ವ್ಯಕ್ತಿ ಸಂಗಾತಿ
ವ್ಯಕ್ತಿ ಪರಿಚಯ: ಹಾಸನದ ಪ್ರತಿಭೆಯಾಗಿ ಹೊರಹೊಮ್ಮಿದ ಕೊಡಗಿನ ಕಣ್ಮಣಿ
“ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್”
ವ್ಯಕ್ತಿ ಪರಿಚಯ-ಹಾಸನದ ಪ್ರತಿಭೆ
“ಕೊಡಗಿನ ಕಣ್ಮಣಿ”
ಮಾಳೇಟಿರ ಸೀತಮ್ಮ ವಿವೇಕ್”
“ಮಕ್ಕಳ ಸರ್ವಾಂಗೀಣ ವಿಕಾಸವೇ ಶಿಕ್ಷಣ” ಎಂದು ಹೇಳಿರುವ ಡಾ.ರಾಧಾಕೃಷ್ಣನವರ ಹೇಳಿಕೆಯನ್ನು ನಿಜವೆನ್ನಿಸಿರುವ ಕೊಡಗಿನ ಕಣ್ಮಣಿ ಶ್ರೀಮತಿ ಸೀತಮ್ಮನವರು ಹುಟ್ಟಿದ್ದು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೂರ್ನಾಡುವಿನಲ್ಲಿ. ಇವರ ತಂದೆ ಕಾಳಪ್ಪನವರು ಕೊಡಗಿನಲ್ಲಿ ಕಿಟ್ಟು ಮಾಸ್ಟರ್ ಎಂದೇ ಚಿರಪರಿಚಿತ. ಶ್ರೀ ಕಂಬೀರಂಡ ಕಾಳಪ್ಪನವರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಾಯಿ ಕೆ. ಕೆ. ಮುತ್ತಮ್ಮ ಗೃಹಿಣಿ ಮತ್ತು ಉತ್ತಮ ಹಾಡುಗಾರ್ತಿ. ತಂಗಿ ಕುಸುಮನವರ ಕುಟುಂಬ ಮತ್ತು ತಮ್ಮ ಬೋಪಣ್ಣನವರ ಕುಟುಂಬ ಈಗಲೂ ಕ್ರೀಡಾಕ್ಷೇತ್ರದಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದೆ. ಒಟ್ಟಾಗಿ ಇವರದು ಕ್ರೀಡಾ ಕುಟುಂಬ. ಆದರೆ ಸೀತಮ್ಮನವರು ಮಾತ್ರ ಈಗ ಯಶಸ್ವಿಯಾಗಿ ಮುಂದಡಿ ಇಟ್ಟಿರುವುದು ಸಾಹಿತ್ಯ ಕ್ಷೇತ್ರದಲ್ಲಿ.!
ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಾಡಗ ಸರ್ಕಾರಿ ಶಾಲೆಯಲ್ಲಿಯು ಮತ್ತು ಸಂತ ಮೈಕಲರ ಶಾಲೆ ಮಡಿಕೇರಿಯಲ್ಲಿಯೂ, ಪ್ರೌಢ ಶಿಕ್ಷಣವನ್ನು ಕೂಡಿಗೆಯ ಕ್ರೀಡಾ ಪ್ರೌಢಶಾಲೆ, ಪದವಿ ಪೂರ್ವ ಮತ್ತು ಪದವಿ ಕ್ರೀಡಾನಿಲಯ, ಟೆರೇಷಿಯನ್ ಕಾಲೇಜ್ ಮೈಸೂರಿನಲ್ಲಿಯೂ, ಸ್ನಾತಕೋತ್ತರ ಪದವಿಯನ್ನು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರಿನಲ್ಲಿ ಪೂರ್ಣಗೊಳಿಸಿರುತ್ತಾರೆ. ಇವರು ಕರ್ಣಾಟಿಕ್ ಶಾಸ್ತ್ರೀಯ ಸಂಗೀತವನ್ನು ವಿದುಷಿ ಶ್ರೀಮತಿ ಹೇಮಾ ಗಣೇಶ್ ಅವರಲ್ಲಿ ಅಭ್ಯಸಿಸಿ ೨೦೧೨ರಲ್ಲಿ ಜೂನಿಯರ್ ಪರೀಕ್ಷೆ ತೆಗೆದುಕೊಂಡಿದ್ದಾರೆ. ಇವರು ತಮ್ಮ ತಂದೆಯ ಪ್ರೋತ್ಸಾಹದಿಂದಾಗಿ ಕ್ರೀಡಾ ಶಾಲೆಗೆ ಆಯ್ಕೆಯಾದರು. ಕ್ರೀಡಾ ತರಬೇತುದಾರರಾದ ಶ್ರೀಯುತ ವಿಶ್ವನಾಥ್, ಪೆಮ್ಮಯ್ಯ, ಕಾರ್ಯಪ್ಪ ಮತ್ತು ಶ್ರೀಮತಿ ಶಕುಂತಲ ಹಿರೇಮಠ್ ಅವರ ಮಾರ್ಗದರ್ಶನದಲ್ಲಿ ರೂರಲ್ಸ್ ನ್ಯಾಷನಲ್ಸ್, ಸ್ಕೂಲ್ ಮತ್ತು ಕಾಲೇಜ್ ಗೇಮ್ಸ್ & ಸ್ಪೋರ್ಟ್ಸ್, ರಾಜ್ಯಮಟ್ಟದ ಕೆಸರು ಗದ್ದೆ, ವುಮನ್ ಸ್ಟೇಟ್ ಅಂಡ್ ನ್ಯಾಷನಲ್ಸ್, ಅಮೆಚೂರ್, ದಸರಾ ಕ್ರೀಡಾಕೂಟ, ಮೈಸೂರು ಯೂನಿವರ್ಸಿಟಿ ಮತ್ತು ಸೌತ್ ಜೋನ್ ಯೂನಿವರ್ಸಿಟಿ ಮೀಟ್ ಮುಂತಾದವುಗಳಲ್ಲಿ ೧೯೯೧ರಿಂದ ೧೯೯೯ರವರೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಕ್ರೀಡಾ ಕ್ಷೇತ್ರದಲ್ಲಿಯೂ ಚಿನ್ನ, ಬೆಳ್ಳಿ, ಕಂಚಿನ ಪದಕಗಳೊಂದಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಇವರು ೨೦೦೧ರಲ್ಲಿ ಉದಯ ವಾಹಿನಿಯಲ್ಲಿ ಸುದ್ಧಿ ವಾಚಕಿ ಮತ್ತು ಉದಯ ಸುದ್ಧಿ ವಾಹಿನಿಯಲ್ಲಿ ಕ್ರೀಡಾ ಲೋಕ ಕಾರ್ಯಕ್ರಮದ ನಿರ್ದೇಶಕಿ, ನಿರೂಪಕಿ ಮತ್ತು ಸುದ್ಧಿ ಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದು, ಕನ್ನಡದ ಮೇಲೆ ಹಿಡಿತ ಸಾಧಿಸಲು ಅಡಿಪಾಯ ಹಾಕಲು ತಮ್ಮ ಪ್ರಥಮ ಸನ್ ನೆಟ್ ವರ್ಕ್‌ನ ವೃತ್ತಿ ಕ್ಷೇತ್ರ ಕಾರಣ ಎಂದು ಅವರು ಸದಾ ನೆನಪಿಸಿಕೊಳ್ಳುತ್ತಾರೆ. ೨೦೦೩ರಿಂದ ಹಾಸನದಲ್ಲಿ ನೆಲೆಸಿರುವ ಇವರು ಕೆ ಪಿ ಟಿ ಸಿ ಎಲ್ ನಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿರುವ ವಿವೇಕಾನಂದ ಪೊನ್ನಪ್ಪನವರನ್ನು ವಿವಾಹವಾದ ನಂತರ ತಮ್ಮ ಮಾವನವರು ನಡೆಸುತ್ತಿದ್ದ ಶ್ರೀಕೃಷ್ಣ ಕಾನ್ವೆಂಟ್‌ನಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ಜವಾಬ್ದಾರಿ ನಿಭಾಯಿಸಿದರು. ಇವರಿಗೆ ಇಂಜಿನಿಯರಿಂಗ್ ಓದುತ್ತಿರುವ ಒಬ್ಬ ಪುತ್ರನಿದ್ದಾನೆ. ಹೆಸರು ವಿಪುಲ್ ಪೂವಯ್ಯ. ಐತಿಹಾಸಿಕ ಸ್ಥಳ ವೀಕ್ಷಿಸುವ ಹವ್ಯಾಸದಿಂದ ಆರಂಭವಾದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನ, ೨೦೧೬-೧೭ರಲ್ಲಿ
ಅಮೇರಿಕದಲ್ಲಿ ನೆಲೆಸಿರುವ, ವಕೀಲ ವೃತ್ತಿಯಿಂದ ನಿವೃತ್ತರಾಗಿರುವ ಶ್ರೀಯುತ ಮಾಳೇಟಿರ ಬಿ ತಿಮ್ಮಯ್ಯ ಅವರು ಬರೆದಿರುವ “Who are we Kodavas” ಎಂಬ ಪುಸ್ತಕವನ್ನು ಪರಿಷ್ಕೃತಗೊಳಿಸಿ ಕೊಡವ ಭಾಷೆಗೆ ತರ್ಜುಮೆಗೊಳಿಸುವಂತೆ ಮಾಡಿತ್ತು. ಆ ಪುಸ್ತಕವು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪಡೆದು ಕೊಂಡಿದೆ. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ
ಸಾಹಿತ್ಯ ಕ್ಷೇತ್ರಕ್ಕೆ ಕಾಲಿರಿಸಿದ ಇವರು ನೂರೈವತ್ತಕ್ಕೂ ಅಧಿಕ ಕವನಗಳನ್ನು ರಚಿಸಿದರು. ಎಪ್ಪತ್ತಕ್ಕೂ ಅಧಿಕ ಕವನಗಳು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿ, ಪ್ರಶಂಸೆ ಗಳಿಸಿವೆ. ಅವುಗಳನ್ನು ಒಟ್ಟುಗೂಡಿಸಿದ “ಭಾವಕುಸುಮ” ಎಂಬ ಕವನ ಸಂಕಲನ ಬಿಡುಗಡೆಯಾಗಿದ್ದು, ಪುಸ್ತಕವು ಜನಮನ್ನಣೆ ಪಡೆದಿದೆ. “ಮನಸ್ಸು” ‘ಲೋಕಚಿತ್ತ ಸ್ಮೃತಿಸ್ತರ ಅನಾವರಣ’ ಎಂಬ ಸೈದ್ಧಾಂತಿಕ ಕೃತಿ ಪ್ರಕಟಣೆಗೊಂಡಿರುವುದು ಇದೀಗ ಬೇಡಿಕೆಯ ಮೇಲೆ “ಮನಸ್ಸು” ಕೃತಿ ಎರಡನೇ ಮುದ್ರಣಕ್ಕೆ ಅಣಿಯಾಗಿದೆ.
