ಕಾವ್ಯಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
“ಮಳೆ ನೀರು ಕೊಯ್ಲು”
ರಾಜ್ಯದಲ್ಲಿ ಮೆಲ್ಲನೆ ಬರಗಾಲ ತಲೆದೋರಿದೆ. ಮಳೆ ಬರುವ ಯಾವುದೇ ಸೂಚನೆಗಳು ಇಲ್ಲ. ಹೊಲದಲ್ಲಿನ ಪೈರುಗಳು ನೀರಿಲ್ಲದೆ ಒಣಗಿ ಹೋಗುತ್ತಿವೆ. ರಾಜ್ಯದಲ್ಲಿ ಸುಮಾರು 104 ಕೆರೆಗಳು ಬತ್ತಿ ಹೋಗಿವೆ. ಉತ್ತರ ಕರ್ನಾಟಕದಲ್ಲಿ 56 ಮತ್ತು ದಕ್ಷಿಣ ಭಾಗದಲ್ಲಿ 48 ಕೆರೆಗಳು ಬತ್ತಿ ಹೋಗಿವೆ. ಚಳಿಗಾಲದ ದಿನಗಳಿವು, ಬೇಸಿಗೆ ಇನ್ನೂ ಕಾಲಿಟ್ಟಿಲ್ಲ ಆದರೆ ಈಗಾಗಲೇ ನೀರಿಗಾಗಿ ಹಾಹಾಕಾರ ಪ್ರಾರಂಭವಾಗುತ್ತಿದೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ವಾರ ಬಂದೊದಗಿದೆ. ಜನರು ಅನಿವಾರ್ಯವಾಗಿ ತಮ್ಮ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ ಇಲ್ಲವೇ ಕಸಾಯಿ ಖಾನೆಗಳಿಗೆ ಅಟ್ಟುತ್ತಿದ್ದಾರೆ. ಖುದ್ದು ಜನರಿಗೇ ನೀರಿಲ್ಲದಿರುವಾಗ ಜಾನುವಾರುಗಳ ಪಾಡು ಕೇಳುವವರಾರು,??
ಪ್ರತಿ ವರ್ಷದಂತೆ ಸರ್ಕಾರ ನೀರಿಗಾಗಿ ವ್ಯವಸ್ಥೆಗಳನ್ನೇನೋ ಮಾಡುತ್ತಿದೆ. ಜಾನುವಾರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಮಾಡಲು ಹೆಣಗಾಡುತ್ತಿದೆ. ಆದರೆ ಇವೆಲ್ಲ ತಾತ್ಕಾಲಿಕ ಪರಿಹಾರೋಪಾಯಗಳು. ಪ್ರತಿ ವರ್ಷ ಬೇಸಿಗೆ ಶುರುವಾಗುವ ಮುನ್ನವೇ ಜನರು ಎದುರಿಸುವ ಪ್ರಮುಖ ಸಮಸ್ಯೆಗಳಲ್ಲಿ ನೀರಿನ ಸಮಸ್ಯೆಯೇ ದೊಡ್ಡದು.ಹಾಗಾದರೆ ನೀರಿನ ಬವಣೆಯನ್ನು ನೀಗಿಸುವ ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲವೇ??
ಖಂಡಿತವಾಗಿಯೂ ಸಾಧ್ಯವಿದೆ. ಮಳೆ ಕೊಯ್ಲು ಎಂಬ ವಿಧಾನದ ಮೂಲಕ ಶೇಕಡ 80ರಷ್ಟು ಪರಿಹಾರಗಳನ್ನು ಕಂಡುಕೊಳ್ಳಬಹುದು.
