ಸವಿತಾ ಮುದ್ಗಲ್ ಕೃತಿ “ನೆರಳಿಗಂಟಿದ ಭಾವ” ಅವಲೋಕನ-ಬಸವರಾಜ್ ಹೊನಗೌಡರ್

  ಶ್ರೀಮತಿ ಸವಿತಾ ಮುದ್ಗಲ್ ರವರ ಮೊದಲ ಕವನ ಸಂಕಲನ “ನೆರಳಿಗಂಟಿದ ಭಾವ” 84 ಕವನಗಳನ್ನೊಳಗೊಂಡಿದೆ. ಪ್ರತಿ ಕವನವು ಓದಿಸಿಕೊಂಡು ಹೋಗುತ್ತವೆ. ಕನ್ನಡ ನಾಡಿನ ಹಿರಿಮೆ, ಮಹಿಮೆಗಳನ್ನು ಕೆಲವೊಂದು ಕವನಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸಮಾಜದ ಓರೆ ಕೋರೆಗಳನ್ನು ಸಮರ್ಥವಾಗಿ ಎತ್ತಿ ತೋರಿಸಿದ್ದಾರೆ. ವಿಷೇಶವಾಗಿ ಹೆಣ್ಣಿನ ಶೋಷಣೆಯನ್ನು ಖಂಡಿಸಿದ್ದಾರೆ.
     ಅವರ ಮೊದಲ ಕವನ ‘ಸರಸ್ವತಿ ಮಾತೆ’ ಯಲ್ಲಿ


 “ಜಗದ ಮನದ ಅಜ್ಞಾನ ತೊಲಗಿಸು
  ಜಗದಲ್ಲಿ ತುಂಬಿರುವ ಮೂಢರನ್ನು ಅಳಿಸು
  ಅಕ್ಷರದ ಜೋಳಿಗೆಯ ಭಿಕ್ಷೆ ಬೇಡುವೆವು
 ನೀಡುವ ಜ್ಞಾನದಿ ಬದುಕು ಕಟ್ಟುವೆವು!”


         ವಿದ್ಯಾತಾಯಿ ಸರಸ್ವತಿಯಲ್ಲಿ ಶರಣಾಗತಿಯಾಗಿ ಅಕ್ಷರ ಭಿಕ್ಷೆಯನ್ನು ಬೇಡುವದರೊಂದಿಗೆ ಕವನ ಪ್ರಾರಂಭವಾಗುತ್ತದೆ.
         “ಕುರುಡು ಕಾಂಚಾಣ” ಕವನದಲ್ಲಿ ಮನುಷ್ಯ ಪರಿಶ್ರಮ ಜೀವಿಯಾಗಿರಬೇಕು, ಅಂಗೈರೇಖೆ ನೋಡದೇ, ಬಿಸಿಲಿನಲ್ಲಿ ಬೆವರು ಸುರಿಸಿ ದುಡಿಯಬೇಕು ಎಂಬುದನ್ನು ಚೆನ್ನಾಗಿ ಈ ಕೆಳಗಿನಂತೆ ಹೇಳಿದ್ದಾರೆ.


  “ಪರಿಶ್ರಮವಿಲ್ಲದ ದುಡಿಮೆಗೆ ಎಲ್ಲಿಯ ನೆಲೆಯು
   ಬಿಸಿಲಿನ ತಾಪದಿ ದುಡಿಯುವ ರೈತರಿರುವರು
    ಅಂಗೈರೇಖೆ ನೋಡಿ ನಿರ್ಧರಿಸಿದರೆ ಭವಿಷ್ಯವು
    ಸಾಧಿಸಲಾಗದು ಏನನ್ನು ಜೀವನದಿ ಕೊನೆಗಾಲವು”.
     “ಅನ್ಯೋನ್ಯತೆ” ಕವನದಲ್ಲಿ ಸರಳ ಜೀವನದ ಸೂತ್ರಗಳ ಬಗ್ಗೆ ಹೇಳುತ್ತಾ,

“ಜೀವನವಿದು ಸರಸ ವಿರಸಗಳ ಮಿಲನ
 ಜೊತೆಯಾಗಿಸುವುದು ನಮ್ಮಿಬ್ಬರ ಸಮ್ಮಿಲನ
 ಅರಿವಿನ ಬಾಳಿದ್ದರೆ ಅದುವೇ ಸುಂದರವು
 ಎಲ್ಲರು ನೋಡಿ ಆಡದಂತಾಗಲಿ ನೋಟವು”


        ಕವಿವಾಣಿಯಂತೆ ‘ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ’ ಎಂಬುವುದನ್ನು ಸೂಚ್ಯವಾಗಿ ಕವಿಯತ್ರಿ ಇಲ್ಲಿ ಹೇಳಿದ್ದಾರೆ.


