ಭಾರತವನ್ನು ತೆಗೆದುಕೊಂಡರೆ ಇಲ್ಲಿನ ಮುಸಲ್ಮಾನರು ಎಲ್ಲರೂ ಕೆಟ್ಟವರಲ್ಲ, ಹಿಂದೂಗಳು ಎಲ್ಲರೂ ಒಳ್ಳೆಯವರೇ ಆಗಬೇಕೆಂದೇನೂ ಇಲ್ಲ. ಇದು ಬೌದ್ಧ, ಕ್ರೈಸ್ತ, ಸಿಖ್ ಹಾಗೂ ಪ್ರಪಂಚದ ಇತರ ಧರ್ಮದ ಜನರಿಗೂ ಅನ್ವಯಿಸುತ್ತದೆ. ಒಳ್ಳೆಯದು ಕೆಟ್ಟದು ಎಂಬುದು ಜಾತಿ, ಮತ, ಧರ್ಮದಿಂದ ಬಂದುದು ಅಲ್ಲ, ಬದಲಾಗಿ ಅದು ಮಾನವನ ಗುಣದಿಂದ ಬಂದುದು ಅಲ್ಲವೇ?  ನಮ್ಮ ಕುಟುಂಬ ಸಂಸಾರವನ್ನು ನೋಡೋಣ. ಅತ್ತೆ, ಮಾವ, ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ, ಪತಿ, ಮಡದಿ, ಮಕ್ಕಳು, ನಾದಿನಿ, ಭಾವ, ಅತ್ತಿಗೆ, ಮೈದುನ ಎಲ್ಲರೂ ಒಳ್ಳೆಯವರೇ? ಒಬ್ಬರಾದರೂ ಆಸ್ತಿಗಾಗಿ, ಹಣಕ್ಕಾಗಿ, ಸ್ವಾರ್ಥಿಗಳಾಗಿ ಇಲ್ಲವೇ? ಇಲ್ಲ ಎಂದಾದರೆ ಕುಟುಂಬ ಎಲ್ಲಾ ಒಂದೇ ಮನೆಯಲ್ಲಿ ಇರಬೇಕು ಒಟ್ಟಾಗಿ. ಆದರೂ ಈಗ ಹಂಚಿ ಹೋದುದು ಹೇಗೆ? ಕೆಲಸ ಮಾಡಲು ಸೋಮಾರಿಗಳು ಕೂಡಾ ಇರುತ್ತಾರೆ ಇಲ್ಲಿ. ಒಳ್ಳೆಯ ಗುಣ ಹಾಗೂ ಕೆಟ್ಟ ಗುಣ ಜಾತಿ ಧರ್ಮದ ಹೊರತಾಗಿ ಎಲ್ಲಾ ಮನುಷ್ಯರಲ್ಲೂ ಇದೆ. ಅದರ ಶೇಕಡಾ ಅಂಶ ಕಡಿಮೆ ಇರಬಹುದು ಅಷ್ಟೇ. ಆದರೆ ನಾನು ಬೆಳೆದು ಸರ್ವರನ್ನೂ ಬೆಳೆಸಬೇಕು ಎಂಬ ಭಾವನೆ ಇರುವ ಮನುಷ್ಯರನ್ನು ಶ್ರೇಷ್ಠ ಎಂದು ಗುರುತಿಸಿ ಎಲ್ಲಾ ಧರ್ಮದ ಜನ ಗೌರವಿಸುತ್ತಾರೆ. ಉದಾಹರಣೆಗೆ ಡಾ. ಎ. ಪಿ. ಜೇ. ಅಬ್ದುಲ್ ಕಲಾಂ, ಲಾಲ್ ಬಹಾದ್ದೂರ್ ಶಾಸ್ತ್ರಿ, ನಾಯಕನಾಗಿ ನರೇಂದ್ರ ಮೋದಿ, ನಿವೃತ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ, ಡಿ. ವಿ. ಗುಂಡಪ್ಪ ಹೀಗೆ. ಆದರೆ ಅವರೆಲ್ಲ ಶೇಕಡಾ ನೂರು ಒಳ್ಳೆಯವರೇ ಎಂದಲ್ಲ. ಅವರನ್ನು ಇಷ್ಟ ಪಡದೆ ಇರುವವರೂ ಇದ್ದಾರೆ. ಎಲ್ಲರೂ ಇಷ್ಟ ಪಡುವ ಗುಣ ಇರುವುದು ದೇವರಿಗೆ ಮಾತ್ರ. ಮನುಷ್ಯ ಅಷ್ಟು ಸುಲಭವಾಗಿ ದೇವರಾಗಲೂ ಸಾಧ್ಯ ಇಲ್ಲ,ಏಕೆಂದರೆ ಸೀಟು..ದೇವರು ಆ ಸೀಟನ್ನು ಬೇರೆ ಹುಲು ಮಾನವರಿಗೆ ಬಿಟ್ಟು ಕೊಡಲು ಸಾಧ್ಯವೇ? ಇಲ್ಲ ಅಲ್ವಾ?


