರಯಾಣ ಮಾಡಿದ್ದೀರಿ ಎಂದು ತಿಳಿದು, ನಿಮ್ಮ ಲಗ್ಗೇಜ್ ತರಿಸುವ ಕೆಲಸ ತಡ ಮಾಡಿ, ಕ್ರಮೇಣ ಬೇಕಾಬಿಟ್ಟಿಯಾಗಿ ಅದು ಬಂದಾಗ ಬೆಂಗಳೂರಿಗೆ ಕಳಿಸುತ್ತಾರೆ; ನೀವು ಅದು ಬಂದ ವಿಷಯ ತಿಳಿದು ಮೈಸೂರಿಂದ ಹೋಗಬೇಕಾಗುತ್ತದೆ. ಆದ್ದರಿಂದ ಅವರಿಗೆ ಕಾಣಿಸುವ ಹಾಗೆ ಇಲ್ಲೇ ಕೂತಿರಿ. ಹೇಗಿದ್ದರೂ ನಿಮ್ಮ ಫ್ಲೈಟಿಗೆ ತುಂಬ ಟೈಮಿದೆ” ಎಂದೂ ಹೇಳಿದರು. ಅನತಿ ವೇಳೆಗೆ ಕಂಪ್ಲೇಟ್ ಕೌಂಟರಿನ ಹತ್ತಿರ ಮಾತನಾಡಿದ್ದ ಆ ಲುಫ್ತಾನ್ಜ ಏರ್ವೇಸ್ ಸಿಬ್ಬಂದಿ ಓಡಿ ಬಂದು, “ಮೇಡಂ ಇವರ ಲಗ್ಗೇಜ್ ಕೊಂಡೊಯ್ದ ಆ ಪ್ರಯಾಣಿಕ ಸೂಟ್ಕೇಸ್ ಸಹಿತ ಇನ್ನೇನು ಬರುವವನಿದ್ದಾನೆ; ಇವರು ಇಲ್ಲೆ ಕೂತಿರಲಿ” ಎನ್ನುತ್ತ, “ಆತನ ಫ್ಲೈಟಿಂದ ಸೂಟ್ಕೇಸ್ ಇಳಿಸಲಾಗಿದೆ ಮತ್ತು ಆತನನ್ನು ಆ ಫ್ಲೈಟ್ ಬಿಟ್ಟು ಹೊರಟು ಹೋಗಿದೆ. ಅವನು ಬಂದ ಕೂಡಲೆ ಇವರಿಗೆ ಆ ಸೂಟ್ಕೇಸನ್ನು ತಲಪಿಸುವ ಭಾರ ನನ್ನದು; ನಿಮಗೂ ತಿಳಿಸಿಯೆ ಹೋಗುವೆನು” ಎಂದು ಹೇಳಿ ವಾಪಸ್ ಹೋದ.
ನಮಗೆ ಮತ್ತೆ ಕಾಯುವ ಕಾಯಕ. ಅರ್ಧ ಘಂಟೆಯಾದರು ಯಾರ ಸುಳಿವೂ ಇಲ್ಲ. ಆ ಪೋಲಿಸ್ ವಿಜಯಲಕ್ಷ್ಮಿ ಮತ್ತೊಮ್ಮೆ ಏರ್ಲೈನ್ಸಿನ ವ್ಯಕ್ತಿಗೆ ಫೋನ್ ಮಾಡಿದಾಗ ಆತ ಬರುತ್ತಿರುವುದಾಗಿ ತಿಳಿಸಿದ. ಕೆಲ ನಿಮಿಷಗಳಲ್ಲಿ ಸ್ವಲ್ಪ ದೂರದಲ್ಲಿ ನಮ್ಮ ಸೂಟ್ಕೇಸ್ ನೂಕುತ್ತ ಇಬ್ಬರು ನಮ್ಮತ್ತ ಬರುವುದನ್ನು ಕಮಲ ತೋರಿಸಿದಾಗ, ನಾವು ಎದ್ದು ನಿಂತೆವು; ಏರ್ಲೈನ್ಸಿನ ಸಿಬ್ಬಂದಿಯೊಡನೆ ಆ ವ್ಯಕ್ತಿ ಬಂದವನೆ, ಬಗ್ಗಿ ನನ್ನ ಮತ್ತು ನನ್ನ ಮಡದಿಯ ಕಾಲು ಮುಟ್ಟುತ್ತ, “ಐ ಆಮ್ ವೆರಿ ವೆರಿ ಸಾರಿ; ಬೈ ಮಿಸ್ಟೇಕ್ ಇಟ್ ಹ್ಯಾಪನ್ಡ್; ಪ್ಲೀಸ್ ಪಾರ್ಡನ್ ಮಿ” ಎನ್ನುತ್ತ ಸೂಟ್ಕೇಸನ್ನು ನನ್ನ ಕೈಲಿತ್ತು, ಬಹುಶಃ ಮಾನ ಹೋದ ಹಿಂಸೆಯಿಂದ ಅನಿಸುವ ಹಾಗೆ, ಓಡುವ ರೀತಿ ಸರಸರ ನಡೆದು ಹೋಗಿಬಿಟ್ಟ! ನಾನು ಇಬ್ಬರಿಗೂ ಥ್ಯಾಂಕ್ಸ್ ಹೇಳಿ, ಮಗನ ಬರುವಿಕೆಗಾಗಿ ಕಾಯುತ್ತ ಕುಳಿತೆವು. ಅಷ್ಟರಲ್ಲಿ ಆ “ಆಪದ್ಬಾಂಧವ ಪೋಲಿಸ್” ವಿಜಯಲಕ್ಷ್ಮಿ ಅವರು ಬಂದರು. ನಾವಿಬ್ಬರು ಅವರ ಸಹಾಯಕ್ಕೆ ಆಭಾರಿ ಎಂದು ಥ್ಯಾಂಕ್ಸ್ ಹೇಳಿದಾಗ, “ನೀವು ನಿಮ್ಮ ಡೊಮೆಸ್ಟಿಕ್ ಫ್ಲೈಟಿಗೆ ಇಲ್ಲಿ ಕೂತರೆ ಆಗದು. ಮೇಲೆ ಹೋಗಬೇಕು, ಬನ್ನಿ ತೋರಿಸುವೆ
ಎನ್ನುತ್ತ ಲಿಫ್ಟಿನ ಕಡೆ ನಡೆದು ಅವರೆ ಗುಂಡಿ ಒತ್ತಿ, ನಾವು ಒಳಹೋಗುವಾಗ ವಿದಾಯ ಹೇಳಿ, ನನ್ನ ಡ್ಯೂಟಿ ಮುಗಿದಿದೆ ಬರುವೆನು ಎಂದು ಹೇಳುತ್ತ ಮರೆಯಾದರು!
ಎಲ್ಲೆಲ್ಲಿ ಯಾರುಯಾರಿಂದ ಸಹಾಯದ ಹಸ್ತ ಯಾವಯಾವ ಘಳಿಗೆಗಳಲ್ಲಿ ತೆರೆದಿರುತ್ತದೆಯೋ ಹೇಗೆ ಯಾರು ತಾನೆ ಊಹಿಸಲಾದೀತು? ಜಗದ ಮೂಲೆಮೂಲೆಗಳಲು ಮಾನವೀಯತೆ ತುಂಬಿ ತುಳುಕುವ ಮನುಷ್ಯರು ಕಾಲಕಾಲಕ್ಕು ದೊರಕುತ್ತಾರೆ ಎಂಬ ಸತ್ಯ ನಮಗೆ ಒಮ್ಮೆ ರೋಂ ನಗರದಲ್ಲಿ ಮತ್ತೊಮ್ಮೆ ಇಲ್ಲಿ ಮುಂಬಯಿ ಎಂಬ ಮತ್ತೊಂದು ಆಗಂತುಕ ನಗರದಲ್ಲಿ ರುಜುವಾತಾಗಿತ್ತು! ಧನ್ಯತಾಭಾವದಿಂದ ನಮ್ಮ ಬೆಂಗಳೂರಿನ ಫ್ಲೈಟ್ ಹತ್ತಿದೆವು.
ಡಾ. ಅರಕಲಗೂಡು ನೀಲಕಂಠ ಮೂರ್ತಿ.
Pravasi lekhana thumbs chennagidae, namagae Hannigan kattidanthae edae.
ಮೂರ್ತಿ, ನಿಮ್ಮ ಈ ಪ್ರವಾಸ ಲೇಖನ ಚೆನ್ನಾಗಿದೆ. ನಾವು ಯಾರೂ ಹೀಗೆ ಕರಾರುವಕ್ಕಾಗಿ ಜಾಗ ಸಮಯಗಳನ್ನು ಬರೆಯುವುದಕ್ಕೆ ಆಗುವುದಿಲ್ಲ.
ವಿದೇಶದಲ್ಲಿ ಟ್ಯಾಕ್ಸಿ ಸಿಕ್ಕಾಗ ಸಹಾಯ ಮಾಡಿದವರ, ಸ್ವದೇಶದಲ್ಲಿ ನಿಮ್ಮ luggage ಕಳೆದಾಗ, ಸಹಾಯ ಮಾಡಿದವರನ್ನು ನೀವು ನೆನೆಸಿಕೊಂಡ ರೀತಿ ಚೆನ್ನಾಗಿತ್ತು. (ಅದಕ್ಕೆ ಕಾರಣೀಭೂತರನ್ನು ಬೈಯಲಿಲ್ಲ ನೀವು)
ಅದು ನಿಮ್ಮ ವ್ಯಕ್ತಿತ್ವ.!!
Congrats Murthy for that write up.well done!
ಲಕ್ಷ್ಮೀಶ್ ಮತ್ತು ವೆಂಕಟೇಶ್ ಇಬ್ಬರಿಗೂ ಅನಂತ ಧನ್ಯವಾದಗಳು.