ಇದಲ್ಲದೆ ಅನೇಕ ಹಿರಿಯ ಮತ್ತು ಕಿರಿಯ ಸಾಹಿತಿಗಳ ಪುಸ್ತಕಗಳಿಗೆ ಮುನ್ನುಡಿ, ಆಶಯ ನುಡಿ, ಬೆನ್ನುಡಿ ಬರೆದಿದ್ದಾರಲ್ಲದೆ, ತಮ್ಮ ಗಮನ ಸೆಳೆದಿರುವ ಪುಸ್ತಕಗಳಿಗೆ ವಿಮರ್ಶೆ ಹಾಗು ಅಭಿಪ್ರಾಯ ನುಡಿಗಳನ್ನು ಬರೆದು ಸೈ ಎನಿಸಿಕೊಂಡಿದ್ದಾರೆ. ಸಿರಿಗನ್ನಡ ವೇದಿಕೆ ಹಾಸನ ಮಹಿಳಾ ವೇದಿಕೆಯ ಅಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿರುವ ಇವರು ಪುಸ್ತಕ ಬಿಡುಗಡೆ, ಆನ್ ಲೈನ್ ಕಾರ್ಯಕ್ರಮ, ಸ್ಪರ್ಧೆ ಆಯೋಜನೆ, ಕಾರ್ಯಕ್ರಮ ನಿರೂಪಣೆ ಮುಂತಾದವುಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕೆಲವು ವೇದಿಕೆಗಳು ಬಿಡುಗಡೆಗೊಳಿಸಿರುವ ಸಂಗ್ರಹ ಕೃತಿಗಳಿಗೆ ಲೇಖನಗಳನ್ನು ಬರೆದಿರುವುದು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕ ಆನ್’ಲೈನ್ ಸುದ್ದಿ ವಾಹಿನಿಗಳಿಗೆ ಸಾಮಾಜಿಕ ಮತ್ತು ಕೊಡಗಿನ ಕ್ರೀಡಾ ಸಾಧಕರ ಪರಿಚಯ ಮಾಲಿಕೆ ಲೇಖನಗಳನ್ನು ಬರೆದು ಅನೇಕ ಕ್ರೀಡಾಪಟುಗಳ ಬೆನ್ನು ತಟ್ಟಿದ್ದಾರೆ. ೨೦೨೨ರಿಂದ ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಕೈಜೋಡಿಸಿದ ತಿದ್ದುಪಡಿ ಕೆಲಸಕ್ಕೆ ಮಚ್ಚಾಮಡ ಲಾಲಾ ಕುಟ್ಟಪ್ಪನವರು ರಚಿಸಿರುವಂತಹ ಹದಿನಾರು ಸಾವಿರ (16000ಕ್ಕೂ) ಅಧಿಕ ಪದಗಳಿರುವ ಕನ್ನಡ-ಇಂಗ್ಲಿಷ್-ಕೊಡವ ಭಾಷೆ ನಿಘಂಟು, ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರ ಮತ್ತು ಕೊಡವಾಮೆ ಸಂಘಟನೆಯ ಸಹಯೋಗದಲ್ಲಿ ಸಧ್ಯದಲ್ಲಿಯೇ ಬಿಡುಗಡೆಗೊಳ್ಳುತ್ತಿದೆ. ಕೊಡವಾಮೆ ಸಂಘಟನೆಯ ಸದಸ್ಯತ್ವ ಪಡೆದಿರುವ ಇವರು ಬುಡಕಟ್ಟು ಸಂಸ್ಕೃತಿ ಅಧ್ಯಯನ ಕೇಂದ್ರದ ಸದಸ್ಯರೊಂದಿಗೆ ಎರಡು ತಿಂಗಳಿಗೊಮ್ಮೆ ಕೊಡವರ ಇತಿಹಾಸ, ಸಂಸ್ಕೃತಿ ಮತ್ತು ಭಾಷೆ ಕುರಿತಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ನಡೆಸುತ್ತಿರುವುದಲ್ಲದೆ, ಉಪನ್ಯಾಸ ವಿಷಯ, ವಿಚಾರವನ್ನು