   ನಾನು, ನನ್ನದು, ನನಗೆ, ನನ್ನಿಂದಲೇ, ನನ್ನ ಪರವಾಗಿ, ನನ್ನವರಿಗೆ, ನನ್ನ ಕಡೆಗೆ, ನನ್ನ ಮನೆಯವರಿಗೆ ಇದು ಹಲವು ಹಿರಿಯ ಮಂದಿಯಲ್ಲೂ ಇರುತ್ತದೆ. ಇನ್ಫ್ಲುಯೆನ್ಸ್ ಅಂತಾರೆ ಅದಕ್ಕೆ. ತಪ್ಪೆಂದರೆ ಅದು ಕೂಡ ತಪ್ಪೇ. ಆದರೆ ಯಾವುದು ತಪ್ಪು,ಯಾವುದು ಸರಿ ನಿರ್ಧರಿಸುವವರು ದೇವರೇ. ಹಿಂದೂಗಳ ಮೂರ್ತಿ ಪೂಜೆ ಮುಸಲ್ಮಾನರಲ್ಲಿ ತಪ್ಪು. ಮುಸಲ್ಮಾನರ ಇನ್ನು ಯಾವುದೋ ಒಂದು ಧಾರ್ಮಿಕ ಕಾರ್ಯಕ್ರಮ ಹಿಂದೂಗಳಿಗೆ ಆಗದು. ಇದು ಮಾನಸಿಕ ಭಿನ್ನಾಭಿಪ್ರಾಯಗಳನ್ನು ತರುತ್ತದೆಯೆ ಹೊರತು ಅದು ತಪ್ಪು ಸರಿಯ ವಿಷಯ ಅಲ್ಲ. ನಾವು ನಮ್ಮ ನಮ್ಮ ಮನಸ್ಸಿನ ಭಾವನೆಗಳನ್ನು ವಿಶಾಲಗೊಳಿಸಿದರೆ ಸಾಕು. ಅದುವೇ ನಮ್ಮನ್ನು ಎತ್ತರಕ್ಕೆ ಏರಿಸುತ್ತದೆ ಅಲ್ಲವೇ? ದಯೆ, ಕರುಣೆ, ಸಹನೆ, ಕ್ಷಮೆ ಇದ್ದವ ನಿಜವಾದ ದೊಡ್ಡ ಮನುಷ್ಯ.


     ಭಾರತ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರು ಭಾರತೀಯರ ಒಗ್ಗಟ್ಟನ್ನು ಒಡೆಯಲು ಬಳಸಿಕೊಂಡದ್ದು ನಮ್ಮ ಧರ್ಮ ಜಾತಿಗಳ ಈ ಒಡಕುಗಳನ್ನೆ. ಹೋರಾಟಕ್ಕೆ ಬಳಸುವ ಗನ್ ಗಳಿಗೆ ಹಸುವಿನ ಮತ್ತು ಹಂದಿಯ ಕೊಬ್ಬನ್ನು ಬಳಸಿದ್ದಾರೆ ಎಂಬ ರೂಮರ್ ಹಬ್ಬಿಸಿ ಹಿಂದೂ ಮುಸಲ್ಮಾನರು ಬೇರೆ ಬೇರೆ ಆಗುವಂತೆ ಮಾಡಿ ಒಡೆದು ಆಳುವ ನೀತಿ ಅನುಸರಿಸಿದರು ಎಂದು ಸಮಾಜದ ಪುಸ್ತಕಗಳಲ್ಲಿ   ಓದಿದ ನೆನಪು. ಇದರಿಂದ ಭಾರತೀಯರು ಮತ್ತು ಅವರ ಹೋರಾಟ ದುರ್ಬಲವಾಗಿ ಬ್ರಿಟಿಷರಿಗೆ ಆಳ್ವಿಕೆ ನಡೆಸಲು ಸಹಕಾರ ನೀಡಿತು. ಒಬ್ಬ ಮುಸಲ್ಮಾನ ಇಸ್ಲಾಂ ಧರ್ಮ ಆಚರಿಸುವ ಪೋಷಕರಿಂದ ಹುಟ್ಟಿದ ಕಾರಣ ಅವನಿಗೆ ಆ ಜಾತಿ ಧರ್ಮ ಸಿಕ್ಕಿತು, ಹಿಂದೂ, ಕ್ರಿಶ್ಚಿಯನ್ ಎಲ್ಲವೂ ಅಷ್ಟೇ. ಮೂಲತಃ ಅವನೊಬ್ಬ ಮಾನವ ಜೀವಿ. ಮಾನವತೆ ಬೆಳೆದ ಬೇಕಾದ, ಮಾನವತೆ ಬೆಳಗಬೇಕಾದ, ಇತರ ಪ್ರಾಣಿಗಳಿಗಿಂತ ವೇಗದ ಯೋಚನಾ ಶಕ್ತಿ ಹೊಂದಿದ ಎಲ್ಲಾ ಧರೆಯನ್ನು ಉಳಿಸಿ ಬೆಳೆಸಬಹುದಾದ ಹಾಗೂ ವಿನಾಶ ಗೊಳಿಸಲೂ ಬಹುದಾದ ಶಕ್ತಿ ಮಾನವ ಜೀವಿಗೆ ಮಾತ್ರ ಇದೆ. ಇತರ ಜೀವಿಗಳ ಹಾಗೆ ಅಲ್ಲ.


        ನಾಯಿ, ನರಿ, ಕೋತಿಗಳಲ್ಲೂ ಬೇರೆ ಬೇರೆ ಜಾತಿಗಳು ಇವೆ. ಹಾಗಂತ ಯಾವ ಪ್ರಾಣಿಯೂ ನಿನ್ನ ಮೇಲು ಜಾತಿ, ನಿನ್ನ ಕೀಳು ಅಂತ ಎಂದೂ ಗಲಾಟೆ ಮಾಡುವುದಿಲ್ಲ. ಬದುಕಲು ಕಷ್ಟಪಟ್ಟು ಆಹಾರಕ್ಕಾಗಿ ಹೋರಾಡುತ್ತವೆ. ಮನುಷ್ಯ ಅತಿ ಆಸೆಯಿಂದ ಪ್ರಾಣಿ, ಪಕ್ಷಿ, ಮಾನವ ಅಷ್ಟೇ ಅಲ್ಲ, ಮಣ್ಣು, ನೀರು, ಗಾಳಿ ಎಲ್ಲವನ್ನೂ ಕೆಡಿಸಿ ಬಿಟ್ಟಿದ್ದಾನೆ, ತನ್ನದೇ ಜನರನ್ನು, ಊಟವನ್ನು, ತಾನು ಸೇವಿಸುವ ಗಾಳಿಯನ್ನು, ತಾನೇ ಕುಡಿಯುವ ನೀರನ್ನು  ಅಷ್ಟು ಮಾತ್ರ ಅಲ್ಲ, ತನ್ನ ಜೊತೆಗೆ, ಸುತ್ತಮುತ್ತ ಇರುವ ಇತರ ಮಾನವರ ಮನಸ್ಸುಗಳನ್ನು ಕೂಡ ಕೆಡಿಸಿದ ಕಾರಣ ಜಾತಿ ಧರ್ಮಗಳ ಮಧ್ಯೆ ಗಲಾಟೆ ಕಾಣುತ್ತದೆ ಅಲ್ಲವೇ?
