ರಾಜಪ್ಪದಳವಾಯಿಯವರ ಕೃತಿ “ಕಳಚಿದ ಕೊಂಡಿಗಳು” ಅವಲೋಕನ ರಾಘವೇಂದ್ರ ಬಿ ಎ ದ್ರಾಕ್ಷಿ

ಆಧುನಿಕ ಕನ್ನಡ ಸಾಹಿತ್ಯದ ದಲಿತ ಬಂಡಾಯ ಕಾಲಘಟ್ಟದ ಪ್ರಮುಖ ಲೇಖಕರಲ್ಲಿ ರಾಜಪ್ಪದಳವಾಯಿಯವರು ಒಬ್ಬರು. “ಕನ್ನಡಸಾಹಿತ್ಯಕೋಶ” ಗ್ರಂಥವನ್ನು ಸಂಪಾದಿಸಿಕೊಡುವುದರ ಮೂಲಕ ಕನ್ನಡ ಸಾಹಿತ್ಯ ಸ್ಪರ್ಧಾತ್ಮಕ ಆಕಾಂಕ್ಷಿಗಳ ಹೃದಯದಲ್ಲಿ ಮನೆಮಾಡಿರುವ ಇವರು ೧೯೬೨ ರಲ್ಲಿ ಚಿಕ್ಕಮಗಳೂರಿನ ಅನುವನಹಳ್ಳಿಯಲ್ಲಿ ಜನಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಎಂ ಎ, “ಸಾಹಿತ್ಯ ಪೂರ್ವ ಕನ್ನಡ ಕಾದಂಬರಿಗಳಲ್ಲಿ ಚಾರಿತ್ರಿಕ ಅಂಶಗಳು”ಎಂಬವಿಷಯದಲ್ಲಿಪಿ. ಎಚ್. ಡಿ. ಹಾಗೂ“ಕವಿರಾಜಮಾರ್ಗ:ಬಹುಶಿಸ್ತೀಯ ಅಧ್ಯಯನ”ಎಂಬ ವಿಷಯಕ್ಕೆ ಡಿ. ಲೀಟ್ ಪಡೆದ ಇವರು ಸಾಹಿತಿಗಳು, ವಿಮರ್ಶಕರು, ಜಾನಪದ ಕಲಾವಿದರು ಹಾಗೂ ಸಿನಿಮಾ ನಿರ್ದೇಶಕರಾಗಿ ಕನ್ನಡದಲ್ಲಿ ಒಂದು ಬೊಗಸೆ ನೀರು, ದಾರಾಶಿಕೊ, ಮಠದೊಳಗಣ ಬೆಕ್ಕು, ರಕ್ತದ ಬಣ್ಣ ಕೆಂಪು, ಬೀದಿನಾಟಕಗಳು ಮೊದಲಾದ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ತನ್ನದೇಯಾದ ಕೊಡುಗೆಯನ್ನು ನೀಡಿದ್ದಾರೆ. ಅಂತಹ ಕೃತಿಗಳಲ್ಲಿ ಕಳಚಿದ ಕೊಂಡಿಗಳು ಎಂಬ ನಾಟಕ ಒಂದಾಗಿದ್ದು ಈ ಕೃತಿಯಲ್ಲಿ ಕಾರ್ಮಿಕರಿಗೆ ಆದ ಶೋಷಣೆಯನ್ನು ಈ ನಾಟಕದಲ್ಲಿ ಹೇಗೆ ಅಭಿವ್ಯಕ್ತಸಿದ್ದಾರೆ ಎಂಬುದನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಕಳಚಿದ ಕೊಂಡಿಗಳು ನಾಟಕ ಹದಿಮೂರು ದೃಶ್ಯಗಳಿಂದ ಸುಮಾರು ಮೂವತ್ತಕ್ಕೂ ಹೆಚ್ಚು ಪಾತ್ರಗಳಿಂದ ಕೂಡಿದ ಒಂದು ಬೀದಿನಾಟಕ ಸ್ವರೂಪದ್ದಾಗಿದೆ. ಶೋಷಣೆ ಎಂಬುದು ಒಂದು ರೀತಿಯಲ್ಲಿ ಭಾರತ ದೇಶದಲ್ಲಿ ಶತಶತಮಾನಗಳಿಂದ ಭಿನ್ನ ಆಯಾಮಗಳಲ್ಲಿ ನಡೆಯುತ್ತಲೆ ಬಂದಿದೆ. ಕಳಚಿದ ಕೂಂಡಿಗಳಲ್ಲಿ ಶೋಷಣೆಯು ಕಲ್ಲುಹೊಡಿಯವ ಕಾರ್ಮಿಕ ಕುಟಂಬಗಳಲ್ಲಿ ಜೀತದ ಮೂಲಕ ಅಭಿವ್ಯಕ್ತವಾಗಿರುವುದು ಕಂಡುಬಂದಿದೆ. ನಾಟಕದಲ್ಲಿ ಶೋಷಣೆಯನ್ನು ನಾಲ್ಕು ವಿಧಗಳಲ್ಲಿ ನಾನು ಗ್ರಹಸಿಕೂಂಡಿದ್ದೇನೆ. ಒಂದು ಶೋಷಕ ಪಾತ್ರಗಳು, ಎರಡು ಶೋಷಿತ ಪಾತ್ರಗಳು, ಮೂರು ಶೋಷಕ ಬೆಂಬಲಿತ ಪಾತ್ರಗಳು, ನಾಲ್ಕು ಶೋಷಿತ ಬಿಡುಗಡೆಯ ಪಾತ್ರಗಳು, ಶೋಷಕ ಪಾತ್ರಗಳಾಗಿ ಬಂಡೆಹನುಮಂತಪ್ಪ ಮತ್ತು ಅವರ ಮಗ ನವೀನ, ಶೋಷಕ ಬೆಂಬಲಿತ ಪಾತ್ರಗಳಾಗಿ ಅಧಿಕಾರಿರ‍್ಗಗಳು, ರಾಜಕಾರಣಿಗಳು,  ಶೋಷಿತ ಪಾತ್ರಗಳಾಗಿ ಸಣ್ಣೀರಪ್ಪ, ತಮ್ಮಣ್ಣ, ಚಿನ್ನಮ್ಮ, ಪಳನಿ, ತಂಗಮ್ಮ, ರಂಗಮಾರ, ಶೋಷಿತರ ಬಿಡುಗಡೆಯ ಪಾತ್ರಗಳಾಗಿ ದಸಂಸ, ರೈತಸಂಘದ ಸದಸ್ಯರು ಮತ್ತು ಅಧ್ಯಕ್ಷರು, ಮರಳೂರುದಿಣ್ಣೆ ಮುಕುಂದಪ್ಪಮೊದಲಾದವರು.

ಮಾರ್ಕ್ಸ್ ವಾದದ ದೃಷ್ಠಿಕೋನವನ್ನು ಇಟ್ಟುಕೊಂಡು ರಚಿಸಿದಂತೆ ಬಾಸವಾಗುವ ನಾಟಕವು ಕಾಲಿಗೆ ಸರಪಳಿಯನ್ನು ಹಾಕಿ ದುಡಿಸಿಕೊಳ್ಳುವ ಜೀತದ ಕ್ರೂರ ವ್ಯವಸ್ಥೆಯಿಂದ ಕಾರ್ಮಿಕರನ್ನು ಬಿಡಿಸಲು ದಲಿತ ಸಂಘರ್ಷ ಸಮಿತಿ ಹಾಗೂ ರೈತಸಂಘವು ಪ್ರಯತ್ನಿಸಿದ್ದನ್ನು ನಾಟಕದಲ್ಲಿ ಮೂಡಿಬಂದಿರುವುದರ ಜೊತೆಗೆ ಹಾಡಿನ ಮೂಲಕ ಹಾಗೂ ರಂಗಮಾರನ ವ್ಯಂಗ್ಯವಾದ ಮಾತುಗಳ ಮೂಲಕ ಬಂಡಾಯದ ಧ್ವನಿಕಾಣಿಸುತ್ತದೆ. ಭಾಷೆಯನ್ನು ಗಮನಿಸಿದರೆ ದಾವಣಗೇರೆಯ ಸುತ್ತಮುತ್ತಲಿನ ಪ್ರದೇಶದ ಗ್ರಾಮೀಣ ಭಾಷೆಯನ್ನು ಬಳಸಿರುವುದು ಕಂಡುಬರುತ್ತದೆ.