ಮಳೆ ಕೊಯ್ಲು ವಿಧಾನ ನಮ್ಮ ಪೂರ್ವಜರಿಂದಲೂ ನಡೆದುಕೊಂಡು ಬಂದ ಪದ್ಧತಿ. ಪ್ರತಿಯೊಂದು ಮನೆಯ ಹಿತ್ತಲಲ್ಲಿ ಪ್ರತಿಯೊಂದು ಹೊಲಗಳಲ್ಲಿ ಬಾವಿಗಳು ಇರುತ್ತಿದ್ದವು. ಹಿಂದೆ ನಮ್ಮ ಹೊಲಗಳಲ್ಲಿ ದೊಡ್ಡದಾದ ಬದುವುಗಳನ್ನು ಮಾಡಿ ಸಣ್ಣ ಸಣ್ಣ ಹೊಂಡಗಳನ್ನು ಮಾಡುತ್ತಿದ್ದರು. ಪುಟ್ಟ ಪುಟ್ಟ ಕೆರೆ, ಕಟ್ಟೆಗಳನ್ನು ಕೂಡ ಕಟ್ಟಿಸುತ್ತಿದ್ದರು. ಗ್ರಾಮದ ಹೊರಭಾಗದಲ್ಲಿ ಅತಿ ದೊಡ್ಡ ಕೆರೆಗಳು ಸಮುದಾಯದ ಜನರಿಂದ ನಿರ್ಮಾಣವಾಗುತ್ತಿತ್ತು. ಈ ಕೆರೆಗಳು ನೀರಿನ ಮೂಲಗಳಾಗಿರುತ್ತಿತ್ತು. ಹೀಗೆ ಮಾಡುವುದರಿಂದ ಮಳೆಯ ನೀರು, ಹರಿದು ನದಿಗಳನ್ನು ಸಮುದ್ರಗಳನ್ನು ಸೇರುವುದಕ್ಕಿಂತ ಮುಂಚೆಯೇ ನಮ್ಮ ನಮ್ಮ ಹೊಲಗಳಲ್ಲಿ ಬಸಿದು ಹೋಗಿ ಭೂಮಿಯಲ್ಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತಿದ್ದವು. ಅದೆಷ್ಟೇ ಬಿರು ಬೇಸಿಗೆಯ ದಿನಗಳಿದ್ದರೂ ಬಾವಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರಲಿಲ್ಲ.
ಇನ್ನು ಮಲೆನಾಡಿನಲ್ಲಿ ಕಾಫಿ ತೋಟಗಳಲ್ಲಿ ಟೀ ಎಸ್ಟೇಟ್ಗಳಲ್ಲಿ ಅಲ್ಲಲ್ಲಿ ಟ್ರೆಂಚ್ ಮಾದರಿಯ ಉದ್ದದ ಗುಂಡಿಗಳನ್ನು ತೋಡುತ್ತಿದ್ದರು. ಈ ಗುಂಡಿಗಳು ಗುಡ್ಡದ ಮೇಲಿಂದ ಹರಿದು ಬರುವ ನೀರನ್ನು ಅಲ್ಲಲ್ಲಿಯೇ ಹಿಡಿದಿಟ್ಟುಕೊಂಡು ಆ ಭಾಗದಲ್ಲಿ ನೀರು ಇಂಗಿ ಹೋಗುವಂತೆ ಮಾಡುತ್ತಿದ್ದರು. ಇದರಿಂದಾಗಿ ಸುತ್ತಲಿನ ಎಲ್ಲಾ ಕೆರೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಯಾವಾಗಲೂ ಹೆಚ್ಚಿರುತ್ತಿತ್ತು.
ಆದರೆ ಬದಲಾದ ಕಾಲಘಟ್ಟದಲ್ಲಿ ವ್ಯವಸಾಯ ಮಾಡುವುದು ಎಂದರೆ, ಬೀಜ, ಗೊಬ್ಬರ, ಆಳಿನ ಕೂಲಿ ಎಂದು ಖರ್ಚು ಹೆಚ್ಚಾಗಿದ್ದು ಬಾರದ ಮಳೆ, ಕೈ ಕೊಡುವ ಬೆಳೆ, ಮಾಡಿದ ಖರ್ಚಿಗಿಂತ ಕಡಿಮೆ ಆದಾಯ, ಶ್ರಮದ ದುಡಿಮೆಗೆ ತಕ್ಕನಾಗಿ ಸಿಗದ ಫಲದಿಂದ ವ್ಯವಸಾಯ ಮಾಡುವುದು ಅನಾಕರ್ಷಕವಾಗಿದ್ದು,ರೈತಾಪಿ ವರ್ಗ ದ ಜನರೇ ತಮ್ಮ ಪಾಡು ತಮ್ಮ ಮಕ್ಕಳಿಗೆ ಬೇಡ ಎಂದು ಹೇಳುವ ಪರಿಸ್ಥಿತಿ. ಹಳ್ಳಿಯ ಕೆಲಸಗಳಲ್ಲಿ ಶ್ರಮವೇ ಹೆಚ್ಚು, ದನಗಳನ್ನು ಸಾಕುವುದು ಕೂಡ ತ್ರಾಸದಾಯಕವಾಗಿದೆ. ವ್ಯವಸಾಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರೆಯದೆ ಹೋಗಿ, ಜನರು ಹಳ್ಳಿಗಳಿಂದ ವಿಮುಖರಾಗಿ ಪಟ್ಟಣದತ್ತ ಮುಖ ಮಾಡಿದ್ದಾರೆ. ಹಾಗಾಗಿ ಮೊದಲಿನಂತೆ ಯಾರೂ ನೀರನ್ನು ಇಂಗಿಸುವ ಈ ಮಳೆ ಕೊಯ್ಲು ವಿಧಾನಗಳನ್ನು ಅನುಸರಿಸುತ್ತಿಲ್ಲ.
ಇತ್ತೀಚೆಗೆ ಸರಕಾರವು ಮಳೆ ಕೊಯ್ಲಿನ ಲಾಭಗಳನ್ನು ಮನಗಂಡು ಕಡ್ಡಾಯವಾಗಿ ಎಲ್ಲರ ಹೊಲಗಳಲ್ಲಿ ಅಂತರ್ಜಲ ಮಟ್ಟವನ್ನು ಸುಧಾರಿಸಲು ಚೆಕ್ ಡ್ಯಾಂ ಗಳ ನಿರ್ಮಾಣ ಮಾಡಲು ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಪ್ರತಿ ಮನೆಗಳನ್ನು ಕಟ್ಟುವಾಗ ಕಡ್ಡಾಯವಾಗಿ ಮಳೆ ಕೊಯ್ಲು ಮಾಡಬೇಕೆಂಬ ನಿಯಮಾವಳಿಗಳನ್ನು ಮಾಡಿದೆ. ಆದರೆ “ಅಗ್ಗಕ್ಕೆ ಸಿಕ್ಕದ್ದು ಮುಗ್ಗಲು ಜೋಳ” ಎಂಬ ಭಾವ ನಮ್ಮ ಜನರಲ್ಲಿ ಮನೆ ಮಾಡಿದ್ದು ಮಳೆ ಕೊಯ್ಲು ವಿಧಾನ ಇನ್ನೂ ಅಷ್ಟಾಗಿ ಜನಪ್ರಿಯತೆಯನ್ನು ಹೊಂದಿಲ್ಲ.
ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರತಿದಿನದ ನೀರಿನ ಸಮಸ್ಯೆಯನ್ನು ಹೋಗಲಾಡಿಸುವ,
ಮನಕ್ಲೇಶವನ್ನು ಕಳೆಯುವ ಈ ಮಳೆ ಕೊಯ್ಲು ವಿಧಾನದ ಕುರಿತು ಒಂದಷ್ಟು ಮಾಹಿತಿ.