   ಭೂಮಿಗೆ ಬಂದವ ಒಂದಲ್ಲ ಒಂದು ದಿನ ಹಿಂದಿರುಗಲೇ ಬೇಕು. ಅದರ ನಡುವೆ ಎಲ್ಲರಿಗೂ ಶಾಂತಿ, ನ್ಯಾಯ, ನೆಮ್ಮದಿ, ಆರೋಗ್ಯ ಬೇಕು. ಇವು ಸಿಗದ ಅತೃಪ್ತ ಆತ್ಮಗಳು ಭೂಮಿಯ ಮೇಲೆ ಹೆಚ್ಚಾದ ಕಾರಣ ಮತ್ತು ಸ್ವಾರ್ಥ ಹೆಚ್ಚಾದ ಕಾರಣ ಗಲಾಟೆ, ಸಾವು, ನೋವು ಹೆಚ್ಚು ಅಲ್ಲವೇ? ತಾನು ನೆಮ್ಮದಿಯಿಂದ ಬದುಕಿ ಇತರರನ್ನು ಅವರಷ್ಟಕ್ಕೆ ಬದುಕಲು ಬಿಟ್ಟರೆ ಸಾಕು. ಎಲ್ಲವೂ ಸುಖ. ಆದರೆ ಮನಸ್ಸುಗಳು ಕೆಟ್ಟದನ್ನು ನೋಡಿ, ಕೆಟ್ಟದನ್ನು ಆಡಿ, ಕೆಟ್ಟದನ್ನು ಮಾಡುವ ಕೀಳು ಮಟ್ಟಕ್ಕೆ ಇಳಿದು ಬಿಡುತ್ತವಲ್ಲ! ಎಲ್ಲರೂ ಒಂದಲ್ಲ ಒಂದು ಕಡೆ ಅನ್ಯಾಯವನ್ನು ಎದುರಿಸಿ ನೊಂದವರೆ. ನೋವನ್ನು ಬದುಕಲ್ಲಿ ಉಂಡವರೆ. ಬದುಕಿನಲ್ಲಿ ಸಿಹಿಗಿಂತ ಕಹಿಯೇ ಹೆಚ್ಚು ಅಲ್ಲವೇ? ಬೇಡ ಎಂದರೂ ಬರುತ್ತದೆ.
    ಅದೆಷ್ಟು ಜನ ತಮ್ಮ ಮಕ್ಕಳನ್ನು ತಾವೇ ಕೊಲೆ ಮಾಡಲಿಲ್ಲ? ಅದೆಷ್ಟು ಭ್ರೂಣ ಹತ್ಯೆಗಳು! ಅದೆಷ್ಟು ಹುಟ್ಟಿನ ಎಳೆ ಕಂದರ ಮಾರಣ ಹೋಮ! ಅದೆಷ್ಟು ಆಸ್ತಿ ಧನಕ್ಕಾಗಿ ತಂದೆ ತಾಯಿ, ಅಜ್ಜ ಅಜ್ಜಿ, ಮಕ್ಕಳ, ಅಣ್ಣ ತಮ್ಮಂದಿರ ಮರಣ ಆಗಲಿಲ್ಲ! ಅದೆಲ್ಲ ಒಂದೇ ಜಾತಿ, ಧರ್ಮದ ಒಳಗೆಯೇ ಆದದ್ದಲ್ಲವೆ? ರಾಮಾಯಣ ಮಹಾಭಾರತದ ಕಥೆಗಳು ಕೂಡಾ ಇದಕ್ಕೆ ಹೊರತಾಗಿ ಇಲ್ಲ. ಅದು ಸಾರ್ವಕಾಲಿಕ ಸತ್ಯ.
      ” ಬದುಕು, ಬದುಕಲು ಬಿಡು.”ಎಲ್ಲಾ ಧರ್ಮಗಳ ಮೂಲ ತತ್ವ ಇದೊಂದೇ. ಭಗವದ್ಗೀತೆ, ಪವಿತ್ರ ಕುರಾನ್, ಬೈಬಲ್, ತ್ರಿಪಿಟಕ, ಗುರು ಗ್ರಂಥಾ ಸಾಹೇಬ ಎಲ್ಲವೂ ಇದನ್ನೇ ಮೂಲ ಬಿoದುವಾಗಿ ಹೇಳುತ್ತವೆ. ಅರ್ಥ ಮಾಡಿಕೊಂಡ ಹಿರಿಯರು ಹಾಗೆಯೇ ಬಾಳಿದರು. ನಮ್ಮ ಅವಿಭಜಿತ  ದಕ್ಷಿಣ ಕನ್ನಡದಲ್ಲಿ ಪರ್ಬುಗಳು, ಕಾಕಾ, ಶೆಟ್ರು, ಭಟ್ರು,ಅಕ್ಕ, ಅಣ್ಣ, ಅಮ್ಮ, ಮಾಮ ಇತ್ಯಾದಿ ಪದಗಳು ಜಾತಿ ಬೇಧ ಎನ್ನದೆ ಎಲ್ಲರೂ ಗೌರವ ಪೂರ್ವಕವಾಗಿ ಒಬ್ಬರನ್ನು ಕರೆಯುವ ಪದಗಳು ಇದ್ದವು  ಅಲ್ಲವೇ? ವ್ಯಾಪಾರ, ಕೃಷಿ, ಸರಕು ಸಾಗಾಣಿಕೆ ಹೀಗೆ ಬದುಕಿನ ಎಲ್ಲಾ ಕೆಲಸಗಳಿಗೆ ಎಲ್ಲರಲ್ಲೂ ಹೊಂದಾಣಿಕೆ ಇದ್ದಾಗ ಮಾತ್ರ ಸಮಾಜದ ಸ್ವಾಸ್ತ್ಯ ಉತ್ತಮವಾಗಿ ಇರುತ್ತದೆ. ಸಮಾಜ ಎಂದರೆ ಎಲ್ಲಾ ಬೆರಳು ಕೂಡಿ ಮುಷ್ಟಿ ಆದ ಹಾಗೆ ಎಲ್ಲಾ ರೀತಿಯ ಜನರು ಸೇರಿ ಸಂತಸದಿಂದ ಬಾಳುವುದು.
