ಡಾ. ಕರುಣಾಕರ್ ಶೆಟ್ಟಿ ಅವರ ಕೃತಿ “ಬೋಗನ್ ವಿಲ್ಲಾ”ಅವಲೋಕನ ಡಾ.ಜಿ.ಪಿ.ಕುಸುಮ, ಮುಂಬಯಿ

ಕವನ ಸಂಕಲನ- ಬೋಗನ್ ವಿಲ್ಲಾ
ಲೇಖಕರು – ಡಾ. ಕರುಣಾಕರ್ ಶೆಟ್ಟಿ, ಪಣಿಯೂರು.ಮುಂಬಯಿ
ಪ್ರಕಾಶಕರು- ಕಾರ್ತಿಕ್ ಎಂಟರ್ಪ್ರೈಸಸ್ , ಮೈಸೂರು.
ಪುಟಗಳು- 108. ಬೆಲೆ – ರೂ.100/-
ಪ್ರಥಮ ಮುದ್ರಣ- 2021

ನಮ್ಮ ಸಾಹಿತ್ಯದ ಒಡನಾಡಿ ಡಾ.ಕರುಣಾಕರ್ ಶೆಟ್ಟಿಯವರದ್ದು ಬಹುಮುಖ ಪ್ರತಿಭೆ. ಕಾವ್ಯ ಲೋಕದಲ್ಲಿ ಮೈಮರೆಯುತ್ತಾರೆ. ಕಥಾಲೋಕದಲ್ಲಿ ತಲ್ಲೀನರಾಗುತ್ತಾರೆ. ವೈಚಾರಿಕ ಲೇಖನಗಳಲ್ಲಿ ಸಂಭ್ರಮಿಸುತ್ತಾರೆ. ಕಾದಂಬರಿಕಾರರಾಗಿ, ವಿಮರ್ಶಕರಾಗಿ  ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
 ಮಕ್ಕಳಿಗಾಗಿ ಹಾಡುಗಳನ್ನು ಬರೆದಿದ್ದಾರೆ. ಕನ್ನಡ- ತುಳು ಈ ಉಭಯ ಭಾಷೆಗಳಲ್ಲಿ ಸಾಹಿತ್ಯ ಕೃತಿ ರಚಿಸುತ್ತಿರುವ ಇವರು ನಟರಾಗಿ ನಾಟಕ ರಂಗದಲ್ಲಿ  ಬಹಳ ಪ್ರಸಿದ್ಧಿ ಪಡೆದವರು. ಇನ್ನು,  ಯಾವುದೇ ಹೊಸ ಕೃತಿ ಕೈಗೆ ಬಂದಾಗ ವೈಯಕ್ತಿಕ ಕೆಲಸಗಳೇನಿದ್ದರೂ ಬದಿಗಿರಿಸಿ ಆ ಕೃತಿಯನ್ನು ಓದಿ ಇತರರಿಗೂ ಅಕ್ಷರ ರೂಪದಲ್ಲಿ ಅದನ್ನು ಪರಿಚಯಿಸುವ ಇವರ ಹೃದಯ ವೈಶಾಲ್ಯತೆ ಮೆಚ್ಚುವಂಥದ್ದು.  ಕೃತಿಗಳು ಮುಂಬೈಯಲ್ಲಿ ಬಿಡುಗಡೆಗೊಳ್ಳಲಿ , ಪೂನಾದಲ್ಲಿ ಬಿಡುಗಡೆಗೊಳ್ಳಲಿ ಆಯಾ  ಲೇಖಕರು ಇವರ ವಿಳಾಸ ಪಡೆದುಕೊಂಡು ಇವರಿಗೆ ಕೃತಿಗಳನ್ನು ಕಳುಹಿಸಿಕೊಡುತ್ತಾರೆ. ಯಾಕೆಂದರೆ ಅವರಿಗೆ ಗೊತ್ತು ಕರುಣಾಕರ್   ಶೆಟ್ಟಿಯವರು ಸಮಯ ತೆಗೆದುಕೊಂಡು ಕೃತಿ ಪರಿಚಯ ಮಾಡುತ್ತಾರೆ ಎಂದು. ಇದೊಂದು ಅವರ ಬಹುದೊಡ್ಡ ಸಾಧನೆ.
ಡಾ. ಕರುಣಾಕರ ಅವರಿಗೆ ಅನೇಕ ಬಹುಮಾನಗಳು ಬಂದಿವೆ ಪ್ರಶಸ್ತಿಗಳು ಬಂದಿವೆ.