“ಕತೆಯ ಕೇಳಿರಣ್ಣ/ ಕಲ್ಲು ಮನಸಿನ/ ಮುಳ್ಳು ಜನಗಳು/ಹೂವು ಕೊಲ್ಲುವಂಥ” “ಎಲ್ಲಿ ಹೋಯಿತಣ್ಣ/ದಯೆಯೇ ನಿಮ್ಮ ಧರ್ಮ /ಎಲ್ಲಿ ಹೂತಿರಣ್ಣ/ ಗಯೆಯೇ ನಿಮ್ಮ ದಮ್ಮ” “ದಡ್ಡರು ದುಡಿತಾರೆ/ಕೇಳಿರಣ್ಣ ಕೇಳೊ / ಬುದ್ಧಿವಂತರೆಲ್ಲಾ/ ದುಡ್ಡು ಎಣಿಸುತ್ತಾರೆ” “ಬಡತನದ ಬಸಿರಿಗೆ/ ಕೋಟಿಗಟ್ಟಲೆ ತತ್ತಿಗಳು/ ಒಂದ ಕೊಂದು ಬೆಳೆದು/ ನೆಮ್ಮದಿಯ ಕೊಂದವು” ಹೊಡೆದೊಡೆದು ಬಳಲಿದರೂ/ ಬಂಡೆಸವೆಯಲಿಲ್ಲ/ ಯುಗಯುಗ ಕಳೆದರೂ/ ಹೊಟ್ಟೆಯು ತುಂಬಲಿಲ್ಲ”

ಈ ಸಾಲುಗಳನ್ನು ಸೂಕ್ಮವಾಗಿ ಗ್ರಹಿಸಿದಾಗ ಕಲ್ಲು ಮುಳ್ಳಿನಂತಹ ಮನಸ್ಸಿರುವ ಬಂಡವಾಳಶಾಹಿಗಳ ಅಧಿಕಾರದ ವ್ಯವಸ್ಥೆಯನ್ನು ದಲಿತ ದಮನಿತರ ಕೂಲಿ ಕಾರ್ಮಿಕರ ಮೇಲೆ ಹೇರುವ ಸಮಾಜದ ಸ್ಥಿತಿಯು ದೇಶದ ಉದ್ಧಾರ ಮತ್ತು ದಯೆ ದರ್ಮದ ಕುರಿತು, ದುಡಿಸಿ ಕೊಳ್ಳುವವರ ಮತ್ತು ದುಡಿಯುವವರ ಮಧ್ಯ ಇರುವ ವ್ಯತ್ಯಾಸಗಳನ್ನು ಬಡತನದ ದುರ್ಬರ  ಸ್ಥಿತಿಯಲ್ಲಿ ಜೀತದ ಸಂಕೋಲೆಯಲ್ಲಿ ಸಿಲುಕಿ ಹಸಿವನ್ನು ನಿಗಿಸಿಕೊಳ್ಳದ ಸಾಲದಿಂದ ಮುಕ್ತರಾಗದ ಕೂಲಿ ಕಾರ್ಮಿಕರ ಬದುಕಿನ ನೆಲೆಯನ್ನು ಹಾಡುಗಳ ಮೂಲಕ ಬಂಡಾಯದ ಪ್ರಜ್ಞೆಯನ್ನು ಗುರುತಿಸಿದ್ದಾರೆ. “ಈ ದೇಶ ಟೀಚ್ ಮಾಡರಿಂದಲೇ ಹಾಳಾಗೋಯ್ತು. ಅಪ್ಪ, ಅವ್ವ, ಮೇಷ್ಟ್ರುಗಳು, ಸ್ವಾಮಿಗಳು, ಶಾಸಕ್ರು, ಮಂತ್ರಿಗಳು, ಸಮಾಜ ಸೇವಕ್ರು ಹೋಗ್ಲ ಅವನೌನಾ. ಯಾವ ಕಡಿಕೇ ನೋಡಪ ಬರೇ ಟೀಚ್ ಮಾಡರೆ” ಎಂಬ ರಂಗಮಾರನ ವ್ಯಂಗ್ಯವಾದ ಮಾತುಗಳು ಶ್ರೀಮಂತರ ಶೋಷಣೆಯ ವಿರುದ್ಧ ಧ್ವನಿ ಎತ್ತುತ್ತವೆ.