        ಕಾಣದ ಕಡಲಿಗೆ
        ಕನಸಿನ ಗೋಪುರ
        ಕನಸಲಿ ಕಂಡರು
        ಕಾಣದೆ ಮನಸ್ಸಿಗೆ!


   ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಎನ್ನುವ ಹಾಗೆ ಬರೀ ಕನಸಿನಲ್ಲಿ ಗೋಪುರ ಕಟ್ಟುವುದನ್ನು “ತೀರದ ಬಯಕೆ” ಎಂಬ ಕವನದಲ್ಲಿ ಹೇಳಿದ್ದಾರೆ.


  “ಕತ್ತಲು ಕಳೆದಾಗಲೆ ಬೆಳಕಿನ ಬೆಲೆಯು
   ಕಹಿ ಅನುಭವಿಸಿದರೆ ಸಿಹಿಯ ರುಚಿಯು
   ನೋವು ಅನುಭವ ಕೊಡುವುದು ಬಾಳಿಗೆ
   ಸಂತೋಷವು ಮರೆಯದೇ ಕಷ್ಟದ ಕಾಲಿಕೆ”


ಎಂದು “ಕಾರ್ಗತ್ತಲಲ್ಲಿ ಮಿಂಚು ಮನದಲ್ಲೇನೊ ಸಂಚು” ಕವನದಲ್ಲಿ ಕತ್ತಲ್ಲಿನ ಅನುಭವ ಇದ್ದಾಗಲೇ ಬೆಳಕಿನ ಕಿಮ್ಮತ್ತು, ಕಹಿಯಿದ್ದಾಗಲೆ ಸಿಹಿಯ ರುಚಿ ಸಿಗುವುದೆಂದು ಕವಿಯತ್ರಿ ಮಾರ್ಮಿಕವಾಗಿ ಹೇಳಿದ್ದಾರೆ.
        “ಬದುಕೊಂದು ಭಂಡಾರ ” ಎಂಬ ಕವನದಲ್ಲಿ,


       ಸಾಗುವ ದಾರಿಯಲಿ
       ದೂರುತ ಕೊರಗದಿರಿ
       ಕಲ್ಲು ಮುಳ್ಳುಗಳ
       ಸರಿಸಿ ಮುನ್ನಡೆಯಿರಿ


    ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಹೆದರದೆ, ಆಗಿಹೋದ ಘಟನೆಯ ಬಗ್ಗೆ ಚಿಂತಿಸದೆ ಮುನ್ನಡೆಯುವಂತೆ ಈ ಕವನದಲ್ಲಿ ಮಾರ್ಗದರ್ಶನ ಮಾಡಿದ್ದಾರೆ.
    “ತಾಯಿ ಅವಳು” ಕವನದಲ್ಲಿ ತಾಯಿಯ ಮಹತ್ವವನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ.


“ಇರುವುದರಲ್ಲಿಯೇ ಪ್ರೀತಿಯ ಹಂಚುತಾ
 ತನ್ನ ನೋವುಗಳ ಒಳಗೊಳಗೇ ನುಂಗುತ್ತಾ!
ಮರೀಚಿಕೆ ಬದುಕು ಅದೇ ತಾಯಿಯಲ್ಲವೇ?”


         ಒಟ್ಟಿನಲ್ಲಿ ಸವಿತಾ ಮುದ್ಗಲ್ ರವರು ಬರೆದ “ನೆರಳಿಗಂಟಿದ ಭಾವ” ಕವನ ಸಂಕಲನವು ಸಮಾಜವನ್ನು ತಿದ್ದುವ, ನಾಡಿನ ಪ್ರೀತಿ ತೋರಿಸುವ, ಮೂಢನಂಬಿಕೆಯನ್ನು ಟೀಕಿಸುವಲ್ಲಿ ಯಶಸ್ವಿಯಾಗಿದೆ. ಇವರಿಂದ ಹೀಗೆ ಇನ್ನಷ್ಟು ಕವನಗಳು‌ ಮೂಡಿ ಬರಲೆಂದು ಆಶಿಸುತ್ತೇನೆ.


One thought on “ಸವಿತಾ ಮುದ್ಗಲ್ ಕೃತಿ “ನೆರಳಿಗಂಟಿದ ಭಾವ” ಅವಲೋಕನ-ಬಸವರಾಜ್ ಹೊನಗೌಡರ್

Leave a Reply

Back To Top