         ಇವೆಲ್ಲವನ್ನೂ ಮರೆತು ಜಾತಿ, ಧರ್ಮ ಎಂದು ಗಲಾಟೆ ಪಕ್ಷ, ಸೀಟು, ವೋಟಿಗಾಗಿ ಮಾಡಿಸುವುದು. ಜನ ಅದನ್ನು ಅರಿಯದೆ ಕುರಿಗಳ ಹಾಗೆ ಗುಂಡಿಗೆ ಬೀಳುವುದು. ಕ್ಯಾಂಡಲ್ ಅನ್ನು ಸುಡುವುದು ಅದರ ಒಳಗೆ ಇರುವ ದಾರವೇ ಹೊರತು ಹೊರಗಿನ ಪದಾರ್ಥಗಳು ಅಲ್ಲ. ಹಾಗೆಯೇ ನಮ್ಮೊಳಗೆ ಒಮ್ಮೆ ಬೆಂಕಿ ಹಚ್ಚಿ ಬಿಡುವವರು ಯಾರೋ ಒಬ್ಬರು . ಆದರೂ ಅದು ಮತ್ತೆ ಸುಡುವುದು ನಮ್ಮ ಒಳಗಿನ ಸಣ್ಣತನದಿಂದಲೆ ಅಲ್ಲದೆ ಬೇರೆ ಅಲ್ಲ ಎಂಬುದು ನಮಗೆ ಮನವರಿಕೆ ಆಗಬೇಕಿದೆ.
        ದೇಶವನ್ನು ಒಡೆಯಲು ಬಿಡಲಾರೆವು. ದೇಶದ, ರಾಜ್ಯದ, ಊರಿನ ಮಾತು ಬಂದಾಗ ನಾವೆಲ್ಲ ಒಂದೇ ಎಂಬ ಭಾವನೆ ನಮ್ಮೊಳಗೆ ಇರಬೇಕು. ಆಸ್ಪತ್ರೆಯ ರಕ್ತದ ಬಾಟಲಿಗಳಿಗೆ, ಅಲ್ಲಿ ರೋಗಿಗಳು ಮಲಗುವ ಬೆಡ್ ಗಳಿಗೆ ಯಾವುದೇ ಜಾತಿ ಇಲ್ಲ. ನಮ್ಮ ಒಗ್ಗಟ್ಟನ್ನು ಬಿಟ್ಟು ಕೊಟ್ಟರೆ ಹೊರಗಿನ ದುಷ್ಟ ಶಕ್ತಿಗಳಿಗೆ ಭಾರತ ಒಡೆಯಲು ಸುಲಭ. ಇದನ್ನು ಅರಿತು ಎಲ್ಲಾ ಭಾರತೀಯರೂ ಜಾತಿ, ಮತ, ಧರ್ಮಗಳ ವಿಷಯದಲ್ಲಿ ಜಗಳವಾಡದೆ, ದೇಶಕ್ಕಾಗಿ ಒಂದಾಗಬೇಕು. ಅವರವರ ಆಚಾರ, ವಿಚಾರ, ಪ್ರಾರ್ಥನೆ, ಆಹಾರ ಮನೆಗಳ ಒಳಗೆ ಅವರವರಿಗೆ ಬಿಟ್ಟ ವಿಚಾರ. ಆಚಾರ ವಿಚಾರಗಳ ಕುರಿತು ಪರರು ಏನೂ ಮಾಡಲಾರರು. ಅವರವರು ನಂಬಿದ ದೇವರು, ಪೂಜೆ, ವಿಧಿ ವಿಧಾನ ಪಾಲಿಸುವುದು ಬಿಡುವುದು ಪ್ರತಿ ಒಬ್ಬರ ಸ್ವಂತ ವಿಚಾರ. ಬದಲಾಗಿ ದೇಶದ ಅಖಂಡತೆಗೆ ಒಟ್ಟಾಗುವುದು ಸರ್ವರೂ ಇಂದು ಮಾಡಬೇಕಾದ ಕಾರ್ಯ.