ಮಾನವೀಯತೆ ಮತ್ತು ಸ್ವಾಭಿಮಾನದ ಪ್ರಶ್ನೆ ಎದುರಾದಾಗ ಮಾನವೀಯತೆಯು ತಮ್ಮಣ್ಣ ಮತ್ತು ಸಣ್ಣೀರಪ್ಪರ ನಡುವೆ ಹಸಿವನ್ನು ನೀಗಿಸುವುದರ ಮೂಲಕ ವ್ಯಕ್ತವಾಗಿದೆ. ತಮ್ಮಣ್ಣಹೇಳುವಹಾಗೆ “ಈಗ ನನ್ನತ್ರ ವಸಿ ಪುಡಿಗಾಸೈತೆ, ಇಲ್ಲೆಲ್ಲರ ತಿಂಡಿ ಗಿಂಡಿ ತಿನ್ನನ ಆಮೇಲೆ ಏನಮಾಡದು ಅಂತ ಚಿಂತಿಸಿದ್ರಾತು!” ಈ ಮಾತಿಗೆ ಪ್ರತಿಯಾಗಿ ಸಣ್ಣೀರಪ್ಪ ಹಸಸಿವಿಲ್ಲ ಎನ್ನುವುದರ ಮೂಲಕನಿ ರಾಕರಿಸುತ್ತಾನೆ. ಆಗ ತಮ್ಮಣ್ಣ “ನಾನು ನಿನ್ನಂತವನೆ ಕಣಯ, ಹಸಿವು ಅಂತ ಯಾ ನನ್ನ ಮಗನತ್ರು ಕೈಯ್ಯೊಡ್ಡಿದೊನಲ್ಲ.(ದು:ಖಿಸುತ್ತ) ಆದರೆ ತಿಳ್ಕೊ, ನೀನು ನಿನ್ನೆಂಡ್ತಿ ಎರಡು ಮೂರು ದಿನದಿಂದಲೂ ಏನೂ ತಿಂದಿಲ್ಲ ಅಂತ ನಿಮ್ಮ ಕಣ್ಣುಗುಳೆ ಹೇಳ್ತವೆ ಕಣಯ! ನೀ ತಿನಬ್ಯಾಡಪ್ಪಾ ನಿನ್ನ ಹೆಂಡ್ರಿಗಾರ ತಿನ್ಸಯ್ಯಾ” ಎನ್ನುತ್ತಾನೆ. ಇದನ್ನು ಗಮನಿಸಿದಾಗ ಯಾವುದೆ ತಳಸಮುದಾಯ ಅಥವಾ ಬಡತನದ ಕುಟುಂಬಗಳು ತಮ್ಮಲ್ಲಿ ಏನೇ ವಯಕ್ತಿಕ ಭಿನ್ನತೆ, ಭಿನ್ನಾಭಿಪ್ರಾಯಗಳಿದ್ದರು ಹಸಿವು ಅಂತ ಬಂದಾಗ ತಮ್ಮಲ್ಲಿರುವುದನ್ನು ನೀಡುವ ದಾರಾಳ ಮನಸ್ಸಿನವರು ಎಂಬುದನ್ನು ಕಳಚಿದ ಕೊಂಡಿಗಳು ನಾಟಕ ತೋರಿಸಿಕೊಡುತ್ತದೆ. ನವೀನ ಮತ್ತು ತಂಗಮ್ಮರ ಮಧ್ಯ ಮಾಲೀಕನಾದ ನವೀನ ತಂಗಮ್ಮನ ಮೇಲೆ ಕಾಮನೆಯ ಕಣ್ಣು ಹಾಕುವಾಗ ತಂಗಮ್ಮ ನವೀನನ ವಿರುದ್ಧ ಅವನ ಅಪೇಕ್ಷಣೆಯನ್ನು ಧಿಕ್ಕರಿಸುವ ಸ್ವಾಭಿಮಾನದ ಮಾತುಗಳು ವ್ಯಕ್ತವಾಗಿವೆ.

ನವೀನ – ತಂಗಮ್ಮ ನಿಮಗೆ ಮಕ್ಳಿಲ್ವಾ?
ತಂಗಮ್ಮ– ಅಯ್ಯೋ ಚಾಮಿ, ನಮಿಗೇ ತುತ್ತು ಅನ್ನಕ್ಕೆ ಗತಿಯಿಲ್ಲ. ಇನ್ನ ಅವುನ್ನ ಯಾಕೆ ಮಾಡಿಕೊಂಡು ಬಳಲಸೋದು?