ಕೊಡವ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ದಾಖಲಿಸಿ ಪುಸ್ತಕ ರೂಪದಲ್ಲಿ ಸಂಗ್ರಹಿಸಿಡುವ ಕಾರ್ಯ ಮಾಡುತ್ತಿದ್ದಾರೆ. ಇದಲ್ಲದೆ ಕೊಡಗಿನ ಅನೇಕ ವೇದಿಕೆಗಳಲ್ಲಿ ವಿವಿಧ ವಿಚಾರಗಳ ಮೇಲೆ ಉಪನ್ಯಾಸ ನೀಡುತ್ತಾ ಬಂದಿದ್ದಾರೆ. ಗೃಹಿಣಿಯಾಗಿ ಮನೆ ಜವಾಬ್ದಾರಿಯನ್ನೂ ಸಂತೋಷವಾಗಿ ನಿಭಾಯಿಸುವ ಇವರು ಸಾಹಿತ್ಯದ ಪ್ರಕಾರಗಳಾದ ಚುಟುಕು, ಹನಿಗವನ, ರೂಬಾಯಿ, ಹಾಯ್ಕು, ಟಂಕಾ, ಲಿಮೆರಿಕ್ ಸಾಲುಗಳೆಲ್ಲವನ್ನು ಸುಲಲಿತವಾಗಿ ಸ್ಥಳದಲ್ಲಿಯೇ ದಾಖಲಿಸುತ್ತಾರೆ. ಇವರ ಕನ್ನಡ ಮತ್ತು ಕೊಡವ ಸಾಹಿತ್ಯ ಸೇವೆಗೆ ಅನೇಕ ಸಾಹಿತ್ಯ ವೇದಿಕೆಗಳು ಇವರನ್ನು ಅತಿಥಿಯಾಗಿ, ಉಪನ್ಯಾಸಕಿಯಾಗಿ ಆಹ್ವಾನಿಸಿರುವುದಲ್ಲದೆ, ಸನ್ಮಾನವನ್ನು ಮಾಡಿರುತ್ತಾರೆ. ನಿತ್ಯ ಯೋಗ ಸಾಧನೆ ಮಾಡುವ ಇವರು ಯಾವುದೇ ನಿರೀಕ್ಷೆ, ಫಲಾಪೇಕ್ಷೆ ಇಟ್ಟುಕೊಳ್ಳದೆ “ಎಲ್ಲದರಿಂದಲು, ಎಲ್ಲರಿಂದಲೂ ಪ್ರತಿನಿತ್ಯ ಏನಾದರೂ ಹೊಸತನ್ನು ತಿಳಿಯುತ್ತಿರುತ್ತೇನೆ, ಇನ್ನಷ್ಟು ಕಲಿಯುತ್ತಿರುತ್ತೇನೆ, ವಿಶೇಷ ಅನಿಸಿದ್ದನ್ನು ಸ್ವೀಕರಿಸುತ್ತೇನೆ, ಅವುಗಳನ್ನು ದಾಖಲಿಸುತ್ತಿರುತ್ತೇನೆ ಅಷ್ಟೆ, ಅದರಲ್ಲೂ ಇವರು “ಇದಕ್ಕೆಲ್ಲ ಸಾಹಿತ್ಯದ ತವರೂರಾದ ಹಾಸನ ಮತ್ತು ಹಾಸನದ ಸಾಹಿತಿಗಳೇ ಮೂಲ ಪ್ರೇರಣೆ” ಎನ್ನುತ್ತಲೇ ಬರವಣಿಗೆ ಮೂಲಕ ವಿಶಿಷ್ಟ ಸಾಧನೆ ಮಾಡುತ್ತಿದ್ದಾರೆ. ಇವರ ಈ ಅನನ್ಯ ಸೇವೆ ಗಮನಾರ್ಹ ಮತ್ತು ಶ್ಲಾಘನೀಯವಾಗಿದೆ. ಹೀಗೆ ಮುಂದೆಯೂ ಇವರು ತಮ್ಮ ಇಷ್ಟ ಕ್ಷೇತ್ರದಲ್ಲಿ ಇನ್ನಷ್ಟು ಯಶಸ್ಸು ಗಳಿಸುತಿರಲಿ.
ಫೋಟೊ ಆಲ್ಬಂ
ಸಾವಿತ್ರಮ್ಮ ಓಂಕಾರ್
ನಿಮ್ಮ ಸಾಹಿತ್ಯ ಸೇವೆ ಹೀಗೆ ಮುಂದುವರಿಯಲಿ,ಕ್ರೀಡಾ ಲೋಕದಿಂದ ಸಾಹಿತ್ಯ ಲೋಕಕ್ಕೆ ವಾಲಿರುವುದು ಪ್ರಶಂಸನೀಯ,ಎಲೆ ಮರೆ ಕಾಯಿಯಂತೆ ಇದ್ದು ನೀವು ಸಾಹಿತ್ಯ ಲೋಕದಲ್ಲಿ ಸಂಪಿಗೆಯಂತೆ ನಿಮ್ಮ ಸಾಹಿತ್ಯದ ಕಂಪು ಹರಡಲಿ ಎಂದು ನನ್ನ ಬಯಕೆ,,,ವಸಂತ್ ಕುಮಾರ್