ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುರುಷರಿಗೊಂದು ದಿನಾಚರಣೆ, ಮಹಿಳೆಯರಿಗೊಂದು ದಿನಾಚರಣೆಯಂತೆ ಮಹಿಳೆಯರು ಇಷ್ಟಪಟ್ಟು ಉಡುವ ಸೀರೆಗಳಿಗೂ ಒಂದು ದಿನಾಚರಣೆ ಇದೆ ಎಂದು ಡಿಸೆಂಬರ್ ೨೧ರಂದು ಮಹಿಳೆಯರೆಲ್ಲ  ತಮಗಿಷ್ಟವಾದ ಸೀರೆಗಳನ್ನು ಉಟ್ಟು ಫೇಸ್ಬುಕ್, ವಾಟ್ಸಪ್ ಗಳಲ್ಲಿ ಚೆಂದದ ಪೋಟೋಗಳನ್ನು ಹರಿಬಿಟ್ಟಾಗಲೇ ತಿಳಿದಿದ್ದು. ಮಹಿಳೆಯರು ಸೀರೆಯ ಹೊರತಾಗಿ ಬೇರೆ ಯಾವುದೇ ಧಿರಿಸನ್ನು ಧರಿಸಿದರೂ ಅದು ಆ ಕ್ಷಣಕ್ಕೆ, ಸಂದರ್ಭಕ್ಕೆ, ದಿನಕ್ಕೆ ಮಾತ್ರ ಚೆಂದ ಅನಿಸಬಹುದು. ಆದರೆ ಸೀರೆ ಮಾತ್ರ ಎಂದೆಂದಿಗೂ ನಿತ್ಯ ನೂತನವಾಗಿ ಅವರ ಅಂದವನ್ನು ಮತ್ತಷ್ಟು ಚೆಂದಗೊಳಿಸುವುದರಲ್ಲಿ ಎರಡನೇ ಮಾತಿಲ್ಲ.

ಹೀಗೆ ಮಹಿಳೆಯರ ಚೆಂದವನ್ನು ಹೆಚ್ಚಿಸುವ ಸೀರೆಗಾಗಿಯೇ ಒಂದು ದಿನ ಇದೆಯೋ,  ಅದೇ ರೀತಿ ಆ ಸೀರೆಯನ್ನು ಉಡಲು ಆರಂಭಿಸಲು ಉತ್ತರ ಕರ್ನಾಟಕದಲ್ಲಿ ಒಂದು ಸಂಪ್ರದಾಯ ರೂಢಿಯಲ್ಲಿದೆ. ಹೆಣ್ಣು ಮಗುವಿಗೆ ನಾಲ್ಕು ವರ್ಷ ತುಂಬಿದಾಗ ಅಥವಾ ಎಂಟು ವರ್ಷ ತುಂಬಿದಾಗ ಆ ಮಗುವಿನ ತಾಯಿಯ ತವರು ಮನೆಯವರು ಮಗಳ ಮನೆಗೆ ಬಂದು ಶಾಸ್ತ್ರೋಕ್ತವಾಗಿ ಮೊಮ್ಮಗಳಿಗೆ ಹಸಿರು ಸೀರೆಯ ಉಡಿ ತುಂಬಿ ನಂತರ ಅದನ್ನೇ ಉಡಿಸುತ್ತಾರೆ. ಈ ಸಂದರ್ಭದಲ್ಲಿ ಬಂಧುಬಳಗದವರನ್ನು ಕರೆಯುವ ಪದ್ಧತಿಯೂ ಇದ್ದು,  ಹೀಗೆ ಆಚರಿಸುವ ಸಂಪ್ರದಾಯಕ್ಕೆ ನಾರಿದಟ್ಟಿ ಅಥವಾ ಉಟ್ಟದಟ್ಟಿ ಎಂದು ಕರೆಯುತ್ತಾರೆ.

ದಟ್ಟಿ ಎಂದರೆ ನೀಳವಾದ ಬಟ್ಟೆ ಎಂದು ಅರ್ಥ. ನಾರಿದಟ್ಟಿ ಎಂದರೆ ಮಹಿಳೆಯರು ಉಡುವ ಬಟ್ಟೆ ಎಂದರ್ಥ.  ಹೀಗೆ ಹೆಣ್ಣು ಮಗುವಿಗೆ ತಾಯಿಯ ತವರು ಮನೆಯವರು ಸೀರೆ ತಂದುಕೊಡುವ ಸಂಪ್ರದಾಯ ಏಕೆ? ಯಾವಾಗ ಶುರುವಾಯಿತು ಎಂಬ ಕುತೂಹಲದಿಂದ ಉತ್ತರ ಕರ್ನಾಟಕದ ಹಲವು ಗೆಳೆಯರಿಗೆ ವಿಚಾರಿಸಿದೆ. ಏಕೆಂದರೆ ದಕ್ಷಿಣ ಕರ್ನಾಟಕದಲ್ಲಿ ಈ ಪದ್ಧತಿಯಾಗಲಿ, ಈ ಹೆಸರಿನ ಯಾವುದೇ ರೀತಿಯ ಆಚರಣೆಯಾಗಲಿ ಇಲ್ಲ.ಇದು  ನನ್ನ ಗಮನಕ್ಕೆ ಬಂದಿದ್ದು ಸಹೋದ್ಯೋಗಿಯೊಬ್ಬರು ತಮ್ಮ ಮಗಳ ಈ ಕಾರ್ಯಕ್ರಮಕ್ಕೆ ಕರೆದಾಗ.  ಅವರಿಗೆ ಇದರ ಬಗ್ಗೆ ಕೇಳಿದಾಗ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಹಾಗಾಗಿ ಬೇರೆಯವರನ್ನು ಕೇಳಿದಾಗಲೂ, ಹೌದು ಈ ರೀತಿಯ ಸಂಪ್ರದಾಯ ನಮ್ಮಲ್ಲಿ ಇದೆ. ಹೆಣ್ಣು ಮಕ್ಕಳಿಗೆ ಸೀರೆಯೇ ಮುಖ್ಯ ಉಡುಪಲ್ಲವೆ, ಅದಕ್ಕಾಗಿ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಅರಿವು ಮೂಡಿಸುವ ಸಲುವಾಗಿ ಈ ಸಂಪ್ರದಾಯ ನಡೆದುಬಂದಿರಬೇಕು ಎನ್ನುವ ಅಭಿಪ್ರಾಯ ಸಿಕ್ಕಿತು.