ನವೀನ – ಅಲ್ಲಾ!(ಲಂಪಟತನದಿಂದ) ಇನ್ನ ಮುಂದ್ಕೆ ಅಂತ ಯೋಚ್ನೆ ಎಲ್ಲಾ ಬುಟ್ ಬುಡು.
ತಂಗಮ್ಮ– ಏನ ಚಾಮಿ ನೀವೇಳದು? ನನ್ನ ತಾವ ಏನ ನಿಮ್ಮ ಮಾತು! ಏನಿದ್ರೂ ನೀವು ನನ್ನ ಗಂಡನ ಹತ್ರ ಮಾತಾಡಿ!
ನವೀನ – ಇವೆಲ್ಲ ನಿನ್ನ ಗಂಡ್ನ ಹತ್ರ ಮಾತಾಡ ಮಾತಲ್ಲ! ಅಯ್ಯೋ ದಡ್ಡ ಹುಡುಗಿ ನೀನು. ಮದಿವ್ಯಾಗಿ ಎಷ್ಟು ವರ್ಷಾತು?
ತಂಗಮ್ಮ– ಮೂರೊರ್ಷ!
ನವೀನ – ಪಾಪಪಾಪ! ತಂಗಮ್ಮ ನಿನಗೆ ಒಂದ ಸಾವುರ ಜಾಸ್ತಿ ಕೊಡ್ತೀನಿ. ಹಂಗೆ ವಸಿ ಅಡ್ ಜಸ್ಟ್ ಮಾಡ್ಕೊ.
ತಂಗಮ್ಮ– ಏನಚಾಮಿ. ನಿನ್ನ ದುಡ್ಡು ನನ್ನ ಹಾಟಿಗೆ ಸಮ. ಇನ್ನೊಂದ್ ಸರ್ತಿ ಇಲ್ಲೆಲ್ಲರ ಸುಳದೆ ಅಂದ್ರೆ ಗೆಂಡೆ ಕಿತ್ತು ಕೈಯ್ಯಿಗೆ ಕೊಟ್ಟೇನು!

ಎಷ್ಡೇ ಬಡವರಾದರೂ ಪ್ರಾಣ ತ್ಯಾಗ ಮಾಡುತ್ತಾರೆ ಹೊರತು ದುಡ್ಡಿಗಾಗಿ ಮೈಮಾರಿಕೊಳ್ಳುವುದು, ಸೇರಗಾಸುವುದು ಮಾಡುವುದಿಲ್ಲ ಎಂಬುದನ್ನು ತಂಗಮ್ಮನ ಮಾತುಗಳ ಮೂಲಕ ಕಂಡುಕೊಳ್ಳಲಾಗಿದೆ.

ರೈತ ಸಂಘದ ಚಂದ್ರಣ್ಣಯ್ಯನವರ ಪರವಾಗಿ ಚುನಾವಣಾ ಪ್ರಚಾರದ ವೇಳೆ ಪಕ್ಷದ ಸದಸ್ಯರು ಓಟಿಗಾಗಿ ಜಂಗಮರಹಳ್ಳಿ ಜಾಂಬವಗುಡ್ಡದ ಕಲ್ಲು ಕ್ವಾರೆದ ಕಲ್ಲು ಕುಟಿಕರ ಪಳಿನಿಯತ್ತರ ಬಂದು ಮಾತನಾಡುವಾಗ ಅಲ್ಲಿ ನಡೆಯುತ್ತಿರುವ ಕೂಲಿ ಕಾರ್ಮಿಕರ ಶೋಷಣೆ ಗಮನಕ್ಕೆ ಬರುತ್ತದೆ. ಅದನ್ನು ಚಂದ್ರಣ್ಣಯ್ಯನವರ ಗಮನಕ್ಕೆ ತರುವುದರ ಮೂಲಕ ಹೋರಾಟದ ಸ್ವರೂಪ ಪಡೆದುಕೊಳ್ಳುತ್ತದೆ. ಜಂಗಮರಹಳ್ಳಿ ಜಾಂಬವಗುಡ್ಡದ ಬಂಡೆ ಹನುಮಂತಪ್ಪ ಮತ್ತು ಅವನ ಮಗ ನವೀನರು ಕಾಲುಗಳಿಗೆ ಬೇಡಿಹಾಕಿ ಜೀತ ಮಾಡಿಸಿಕೊಳ್ಳುವಂತಹ ಒಂದು ನೀಚತನದ ಕ್ರೌರ್ಯ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಇಂತಹ ಒಂದು ವ್ಯವಸ್ಥೆಯಿಂದ ರಾಜ್ಯಕ್ಕೆ ಅಲ್ಲ ದೇಶಕ್ಕೆ ಆಗಿರುವಂತಹ ಅವಮಾನ. ಇದರ ಹೊಣೆಯನ್ನು ಆಡಳಿತ ಪಕ್ಷವೇ ಹೊರಬೇಕೆಂದು