ಭಾರತಿ ಸಂ ಕೋರೆ.ಲೇಖನ “ಮನಸ್ಸು”

ಕೆಲವರು ಆಗಾಗೆ ಹೇಳುತ್ತಿರುತ್ತಾರೆ. ನನ್ನ ಮನಸ್ಸು ಸರಿ ಇಲ್ಲ,ಯಾವ ಕೆಲಸದಲ್ಲೂ ಆಸಕ್ತಿ ಇಲ್ಲ ಅಂತ ಹೀಗೆ ಬೇಸರದ ಮಾತುಗಳನ್ನು ಹೇಳುತ್ತಾ ಇರುತ್ತಾರೆ. ಇದು ದೇಹಕ್ಕೆ ಸಂಭಂಧಿಸಿದ ಕಾಯಿಲೆ ಅಲ್ಲ. ಇದು ಮನಸ್ಸಿನ ಕಾಯಿಲೆ.
ಏಕೆಂದರೆ, ನಮ್ಮ ಮನಸ್ಸು ಸರಿ ಇಲ್ಲವಾದಲ್ಲಿ ಆರೋಗ್ಯ, ದೇಹ ಸರಿ ಇದೆ ಅಂತ ನಾವು ಕೆಲಸ ಮಾಡಿದ್ದಲ್ಲಿ ಆ ಕೆಲಸದಲ್ಲಿ ನಾವು ಪರಿಪೂರ್ಣತೆ ಕಾಣಲು ಸಾಧ್ಯವಿಲ್ಲ. ನಾವು ನಮ್ಮ ಮನೆಯ ಸುತ್ತಲ ಮುತ್ತಲ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳುತ್ತೀವಿ. ಅದೇ ರೀತಿ ನಮ್ಮ ಮನಸ್ಸಿನ ಸ್ವಚ್ಚತೆ ಕೂಡ ಮುಖ್ಯವಾದುದು. ಮನೆ ಮತ್ತು ಮನಸ್ಸು ಪ್ರಾಂಜಲವಾಗಿದ್ದರೆ ಮಾತ್ರ ಮನಸ್ಸು ಒಳ್ಳೆಯ ಕೆಲಸ ಕಾರ್ಯಗಳಲ್ಲಿ ತೊಡಗುವಂತೆ ಮಾಡುತ್ತದೆ. ಆರೋಗ್ಯಕರ ಮನಸ್ಸನ್ನು ನಾವುಗಳು ನಮ್ಮಿಂದಲೇ ಪಡೆಯಬೇಕೆ ಹೊರತು ಬೇರೆಯವರಿಂದ ಅಲ್ಲ. ನಮ್ಮ ಮನಸ್ಸಿನಲ್ಲಿ ಕಾಡುತ್ತಿರುವ ನೋವು,ದುಃಖ,ನಕಾರಾತ್ಮಕ ವಿಚಾರಗಳು ನಮ್ಮನ್ನು ಖಿನ್ನತೆಯಡೆಗೆ ಕರೆದೊಯುತ್ತದೆ. ದೇಹಕ್ಕೆ ಬರುವ ಕಾಯಿಲೆಯನ್ನು ವಾಸಿ ಮಾಡಬಹುದು ಆದರೆ ಮನಸ್ಸಿನ ಕಾಯಿಲೆಯನ್ನು ವಾಸಿ ಮಾಡುವುದು ತುಂಬಾ ಕಷ್ಟ.
ಮನಸ್ಸು ಚಂಚಲವಾಗುತ್ತಿದೆ,ಎಲ್ಲೋ ಒಂದು ಕಡೆ ಜಾರುತ್ತಿದೆ,ಕಲ್ಮಶ ತುಂಬಿಕೊಳ್ಳುತ್ತದೆ,ಹೀಗೆ ಹತ್ತು ಹಲವು ಕಾರಣಗಳು ಮನಸ್ಸು ಎನ್ನುವ ಹೃದಯ ಮಂದಿರವನ್ನು ಕಲುಷಿತಗೊಳಿಸುತ್ತದೆ ಎಂಬುವುದು ಗೊತ್ತಿದ್ದೂ ಸುಮ್ಮನಿರುವುದು ಶುದ್ಧ ತಪ್ಪು.ಇಂತಹ ಕಲುಷಿತ,ಕೊಲೆಯಾದ ಮನಸ್ಸನ್ನು ತೊಳೆದು ಸ್ವಚ್ಚವಾಗಿಸದೆ,ಮತ್ತಷ್ಟು ಇದನ್ನು ಮೇಲಿನಗೊಳಿಸಲು ಬಿಟ್ಟರೆ ಇದರ ಪರಿಣಾಮ ಮುಂದೆ ಒಂದು ನಾವುಗಳೇ ಅನುಭವಿಸಬೇಕೆನ್ನುವುದು ನೂರಕ್ಕೆ ನೂರರಷ್ಟು ಸತ್ಯ.