ಒಂದು ಕಡೆ ಮಾತ್ರ ನಮ್ಮ ಮನೆಯ ಹಿರಿಯರಿಗೆ ಕೇಳಿ ಹೇಳುವೆ ಎಂದವರು ತಿಳಿಸಿದ್ದು ಏನೆಂದರೆ, ಸ್ವತಂತ್ರ ಪೂರ್ವದಲ್ಲಿ ಬಾಲ್ಯ ವಿವಾಹಗಳು ಜಾರಿಯಲ್ಲಿದ್ದು, ಹಾಗೆ ಮದುವೆಯಾದ ಹೆಣ್ಣು ಮಗು ಮದುವೆಯಾದರೂ ಋತುಮತಿ ಆಗುವವರೆಗೂ ತಂದೆ ತಾಯಿಯರ ಮನೆಯಲ್ಲೇ ಇದ್ದು ನಂತರ ಗಂಡನ ಮನೆಗೆ ಹೋಗುತ್ತಿದ್ದಳು. ಆಗ ಬೆಳೆದ ಹೆಣ್ಣು ಮಕ್ಕಳಿಗೆ ಸೀರೆಯೇ ಮುಖ್ಯ ಉಡುಪಾದ್ದರಿಂದ,  ಆ ಮಗುವಿಗೆ ಗಂಡನ ಮನೆಯಲ್ಲಿ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ತವರು ಮನೆಯಲ್ಲೇ ಸೀರೆ ಉಡುವುದನ್ನು ಕಲಿ‌ಸುವ ಸಲುವಾಗಿ ಈ ಸಂಪ್ರದಾಯ ಆಚರಣೆಗೆ ಬಂತು. ಆದರೆ ಈಗ ಬಾಲ್ಯ ವಿವಾಹದ ಪ್ರಶ್ನೆಯೇ ಇಲ್ಲ ಆದರೂ ಹಿಂದಿನಿಂದ ನಡೆದು ಬಂದ ಪದ್ಧತಿ ಬಿಡಬಾರದು ಎನ್ನುವ ಕಾರಣಕ್ಕೆ ಈಗಲೂ  ಇದು ಜಾರಿಯಲ್ಲಿದೆ ಎಂದರು. ಬಹುಶಃ ಇವರು ಹೇಳಿದ್ದು ಸರಿಯಿದೆ ಎನಿಸಿತು. ಹೆಚ್ಚಿನ ಮಾಹಿತಿ ಇರುವವರು ಇದರ ಬಗ್ಗೆ ಬೆಳಕು ಚೆಲ್ಲಬಹುದು.

ಒಟ್ಟಿನಲ್ಲಿ ಒಂದಂತೂ ಸತ್ಯ, ಹೆಣ್ಣು ಸೀರೆಯಲ್ಲಿ ಕಂಡಷ್ಟು ಸುಂದರವಾಗಿ ಆಧುನಿಕ ಉಡುಪುಗಳಲ್ಲಿ ಕಾಣುವುದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲೂ ಈ ನಾರಿದಟ್ಟಿ ಅಥವಾ ಉಟ್ಟದಟ್ಟಿ ಸಂಪ್ರಾದಾಯದ ಜಾರಿಯಲ್ಲಿರಲಿ ಎಂದು ಹಾರೈಸುವೆ.


About The Author

8 thoughts on “ನಾರಿದಟ್ಟಿ ಅಥವಾ ಉಟ್ಟದಟ್ಟಿ-ಜಿ. ಹರೀಶ್ ಬೇದ್ರೆ”

  1. ಹೌದು..ಸರ್..ಹೆಣ್ಣಿನ ಸಂಭ್ರಮ ಅದು.ಇತ್ತೀಚೆಗೆ ಅದರ ಬದಲು ಡ್ರೆಸ್ ಗಳನ್ನು ಕೂಡ ಕೊಡಿಸುತ್ತಿದ್ದಾರೆ.

    1. ಬದಲಾದ ಕಾಲಕ್ಕೆ ತಕ್ಕ ಬದಲಾವಣೆಗಳು….
      ಹೃತ್ಪೂರ್ವಕ ಧನ್ಯವಾದಗಳು ತಮಗೆ

  2. ಸಂಗಾತಿ….ಹೊಸ ಹೊಸ ವಿಷಯದ ನಿಮ್ಮ ಲೇಖನಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ….. ಧನ್ಯವಾದಗಳು ಸಂಗಾತಿ ಹರೀಶ್….

Leave a Reply

You cannot copy content of this page

Scroll to Top