ರೈತಸಂಘವು ಜಿಲ್ಲಾ ಸೇಷನ್ ನ್ಯಾಯಲಯದಲ್ಲಿ ಮೋಕದಮ್ಮೆಯನ್ನು ಹೂಡುತ್ತದೆ. ಈ ಒಂದು ಪ್ರಕರಣವು ಬರಸಿಡಿಲು ಪತ್ರಿಕೆಯಲ್ಲಿ ಬರುವುದರ ಜೊತೆಗೆ ಸಿ. ಓ . ಡಿ. ತನಿಕೆಗೆ ಹೋಗುತ್ತದೆ. ರೈತ ಸಂಘಕ್ಕೆ ಬೆಂಬಲವಾಗಿ ದಲಿತ ಸಂಘರ್ಷ ಸಮಿತಿಯು ಸೇರಿಕೊಂಡು “ದಲಿತರ ಮೇಲಿನ ದೌರ್ಜನ್ಯ ನಿಲ್ಲುವವರೆಗೂ ನಮ್ಮ ಸಿಟ್ಟು, ಆಕ್ರೋಶ, ಪ್ರತಿಭಟನೆ ಈ ಸಾಮಾಜದ ವಿರುದ್ಧ ಇದ್ದ ಇರುತ್ತದೆ. ಹಿಂದೂ ಸವರ್ಣಿಯರ ಬಗ್ಗೆ ದಲಿತನಾದವನು ಸಹಾ ಎಚ್ಚರದಿಂದಿರಬೇಕು ಎಂದು ಬಾಬಾಸಾಹೇಬ್ ಅಂಬೇಡ್ಕರ್ ಹೇಳುತ್ತಿದ್ದರು. ನಿಮಗೆಲ್ಲಾ ಗೊತ್ತಿರಬೇಕು ಇವತ್ತಿನ ದಿನ ಏನಾಗಿದೆ? (ಜೋರಾಗಿ) ಜಂಗಮರಹಳ್ಳಿ ದಲಿತರಿಗೆ ಕೆಳಜಾತಿ ಜನಕ್ಕೆ ಆರು ಕಾಶು ಮೂರು ಕಾಶು ಸಾಲ ಕೊಟ್ಟು ಅವರ ಕಾಲುಗಳಿಗೆ ಬೇಡಿಹಾಕಿ ಕಲ್ಲುಹೊಡಿಸಿಕೊಳ್ತಾ ಇರೋ ಶೋಷಣೆ ನಡೀತಾ ಐತಿ, ಇದು ಮರ್ಯಾದೆ ಇರೋ ಮಾನ ಇರೋ ಸಮಾಜ ಅಂತ ನೀವ್ಯಾರಾದ್ರೂ ಭಾವಿಸ್ತೀರಾ?” ಎಂದು ಮುಕುಂದಪ್ಪನವರು ಭಾಷಣ ಮಾಡುವುದರ ಮೂಲಕ ಜನರನ್ನು ಎಚ್ಚರಿಸಿದರಲ್ಲದೆ ರೈತ ಸಂಘಕ್ಕೆ ದಸಂಸ ಸಂಪೂರ್ಣ ಬೆಂಬಲ ಇರುವುದೆಂಬುದನ್ನು ಸೂಚಿಸುತ್ತಾರೆ. ಇದರ ಜೊತೆಗೆ ಮಾನವ ಹಕ್ಕುಗಳ ಆಯೋಗ ಎಂಬ ನಾಲ್ಕಾರು ಬೋರ್ಡಳನ್ನು ಇಡಿದುಕೊಂಡು “ಮಾನವ ಹಕ್ಕುಗಳ ಮೇಲೆ ಆಗಿರುವಂತ ಇಂತಹ ಶೋಷಣೆಯನ್ನು ಆಯೋಗವು ಖಂಡಿಸುತ್ತದೆ ಮತ್ತು ಅಪರಾಧಿಗಳಗೆ ಶಿಕ್ಷೆ, ಶೋಷಿತರಿಗೆ ಪುನರ್ವಸತಿ ಕಲ್ಪಿಸುವ ಕೆಲಸಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆಯೋಗವು ಒತ್ತಾಯಿಸುತ್ತದೆ. ಈ ಸಂಬಂಧವಾದ ಮಾಹಿತಿಯನ್ನು ವಿಶ್ವ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಲಾಗುವುದು”. ಎಂಬ ಭರವಸೆಯ ಮಾತುಗಳನ್ನು ಆಯೋಗದ ಪರ ಹೋರಾಟಗಾರರು ಎತ್ತುತ್ತಾರೆ.