ಇದೀಗಾಗಲೇ ಈ ಕವಿಯ 4 ಕವನ ಸಂಕಲನಗಳು,
 5 ಕಥಾಸಂಕಲನಗಳು, ಐದು ಸಂಪಾದಿತ ಕೃತಿಗಳು ವಿಮರ್ಶಾ ಕೃತಿಗಳು,  Ph.D ಸಂಶೋಧನಾ ಗ್ರಂಥ ಹೀಗೆ ಒಟ್ಟು 24 ಕೃತಿಗಳು ಪ್ರಕಟಗೊಂಡಿವೆ.

  ಬೋಗನ್ ವಿಲ್ಲಾ ಕವನ ಸಂಕಲನದಲ್ಲಿ ತರೆದ ಮನದ ಸುಂದರ ಭಾವಚಿತ್ರಗಳಿವೆ.  ಕವನ ಸಂಕಲನದ ಮೊದಲನೆಯ ಕವನ ‘ಪ್ರೀತಿ ‘ ನಿಷ್ಕಲ್ಮಷ ಪ್ರೀತಿಯ ಶಕ್ತಿಯನ್ನು ಈ ಕವನ ತಿಳಿಸುತ್ತದೆ.. ಈ ಸಂಕಲನದಲ್ಲಿಯ ಒಂದು ಒಳ್ಳೆಯ ಕವನ ‘ಬಲಿಪಶು’ ಅಂಬೆಯ ಬದುಕನ್ನು ಕವನದಲ್ಲಿ ಬಹಳ ಸುಂದರವಾಗಿ ಹಿಡಿದಿಡಲಾಗಿದೆ. ತನ್ನದಲ್ಲದ ತಪ್ಪಿಗೆ ಹಾಕಿ ಬಲಿಪಶುವಾದ ಬಗೆಯನ್ನು ಇಲ್ಲಿ ಬಹಳ ಸೂಕ್ಷ್ಮವಾಗಿ ಸರಳ ಪದಗಳಿಂದ ಹಿಡಿದಿಟ್ಟ ಪರಿ ಮೆಚ್ಚುವಂತಹದ್ದು.