ಮನೆ ಕಟ್ಟಿಸುವ ಸಮಯದಲ್ಲಿಯೇ ಮನೆ ನಿವೇಶನದ ಅಳತೆಗೆ ಸರಿಹೊಂದುವ ಟ್ಯಾಂಕ್ ಒಂದನ್ನು ನಿರ್ಮಾಣ ಮಾಡಿಕೊಳ್ಳಬೇಕು.. ಹೀಗೆ ನಿರ್ಮಿಸಿಕೊಂಡ ಟ್ಯಾಂಕಿಗೆ ಪ್ರತಿ ವರ್ಷವೂ ಮಳೆಗಾಲಕ್ಕೆ ಮುನ್ನ ಸುಣ್ಣ ಬಳಿಯಬೇಕು. ಕೇವಲ ಒಬ್ಬರು ಇಳಿಯುವಂತಹ ಅಲ್ಯೂಮಿನಿಯ ಮುಚ್ಚಳವನ್ನು ಹೊಂದಿರುವ ಈ ಟ್ಯಾಂಕನ್ನು ಪ್ರತಿ ವರ್ಷವೂ ಸ್ವಚ್ಛವಾಗಿ ತೊಳೆದು ಸುಣ್ಣವನ್ನು ಹಚ್ಚಿದ ನಂತರ ಒಣಗಲು ಬಿಟ್ಟು ನಂತರ ಮುಚ್ಚಳವನ್ನು ಹಾಕಿ ಸಂಪೂರ್ಣವಾಗಿ ಸಿಮೆಂಟ್ ನಿಂದ ಮುಚ್ಚಿಬಿಡಬೇಕು.
ಮನೆಯ ತಾರಸಿಯನ್ನು ಕೊಂಚ ಮಾತ್ರವೂ ಕೊಳೆಯಿಲ್ಲದಂತೆ (ಕಪ್ಪು ಬಣ್ಣದ ಪಾಚಿ, ಶಿಲೀಂದ್ರಗಳು) ಸಂಪೂರ್ಣವಾಗಿ ಬ್ರಷ್ ನಿಂದ ಉಜ್ಜಿ ಉಜ್ಜಿ ಸ್ವಚ್ಛಗೊಳಿಸಬೇಕು. ನಂತರ ಇಡೀ ತಾರಸಿಗೆ ಸುಣ್ಣವನ್ನು ಹಚ್ಚಬೇಕು. ತಾರಸಿಯ ಮೇಲೆ ಯಾವುದೇ ರೀತಿಯ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಇಡಬಾರದು. ಕಬ್ಬಿಣದ ಸರಳುಗಳು ಇದ್ದರೆ ಅವುಗಳಿಗೆ ಪ್ಲಾಸ್ಟಿಕ್ ಪೈಪ್ಗಳನ್ನು ಹಾಕಿ ಮುಚ್ಚಬೇಕು. ಎಲೆಕ್ಟ್ರಾನಿಕ್ ವಸ್ತುಗಳು, ಸೆಲ್ ಗಳನ್ನು ಕೂಡ ಇಡಬಾರದು. ಮೊದಲ ಮಳೆಗೆ ಮುನ್ನ ಈ ರೀತಿ ಸಂಪೂರ್ಣವಾಗಿ ಸಜ್ಜಾದ ತಾರಸಿ ಮಳೆ ಕೊಯ್ಲಿಗೆ ಸಿದ್ಧವಾಗಿರುತ್ತದೆ. ತಾರಸಿಗೆ ನಿವೇಶನದ ಅಳತೆಗೆ ತಕ್ಕಂತೆ ಮಳೆ ಕೊಯ್ಲು ಮಾಡಲು ಬೇಕಾಗುವ ೨-೩ ಪೈಪುಗಳನ್ನು ಅಲ್ಲಲ್ಲಿ ಅಳವಡಿಸಿ ಆ ಪೈಪುಗಳನ್ನು ಒಂದೆಡೆ ಸೇರುವಂತೆ ಮಾಡಿಕೊಂಡು ಅಲ್ಲಿ ಎರಡು ವಿಭಾಗಗಳಲ್ಲಿ ಪೈಪುಗಳನ್ನು ಜೋಡಿಸಬೇಕು. ಒಂದು ಪೈಪು ನೇರವಾಗಿ ಕೆಳಗಿನ ಟ್ಯಾಂಕಿಗೆ ಸಂಪರ್ಕ ಹೊಂದಿದ್ದರೆ ಇನ್ನೊಂದು ಪೈಪನ್ನು ಹಾಗೆಯೇ ಹೊರಗೆ ಬಿಟ್ಟಿರಬೇಕು. ಇಲ್ಲಿ ಒಂದು ವಾಲ್ವಿನ ಮೂಲಕ ನೀರು ಒಳ ಹೋಗುವುದನ್ನು ಮತ್ತು ಹೊರಗೆ ಬಿಡುವುದನ್ನು ನಾವು ನಿಯಂತ್ರಿಸಬಹುದು.