ಆಡಳಿತ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಈ ಪ್ರಕರಣವು ನಾಟಕದ ಶ್ರೀಶಂಕರಪಾದರ ಸರ್ಕಾರವೇ ಹೊಣೆ ಹೊರಬೇಕೆಂದು ಪ್ರಕರಣದ ಮೋಕದಮ್ಮೆಯಲ್ಲಿ ಹೇಳಿದ್ದರಿಂದ ಶಂಕರಪಾದರಿಂದ, ಡಿ.ಸಿ ಯಿಂದ ಇಡಿದು ವಿ.ಎ, ಪಿ.ಸಿಗಳವರೆಗೂ ಈ ಪ್ರಕರಣವನ್ನು ಕುರಿತು ಅಧಿಕಾರಿ ವರ್ಗವು ತಮ್ಮ ತಪ್ಪಿನಿಂದ ತಪ್ಪಿಸಿಕೊಳ್ಳಲು ಒಬ್ಬರ ಮೇಲೊಬ್ಬರು ಹಾಕಿಕೊಳ್ಳುತ್ತರೆ. “ಈಗ ಸರ್ಕಾರ ಎಂದರೆ ನಾವೇ ಇಬ್ಬರು, ಗೋತ್ತಾ! ಸರ್ಕಾರ ಏನೇ ಹೇಳಬೇಕೂ ಅಂದ್ರೂ ನಮ್ಮ ಬಾಯಿಂದಲೇ ಹೇಳುಸಬೇಕು, ಏನಪಾ ಅಂದ್ರೆ ವಿಚಾರಣೆ ಆಗ ಗಂಟ ಜೈಲಲ್ಲಿರಬೇಕು ಅಷ್ಟೇ!” ಎಂಬ ಪಿ.ಸಿ ಯ ಮನದ ನೋವು ವಿ.ಎ,ಗೆ ಹೇಳವುದರ ಮೂಲಕ ಇಲ್ಲಿ ವ್ಯಕ್ತವಾಗುತ್ತದೆ. ತಾತ್ಕಾಲಿಕವಾಗಿ ಬಂಡೆ ಹನುಮಂತಪ್ಪ ಮತ್ತು ಅವನ ಮಗನ ವೀನರನ್ನು ಸೇರೆಮನೆಗೆ ಕಳಿಸಿದರೂ ಇವರಿಬ್ಬರೂ ಅಪರಾಧ ಮಾಡಿರುವ ಬಗ್ಗೆ ಸರಿಯಾದ ಸಾಕ್ಷಿಗಳು ಇಲ್ಲದಿರುವುದರಿಂದ, ಮಾಧ್ಯಮಗಳಲ್ಲಿ ಬಂದಿರುವ ಅಥವಾ ಪ್ರಚಾರವಾಗಿರುವ ದಾಖಲೆಗಳನ್ನು ನಂಬಲು ಸಾಧ್ಯವಿಲ್ಲದಿರುವುದರಿಂದ, ಸುಳ್ಳು ಸಾಕ್ಷಿಗಳನ್ನು ಯಾರಾದರೂ ಸೃಷ್ಟಿಸಬಹುದು ಎಂದು ಈ ಪ್ರಕರಣದಿಂದ ಬಂಡೆ ಹನುಮಂತಪ್ಪ ಮತ್ತು ಅವರ ಮಗ ನವೀನರನ್ನು ಸಂಬಂಧಪಟ್ಟವರಿಗೆ ಈ ನ್ಯಾಯಲಯವು ಜೈಲಿನಿಂದ ಬಿಡುಗಡೆಗೊಳಿಸಬೇಕೆಂದು ಆದೇಶ ಹೊರಡಿಸುವುದರ ಮೂಲಕ ನ್ಯಾಯಲಯದ ತಿರ್ಪುಗಾರರು ಹೇಳಿಕೆ ನೀಡುತ್ತಾರೆ. ಈ ತಿರ್ಪಿನಿಂದ ಕಂಗಾಲಾದ ರೈತ ಸಂಘದ ಅಧ್ಯಕ್ಷರು ಮತ್ತು ದಸಂಸದ ಹೋರಾಟಗಾರರು