ನಮ್ಮಲ್ಲಿ ಎಷ್ಟೂ ಸಂಪತ್ತು,ಸೌಂದರ್ಯ, ಜಾಣತನ ಇದ್ದರೂ ಅದೆಲ್ಲ ವ್ಯರ್ಥವಾಗಿ ಬಿಡುತ್ತದೆ.
ಹಿಂದಿನ ದಿನಗಳಿಗೆ ಹೋಲಿಸಿದರೆ, ನಮ್ಮ ಮುಂದೆ ಈಗಿರುವ ದಿನಗಳು ಬಹಳ ಸ್ಪರ್ಧಾತ್ಮಕ ದಿನಗಳಾಗಿವೆ. ನಾವು ಎಲ್ಲ ರೀತಿಯ ಕ್ಷೇತ್ರಗಳಲ್ಲಿ ಮುಂದುವರೆಯುತ್ತಿದೆವೆ. ಬಿಡುವಿಲ್ಲದ ದುಡಿಮೆ,ಹೆಚ್ಚು ಸಂಪಾದನೆ,ಕೂಡಿಡುವ ತವಕ,ಪೈಪೋಟಿ, ನೆಲೆ ಭದ್ರಗೊಳಿಸುವ ಹಠ ಇನ್ನೂ ಅನೇಕ ರೀತಿಯ ಒತ್ತಡದ ಜೀವನ.
ನಮ್ಮ ಕೆಲಸ ಕಾರ್ಯಗಳಿಗೆ ತಕ್ಕಂತೆ ನಮ್ಮ ಮನಸ್ಸು ತವಕಿಸುತ್ತ ಅದೇ ಪರಿಧಿಯಲ್ಲಿ ಸುತ್ತುತ್ತಿರುತ್ತದೆ.ಅದು ಒಂದು ರೀತಿಯ ವ್ಯವಹಾರಿಕ ಮನಸ್ಸಾಗಿ ಮಾರ್ಪಟ್ಟಿದೆ. ಲಾಭ ನಷ್ಟದ ಲೆಕ್ಕಾಚಾರದಲ್ಲಿ ಮುಳುಗಿ ಹೋಗಿರುವ ಮನಸ್ಸನ್ನು ಹೊಂದಿದ ವ್ಯಕಿ ಬೇರೆಯವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡುತ್ತಾನಾ? ಮನಸ್ಸಿನ ಕಲ್ಮಶವನ್ನು ತೊಳೆದು ಹಾಕುತ್ತಾನಾ? ಅದು ಸಾಧ್ಯವೇ ಇಲ್ಲ. ನಮ್ಮ ಮುಂದೆ ಅಭಿವೃದ್ಧಿ ಹೊಂದುವವರನ್ನು ಕಂಡು ಹೊಟ್ಟೆ ಕಿಚ್ಚು ಪಡುತ್ತಾ,ಕೆಟ್ಟದ್ದನ್ನೇ ಯೋಚಿಸುತ್ತ,ಮಾನಸಿಕ ಒತ್ತಡದಿಂದ,ಮಾನಸಿಕ ರೋಗಿಯಾಗಿ, ತಮ್ಮ ಮುಂದೆ ಇರುವ ಸುಖ,ಶಾಂತಿ, ನೆಮ್ಮದಿ ಅನುಭವಿಸದೆ, ನೊಂದು ಪರದಾಡುತ್ತ ನಾವು ಕೆಡುವುದಲ್ಲದೆ ಇನ್ನೊಬ್ಬರನ್ನು ಕೆಡಿಸುವಂತಹ ಪ್ರಸಂಗಗಳು ಕಂಡು ಬರುತ್ತವೆ.
ಮನಸ್ಸು ತರಂಗದ ಹಾಗೆ ವೇಗದಲ್ಲಿ ಸ್ಪಂದಿಸುತ್ತದೆ. ಪ್ರತಿಯೊಂದು ಭಾವನೆ,ಯೋಚನೆ,ಆಸೆ, ದುಃಖ ಇವೆಲ್ಲವೂ ಒಂದು ನಿಗದಿತ ಸ್ಥಳದಲ್ಲಿ ಬಂದು ಕೂರುತ್ತವೇ.ಆ ಸ್ಥಳಕ್ಕೆ ನಾವು ಮನಸ್ಸು ಎಂದು ಕರೆಯುತ್ತೇವೆ.
ಅದು ಸಾವಿರ ಕೋಟಿ ದಳದ ಪದ್ಮದ ಮೊಗ್ಗಿನ ಆಕಾರದ್ದು ಆಗಿರುತ್ತದೆ. ರಮಣಮಹರ್ಷಿಗಳು ಮನಸ್ಸನ್ನು ಆಧ್ಯಾತ್ಮಿಕ ಹೃದಯ ಎಂದಿದ್ದಾರೆ. ಮನಸ್ಸಿನ ಮುಂದೆ ಅಹಂಕಾರವು ಇದೆ. ಹಿಂದೆ ಆತ್ಮ ಅಡಗಿದೆ. ಇಂತಹ ಒಂದು ಪಾರಮಾರ್ಥಿಕ ಹೃದಯದಲ್ಲಿ ನಮ್ಮ ಮನಸ್ಸು ಅಡಗಿದೆ. ಪ್ರತಿ ಕ್ಷಣ ಕ್ಷಣಕ್ಕೂ ನಮ್ಮಗಳ ಮನಸ್ಸಿನಲ್ಲಿ ಬರುವ ಭಾವನೆ,ಯೋಚನೆ,ಆಸೆಗಳು ಮತ್ತು ನಿರ್ಧಾರಗಳ ಮೇಲೆ ಗಮನವಿಡಬೇಕು. ನಮ್ಮ ಮನಸ್ಸನ್ನು ಸಂಪೂರ್ಣವಾಗಿ ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕು.


Leave a Reply

Back To Top