ಮೊದಲ ಮಳೆಯಾದಾಗ ಆ ನೀರನ್ನು ಟ್ಯಾಂಕಿಗೆ ನೇರವಾಗಿ ಸೇರಿಸದೆ ಹೊರಗಡೆ ಜೋಡಿಸಿರುವ ಪೈಪ್ ನ ಮೂಲಕ ಹೊರಹಾಕಬೇಕು. ಈ ವಾಲ್ವಿನ ಬಳಿ ಸ್ಟೇನ ಲೆಸ್ ಸ್ಟೀಲ್ ನಿಂದ ಮಾಡಿದ ಫಿಲ್ಟರ್ ಒಂದನ್ನು ಜೋಡಿಸಲಾಗಿದ್ದು ಆ ಫಿಲ್ಟರ್ ತಾರಸಿಯಿಂದ ಹರಿದು ಬರುವ ನೀರಿನಲ್ಲಿನ ಕಶ್ಮಲಗಳನ್ನು ಹಿಡಿದಿಟ್ಟು ಶುದ್ಧವಾದ ನೀರನ್ನು ಮಾತ್ರ ಬಸಿದು ಹೋಗುವಂತೆ, ಸೋಸು ಕೊಳವೆಯನ್ನು ಹೊಂದಿದ್ದು ಶುದ್ಧವಾದ ನೀರು ಮಾತ್ರ ಟ್ಯಾಂಕನ್ನು ಸೇರುವಂತೆ ವ್ಯವಸ್ಥೆ ಹೊಂದಿರುತ್ತದೆ. ಇಲ್ಲಿ ನಾವು ಲಕ್ಷ್ಯ ಕೊಡಬೇಕಾಗಿರುವುದು ಸಂಪೂರ್ಣವಾಗಿ ಗಾಳಿಯಾಡದಂತೆ ಟ್ಯಾಂಕನ್ನು ಸೀಲ್ ಮಾಡಬೇಕು ಎಂಬುದನ್ನು. ಕೇವಲ ನೀರಿನ ಶೇಖರಣೆಯ ಮಟ್ಟವನ್ನು ಅಳೆಯುವ ಉದ್ದನೆಯ ಅಳತೆ ಗೋಲನ್ನು ತೂರಿಸುವಷ್ಟು ಮಾತ್ರದ ರಂದ್ರ ಈ ಕೆಳಗಿನ ಟ್ಯಾಂಕಿಗೆ ಇರಬೇಕು. ಒಂದೆಡೆ ಪೈಪ್ನ ಮುಖಾಂತರ ಮಳೆಯ ನೀರು ಹರಿದು ಬಂದು ಟ್ಯಾಂಕನ್ನು ಸೇರುವಂತೆ ಇದ್ದರೆ ಇನ್ನೊಂದು ಪೈಪ್ನ ಮೂಲಕ ಪಂಪ್ ಮಾಡಿ ಆ ನೀರನ್ನು ಮನೆಯ ಕುಡಿಯುವ ನೀರಿಗಾಗಿ ಮತ್ತು ಇತರ ಕೆಲಸಗಳಿಗಾಗಿ ಬಳಸಲು ಪಡೆಯುವಂತಹ ವ್ಯವಸ್ಥೆ ಇದ್ದು ಪ್ರತಿದಿನ ನಮ್ಮ ಅವಶ್ಯಕತೆಗೆ ತಕ್ಕಷ್ಟು ನೀರನ್ನು ನಾವು ಹ್ಯಾಂಡ್ ಪಂಪ್ ಗಳ ಮೂಲಕ ತೆಗೆದು ಬಳಸಬಹುದು.
