ಡಾ ಅನ್ನಪೂರ್ಣಾ ಹಿರೇಮಠ ಕವಿತೆ-ನಿನಗೆ ಧನ್ಯವಾದ

ಎಷ್ಟು ಧನ್ಯವಾದ ಹೇಳಲಿಂದು ಗೆಳೆಯನೇ
ಮನನೊಂದು ಜೀವ ಬೆಂದು ನಿನಗಿಂದು
ಭಾವದಲಿ ಹದಗೊಂಡ ನೂರ ಮಾತ
ಹೊನಲಿಗೆ ಸಂಗೀತ ಬೆರೆಸಿ ಹಾಡಿ ಹೇಳಲೇನು ಗೆಳೆಯಾ//

ನಿನ್ನ ಪ್ರೀತಿ ಪವಡಿಸಿದ ಈ ಎದೆ ನೆಲವ
ಹಸನಗೊಳಿಸಲರಿಯೇ ಹಸಿರಾದ ಬೆಳೆ ಕಿತ್ತೆಸೆಯಲಾರೆ
ಅರಳಿ ನಿಂತ ಪ್ರೇಮದೂವ ಕೊಯ್ಯಲಾರೆ
ಬಚ್ಚಿಟ್ಟು ಪೊರೆವ ಭಾರ ನನ್ನದು
ಪ್ರೀತಿ ಬಿತ್ತಿದ ನಿನಗೆ ಧನ್ಯವಾದ ಗೆಳೆಯಾ//

ನೀ ಕೊಟ್ಟ ಆನಂದ ಸಂತಸ ಗಳಿಗೆಗಳಿಗೆ
ನೀ ಕೊಟ್ಟ ಖುಷಿಗೆಷ್ಷು ಧನ್ಯವಾದ
ಪ್ರೇಮ ಪ್ರೀತಿ ಸಹಕಾರಕ್ಕೆಷ್ಟು ಧನ್ಯವಾದ
ನೀ ಸುರಿದ ಒಲವು ಮಮತೆಗೆಷ್ಟು ಧನ್ಯವಾದ
ಅದೆಷ್ಟು ಹೇಳಲಿ ನೋವ ತುಂಬಿದ ಹೃದಯದಿಂದ//

ಗಾಳಿಗಂಧದೊಡನೆ ನೀ ಬಂದು ಸ್ಪರ್ಶಸುಖ ನೀಡಿದಂತೆ
ಉದುರೊ ಮಳೆಹನಿಯಲ್ಲೂ ನನ್ನ ತಟ್ಟಿದಂತೆ
ಸಂಜೆಗೆಂಪಲ್ಲಿ ಹೂವ ಸೊಂಪಲ್ಲಿ ಮೂಡೋ ರವಿಯ
ಇಬ್ಬನಿಯ ಬಿಂಬದಲ್ಲಿ ನೀನೇ ಕಂಡಂತೆ
ನೀನೇ ಬಂದಂತೆ ತುಂಬಿರುವೆ ಎಲ್ಲೆಲ್ಲೂ ಗೆಳೆಯಾ,//

ಸದಾ ನಿನ್ನ ನೆನೆದು ನೆನೆದು ಆನಂದಕ್ಕೊ
ದುಃಖಕ್ಕೊ ಗೊತ್ತಿಲ್ಲ ಕಣ್ಣೀರ ಧಾರೆ
ಸುರಿ ಸುರಿದು ಕೆನ್ನೆ ಸವೆಸುತಿದೆ
ಮನವ ಕದಡಿ ವಿರಹ ಹರಡಿ ಅದರ ನಡುಗಿಸಿದ
ನಿನಗೆ ಧನ್ಯವಾದ ಧನ್ಯವಾದ ಗೆಳೆಯನೇ//

ಒಲವು ಪ್ರೀತಿ ಎಂದರೆ ನಕ್ಕರಾಯಿತೇ
ಹೃದಯದಲ್ಲಿ ಹುದುಗಿದ ನೆನಪಿಗೆ
ಅಂತರಾತ್ಮದಿ ಬೆರೆತ ಮನ ಮಂದಾರಕೆ
ನೀನಿರದೆ ಮಾತಿನಾ ತಂಪಿರದೆ
ಎಷ್ಟು ನೊಂದಿರುವೆನೆಂಬರಿವಿಲ್ಲವೆ
ನಿನಗೆ ಅದೆಷ್ಟು ಧನ್ಯವಾದ ಹೇಳಲಿ ನಿನಗೆ/


Leave a Reply

Back To Top