 ಇನ್ನು ನಗರವಾಸಿಗಳನ್ನು ಹುಟ್ಟೂರು ಕಾಡುವುದು ಸಹಜ. ಈ ಸಂಕಲನದಲ್ಲಿ ಬರುವ  ‘ಅಂದು -ಇಂದು’ ಎನ್ನುವ ಕವನದಲ್ಲಿ  ಹಳ್ಳಿಯ ಸೊಬಗು ಸೊಗಡನ್ನು ತಮ್ಮದೇ ಮಾತಿನಲ್ಲಿ  ಕವಿ ಮನದಟ್ಟು ಮಾಡಿಕೊಡುವ ಬಗೆ ಎಂತಹವರ ಮನವನ್ನೂ ತಟ್ಟುವಂತಹದ್ದು.
 ಅಂದಿನ ದಿನಗಳನ್ನು ಮತ್ತು ಇಂದಿನ ದಿನಗಳನ್ನು ತೂಗಿ ನೋಡುತ್ತಾ ಕವಿ ಹೇಳುತ್ತಾರೆ  *
 ‘ಅಂದು ನಮ್ಮೂರಿನ* ಸುತ್ತಮುತ್ತ ಕಾಡು ಗುಡ್ಡಗಳ ಹಸಿರು. ಇಂದು ಊರೇ ಇಲ್ಲ ಮರ ಗಿಡಗಳು ಮನೆ ಮಹಡಿಯ ಮೇಲೇರಿ ಮೌನವಾಗಿ ತಪಸ್ಸಿಗೆ ಕುಳಿತಿವೆ. ಎಂದು. ಅದನ್ನು ನಾವು  visualise ಮಾಡಿದರೆ ಆ ಬದಲಾದ ಚಿತ್ರಣ ನಮ್ಮ ಕಣ್ಣೆದುರಿಗೆ ಬರುತ್ತದೆ. ಇದೇ ಕವನದಲ್ಲಿ ಬರುವ ಈ ಕೆಳಗಿನ ಒಂದು ಸಾಲನ್ನು ನೋಡಿ.ನಿಜಕ್ಕೂ ನಮ್ಮನ್ನು ಒಂದರೆ ಕ್ಷಣ ನಿಂತು ಯೋಚನೆಗೆ ತಳ್ಳಿ ಬಿಡುತ್ತದೆ.
 ಭತ್ತ,  ತೆಂಗು, ಕಂಗು ಶವಯಾತ್ರೆಗೆ ಸಜ್ಜಾಗಿವೆ. ತರೆಮರೆಗೆ ಸರಿಯುವ ಕ್ರಿಯೆಯನ್ನು ಕವಿ ಭಿನ್ನವಾಗಿ ಜೊತೆಗೆ ನೋವನ್ನು ನುಂಗಿ ಹೇಳುವ ಪರಿ ಮನೋಜ್ಞವಾಗಿ ಮೂಡಿಬಂದಿದೆ.  ಮತ್ತೆ ಅವರು ಹೇಳುತ್ತಾರೆ ಹೂವು ಹಸಿರು ಹಕ್ಕಿಗಳು ಕನ್ನಡಿಯ ಕಟ್ಟಿನೊಳಗೆ ಅಡಗಿ ಗತಕಾಲದ ವೈಭವವನ್ನು  ನೆನೆ ನೆನೆದು ಬಿಕ್ಕಳಿಸುತ್ತಿವೆ ಎಂದು.

‘ಆಸೆ’ ಎನ್ನುವ ಕವನ ಕೂಡ ಬಹಳ ಸುಂದರವಾಗಿದೆ. ಮನದ ಇಂಗಿತವನ್ನು ಕವಿ ಇಲ್ಲಿ ವಿನಮ್ರತೆಯಿಂದ ತೋಡಿಕೊಳ್ಳುತ್ತಾರೆ
 ನನಗೆ ಗಾಡಿ ಮೋಟಾರ್ ಬೇಡ ಕೊನೆತನಕ  ನನ್ನ ಕೈ ಕಾಲು ಗಟ್ಟಿಯಿದ್ದರೆ ಸಾಕು
 ಎನ್ನುವಲ್ಲಿ ಇದು ಸರ್ವರ ಇಚ್ಛೆಯನ್ನು ಅನಾವರಣ ಗೊಳಿಸುತ್ತದೆ.  ಇನ್ನೊಂದು ಮನೆ ಕಲಕುವ ಕವನ
‘ನಾನು ತೀರಿಕೊಂಡರೆ ‘ ಇಲ್ಲಿ ಕವಿಯ ಭಾವನೆಗಳು ಹೇಗೆ ಕವಿತೆಯನ್ನು ಅಲಂಕರಿಸಿದೆ ಎನ್ನುವುದು ಓದಿದಾಗ ತಿಳಿಯುತ್ತದೆ. ಒಂದು ಹೊಸ ಚಿಂತನೆಯನ್ನು ನಾವಿಲ್ಲಿ ಗಮನಿಸುವಂತಾಗುತ್ತದೆ.
 ನಮ್ಮನ್ನು ನಾವು ಹುಡುಕಬೇಕಾಗಿದೆ  ಎನ್ನುವ ಕವಿತೆ ನಮ್ಮ ಜೀವನ ಎತ್ತ ಸಾಗುತ್ತಿದೆ ಎನ್ನುವುದನ್ನು ಬೊಟ್ಟು ಮಾಡಿ ತೋರಿಸುವ ರೀತಿ ಬಹಳ ಮನೋಜ್ಞವಾಗಿದೆ.