ತಮ್ಮ ಪರವಿರುವ ಲಾಯರನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಒಳ ಸಂಚಿನಿಂದ ಸೋಲುಂಟಾಗಿದೆ ಎಂಬ ಕಾರಣ ಕೊಟ್ಟ ಲಾಯರ್ ಅಪ್ಪರ್ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದರ ಮೂಲಕ ಕೇಸನ್ನು ಗೆಲ್ಲಬಹುದು ಎಂಬ ಭರವಸೆಯನ್ನು ನೀಡಿ ವಕೀಲರು ಚಂದ್ರಣ್ಣಯ್ಯ ಮತ್ತು ಮುಕುಂದಪ್ಪನವರಿಂದ ಸಹಿ ಹಾಕಿಸಿಕೊಳ್ಳುವುದರ ಮೂಲಕ ಈ ನಾಟಕ ಕೊನೆಗೊಳ್ಳುವುದು ಕಂಡುಬರುತ್ತದೆ.

ಒಟ್ಟಿನಲ್ಲಿ ಕಳಚಿದ ಕೊಂಡಿಗಳು ನಾಟಕವನ್ನು ಓದಿದಾಗ ಶ್ರೇಣಿಕೃತ ವ್ಯವಸ್ಥೆಯ ಸಮಾಜದ ಅಡಿಯೊಳಗೆ ಉಳ್ಳವರು ಅಥವಾ ಶ್ರೀಮಂತರು ಕಾರ್ಮಿಕ  ವರ್ಗದವರನ್ನು, ದಲಿತರನ್ನು, ತಳಸಮುದಾಯದವರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಶೋಷಣೆಗೊಳಪಡಿಸುವ, ದಾರ್ಜನ್ಯ ಎಸಗುವ, ಬಳಸಿಕೊಳ್ಳುವದನ್ನು ಕಾಣುತ್ತೇವೆ. ಒಂದು ವೇಳೆ ಇಂತಹ ವ್ಯವಸ್ಥೆಯನ್ನು ಧಿಕ್ಕರಿಸುವ ಅಥಾವ ವಿರೋಧಿಸುವ ಯಾವುದಾದರೂ ಸಂಘ ಸಂಸ್ಥೆಗಳು ಎದುರಾದಾಗ ಒಳಸಂಚುಗಳಿಂದ ಪಾರಾಗಲು ಬಂಡವಾಳಶಾಹಿಗಾರರು ಪ್ರಯತ್ನಿಸಿರುವುದು ಕಂಡುಬರುತ್ತದೆ. ಇಂತಹವರು ಎಷ್ಟೇ ಒಳಸಂಚುಗಳನ್ನು ರೂಪಿಸಿಕೊಂಡರು ಶೋಷಣೆಗೆ ಒಳಗಾದ ಯಾರೇ ಇರಲಿ ನ್ಯಾಯವನ್ನು ಪಡೆದುಕೊಳ್ಳಲು ಯಾವುದೆ ಇಂಜರಿಕೆ ಯಿಲ್ಲದೆ ಮುನ್ನುಗ್ಗಬೇಕಾಗಿದೆ ಎಂದು ಭಾವಿಸುವೆ


One thought on “ರಾಜಪ್ಪದಳವಾಯಿಯವರ ಕೃತಿ “ಕಳಚಿದ ಕೊಂಡಿಗಳು” ಅವಲೋಕನ ರಾಘವೇಂದ್ರ ಬಿ ಎ ದ್ರಾಕ್ಷಿ

Leave a Reply

Back To Top