      ಆಸ್ಪತ್ರೆಯಲ್ಲಿ ನರಳುತ್ತಿರುವ ರೋಗಿಗಳ ಬಗ್ಗೆ, ಅವರನ್ನು ನೋಡಿಕೊಳ್ಳುವ ಬಂಧುಗಳ ಬಗ್ಗೆ, ಸೈನಿಕರ ಕಷ್ಟದ ಬಗ್ಗೆ, ರೈತರ ತೊಂದರೆ ಸಂಕಷ್ಟಗಳ ಬಗ್ಗೆ, ಅನಾಥ ಶಿಶುಗಳ, ವೃದ್ಧರ, ನಮ್ಮ ಮನೆಯ ಪ್ರತಿ ಹೆಣ್ಣು ಮಕ್ಕಳ  ಸೆಕ್ಯುರಿಟಿಯ ಬಗ್ಗೆ ಯೋಚಿಸಬೇಕಾದ ಕಾಲ ಇದಾಗಿದೆ. ತಮ್ಮ ಮನೆಯ ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಾವು ಬೆಳೆಸುತ್ತಾ ಇದ್ದೇವೆಯೆ ಎಂಬ ಪ್ರಶ್ನೆಯನ್ನು ಎಲ್ಲಾ ಪೋಷಕರು ತಮಗೆ ತಾವೇ ಕೇಳಿಕೊಳ್ಳ ಬೇಕಾಗಿದೆ. ಮಕ್ಕಳು ಕೇಳಿದ್ದೆಲ್ಲವ ಕೊಟ್ಟು ಹಾಳು ಮಾಡುತ್ತಿರುವ ಪೋಷಕರೂ ಇದ್ದಾರೆ. ಒಟ್ಟಿನಲ್ಲಿ ಬೇರೆ ಜಾತಿ ಸರಿ ಇಲ್ಲ, ಪರರ ಧರ್ಮ ಸರಿ ಇಲ್ಲ, ಇತರರು ಕೀಳು , ನಾವು ಮೇಲು ಎನ್ನುವ ಬದಲಾಗಿ ನಮ್ಮ ದೇಶ ಎಲ್ಲಕ್ಕಿಂತ ಮೇಲು, ನಾನು ಉತ್ತಮನಾಗಿ, ಇತರರನ್ನು ಉತ್ತಮಗೊಳ್ಳಲು ಪ್ರೇರೇಪಿಸುವ, ಎಲ್ಲರೂ ಒಗ್ಗಟ್ಟಿನಲ್ಲಿ ಬದುಕೋಣ. ಅಲ್ಪ ಸಮಯದ ಬಾಳುವೆ ಸಂತಸ ನೆಮ್ಮದಿಯಿಂದ ಕಳೆಯಲಿ ಎಂಬ ಜೈ ಜಗತ್ ಮಂತ್ರವನ್ನು ನಾವು ಸಾರಬೇಕಿದೆ. ಇಡೀ ಪ್ರಪಂಚದ ಜನ ಗಾಳಿ, ನೀರು, ಮಣ್ಣು, ಆಕಾಶ, ಭೂಮಿ ಇವುಗಳನ್ನು ಸರಿಯಾಗಿ ಇಟ್ಟುಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿ, ಅವುಗಳನ್ನು ಸರಿಯಾಗಿ ಮುಂದಿನ ಜನಾಂಗಕ್ಕೆ ಕೊಡುವ ಕಾರ್ಯ ಮಾಡಬೇಕು, ಅದರತ್ತ ಚಿಂತಿಸ ಬೇಕಿದೆ ಅಲ್ಲವೇ? ನೀವೇನಂತೀರಿ?

———————————-

One thought on “

Leave a Reply

Back To Top