 ಗೆಳೆತನದ ಶುದ್ಧತೆ ಪವಿತ್ರತೆ, ಅಂತ:ಸ್ಥವಾಗಿರುವ  ಮನದ ಭಾವನೆ ಬಗ್ಗೆ ಇಲ್ಲಿ ಕವನಗಳು ಸಿಗುತ್ತವೆ  ಅಂತಸ್ಥವಾಗಿರುವ ಮನದ ಭಾವಗಳು ಹರಿದಾಡುತ್ತವೆ. ಮನಸ್ಸು ಮನಸ್ಸುಗಳ ಸಮ್ಮಿಲನವೊಂದೇ ಸಾಕು ಎರಡು ಜೀವಗಳನ್ನು ಒಂದುಗೂಡಿಸಿ ಅವರೊಳಗೊಂದು ಸಾಮರಸ್ಯತೆ ಸುಂದರ ಬಾಂಧವ್ಯವನ್ನು ಸೃಷ್ಟಿಸಲು ಎನ್ನುವುದನ್ನು ಕವಿ ಇಲ್ಲಿ ಬಿತ್ತರಿಸಿದ್ದಾರೆ.

ಹೀಗೆ ಕವಿಯು ಎದೆಯನ್ನು ತಟ್ಟುವಂತಹ, ಮನವನ್ನು  ಮುಟ್ಟುವಂತಹ ಸೊಗಸಾದ ಕವನಗಳ ಹೊನಲನ್ನೇ ಹರಿಸಿದ್ದಾರೆ. ಒಟ್ಟು 59 ಕವನಗಳನ್ನು ಹೊತ್ತು ತಂದಿರುವ ಬೋಗನ್ ವಿಲ್ಲಾ ಸಂಕಲನವು ನೋವು ನಲಿವು ಆಸೆ ಹತಾಶಗಳೊಂದಿಗೆ ಬೆರೆತು ಹೋಗಿದೆ. ಬಾಳ ಪಯಣ ಪ್ರೀತಿ ಪ್ರೇಮ ಸ್ನೇಹದ ಮಹತ್ವ ಪ್ರಕೃತಿ ಕಲ್ಪನೆಗಳನ್ನು ಹೊತ್ತ ಕವನಗಳ ಗಡಣವೇ ಇಲ್ಲಿ ತುಂಬಿದೆ .ಹಾಗೆಯೇ  ಮಹಿಳೆಯ ನೋವು ನಲಿವು, ಅವಳ ಛಲ ಸಾಧನೆಯ ಪ್ರತಿಕತೆಯ ಬಗ್ಗೆ ಎತ್ತಿ ತೋರಿರುವ ಒಲವು ಚೆಲುವುಗಳಿವೆ. ಜೀವ ಭಾವಗಳ ಮಿಲನ ಮಾತು ಮೌನಗಳ ತನನ ತಂಪು ಬಿಸುಪುಗಳ ಗಾನ ಬಹಳ ಸೊಗಸಾಗಿದೆ   ಡಾ.ಶೆಟ್ಟಿ ಯವರಿಂದ ಕನ್ನಡ ಸಾಹಿತ್ಯದ ಸೇವೆ ಮತ್ತಷ್ಟು ಆಗುತ್ತಿರಲೆಂದು ಹೃದ್ಯದೊಂದಿಗೆ ಹಾರೈಸುವೆ.


Leave a Reply

Back To Top