ರಭಸವಾಗಿ ಬರುವ ಮಳೆಯಿಂದ ಟ್ಯಾಂಕುಗಳು ಬೇಗ ತುಂಬುವುದೇನೋ ನಿಜ, ಆದರೆ ಈಗಾಗಲೇ ಮಳೆ ಕೊಯ್ಲು ಮಾಡಿಸಿದವರ ಅಭಿಪ್ರಾಯದ ಪ್ರಕಾರ ಸಣ್ಣನೆಯ ಜಿಟಿ ಜಿಟಿ ಮಳೆಯಲ್ಲಿ ನಿಧಾನವಾಗಿ ಹರಿದು ಬಂದು ಫಿಲ್ಟರ್ ನ ಮೂಲಕ ಸೋಸಲ್ಪಟ್ಟು ತಳ ಸೇರುವ ನೀರು ಹೆಚ್ಚು ಶುದ್ಧತೆಯನ್ನು ಕಾಯ್ದುಕೊಳ್ಳುತ್ತದೆ ಎಂಬುದು. ಸುಮಾರು 30*40 ಅಡಿ ನಿವೇಶನದ ತಾರಸಿ ಹೊಂದಿರುವ ಮನೆಯಲ್ಲಿ 8 ರಿಂದ 10 ಸಾವಿರ ಲೀಟರ್ ನಷ್ಟು ನೀರನ್ನು ಕೇವಲ ಒಂದೆರಡು ಮಳೆಗಳಲ್ಲಿ ನಾವು ಸಂಗ್ರಹಿಸಿಟ್ಟುಕೊಳ್ಳಬಹುದು. ಒಂದು ಮಾಹಿತಿಯ ಪ್ರಕಾರ ಹೀಗೆ ಸಂಗ್ರಹಿಸಿಟ್ಟ ನೀರು ಅತಿ ಹೆಚ್ಚು ಶುದ್ಧವಾಗಿದ್ದು ಇದರ ಪಿಎಚ್ ಮಟ್ಟ ನಾವು ಕೊಂಡು ಕುಡಿಯುವ ಮಿನರಲ್ ವಾಟರ್ ಗಿಂತ ಹೆಚ್ಚು ಎಂಬುದು ಸಾಬೀತಾಗಿದೆ. ಹೀಗೆ ಒಂದು ಬಾರಿ ಎಂಟರಿಂದ ಹತ್ತು ಸಾವಿರ ಲೀಟರ್ ಗಳಷ್ಟು ನೀರು ಸಂಗ್ರಹವಾದರೆ, ಕನಿಷ್ಠ ಕುಡಿಯುವ ನೀರಿನ ಬವಣೆ ಎರಡು ಮೂರು ವರ್ಷಗಳವರೆಗೆ ತಪ್ಪುತ್ತದೆ.
ನಮ್ಮ ದೇಶದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ರಾಜಸ್ಥಾನದಂತಹ ಮರುಭೂಮಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಮನೆಗಳಲ್ಲಿ ಸುಮಾರು 15 ರಿಂದ 20 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ಗಳನ್ನು ಅಳವಡಿಸಿದ್ದು ಅತಿ ಹೆಚ್ಚಿನ ಮಳೆ ಕೊಯ್ಲನ್ನು ಮಾಡುವ ಮೂಲಕ ಆ ರಾಜ್ಯವು ಕುಡಿಯುವ ನೀರಿನ ಬವಣೆಯನ್ನು ನೀಗಿಸಿಕೊಂಡಿದೆ. ಭಾರತ ದೇಶದಲ್ಲಿ ಅತಿ ಹೆಚ್ಚು ಮಳೆ ಕೊಯ್ಲು ಅಳವಡಿಸಿಕೊಂಡಿರುವ ರಾಜ್ಯವಿದು.
ಬೆಂಗಳೂರಿನಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಥೀಮ್ ಪಾರ್ಕಲ್ಲಿ ಮಳೆ ನೀರು ಕೊಯ್ಲು ವಿಧಾನವನ್ನು 1972 ರಲ್ಲಿಯೇ ಪ್ರಾರಂಭಿಸಿ ಮೂರು ಹಂತಗಳಲ್ಲಿ ಈ ಕಾಮಗಾರಿ ನಡೆದಿದ್ದು 46,36,000 ಲೀಟರ್ಗಳಷ್ಟು ನೀರನ್ನು ಪ್ರತಿ ವರ್ಷ ಹಿಡಿದಿಡಲಾಗುತ್ತಿದೆ. ಈ ಮಾದರಿಯನ್ನು ಅನುಸರಿಸಿ ಬೆಂಗಳೂರಿನಲ್ಲಿ ಹಲವಾರು ಶಾಲೆಗಳಲ್ಲಿ ಮಳೆ ಕೊಯ್ಲು ವಿಧಾನವನ್ನು ಅಳವಡಿಸಿಕೊಂಡು ತಮ್ಮ ನೀರಿನ ಬವಣೆಯನ್ನು ನೀಗಿಸಿಕೊಂಡಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದವರು 2021 ರಲ್ಲಿ 60 *40 ರ ನಿವೇಶನ ಹೊಂದಿರುವವರು ಕಡ್ಡಾಯವಾಗಿ ಮಳೆ ನೀರು ಕೊಯ್ಲು ಮಾಡಿಸಲೇಬೇಕು ಎಂದು ಗೊತ್ತುವಳಿಯನ್ನು ಹೊರಡಿಸಿದ್ದಾರೆ. ಮಳೆ ಕೊಯ್ಲು ಮಾಡದೆ ಮನೆ ಕಟ್ಟಿರುವವರಿಂದ ಸುಮಾರು ಒಂದುವರೆ ಕೋಟಿಗೂ ಹೆಚ್ಚು ದಂಡ ವಸೂಲಿಯಾಗಿದೆ. ಆದರೂ ಜನರಲ್ಲಿ ಇನ್ನೂ ಅರಿವು ಮೂಡಿಲ್ಲ ಎಂಬುದು ವಿಷಾದದ ಸಂಗತಿ.
ಮಳೆ ಕೊಯ್ಲು ಮೂಲಕ ನೀರನ್ನು ಸಂಗ್ರಹಿಸುವ ಆ ಮೂಲಕ ಪರಿಸರ ಸಂರಕ್ಷಣೆ ಮಾಡುವ ನಿವೇಶನ ಮಾಲೀಕರಿಗೆ ಅವರು ಕಟ್ಟುವ ವಾರ್ಷಿಕ ತೆರಿಗೆಯಲ್ಲಿ ರಿಯಾಯಿತಿ ಕೊಡುವ ಮೂಲಕ ಸರಕಾರ ಅವರನ್ನು ಪ್ರೋತ್ಸಾಹಿಸಬೇಕು ಎಂದು ಪರಿಸರ ತಜ್ಞರು ಸಲಹೆ ನೀಡಿದ್ದಾರೆ.
ಅತ್ಯಂತ ಕಡಿಮೆ ವೆಚ್ಚದಲ್ಲಿ ನಮ್ಮ ನೀರಿನ ಬವಣೆಯನ್ನು ನೀಗಿಸುವ ಈ ಮಳೆ ಕೊಯ್ಲು ವಿಧಾನ ತ್ರಾಸದಾಯಕವಲ್ಲ ಆದರೆ ನಿರಂತರ ನಿರ್ವಹಣೆಯನ್ನು ಬೇಡುತ್ತದೆ. ನೀರಿಗಾಗಿ ಪರದಾಡುವ, ಕಿಲೋಮೀಟರ್ ಗಟ್ಟಲೆ ಹೋಗಿ ನೀರನ್ನು ತರುವ ಕಷ್ಟಕ್ಕಿಂತ ಅತ್ಯಂತ ಕಡಿಮೆ ನಿರ್ವಹಣೆಯನ್ನು ಬೇಡುವ ಮಳೆ ಕೊಯ್ಲು ವಿಧಾನ ನಮ್ಮ ಎಲ್ಲ ರೀತಿಯ ನೀರಿನ ತೊಂದರೆಗಳಿಗೆ ಶಾಶ್ವತ ಪರಿಹಾರ ಒದಗಿಸಬಲ್ಲದು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಪ್ರಜೆಗಳು ಕಾರ್ಯ ಪ್ರವೃತ್ತರಾಗಬೇಕು.
ವೀಣಾ ಹೇಮಂತ್ ಗೌಡ ಪಾಟೀಲ್